ಅಕಾಡೆಮಿ ಮಾರ್ಗದರ್ಶನ ಪ್ರೇರಣೆ

ಬಾದಾಮಿ: ಇತಿಹಾಸ ಅಕಾಡೆಮಿಯ ಮಾರ್ಗದರ್ಶನ ಸಂಶೋಧಕರಿಗೆ ಶಾಸನ ಕ್ಷೇತ್ರದಲ್ಲಿ ದುಡಿಯಲು ಪ್ರೇರಣೆ ನೀಡಿದೆ ಎಂದು ಧಾರವಾಡದ ವಿದ್ವಾಂಸಕಿ ಡಾ. ಹನುಮಾಕ್ಷಿ ಗೋಗಿ ಹೇಳಿದರು.

ಸಮೀಪದ ಸುಕ್ಷೇತ್ರ ಶಿವಯೋಗಮಂದಿರದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿ, ರಾಜ್ಯ ಪ್ರಾಚ್ಯವಸ್ತು ಸಂಗ್ರಹಾಲಯಗಳು, ಪರಂಪರೆ ಇಲಾಖೆ, ನವದೆಹಲಿಯ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್, ಮದ್ವೀರಶೈವ ಶಿವಯೋಗಮಂದಿರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಇತಿಹಾಸ ಅಕಾಡೆಮಿಯ 32ನೇ ವಾರ್ಷಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇತಿಹಾಸ ಕ್ಷೇತ್ರದಲ್ಲಿ ಇಲ್ಲಿಯವರೆಗೆ 25 ರಿಂದ 30 ಸಾವಿರ ಶಾಸನಗಳು ಪ್ರಕಟವಾಗಿವೆ. ಅಂದಾಜು 2 ಸಾವಿರ ಶಾಸನಗಳು ಮಂಡನೆಯಾಗಿವೆ. ಇತಿಹಾಸ ಕ್ಷೇತ್ರಕ್ಕೆ ಗಟ್ಟಿಯಾದ ಪ್ರಬಂಧಗಳು ಬರುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಶಾಸನಗಳು, ರಾಜಮನೆತನಗಳ ಸ್ಥಾಪನೆ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಸಹಾಯವಾಗುತ್ತವೆ. ಹೊಸ ಹೊಸ ಸಂಶೋಧನೆ ಮಾಡಲು ನೆರವಾಗುತ್ತವೆ. ಸಮ್ಮೇಳನಗಳು ವಿಷಯ ವಿನಿಮಯ ಮಾಡಿಕೊಳ್ಳಲು, ಹೊಸ ಸಂಶೋಧನೆ ಒರೆಗೆ ಹಚ್ಚಲು ಸಹಾಯಕವಾಗುತ್ತವೆ ಎಂದು ಹೇಳಿದರು.

ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ.ದೇವರ ಕೊಂಡಾರೆಡ್ಡಿ ಮಾತನಾಡಿ, 3 ದಿನಗಳಿಂದ ನಡೆದ ಇತಿಹಾಸ ಅಕಾಡೆಮಿ ವಾರ್ಷಿಕ ಸಮ್ಮೇಳನದಲ್ಲಿ 20 ಗೋಷ್ಠಿಗಳು, 170 ಪ್ರಬಂಧಗಳು ಮಂಡನೆಯಾಗಿವೆ. ನಿಖರವಾಗಿ ಸಂಶೋಧನೆಗೆ ಇಂತಹ ಸಮ್ಮೇಳನಗಳು ಸಹಾಯಕವಾಗುತ್ತವೆ ಎಂದರು.

ಸಾನ್ನಿಧ್ಯ ವಹಿಸಿ ಮಾತನಾಡಿದ ಶಿವಯೋಗಮಂದಿರದ ಮದ್ವೀರಶೈವ ಸಂಸ್ಥೆ ಅಧ್ಯಕ್ಷ ಡಾ.ಸಂಗನಬಸವ ಶ್ರೀಗಳು, ಎಲ್ಲರಲ್ಲೂ ಇತಿಹಾಸ ಪ್ರಜ್ಞೆ ಬರಬೇಕು. ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಪ್ರತಿ ವರ್ಷ ಕೊಟ್ಟೂರಸ್ವಾಮಿ ಕಲ್ಯಾಣ ಕೇಂದ್ರದಿಂದ ಕರ್ನಾಟಕ ಇತಿಹಾಸ ಅಕಾಡೆಮಿಗೆ 1 ಲಕ್ಷ ರೂ. ಅನುದಾನ ಸಹಾಯಧನ ನೀಡುವುದಾಗಿ ಭರವಸೆ ನೀಡಿದರು.

ಪಿಎಚ್​ಡಿ ಮತ್ತು ಡಿ.ಲಿಟ್ ಪದವಿ ಪಡೆದ 22 ಜನ ಅಕಾಡೆಮಿಯ ಸದಸ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮ್ಮೇಳನಾಧ್ಯಕ್ಷ ಬಿ. ರಾಜಶೇಖರಪ್ಪ, ಚಂದ್ರೇಗೌಡ ಇದ್ದರು. ನಳಿನಿ ವೆಂಕಟೇಶ ಪ್ರಾರ್ಥಿಸಿದರು. ಕೆ.ಎಲ್. ರಾಜಶೇಖರ ಸ್ವಾಗತಿಸಿದರು. ಸ್ಮಿತಾ ರಡ್ಡಿ ನಿರೂಪಿಸಿದರು. ಇಷ್ಟಲಿಂಗ ಶಿರಶಿ ವಂದಿಸಿದರು.