ನರಕದರ್ಶನಕ್ಕೆ ಭರಪೂರ ಸಾಕ್ಷ್ಯ: ಚಾರ್ಜ್​ಶೀಟ್​ನಲ್ಲಿ ದರ್ಶನ್ ಟೀಮ್ ಕೃತ್ಯದ ಇಂಚಿಂಚೂ ಮಾಹಿತಿ

darshan

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆಗೆ ಪ್ರಕರಣದ ಎ-1 ಆರೋಪಿ ಪವಿತ್ರಾ ಗೌಡ ನೇರ ಪ್ರಚೋದನೆಯೇ ಕಾರಣ ಎಂಬುದಕ್ಕೆ ಅಧಿಕೃತ ಪುರಾವೆ ಸಿಕ್ಕಿದೆ. ಪಟ್ಟಣಗೆರೆ ಶೆಡ್​ಗೆ ತೆರಳಿದ್ದ ಪವಿತ್ರಾ ಗೌಡ ರೇಣುಕಸ್ವಾಮಿಗೆ ಚಪ್ಪಲಿಯಿಂದ ಥಳಿಸಿ ಅವನನ್ನು ಬಿಡಬೇಡಿ ಸಾಯಿಸಿ ಎಂದು ದರ್ಶನ್ ಸಹಚರರಿಗೆ ಪ್ರಚೋದನೆ ನೀಡಿದ್ದಳು. ಇದಾದ ಬಳಿಕವೇ ರೇಣುಕಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟು, ಮರ್ವಂಗಕ್ಕೆ ಒದ್ದು ಹಲ್ಲೆ ನಡೆಸಲಾಗಿತ್ತು. ಹಲವು ಗಂಟೆಗಳ ಕಾಲ ರೇಣುಕಸ್ವಾಮಿಗೆ ನರಕ ದರ್ಶನ ಮಾಡಿಸಿದ್ದಕ್ಕೆ ಪೊಲೀಸ್ ತನಿಖೆಯಲ್ಲಿ ಸಾಕ್ಷ್ಯ ದೊರೆತಿದೆ.

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆಗೆ ಸಂಬಂಧಿಸಿ ದಂತೆ ಬುಧವಾರ ಕಾಮಾಕ್ಷಿಪಾಳ್ಯ ಪೊಲೀಸರು, 24ನೇ ಎಸಿಎಂಎಂ ಕೋರ್ಟ್​ಗೆ 3991 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ರೇಣುಕಸ್ವಾಮಿ ಮೇಲೆ ದರ್ಶನ್ ಆಂಡ್ ಗ್ಯಾಂಗ್ ನಡೆಸಿದ ಕ್ರೌರ್ಯ, ಪವಿತ್ರಾ ಗೌಡ ಪ್ರಚೋದನೆ, ಮೃತದೇಹದ ಮೇಲಿದ್ದ 39 ಗಾಯಗಳ ಗುರುತು ಸೇರಿ ಇಂಚಿಂಚೂ ಮಾಹಿತಿಯನ್ನು ದೋಷಾ ರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಜಾಲತಾಣದಲ್ಲಿ ಅಶ್ಲೀಲ ಫೋಟೋ, ಸಂದೇಶ ಕಳುಹಿಸಿದ ರೇಣುಕಸ್ವಾಮಿ ಮೇಲೆ ಸೇಡು ತೀರಿಸಿಕೊಳ್ಳಲು ನಟ ದರ್ಶನ್ ಹಾಗೂ ಸ್ನೇಹಿತೆ ಪವಿತ್ರಾ ಗೌಡ ತನ್ನ ಸಹಚರರೊಂದಿಗೆ ಸೇರಿ ಸಂಚು ರೂಪಿಸಿರುವುದು ತಾಂತ್ರಿಕ ಸಾಕ್ಷ್ಯಾಧಾರಗಳಿಂದ ದೃಢವಾಗಿದೆ. ಮನೆ ಕೆಲಸಗಾರ ಕೆ. ಪವನ್ ಮೂಲಕ ಚಿತ್ರದುರ್ಗದ ರಾಘವೇಂದ್ರನನ್ನು ಸಂಪರ್ಕ ಮಾಡಿ ರೇಣುಕಸ್ವಾಮಿಯ ಪತ್ತೆ ಮಾಡುವಂತೆ ಪವಿತ್ರಾ ಗೌಡ ಸೂಚಿಸಿದ್ದಳು. ರೇಣುಕಸ್ವಾಮಿ ಮನೆ ವಿಳಾಸ, ಫಾರ್ಮಸಿಯಲ್ಲಿ ಕೆಲಸದ ಬಗ್ಗೆ ಮಾಹಿತಿ ಕಲೆ ಹಾಕಿದ ನಂತರ ಕಿಡ್ನಾಪ್​ಗೆ ಸಂಚು ರೂಪಿಸಿದ್ದರು.

ದರ್ಶನ್ ವಿರುದ್ಧ ಸಿಕ್ಕ ಸಾಕ್ಷ್ಯವೇನು?: ಆರ್.ಆರ್. ನಗರ ಸ್ಟೋನಿ ಬ್ರೂಕ್ ರೆಸ್ಟೋರೆಂಟ್​ನಲ್ಲಿ ಪಾರ್ಟಿ ಮಾಡುತ್ತಿದ್ದ ನಟ ದರ್ಶನ್ ಮತ್ತು ಸ್ನೇಹಿತರು ಶೆಡ್​ಗೆ ಬಂದು ರೇಣುಕಸ್ವಾಮಿಗೆ ಮಾರಣಾಂತಿಕ ಹಲ್ಲೆ ನಡೆಸಿ, ಕಾಲಿನಲ್ಲಿ ಒದ್ದು ವಾಪಸ್ ಮನೆಗೆ ಹೋಗಿದ್ದರು. ದರ್ಶನ್ ಧರಿಸಿದ್ದ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಮತ್ತು ಕಪು್ಪ ಬಣ್ಣದ ರೌಂಡ್ ನೆಕ್ ಟೀ ಶರ್ಟ್ ಮತ್ತು ಲೂಫರ್ಸ್ ಡಿಸೈನ್ ಶೂನಲ್ಲಿ ರೇಣುಕಸ್ವಾಮಿ ರಕ್ತದ ಕಲೆ ಪತ್ತೆಯಾಗಿವೆ. ಶೆಡ್​ನ ಸಿಸಿ ಕ್ಯಾಮರಾ ವಿಡಿಯೋ, ಸೆಕ್ಯೂರಿಟಿ ಗಾರ್ಡ್​ಗಳ ಹೇಳಿಕೆಯಲ್ಲಿ ದರ್ಶನ್ ಕೃತ್ಯ ಬೆಳಕಿಗೆ ಬಂದಿದೆ. ಜೂನ್ 10ರ ಬೆಳಗ್ಗೆ ರಾಜರಾಜೇಶ್ವರಿನಗರದ ಮನೆಯಿಂದ ಬಂದು ಹೊಸಕೆರೆಹಳ್ಳಿ ಪ್ಲ್ಯಾಟ್​ನಲ್ಲಿ ನೆಲೆಸಿದ್ದ ಪತ್ನಿ ವಿಜಯಲಕ್ಷ್ಮೀ ಮತ್ತು ಮಗನನ್ನು ನೋಡಿಕೊಂಡು ದರ್ಶನ್ ಮೈಸೂರು ಫಾರ್ಮ್​ ಹೌಸ್​ಗೆ ತೆರಳಿದ್ದರು. ಅಲ್ಲಿಂದ ಹೋಟೆಲ್​ಗೆ ಹೋಗಿ ಶೂಟಿಂಗ್​ನಲ್ಲಿ ತೊಡಗಿದ್ದರು. ಈ ಎಲ್ಲ ಮೊಬೈಲ್ ಟವರ್ ಲೋಕೇಷನ್ ಸಂಗ್ರಹಿಸಲಾಗಿದೆ. ಪ್ರದೂಷ್ ಮೊಬೈಲ್ ಬಳಸಿ ಘಟನೆ ಕುರಿತ ವಿಡಿಯೋ, ಕಾಲ್ ಮತ್ತು ಚಾಟಿಂಗ್ ಮಾಡಿರುವುದು ಎಫ್​ಎಸ್​ಎಲ್ ವರದಿಯಲ್ಲಿ ದೃಢವಾಗಿದ್ದು, ದರ್ಶನ್ ಮೇಲಿನ ಆರೋಪ ಬಲವಾದ ಸಾಕ್ಷ್ಯವಾಗಿದೆ.

ಚಪ್ಪಲಿಯಲ್ಲಿತ್ತು ರಕ್ತದ ಕಲೆ…: ರೇಣುಕಸ್ವಾಮಿಯನ್ನು ಜೂ.9ರಂದು ಚಿತ್ರದುರ್ಗದಿಂದ ಕಾರಿನಲ್ಲಿ ಕರೆತಂದಿರುವುದು ಟೋಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಾರ್ಗಮಧ್ಯೆ ಅರೆಪ್ರಜ್ಞಾ ಸ್ಥಿತಿಯಲ್ಲಿದ್ದ ರೇಣುಕಸ್ವಾಮಿ ಮೈಮೇಲಿದ್ದ ಚಿನ್ನಾಭರಣ ದೋಚಿದ ಫೋಟೋವನ್ನು ಪವನ್, ವಿನಯ್ಗೆ ಕಳುಹಿಸಿದ್ದ. ಹತ್ಯೆ ಬಳಿಕ ಫೋಟೋ ಡಿಲೀಟ್ ಮಾಡಿರುವುದು ಮೊಬೈಲ್ ರಿಟ್ರೀವ್ ಮಾಡಿದಾಗ ರುಜುವಾಗಿದೆ. ಪವಿತ್ರಾ ಗೌಡ ಪಟ್ಟಣಗೆರೆ ಶೆಡ್​ಗೆ ಬಂದು ರೇಣುಕಸ್ವಾಮಿಗೆ ಅಶ್ಲೀಲ ಪದಗಳಿಂದ ನಿಂದಿಸಿ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಳು. ಮೃತ ವ್ಯಕ್ತಿಯ ರಕ್ತದ ಕಲೆ ಚಪ್ಪಲಿಯಲ್ಲಿ ಪತ್ತೆಯಾಗಿದೆ. ಆದ್ದರಿಂದ ಅಪಹರಣ ಮಾಡಿಸಿ ಕೊಲೆಗೆ ಪ್ರಚೋದನೆ ನೀಡಿದ ಆರೋಪಕ್ಕೆ ಪವಿತ್ರಾ ಗೌಡಳನ್ನು ಎ1 ಆರೋಪಿಯನ್ನಾಗಿ ಮಾಡಲಾಗಿದೆ.

30 ಲಕ್ಷ ರೂ. ಫಂಡಿಂಗ್ : ರೇಣುಕಸ್ವಾಮಿ ಶವ ವಿಲೇವಾರಿ ಮತ್ತು ಪೊಲೀಸ್, ವಕೀಲರ ಖರ್ಚಿಗೆಂದು ದರ್ಶನ್, ತನ್ನ ಸ್ನೇಹಿತ ಪ್ರದೂಷ್​ಗೆ 30 ಲಕ್ಷ ರೂ. ನಗದು ಕೊಟ್ಟಿದ್ದರು. ತನಿಖೆ ವೇಳೆ ಪ್ರದೂಷ್ ಮನೆಯಿಂದ 30 ಲಕ್ಷ ರೂ.ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಮನೆಯ ಸಿಸಿ ಕ್ಯಾಮರಾದ ಡಿವಿಆರ್ ಮೀರರ್ ಇಮೇಜ್​ನಿಂದ ಶವ ವಿಲೇವಾರಿ ಮಾಡಲು ಆರೋಪಿಯು ಹಣ ತೆಗೆದುಕೊಂಡು ಹೋದ ಕುರುಹು ಪತ್ತೆ ಆಗಿದೆ.

ಏನಾಯ್ತು? ಮುಂದೇನು?:

* ಸರ್ಕಾರಿ ವಿಶೇಷ ಅಭಿಯೋಜಕರ ನೇಮಕ

* ಪ್ರಸನ್ನಕುಮಾರ್ ನೇಮಿಸಿರುವ ಸರ್ಕಾರ

* ಕೋರ್ಟ್ ವಿಚಾರಣೆ ಶುರುವಾಗಲಿದೆ

* ಜಾಲತಾಣದ ತಾಂತ್ರಿಕ ಸಾಕ್ಷ್ಯ ತನಿಖೆಗೆ ಬಳಕೆ

ಬಾಡಿಗೆ ಆರೋಪಿಗಳು ಹೇಳಿಕೆ: ಗಿರಿನಗರದ ಕಾರ್ತಿಕ್ ಅಲಿಯಾಸ್ ಕಪ್ಪೆ ಮತ್ತು ಬನ್ನೇರುಘಟ್ಟದ ಕೆಂಬತಹಳ್ಳಿಯ ನಿಖಿಲ್ ನಾಯಕ್ ತಲಾ 5 ಲಕ್ಷ ರೂ. ಮತ್ತು 4.50 ಲಕ್ಷ ರೂ. ಪಡೆದು ಪೊಲೀಸ್ ಠಾಣೆಗೆ ಶರಣಾಗಿದ್ದರು. ಇವರ ಜತೆಗೆ ಕೇಶವಮೂರ್ತಿ ಸಹ ಕೈಜೋಡಿಸಿದ್ದ. ಇವರಿಗೆ ವಿನಯ್ ಹಣ ಕೊಟ್ಟು ಕೆಲಸ ಒಪ್ಪಿಸಿದ್ದ. ಇಷ್ಟೇ ಅಲ್ಲದೆ, ಪಟ್ಟಣಗೆರೆ ಶೆಡ್ ಸೆಕ್ಯೂರಿಟಿ ಗಾರ್ಡ್​ಗೆ ಕೊಲೆ ಮತ್ತು ದರ್ಶನ್ ಬಂದು ಹೋಗಿರುವ ಮಾಹಿತಿ ಎಲ್ಲಿಯೂ ಬಾಯಿ ಬಿಡದಂತೆ ಹಣದ ಆಮಿಷ ಒಡ್ಡಿರುವುದಕ್ಕೆ ಸಾಕ್ಷ್ಯ ಲಭ್ಯವಾಗಿದೆ.

ಏನೆಲ್ಲ ಸಾಕ್ಷ್ಯ ಉಲ್ಲೇಖ?

* 7 ಸಂಪುಟಗಳ 10 ಕಡತ ಒಳಗೊಂಡ 3991 ಪುಟಗಳ ಚಾರ್ಜ್​ಶೀಟ್ ಸಲ್ಲಿಕೆ

* 17 ಆರೋಪಿಗಳ ವಿರುದ್ಧ ಪ್ರತ್ಯಕ್ಷ, ಸಾಂರ್ದಭಿಕ, ತಾಂತ್ರಿಕ, ವೈಜ್ಞಾನಿಕ ಸಾಕ್ಷ್ಯ ಲಭ್ಯ

* 88 ದಿನಗಳ ಪೊಲೀಸರ ತನಿಖೆ ಪೂರ್ಣ

ಜೂ.9 ಟು ಸೆ.4!: ಜೂ. 9ರಂದು ಚಿತ್ರದುರ್ಗದಿಂದ ರೇಣುಕಸ್ವಾಮಿಯನ್ನು ಅಪಹರಿಸಿ ಪಟ್ಟಣಗೆರೆ ಶೆಡ್​ನಲ್ಲಿ ಕೂಡಿಟ್ಟು ಹತ್ಯೆ ಮಾಡಿದ್ದರು. ಬಳಿಕ ಶವವನ್ನು ಸುಮನಹಳ್ಳಿ ಮೋರಿಗೆ ಎಸೆದಿದ್ದರು. ಈ ಸಂಬಂಧ ಪಶ್ಚಿಮ ವಿಭಾಗ ಡಿಸಿಪಿ ಎಸ್. ಗಿರೀಶ್ ನೇತೃತ್ವದಲ್ಲಿ ತನಿಖೆ ಕೈಗೊಂಡ ವಿಜಯನಗರ ಉಪವಿಭಾಗ ಎಸಿಪಿ ಎನ್. ಚಂದನ್​ಕುಮಾರ್ ತಂಡ ನಟ ದರ್ಶನ್, ಸ್ನೇಹಿತೆ ಪವಿತ್ರಾ ಗೌಡ ಸೇರಿ 17 ಆರೋಪಿಗಳನ್ನು ಬಂಧಿಸಿದ್ದರು. ತನಿಖೆ ಪೂರ್ಣವಾಗಿದ್ದು, ಸೆ.4ಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ.

ಪಿಎಸ್​ಐ ಪರೀಕ್ಷೆ ಮುಂದೂಡಿಕೆ ಇಲ್ಲ, ಸೆ.22ಕ್ಕೆ ಫಿಕ್ಸ್: ಕೆಇಎ ಸ್ಪಷ್ಟನೆ

Share This Article

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…

ದಿನಕ್ಕೊಂದು ಬಾಳೆಹಣ್ಣು ಎನ್ನುವ ಹಾಗೆ 30 ದಿನ ಈ ಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

 ಬೆಂಗಳೂರು: ಪ್ರತಿದಿನ ಬಾಳೆಹಣ್ಣು ತಿನ್ನಬೇಕು. ಇದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಮಾವು ಹಣ್ಣುಗಳ ರಾಜನಾಗಿರಬಹುದು ಆದರೆ…

ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದ್ವೆ ಆಗ್ತಾರೆ! ನಿಜಕ್ಕೂ ಇದು ಸತ್ಯಾನಾ?

ಬೆಂಗಳೂರು:  ಪ್ರತಿಯೊಬ್ಬರ ತಲೆಯ ಮೇಲೆ ಸುಳಿಗಳಿರುವುದು ಸಾಮಾನ್ಯ. ಈ ಸುರುಳಿಗಳು ಹುಟ್ಟಿನಿಂದಲೇ ತಲೆಯ ಮೇಲೆ ಇರುತ್ತವೆ.…