ಚಿತ್ರರಂಗದಲ್ಲಿ 23 ವರ್ಷ ಪೂರೈಸಿದ ಪೈಲ್ವಾನ್​: ಎಲ್ಲೇ ಹೋದರೂ ಕನ್ನಡತನ ಬಿಟ್ಟುಕೊಡದ ಕೆಚ್ಚೆದೆಯ ಕಿಚ್ಚ

ಬೆಂಗಳೂರು: ಚಂದನವನದ​ ಮಾಣಿಕ್ಯ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅವರು ಚಿತ್ರರಂಗದಲ್ಲಿ ಇಂದಿಗೆ 23 ವರ್ಷ ಪೂರೈಸಿ, ಮುನ್ನಡೆಯುತ್ತಿದ್ದಾರೆ. ಚಿತ್ರರಂಗದಲ್ಲಿ ಹಲವು ಏಳುಬೀಳುಗಳನ್ನು ಕಂಡಿರುವ ಕಿಚ್ಚ, ‘ಏನಾಗಲಿ ಮುಂದೆ ಸಾಗು ನೀ’ ಎಂಬಂತೆ ತಮ್ಮ ಪ್ರತಿಭೆಯ ಛಾಪನ್ನು ಎಲ್ಲೆಡೆ ಪಸರಿಸಿ ಕನ್ನಡತನವನ್ನು ಬೆಳೆಸಿದ್ದಾರೆ.

ಕನ್ನಡತನವನ್ನು ಬಿಟ್ಟು ಕೊಡದ ಕೆಚ್ಚೆದೆಯ ಕಿಚ್ಚ
ಕನ್ನಡಕ್ಕೆ ಮಾತ್ರ ಸೀಮಿತವಾಗದೇ ಬಾಲಿವುಡ್​, ಟಾಲಿವುಡ್​ ಹಾಗೂ ಕಾಲಿವುಡ್​​ನಲ್ಲಿ ತಮ್ಮ ಸಾರ್ಥ್ಯವನ್ನು ಸಾಬೀತು ಮಾಡಿರುವ ಕಿಚ್ಚ, ಹಾಲಿವುಡ್​ನಲ್ಲೂ ತಮ್ಮ ಖದರ್​ ತೋರಲು ತೊಡೆ ತಟ್ಟಿದ್ದಾರೆ. ಎಲ್ಲೆ ಹೋದರೂ ಕನ್ನಡತನವನ್ನು ಬಿಟ್ಟು ಕೊಡದ ಕೆಚ್ಚೆದೆಯ ಕಿಚ್ಚ ಕನ್ನಡ ಚಿತ್ರರಂಗದ ಕಳಸವಾಗಿದ್ದಾರೆ. ತಮ್ಮ ವಿಶಿಷ್ಟ ಮ್ಯಾನರಿಸಂ, ಗಟ್ಟಿ ಧ್ವನಿ ಹಾಗೂ ಸ್ಟೈಲಿಶ್​ ಲುಕ್​ನಿಂದ ಎಲ್ಲರ ಮನಗೆದ್ದಿರುವ ಕಿಚ್ಚ, ಸ್ಯಾಂಡಲ್​​ವುಡ್​ಗೆ ಪದಾರ್ಪಣೆ ಮಾಡಿ ಇಂದಿಗೆ 23 ವರ್ಷ ಕಳೆದಿದ್ದು, ನೆಚ್ಚಿನ ನಟನಿಗೆ ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಸಹೋದ್ಯೋಗಿಗಳು ಶುಭ ಕೋರಿ ಹಾರೈಸಿದ್ದಾರೆ.

ನಟ ಮಾತ್ರವಲ್ಲ, ಕಾಲಿಡದ ಕ್ಷೇತ್ರವಿಲ್ಲ
ಯಾವುದೇ ಗಾಡ್ ಫಾದರ್ ಇಲ್ಲದೇ ತಮ್ಮ ತಾಳ್ಮೆ, ಪರಿಶ್ರಮ ಹಾಗೂ ಪ್ರತಿಭೆಯಿಂದಲೇ ಚಿತ್ರರಂಗದಲ್ಲಿ ಬೆಳೆದವರು ಕಿಚ್ಚ, ಆರಂಭದಲ್ಲಿ ತಮ್ಮ ಬ್ಯಾನರ್​ನಲ್ಲಿ ಸಿನಿಮಾ ಮಾಡಿದ್ದನ್ನು ಬಿಟ್ಟರೆ, ಸುದೀಪ್​ ಹೆಸರು ಗಳಿಸಿದ್ದು ತಮ್ಮ ಟ್ಯಾಲೆಂಟ್​ನಿಂದ. ಕನ್ನಡಿಗರ ಮನಗೆದ್ದು ತಮ್ಮ ಅಭಿಮಾನಿಗಳಿಂದ, ಈಗ ಪ್ರೀತಿಯಿಂದ ದೀಪಣ್ಣ ಅಂತ ಕರೆಸಿಕೊಳ್ಳುತ್ತಿದ್ದಾರೆ. ನಟರಾಗಿ ಅಷ್ಟೇ ಅಲ್ಲದೆ ನಿರ್ದೇಶಕ, ನಿರ್ಮಾಪಕ, ಸಿಂಗರ್, ಕ್ರಿಕೆಟಿಗ, ನಿರೂಪಕರಾಗಿಯೂ ಸುದೀಪ್ ತಮ್ಮದೇ ಐಡೆಂಟಿಟಿಯನ್ನು ಗಳಿಸಿಕೊಂಡಿದ್ದಾರೆ.

ಸಹಾಯಕ್ಕೆ ಒಂದು ಕೈ ಮುಂದೆ
ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವ ಕಿಚ್ಚ ಸುದೀಪ್​ ಅವರು, ಹಲವು ಮಂದಿಯ ನೋವಿಗೆ ಸ್ಪಂದಿಸಿದ್ದಾರೆ. ಚಿತ್ರರಂಗದಲ್ಲಿ ತಾವೂ ಬೆಳೆದು ತನ್ನೊಂದಿಗೆ ಇನ್ನಿತರರನ್ನು ಬೆಳೆಸುವವರಲ್ಲಿ ಕಿಚ್ಚ ಸದಾ ಒಂದು ಕೈ ಮುಂದೆ ಎಂದು ಹೇಳಬಹುದು. ಸಂಗೀತ ಮಾಂತ್ರಿಕ ಅರ್ಜುನ್​ ಜನ್ಯಾ, ನೃತ್ಯ ಸಂಯೋಜಕ ಹರ್ಷ ಹಾಗೂ ನಿರ್ದೇಶಕ ನಂದ ಕಿಶೋರ್​ ಸೇರಿದಂತೆ ಮುಂತಾದವರಿಗೆ ಸುದೀಪ್​ ಗಾಡ್​ ಫಾದರ್​ ಆಗಿದ್ದಾರೆ.(ದಿಗ್ವಿಜಯ ನ್ಯೂಸ್​)