ಉಡುಪಿ ಹಿಂದಿನ ಪೌರಾಯುಕ್ತ ಮಂಜುನಾಥಯ್ಯಗೆ ಎಸಿಬಿ ಬಿಸಿ

ವಿಜಯವಾಣಿ ಸುದ್ದಿಜಾಲ ಉಡುಪಿ/ಮಂಗಳೂರು
ನಗರಸಭೆಯಲ್ಲಿ ಪೌರಾಯುಕ್ತರಾಗಿದ್ದ, ಪ್ರಸ್ತುತ ಮಂಗಳೂರು ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ರೀಡರ್ ಮಂಜುನಾಥಯ್ಯ ಅವರ ಕಚೇರಿ, ಮನೆ, ಸಂಬಂಧಿಕರ ಮನೆಗಳಿಗೆ ಎಸಿಬಿ ಅಧಿಕಾರಿಗಳು ಶುಕ್ರವಾರ ಮುಂಜಾನೆ ದಾಳಿ ನಡೆಸಿದ್ದು, 12 ಲಕ್ಷ ರೂ. ನಗದು, 443 ಗ್ರಾಂ ಚಿನ್ನ, 1 ಕೆ.ಜಿ ಬೆಳ್ಳಿ, ಹಣಕಾಸು ಮತ್ತು ಆಸ್ತಿ ದಾಖಲೆಪತ್ರ ವಶಕ್ಕೆ ಪಡೆದಿದ್ದಾರೆ.

ಅಕ್ರಮ ಆಸ್ತಿ ಹೊಂದಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಮಂಜುನಾಥಯ್ಯ ಅವರ ಮಣಿಪಾಲದ ಫ್ಲಾೃಟ್, ದಾವಣಗೆರೆ, ಚಿಕ್ಕಮಗಳೂರಿನಲ್ಲಿರುವ ಸಂಬಂಧಿಕರ ಮನೆ ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ಮಂಗಳೂರಿನ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ (ಡಯಟ್) ಕಚೇರಿಗೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಬೆಳಗ್ಗೆ 6 ಗಂಟೆ ಸುಮಾರಿಗೆ ಪಶ್ಚಿಮ ವಲಯ ಎಸಿಬಿ ಎಸ್‌ಪಿ ಶ್ರುತಿ ನೇತೃತ್ವದ 15 ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡ ಮಣಿಪಾಲ ಪ್ರಿಯದರ್ಶಿನಿ ಎನ್‌ಕ್ಲೇವ್ ಫ್ಲಾೃಟ್ ಸಂಖ್ಯೆ 302ರ ಮೇಲೆ ದಾಳಿ ಮಾಡಿದ್ದಾರೆ. ಈ ಸಂದರ್ಭ ಮಂಜುನಾಥಯ್ಯ ಕಕ್ಕಾಬಿಕ್ಕಿಯಾಗಿದ್ದು, ಕುಟುಂಬದವರು ವಿಚಲಿತರಾದರು. ಫ್ಲಾೃಟ್‌ನ ಎಲ್ಲ ಕೋಣೆ, ಕಪಾಟುಗಳನ್ನು ಅಧಿಕಾರಿಗಳು ಜಾಲಾಡಿದ್ದಾರೆ. ಪ್ರಾಥಮಿಕ ಹಂತದ ತನಿಖೆಯಲ್ಲಿ ನಗದು, ಚಿನ್ನ, ಬೆಳ್ಳಿ ಹಾಗೂ ದಾಖಲೆ ಪತ್ರ ವಶಕ್ಕೆ ತೆಗೆದುಕೊಂಡಿದ್ದಾರೆ.

ದಾಖಲೆ ಪತ್ರ ವಶ: ಮಣಿಪಾಲದಲ್ಲಿ 2 ಫ್ಲಾೃಟು, ಹಣಕಾಸು ವ್ಯವಹಾರ ಮತ್ತು ಆಸ್ತಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತಿದ್ದಾರೆ. ದಾವಣಗೆರೆ ಜಿಲ್ಲೆ ಚೆನ್ನಗಿರಿ ಮತ್ತು ಚಿಕ್ಕಮಗಳೂರಿನ ಕಡೂರಿನಲ್ಲಿರುವ ಮಂಜುನಾಥಯ್ಯನ ಸಂಬಂಧಿಕರ ಮನೆಗಳ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧ ಕಾರ್ಯ ಮುಂದುವರಿದಿದೆ ಎಂದು ಎಸಿಬಿ ಮೂಲಗಳು ತಿಳಿಸಿದೆ.
ಎಸಿಬಿ ಎಸ್‌ಪಿ ಶ್ರುತಿ, ಉಡುಪಿ ಡಿವೈಎಸ್‌ಪಿ ದಿನಕರ ಶೆಟ್ಟಿ, ಕಾರವಾರ ಡಿವೈಎಸ್‌ಪಿ ಗಿರೀಶ್, ಚಿಕ್ಕಮಗಳೂರು ಡಿವೈಎಸ್‌ಪಿ ನಾಗೇಶ್ ಶೆಟ್ಟಿ, ಉಡುಪಿ ಎಸಿಬಿ ನಿರೀಕ್ಷಕರಾದ ಸತೀಶ್, ಯೋಗೀಶ್, ಜಯರಾಮ್ ಗೌಡ, ರಮೇಶ್ ಮತ್ತು ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದಾರೆ.

ಪ್ರಭಾವ ಬಳಸಿ ಪೌರಾಯುಕ್ತರಾಗಿದ್ದರೇ?: ಮಂಜುನಾಥಯ್ಯ ಶಿಕ್ಷಣ ಇಲಾಖೆ ಅಧಿಕಾರಿಯಾಗಿದ್ದರೂ, ಪ್ರಭಾವ ಬಳಸಿ ಉಡುಪಿ ನಗರಸಭೆ ಪೌರಾಯುಕ್ತ ಹುದ್ದೆ ಗಿಟ್ಟಿಸಿಕೊಂಡಿದ್ದರು ಎಂಬ ಆರೋಪಗಳಿವೆ. ಉಡುಪಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಮಂಜುನಾಥಯ್ಯ ಬಳಿಕ ಹಲವು ವರ್ಷಗಳ ಕಾಲ ನಗರಸಭೆ ಪೌರಾಯುಕ್ತರಾಗಿ ಕಾರ್ಯನಿರ್ವಹಿಸಿದ್ದರು. ಸಾರ್ವಜನಿಕ ವಲಯದಲ್ಲಿ ಅವರ ವಿರುದ್ಧ ಹಲವು ಭಾರಿ ಭ್ರಷ್ಟಚಾರದ ಆರೋಪ ಕೇಳಿ ಬಂದಿತ್ತು. ಚುನಾವಣೆ ಸಂದರ್ಭ ವರ್ಗಾವಣೆಯಾದ ಬಳಿಕ ಮಂಜುನಾಥಯ್ಯ ಅವರಿಗೆ ಪುನಃ ಪೌರಾಯುಕ್ತ ಹುದ್ದೆ ಪಡೆಯಲು ಸಾಧ್ಯವಾಗಿರಲಿಲ್ಲ.

ಒಂದೂವರೆ ತಿಂಗಳಿನಿಂದ ಕರ್ತವ್ಯಕ್ಕೆ ರಜೆ: ಮಂಗಳೂರಿನಲ್ಲಿ ಎಸಿಬಿ ಇನ್‌ಸ್ಪೆಕ್ಟರ್ ಯೋಗೀಶ್ ನೇತೃತ್ವದ ತಂಡ ದಾಳಿ ನಡೆಸಿದ್ದು, ಕಚೇರಿಯಲ್ಲಿರುವ ಹಲವು ಕಡತಗಳನ್ನು ಪರಿಶೀಲಿಸಿ, ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಮಂಜುನಾಥಯ್ಯ ಮೂರು ತಿಂಗಳ ಹಿಂದೆ ನಗರದಲ್ಲಿರುವ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯಕ್ಕೆ ಪ್ರವಾಚಕರಾಗಿ ಬಂದಿದ್ದರು. ಆದರೆ ಒಂದೂವರೆ ತಿಂಗಳಿನಿಂದ ಕೆಲಸಕ್ಕೆ ಬಾರದೆ ತುರ್ತು ರಜೆ ಹಾಕಿದ್ದರು. ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಲು ಇಷ್ಟವಿಲ್ಲದೆ ಬಂದ ಒಂದು ತಿಂಗಳಲ್ಲೇ ವರ್ಗಾವಣೆಗೆ ಪ್ರಯತ್ನ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.