ಬೆಳ್ವೆ: ಬೆಳ್ವೆ ಜುಮ್ಮಾ ಮಸೀದಿ ಸಮೀಪದಲ್ಲಿ ಗುರುವಾರ ರಾತ್ರಿ 10.30ರ ಸುಮಾರಿಗೆ ಸ್ಕೂಟಿ ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿ ಇಬ್ಬರು ಯುವಕರು ಮಣಿಪಾಲ ಆಸ್ಪತ್ರೆಗೆ ಸಾಗಿಸುವ ಸಮಯದಲ್ಲಿ ಮೃತರಾಗಿದ್ದಾರೆ. ಇನ್ನೊಬ್ಬ ಯುವಕ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.
ಬೆಳ್ವೆ ನಿವಾಸಿ ನಾಗರಾಜ್ (17), ನಾಲ್ಕೂರು ಗ್ರಾಮದ ಮೂದ್ದೂರು ನಿವಾಸಿ ಪ್ರಜ್ವಲ್(21) ಮೃತಪಟ್ಟವರು. ತೀರ್ಥಹಳ್ಳಿ ಮೂಲದ ಹಿಲಿಯಾಣ ನಿವಾಸಿ ವಿನಯ (20) ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.
ನಾಗರಾಜ್ ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ಟೆಂಪಲ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ ವಿದ್ಯಾರ್ಥಿಯಾಗಿದ್ದು, ಗೋಳಿಯಂಗಡಿಯಲ್ಲಿ ಅಂಗಡಿ ಹೊಂದಿರುವ ಬೆಳ್ವೆ ಅಂಚೆ ಕಚೇರಿ ಬಳಿ ನಿವಾಸಿ ಗೋಪಾಲ ಮಡಿವಾಳ ಹಾಗೂ ಪಾರ್ವತಿ ದಂಪತಿಯ ಮೂವರು ಮಕ್ಕಳಲ್ಲಿ ಹಿರಿಯ.
ನಾಲ್ಕೂರು ಗ್ರಾಮದ ಮೂದ್ದೂರು ನಿವಾಸಿ ಪ್ರಜ್ವಲ್ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ಮೂದ್ದೂರು ಚಂದ್ರ ಮಡಿವಾಳ ಹಾಗೂ ಸುಶೀಲಾ ದಂಪತಿಯ ಹಿರಿಯ ಮಗ. ತಂದೆ ಬೆಂಗಳೂರಿನಲ್ಲಿ ಕ್ಯಾಟರಿಂಗ್ ಸರ್ವೀಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಗಾಯಾಳು ವಿನಯ ಹಿಲಿಯಾಣ ನಿವಾಸಿ, ತೀರ್ಥಹಳ್ಳಿ ಮೂಲದ ಉಮೇಶ ಮಡಿವಾಳ- ಚಂದ್ರಾವತಿ ದಂಪತಿಯ ಮಗ. ಹಿಲಿಯಾಣದಲ್ಲಿ ತಾಯಿಯ ಮನೆಯಲ್ಲಿದ್ದು, ಕೆಲಸಕ್ಕೆ ಹೋಗುತ್ತಿದ್ದರು.
ಕುಂದಾಪುರ ಡಿವೈಎಸ್‌ಪಿ ಶ್ರೀಕಾಂತ ಕೆ., ಶಂಕರನಾರಾಯಣ ಪೊಲೀಸ್ ಠಾಣಾಧಿಕಾರಿ ಶ್ರೀಧರ್ ನಾಯ್ಕ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ, ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.