ಸುಬ್ರಹ್ಮಣ್ಯ: ತಿರುಪತಿ ಯಾತ್ರೆಗೆ ತೆರಳಿದ್ದ ಕಡಬ ತಾಲೂಕಿನ ಬಿಳಿನೆಲೆ ಕೈಕಂಬದ ಯಾತ್ರಿಕರು ಸೇರಿದಂತೆ ಕರ್ನಾಟಕದ ಯಾತ್ರಿಕರಿದ್ದ ವಾಹನ ಬುಧವಾರ ಬೆಳಗ್ಗೆ ತಿರುಪತಿ– ಶ್ರೀಕಾಳಹಸ್ತಿ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿ ಬಿಳಿನೆಲೆ ಕೈಕಂಬದ ಕೂಸಪ್ಪ ಎಂಬುವರ ಪತ್ನಿ ಶೇಷಮ್ಮ(70) ಮೃತಪಟ್ಟು, 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಬಿಳಿನೆಲೆ ಗ್ರಾಮದ ಕೈಕಂಬದ ಕುಟುಂಬಸ್ಥರು ಹಾಗೂ ಅವರ ಸಂಬಂಧಿಕರು ತಿರುಪತಿ ಯಾತ್ರೆ ಕೈಗೊಂಡಿದ್ದರು. ಮಂಗಳವಾರ ಗುಂಡ್ಯದಿಂದ ಪ್ಯಾಕೇಜ್ ಬಸ್ ಮೂಲಕ ತಿರುಪತಿಗೆ ತೆರಳಿದ್ದರು. ಬುಧವಾರ ಸಂಜೆ ತಿರುಪತಿಯಲ್ಲಿ ದರ್ಶನ ನೆರವೇರಿಸುವವರಿದ್ದು, ಬಳಿಕ ತಿರುಪತಿಯಿಂದ ಕಾಳಹಸ್ತಿಗೆ ಮೂರು ಟಿಟಿಯಲ್ಲಿ ಕರ್ನಾಟಕದ ತಂಡ ಹೊರಟಿತ್ತು. ಈ ವೇಳೆ ಬಿಳಿನೆಲೆ ಕೈಕಂಬದ ತಂಡ ಇದ್ದ ಟಿಟಿ ವಾಹನ ಮೇಲ್ಸೇತುವೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಬಡಿದು ಮೂರು ಪಲ್ಟಿಯಾಗಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಶೇಷಮ್ಮ ಮೃತಪಟ್ಟಿದ್ದಾರೆ. 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅಲ್ಲಿನ ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೈಕಂಬದ ತಿಲೇಶ್(45), ಕಮಲಾಕ್ಷಿ(60) ಗಂಭೀರ ಗಾಯಗೊಂಡಿದ್ದಾರೆ. ನಿವೃತ್ತ ಯೋಧ ಸೋಮಶೇಖರ್, ಶೀನಪ್ಪ, ಕೂಸಪ್ಪ, ನಿಖಿಲ್, ತನುಷ್ ಸೇರಿದಂತೆ ಕರ್ನಾಟಕದ ಸುವಾರು 15 ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.