ಪ್ರಭಾಕರ ಕಲ್ಯಾಣಿಗೆ ಅಕಾಡೆಮಿ ರಂಗ ಪ್ರಶಸ್ತಿ

ಉಡುಪಿ: ಕರ್ನಾಟಕ ನಾಟಕ ಅಕಾಡೆಮಿ ರಂಗ ಪ್ರಶಸ್ತಿಗೆ ನಾಟಕ ಕಲಾವಿದ, ಸಂಘಟಕ ಪೆರ್ಡೂರು ಪ್ರಭಾಕರ ಕಲ್ಯಾಣಿ ಭಾಜನರಾಗಿದ್ದಾರೆ.

ಪೆರ್ಡೂರು ಗ್ರಾಮದವರಾದ ಪ್ರಭಾಕರ ಕಲ್ಯಾಣಿ 11ನೇ ವಯಸ್ಸಿನಲ್ಲಿ ನಾಟಕದಲ್ಲಿ ಅಭಿನಯಿಸುವ ಮೂಲಕ ನಾಟಕ ರಂಗ ಪ್ರವೇಶಿಸಿದರು. ಇದುವರೆಗೆ 400ಕ್ಕೂ ಅಧಿಕ ಕನ್ನಡ ಮತ್ತು ತುಳು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಕೂಡ್ದಿ ಕಲಾವಿದೆರ್ ಸಂಸ್ಥೆಯನ್ನು ಹುಟ್ಟು ಹಾಕಿ, ಅಧ್ಯಕ್ಷರಾಗಿ ಸ್ಥಳೀಯವಾಗಿ ನಾಟಕವಾಡಿಸಿ, ಅನೇಕ ಕಲಾವಿದರನ್ನು ರಂಗಭೂಮಿಗೆ ಪರಿಚಯಿಸಿದ್ದಾರೆ. ಬಳಿಕ ಮಂಗಳೂರಿನ ತುಳು ನಾಟಕ ಕಲಾವಿದರ ಒಕ್ಕೂಟ ಉಪಾಧ್ಯಕ್ಷರಾಗಿ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಉತ್ತಮ ನಟ, ರಚನೆಕಾರ, ಉತ್ತಮ ನಿರ್ದೇಶನ, ಉತ್ತಮ ರಂಗಸಜ್ಜಿಕೆ ಹಲವು ಪ್ರಶಸ್ತಿಗಳು ಲಭಿಸಿದೆ. ಅವರು ವಿಜಯಾ ಬ್ಯಾಂಕ್ ದೊಂಡೇರಂಗಡಿ ಶಾಖೆಯಲ್ಲಿ ಸಹಾಯಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.