ಸಂಜು ಚಿತ್ರ ತಂಡಕ್ಕೆ ಅಬುಸಲೇಂನಿಂದ ಲೀಗಲ್ ನೋಟಿಸ್​

ಮುಂಬೈ: ಕುಖ್ಯಾತ ಭೂಗತ ಪಾತಕಿ ಅಬು ಸಲೇಂ ಬಾಲಿವುಡ್‌ ಸಿನೆಮಾ ಸಂಜು ಚಿತ್ರದ ನಿರ್ಮಾಣ ವಿಭಾಗದ ಎಲ್ಲರಿಗೂ ಲೀಗಲ್‌ ನೋಟಿಸ್‌ ನೀಡಿದ್ದಾನೆ.

ಸಂಜು ಚಿತ್ರದಲ್ಲಿ ತನ್ನ ಬಗ್ಗೆ ತಪ್ಪು ಮಾಹಿತಿಯನ್ನು ನೀಡಲಾಗಿದೆ ಎಂದು ಆರೋಪಿಸಿ ಸಲೇಂ ಪರ ವಕೀಲರು ನಿರ್ದೇಶಕ ರಾಜ್‌ಕುಮಾರ್‌ ಹಿರಾನಿ, ವಿಧು ವಿನೋದ್‌ ಚೋಪ್ರಾ, ವಿತರಕ ಮತ್ತು ನಿರ್ಮಾಪಕರಿಗೆ ನೋಟಿಸ್‌ ಕಳುಹಿಸಿದ್ದು, ಮಾನಹಾನಿ ಉಂಟುಮಾಡುವ ದೃಶ್ಯಗಳನ್ನು ತೆಗೆಯಬೇಕು ಎಂದು ಒತ್ತಾಯಿಸಿದ್ದಾನೆ.

ಇನ್ನು 15 ದಿನಗಳಲ್ಲಿ ಚಿತ್ರದಲ್ಲಿರುವ ದೃಶ್ಯಗಳಿಗೆ ಕತ್ತರಿ ಹಾಕದಿದ್ದಲ್ಲಿ ಮಾನಹಾನಿ ಮೊಕದ್ದಮೆ ದಾಖಲಿಸುವುದಾಗಿ ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.

ನೋಟಿಸ್‌ನಲ್ಲಿ ಸಂಜು ಚಿತ್ರದ ದೃಶ್ಯವೊಂದರಲ್ಲಿ ಸಂಜಯ್ ಪಾತ್ರಧಾರಿ ತಪ್ಪೊಪ್ಪಿಗೆ ನೀಡುವಾಗ 1993ರಲ್ಲಿ ಇಡೀ ದೇಶವೇ ಭಯದಿಂದ ಕೂಡಿರುವಾಗ ಅಕ್ರಮ ಶಸ್ತ್ರಾಸ್ತ್ರ ಮತ್ತು ಯುದ್ಧ ಸಾಮಗ್ರಿಗಳನ್ನು ಪೂರೈಸಿರುವ ಕುರಿತು ನನ್ನ ಕಕ್ಷಿದಾರನ ವಿರುದ್ಧ ಆರೋಪಿಸಲಾಗಿದೆ. ಆದರೆ, ಅಬು ಸಲೇಂ ಯಾವುದೇ ಶಸ್ತ್ರಾಸ್ತ್ರಗಳನ್ನು ಪೂರೈಸಿಲ್ಲ ಎಂದು ಹೇಳಲಾಗಿದೆ.

1993ರಲ್ಲಿ ನಡೆದ ಮುಂಬೈ ಬಾಂಬ್‌ ಸ್ಫೋಟದ ಪ್ರಮುಖ ಅಪರಾಧಿಯಾಗಿರುವ ಅಬುಸಲೇಂಗೆ ಈಗಾಗಲೇ ಜೀವಾವಧಿ ಶಿಕ್ಷೆಯನ್ನು ನೀಡಲಾಗಿದ್ದು, 2002ರ ಸುಲಿಗೆ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯ ಏಳು ವರ್ಷದ ಕಠಿಣ ಸೆರೆವಾಸವನ್ನು ವಿಧಿಸಿದೆ.

ಜೂ. 29ರಂದು ಬಿಡುಗಡೆಯಾಗಿರುವ ಸಂಜು ಸಿನಿಮಾ ಬಾಲಿವುಡ್‌ ನಟ ಸಂಜಯ್‌ ದತ್‌ ಅವರ ಜೀವನಾಧರಿತ ಚಿತ್ರವಾಗಿದೆ. (ಏಜೆನ್ಸೀಸ್)