ರಾಯಚೂರು ವಿದ್ಯಾರ್ಥಿನಿ ಸಾವಿನ ಪ್ರಕರಣ ಸಿಬಿಐ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

ಬೀದರ್: ರಾಯಚೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಂಶಯಾಸ್ಪದ ಸಾವು ಪ್ರಕರಣದ ತನಿಖೆ ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.
ಡಾ.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಮೆರವಣಿಗೆಯುದ್ದಕ್ಕೂ ವಿದ್ಯಾರ್ಥಿನಿ ಸಾವು ಅನೇಕ ಸಂದೇಹ ಸೃಷ್ಟಿಸಿದೆ. ಇದು ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆಗೈದ ಪ್ರಕರಣ ಎಂಬಂತೆ ಕಾಣುತ್ತಿದೆ. ರಾಜ್ಯ ಪೊಲೀಸರು ಹಾಗೂ ಸಿಐಡಿ ತನಿಖೆಯಿಂದ ಇದರ ಜಾಡು ಪತ್ತೆ ಹಚ್ಚುವ ಸಾಧ್ಯತೆಗಳಿಲ್ಲ. ಹೀಗಾಗಿ ಸಿಬಿಐ ತನಿಖೆ ಸೂಕ್ತ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ರಾಯಚೂರಿನ ಮಾಣಿಕಪ್ರಭು ದೇವಸ್ಥಾನ ಗುಡ್ಡದಲ್ಲಿ ನೇಣು ಹಾಕಿದ, ಅರೆಬೆಂದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಶವ ಪತ್ತೆಯಾಗಿದೆ. ಇದು ಅತ್ಯಾಚಾರವೆಸಗಿ ಕೊಲೆ ಮಾಡಿದ್ದು ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ದುರಂತ ನಡೆದು 12 ದಿನಗಳಾದರೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ ಎಂದು ಪರಿಷತ್ ರಾಜ್ಯ ಸಹ ಕಾರ್ಯದರ್ಶಿ ರೇವಣಸಿದ್ದ ಜಾಡರ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರಕರಣವನ್ನು ಸರ್ಕಾರ ಗಂಭೀರ ಪರಿಗಣಿಸಿ ಸಮಗ್ರ ತನಿಖೆಗೆ ಸಿಬಿಐಗೆ ವಹಿಸಬೇಕು. ಆರೋಪಿಗಳು ಯಾರೇ ಇದ್ದರೂ ಗಲ್ಲು ಶಿಕ್ಷೆಗೆ ಏರಿಸಬೇಕು. ಇಂಥ ಪ್ರಕರಣ ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ವಿದ್ಯಾರ್ಥಿ ಸಮೂಹದಿಂದ ಮುಂದಿನ ದಿನಗಳಲ್ಲಿ ವಿಧಾನಸೌಧ ಮುತ್ತಿಗೆ ಸೇರಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ರವಾನಿಸಿದ ಮನವಿ ಪತ್ರದಲ್ಲಿ ಎಚ್ಚರಿಸಿದರು.
ಪರಿಷತ್ ರಾಜ್ಯ ಕಾರ್ಯಕಾರಿಣಿ ಸದಸ್ಯ ಅನಂದ ಡೋಬಾಳೆ, ತಾಲೂಕು ಪ್ರಮುಖ ಅರವಿಂದ ಸುಂದಾಳಕರ, ಪ್ರಮುಖರಾದ ಸಾಯಿ ಮೂಲಗೆ, ಉಮೇಶ ತೇಲಂಗ, ಗಗನದೀಪ, ಅರ್ಪಿತಸಿಂಗ್, ರಾಜಶೇಖರ ಗಾಯಕವಾಡ, ಮಹ್ಮದ್ ಗಫಾರ್, ಆಕಾಶ ಬೆಳ್ಳುರೆ, ಸಂಗಮೇಶ, ದಿವ್ಯರಾಣಿ, ಆರತಿ, ಗಿರಿಜಾ, ಅಖಿಯಾ, ಸಂಜನಾ, ರೇಖಾ, ಪ್ರೀತಿ, ಶ್ರುತಿ ಸೇರಿ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ರಾಜ್ಯದ ನಾನಾ ಕಡೆ ಇಂಥ ಪ್ರಕರಣ ಹೆಚ್ಚಾಗುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆ ಹದಗಟ್ಟಿರುವುದು ಸ್ಪಷ್ಟವಾಗುತ್ತಿದೆ. ದೋಸ್ತಿ ಸರ್ಕಾರ ಕೇವಲ ಕುರ್ಚಿ ಉಳಿಸಿಕೊಳ್ಳುವುದರಲ್ಲಿ ಕಾಲಹರಣ ಮಾಡುತ್ತಿದೆ.
|ರೇವಣಸಿದ್ದ ಜಾಡರ್
ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ