ಬ್ರಹ್ಮರಕೂಟ್ಲು ಬಳಿ ಕಾರು-ಟ್ಯಾಂಕರ್ ಡಿಕ್ಕಿಯಾಗಿ ಒಂದೇ ಕುಟುಂಬದ ನಾಲ್ವರು ಮೃತ

ಬಂಟ್ವಾಳ/ಭಟ್ಕಳ:  ರಾಷ್ಟ್ರೀಯ ಹೆದ್ದಾರಿ 73ರ ಬ್ರಹ್ಮರಕೂಟ್ಲು ಟೋಲ್‌ಗೇಟ್ ಮುಂಭಾಗ ಬ್ರಹ್ಮ ಸನ್ನಿಧಿ ಮೇಲ್ಭಾಗದಲ್ಲಿ ಶುಕ್ರವಾರ ಟವೆರಾ ಕಾರು ಹಾಗೂ ಬುಲೆಟ್ ಟ್ಯಾಂಕರ್ ನಡುವಿನ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟು, ಏಳು ಮಂದಿ ಗಾಯಗೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಕರಿಕಲ್ ನಿವಾಸಿ ಗೋವಿಂದ ಮೊಗೇರ(65), ಪತ್ನಿ ಪದ್ಮಾವತಿ(45), ಪುತ್ರ ನಾಗರಾಜ(22) ಮತ್ತು ಅಳಿಯ ಗಣೇಶ ಮಾದೇವ ಮೊಗೇರ(28) ಮೃತರು. ಗಾಯಾಳುಗಳಾದ ಯಮುನಾ, ಶಿವಾನಂದ, ಜ್ಯೋತಿ, ಗಣೇಶ್, ಚಾಲಕ ರಾಜೇಶ ಮೊಗೇರ, ಮಕ್ಕಳಾದ ಯಶ್ವಿನ್ ಹಾಗೂ ವರ್ಷಾ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಇಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಶುಕ್ರವಾರ ಮಧ್ಯಾಹ್ನ 12.45ರ ಸುಮಾರಿಗೆ ಧರ್ಮಸ್ಥಳದಿಂದ ಬಿ.ಸಿ.ರೋಡ್ ಮೂಲಕ ಮಂಗಳೂರಿಗೆ ಹೋಗುವ ವೇಳೆ ಮಂಗಳೂರು ಕಡೆಯಿಂದ ಬೆಂಗಳೂರು ಕಡೆ ಹೋಗುತ್ತಿದ್ದ ಬುಲೆಟ್ ಟ್ಯಾಂಕರ್‌ಗೆ ಕಾರು ಡಿಕ್ಕಿಯಾಗಿತ್ತು. ಡಿಕ್ಕಿ ರಭಸಕ್ಕೆ ಟ್ಯಾಂಕರ್ ಮುಂಭಾಗ ಹಾನಿಯಾಗಿದ್ದು, ಟವೇರಾ ಸಂಪೂರ್ಣ ನುಜ್ಜುಗುಜ್ಜಾಗಿದೆ. ಅಲ್ಲದೆ ಟವೇರಾದಲ್ಲಿದ್ದ ಕೆಲವರು ರಸ್ತೆ ಇಳಿಜಾರಿನಲ್ಲಿ ಎಸೆಯಲ್ಪಟ್ಟಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ವಾಹನದಲ್ಲಿದ್ದವರ ಮೊಬೈಲ್ ಮತ್ತಿತರ ಸೊತ್ತುಗಳು ಸ್ಥಳದಲ್ಲಿ ಚಲ್ಲಾಪಿಲ್ಲಿಯಾಗಿದ್ದವು.
ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದು, ಹೆದ್ದಾರಿಯಲ್ಲಿ ಕೆಲಕಾಲ ವಾಹನ ದಟ್ಟಣೆ ಉಂಟಾಗಿತ್ತು. ಸ್ಥಳಕ್ಕೆ ಬಂಟ್ವಾಳ ಎಎಸ್ಪಿ ಸೈದುಲ್ ಅಡಾವತ್, ಸಿಐ ನಾಗರಾಜ್, ಟ್ರಾಫಿಕ್ ಎಸ್‌ಐ. ಮಂಜುನಾಥ್ ಗ್ರಾಮಾಂತರ ಠಾಣಾ ಎಸ್‌ಐ ಪ್ರಸನ್ನ, ನಗರ ಠಾಣಾ ಎಸ್‌ಐ ಚಂದ್ರಸೇಖರ್ ಸಹಿತ ಪೊಲೀಸ್ ಸಿಬ್ಬಂದಿ ಆಗಮಿಸಿ, ಸುಗಮ ವಾಹನ ಸಂಚಾರಕ್ಕೆ ಸಹಕರಿಸಿದರು.

ತೀರ್ಥಯಾತ್ರೆ ಕೈಗೊಂಡಿದ್ದರು:  ಕುಟುಂಬದ 11 ಮಂದಿ ತೀರ್ಥಯಾತ್ರೆ ಕೈಗೊಂಡಿದ್ದು, ಗುರುವಾರ ಕೊಲ್ಲೂರು, ಶೃಂಗೇರಿ, ಹೊರನಾಡು ದೇವಸ್ಥಾನಗಳಿಗೆ ಹೋಗಿ ಧರ್ಮಸ್ಥಳದಲ್ಲಿ ದೇವರ ದರ್ಶನ ಪಡೆದು ಅಲ್ಲೇ ತಂಗಿದ್ದರು. ಶುಕ್ರವಾರ ಬೆಳಗ್ಗೆ ಊರಿಗೆ ಮರಳಲು ಬಿ.ಸಿ ರೋಡ್ ಮೂಲಕ ತೆರಳುತತ್ತಿದ್ದರು.

ಕಿರಿದಾದ ಅಪಾಯಕಾರಿ ರಸ್ತೆ: ಅಪಘಾತ ನಡೆದ ಸ್ಥಳ ಬ್ರಹ್ಮರಕೂಟ್ಲು ಟೋಲ್‌ಗೇಟ್‌ನ ಕಣ್ಣಳತೆಯ ದೂರದಲ್ಲಿದೆ. ಇಲ್ಲಿ ರಸ್ತೆ ತೀರಾ ಕಿರಿದಾಗಿದ್ದು, ದ್ವಿಪಥ ಮಾತ್ರ ಇದೆ. ಚತುಷ್ಪಥ ಹೆದ್ದಾರಿಯಾಗಿ ವೇಗದಿಂದ ಬರುವ ವಾಹನಗಳು ಈ ಸ್ಥಳದಲ್ಲಿ ಗೊಂದಲಕ್ಕೀಡಾಗುವುದು ಸಾಮಾನ್ಯ. ಇದೇ ರೀತಿ ಟವೇರಾ ಚಾಲಕ ಗೊಂದಲಕ್ಕೀಡಾಗಿ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮದುವೆಯಾದ ತಿಂಗಳೊಳಗೆ ಘಟನೆ
ಮಲ್ಪೆಯ ಬೋಟ್‌ನಲ್ಲಿ ಚಾಲಕನಾಗಿ ದುಡಿಯುತ್ತಿದ್ದ ಗಾಂಧಿನಗರ ಗ್ರಾಮದ ಗಣೇಶ ಮಾದೇವ ಮೊಗೇರ ವಿವಾಹ ಜೂನ್ 23ರಂದು ಯಮುನಾ ಅವರ ಜತೆ ನಡೆದಿದ್ದು, ಹಿರಿಯರ ಸೂಚನೆಯಂತೆ ನವದಂಪತಿ ಕುಟುಂಬ ಸಹಿತ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಮದುವೆಯಾಗಿ ತಿಂಗಳು ಕಳೆಯುವ ಮುನ್ನವೇ ಯಮುನಾ ಅವರು ಪತಿ, ತಂದೆ, ತಾಯಿ, ತಮ್ಮನನ್ನು ಕಳೆದುಕೊಂಡು ತಾನೂ ಗಾಯಗೊಂಡು ಆಸ್ಪತ್ರೆ ಸೇರುವಂತಾಗಿದೆ. ಘಟನೆಯಿಂದ ಗಾಂಧಿನಗರ ಮತ್ತು ಕರಿಕಲ್ ಗ್ರಾಮ ಶೋಕದಲ್ಲಿ ಮುಳುಗಿದೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

Leave a Reply

Your email address will not be published. Required fields are marked *