ಅಬುದಾಬಿ ಕೋರ್ಟ್​ಗಳಲ್ಲಿ ಹಿಂದಿಗೆ 3ನೇ ಅಧಿಕೃತ ಭಾಷಾ ಸ್ಥಾನಮಾನ

ದುಬೈ: ಯುನೈಟೆಡ್​ ಅರಬ್​ ಎಮಿರೇಟ್ಸ್​ನಲ್ಲಿ (ಯುಎಇ) ನೆಲೆಸಿರುವ ಭಾರತೀಯ ಮೂಲದ ಕಾರ್ಮಿಕ ವರ್ಗಕ್ಕೆ ಇಲ್ಲೊಂದು ಸಂತಸದ ಸುದ್ದಿ. ಅಬುದಾಬಿ ಕೋರ್ಟ್​ಗಳಲ್ಲಿ ಹಿಂದಿಗೆ 3ನೇ ಅಧಿಕೃತ ಭಾಷೆ ಸ್ಥಾನಮಾನ ನೀಡಿ ಸ್ಥಳೀಯ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದಾಗಿ ಕಾನೂನು ಹೋರಾಟದಲ್ಲಿ ತೊಡಗಿಕೊಂಡರೆ, ಸಲ್ಲಿಕೆಯಾಗುವ ದಾಖಲೆಗಳನ್ನು ಹಿಂದಿ ಭಾಷೆಗೆ ಅನುವಾದ ಮಾಡಿಸಿಕೊಂಡು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲು ಅನುಕೂಲವಾಗುತ್ತದೆ.

2018ರ ನವೆಂಬರ್​ವರೆಗೆ ಕೇವಲ ಅರೇಬಿಕ್​ ಭಾಷೆಯಲ್ಲೇ ಕೋರ್ಟ್​ ಕಲಾಪಗಳು ನಡೆಯುತ್ತಿದ್ದವು. ದಾಖಲೆಗಳು ಕೂಡ ಅರೇಬಿಕ್​ ಭಾಷೆಯಲ್ಲೇ ಸಲ್ಲಿಸಲ್ಪಡುತ್ತಿದ್ದವು. ಇದರಿಂದ ಯುಎಇಯಲ್ಲಿ ಹೂಡಿಕೆ ಮಾಡಿರುವ ವಿದೇಶಿ ಸಂಸ್ಥೆಗಳಿಗೆ ಕೋರ್ಟ್​ನಲ್ಲಿ ದೂರು ಸಲ್ಲಿಸಲು ಅಥವಾ ತಮ್ಮ ವಿರುದ್ಧ ಸಲ್ಲಿಕೆಯಾಗಿರುವ ದೂರುಗಳ ವಿಚಾರಣೆಯಲ್ಲಿ ಭಾರಿ ತೊಡಕು ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅಬುದಾಬಿ ಕೋರ್ಟ್​ಗಳಲ್ಲಿ ಅರೇಬಿಕ್​ ಜತೆಗೆ ಇಂಗ್ಲಿಷ್​ಗೂ ಅಧಿಕೃತ ಭಾಷಾ ಸ್ಥಾನಮಾನ ನೀಡಿ ಅಲ್ಲಿನ ಸರ್ಕಾರ ದ್ವಿಭಾಷಾ ನೀತಿಯನ್ನು ಅನುಷ್ಠಾನಗೊಳಿಸಿತ್ತು.

ಯುಎಇಯಲ್ಲಿರುವ ಒಟ್ಟು ಜನಸಂಖ್ಯೆ 9 ದಶಲಕ್ಷ. ಇದರಲ್ಲಿ ಮೂರನೇ 2 ಭಾಗದಷ್ಟು ಜನರು ವಲಸೆ ಬಂದವರಾಗಿದ್ದಾರೆ. ಭಾರತದಿಂದ ಯುಎಇಗೆ ವಲಸೆ ಬಂದಿರುವವರ ಸಂಖ್ಯೆ 2.6 ದಶಲಕ್ಷ. ಅಂದರೆ, ಯುಎಇನ ಒಟ್ಟು ಜನಸಂಖ್ಯೆಯಲ್ಲಿ ಶೇ.30 ಜನ ಭಾರತೀಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ಮೂಲದ ಕಾರ್ಮಿಕರ ಅನುಕೂಲಕ್ಕಾಗಿ ಸ್ಥಳೀಯ ಸರ್ಕಾರ ಅಬುದಾಬಿ ಕೋರ್ಟ್​ಗಳಲ್ಲಿ ಹಿಂದಿಗೆ 3ನೇ ಅಧಿಕೃತ ಭಾಷಾ ಸ್ಥಾನಮಾನ ಕೊಡುವ ಮೂಲಕ ತ್ರಿಭಾಷಾ ಸೂತ್ರವನ್ನು ಜಾರಿಗೊಳಿಸಿದೆ.

ಇದರರ್ಥ, ವಿದೇಶಿ ಹೂಡಿಕೆದಾರರು ಏನಾದರೂ ಕೋರ್ಟ್​ ಜಂಜಾಟದಲ್ಲಿ ಸಿಲುಕಿಕೊಂಡರೆ, ಕೋರ್ಟ್​ ದಾಖಲೆಗಳನ್ನು ಹಿಂದಿ ಭಾಷೆಗೂ ಅನುವಾದ ಮಾಡಲಾಗುತ್ತದೆ. ಇದರಿಂದ ಕೋರ್ಟ್​ ಕಲಾಪವನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಅನುಕೂಲವಾಗುತ್ತದೆ.