| ಎ.ಆರ್.ರಘುರಾಮ, ಮೈಸೂರು
ಅಭಿನವ ಶಂಕರಾಲಯ- ಹೆಸರೊಂದೇ ಪ್ರಾಕೃತಿಕ ಚೇತನಶಕ್ತಿ. ವಿದ್ಯಾ ಪ್ರದಾಯಕಳಾದ ಜಗನ್ಮಾತೆ ಶ್ರೀ ಶಾರದೆ ಕೃಪೆತೋರಿ ಮೈಸೂರಿನಲ್ಲಿ ನೆಲೆಸಿದ ಪುಣ್ಯ ಭೂಮಿಕೆ. ಅದುವೇ ಶೃಂಗೇರಿಯ ದಕ್ಷಿಣಾಮ್ನಾಯ ಶಾರದಾಪೀಠದ 33ನೇ ಜಗದ್ಗುರುಗಳಾಗಿದ್ದ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಅವರ ಜನ್ಮಸ್ಥಳವೂ ಆಗಿರುವುದು ಇನ್ನೊಂದು ವಿಶೇಷ. ಮೈಸೂರಿನ ಶಾರದೆ ನೆಲೆವೀಡು ಅಕ್ಷರಾಭ್ಯಾಸದ ಸನ್ನಿಧಿ- ಅಭಿನವ ಶಂಕರಾಲಯಕ್ಕೆ ಈಗ ಶತಮಾನ ಪೂರ್ಣಗೊಂಡಿದೆ ಎಂಬುದು ಮಹತ್ವದ ಸಂಗತಿ.
ವೈವಿಧ್ಯಮಯ ಕಾರ್ಯಕ್ರಮ: ಮೈಸೂರಿನ ಅಗ್ರಹಾರದ ಫೋರ್ಟ್ ಮೊಹಲ್ಲಾದಲ್ಲಿರುವ ಅಭಿನವ ಶಂಕರಾಲಯದಲ್ಲಿ ಶತ ಮಾನೋತ್ಸವ ಸಂಭ್ರಮಾ ಚರಣೆಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಶ್ರೀಮಠ ಹಮ್ಮಿ ಕೊಂಡಿದೆ. ಏ.4 ರಂದು ಶ್ರೀಮಹಾಗಣಪತಿ, ಶ್ರೀಸತ್ಯ ನಾರಾಯಣ ಮತ್ತು ಶ್ರೀ ಶಂಕರಾಚಾರ್ಯರ ಸನ್ನಿಧಿಗಳಲ್ಲಿ ಕುಂಭಾಭಿ ಷೇಕ, ನವಗ್ರಹ ಮೂರ್ತಿಗಳ ಪುನರ್ ಪ್ರತಿಷ್ಠಾಪನೆ ನೆರವೇರಲಿದೆ. 5ರಂದು ಶಾರದಾಂಬಾ ಹಾಗೂ ಜಗದ್ಗುರು ಶ್ರೀ ಸಚ್ಚಿದಾನಂದ ನೃಸಿಂಹ ಭಾರತೀ ಮಹಾಸ್ವಾಮಿಗಳ ಸನ್ನಿಧಿಯಲ್ಲಿ ಕುಂಭಾಭಿಷೇಕ, ಚಿನ್ನದ ಕಲಶ ಪ್ರತಿಷ್ಠಾಪನೆ, ಸಂಜೆ 5.30ಕ್ಕೆ ಗುರುವಂದನಾ ಸಂಪನ್ನಗೊಳ್ಳಲಿದೆ. ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಭಾರತ ಸರ್ಕಾರದ ಅಡಿಷನಲ್ ಸಾಲಿಸಿಟರ್ ಜನರಲ್ ಎನ್. ವೆಂಕಟರಾಮನ್ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶೃಂಗೇರಿ ಶಂಕರ ಮಠ ಆಯೋಜಿಸಿರುವ ಹೋಮ, ಹವನ, ಗುರುದರ್ಶನ, ಪಾದಪೂಜೆಗಳಿಗೆ ಸಾವಿರಾರು ಭಕ್ತರು ಸಾಕ್ಷಿಯಾಗಲಿದ್ದಾರೆ. ಶೃಂಗೇರಿ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಸರ್ವ ಪ್ರಕ್ರಿಯೆಗಳ ಸಾನ್ನಿಧ್ಯ ವಹಿಸಲಿದ್ದಾರೆ.
ಶಿವಸ್ವಾಮಿ ಸನ್ಯಾಸಿಯಾದರು: ಈಗ ಮೈಸೂರಿನ ಅಭಿನವ ಶಂಕರಾಲಯ ಎಂದೇ ಖ್ಯಾತವಾದ, ಶೃಂಗೇರಿಯ ಮಠಕ್ಕೆ ಸೇರಿದಕ್ಷೇತ್ರದಲ್ಲೇ ಶೃಂಗೇರಿ ಜಗದ್ಗುರು ಶ್ರೀ ನೃಸಿಂಹ ಭಾರತೀ ಅವರು ಜನಿಸಿದ್ದು.(ಪೂರ್ವಾಶ್ರಮದ ಹೆಸರು ಶಿವಸ್ವಾಮಿ). ತಂದೆ ಕುಣಿಗಲ್ ರಾಮಶಾಸ್ತ್ರಿ ಮೈಸೂರಿನ ರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಆಸ್ಥಾನದ ಶ್ರೇಷ್ಠ ವಿದ್ವಾಂಸರು. ಜನ್ಮದಾತೆ ಲಕ್ಷ್ಮಮ್ಮ. ಶಿವಸ್ವಾಮಿ ಬಾಲಕನಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಕೆಲಕಾಲದಲ್ಲೇ ಮಾತೃವಿಯೋಗ! ಅಣ್ಣ ಲಕ್ಷ್ಮೀ ನರಸಿಂಹಶಾಸ್ತ್ರಿಗಳ ಆಶ್ರಯದಲ್ಲಿ ಶಿವಸ್ವಾಮಿ ಬೆಳೆದರು. ದೈವಕೃಪೆ ಎಂಬಂತೆ ಶೃಂಗೇರಿಯ 32ನೇ ಯತಿ ಶ್ರೀ ನರಸಿಂಹ ಭಾರತೀ ಸ್ವಾಮಿಗಳು ಮೈಸೂರಿಗೆ ದಿಗ್ವಿಜಯಕ್ಕಾಗಿ ಆಗಮಿಸಿದ್ದರು. ಬಾಲಕ ಶಿವಸ್ವಾಮಿಯ ತೇಜಸ್ಸು ಗಮನಿಸಿದರು. ಅವರನ್ನೇ ಉತ್ತರಾಧಿಕಾರಿ ಎಂದು ಕರೆದರು. ಮೈಸೂರು ಅರಮನೆ ಆವರಣದ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಶಿವಸ್ವಾಮಿ ಸಂನ್ಯಾಸಾಶ್ರಮ ಸ್ವೀಕರಿಸಿದರು. ಪರಂಪರೆಯ 33ನೇ ಜಗದ್ಗುರುಗಳನ್ನು ನೀಡಿದ ಕೀರ್ತಿ ಮೈಸೂರಿಗೆ. ಮುಂದಿನದೆಲ್ಲವೂ ಮಹೋನ್ನತ ಮಾರ್ಗ.
ಇತ್ತ ಲಕ್ಷ್ಮೀ ನರಸಿಂಹಶಾಸ್ತ್ರಿಗಳ ಪುತ್ರ ರಾಮಶಾಸ್ತ್ರಿ ಅವರು ಶಿವಸ್ವಾಮಿ ಜನಿಸಿದ ಮನೆಯನ್ನು ಧಾರ್ವಿುಕ ಕಾರ್ಯಕ್ಷೇತ್ರ ಮಾಡಬೇಕು ಎಂದು ಸಂಕಲ್ಪಿಸಿದರು. ಮಠದ ಭಕ್ತರಾಗಿದ್ದ ಮಹಾರಾಜರು ಅಗತ್ಯ ನೆರವು ನೀಡಿದರು. ಎರಡೇ ವರ್ಷದಲ್ಲಿ ದೇಗುಲ ನಿರ್ಮಾಣ ಪೂರ್ಣ. 31-3-1924 ಭಾನುವಾರ (ಫಾಲ್ಗುಣ ಕೃಷ್ಣ ಏಕಾದಶಿ) ಮಹಾರಾಜರು ಹೊಸ ದೇವಾಲಯ ಉದ್ಘಾಟಿಸಿದರು. ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಸ್ವಾಮೀಜಿ ಅವರ ಶಿಲಾಪ್ರತಿಮೆಯನ್ನು ಸ್ಥಾಪಿಸಿ ಭವ್ಯವಾದ ದೇವಾಲಯಕ್ಕೆ ಅಭಿನವ ಶಂಕರಾಲಯ ಎಂದೇ ನಾಮಕರಣ ಮಾಡಿದರು. ಶಂಕರರ ಅದ್ವೈತ ಪರಂಪರೆಯಲ್ಲಿ ಬಹು ಅಪರೂಪದ ಇತಿಹಾಸವಿರುವ ಯತಿ ಮನೆಯೇ ಮಂದಿರವಾಗಿ, ಶತಮಾನ ಕಂಡಿರುವುದು ಇದೊಂದೇ ಕ್ಷೇತ್ರ.
1984ರಲ್ಲಿ ಶ್ರೀ ಅಭಿನವ ವಿದ್ಯಾತೀರ್ಥ ಪ್ರವಚನ ಮಂದಿರ, ಶ್ರೀ ಭಾರತೀ ತೀರ್ಥ ವೇದಸಂಸ್ಕೃತ ಪಾಠಶಾಲೆಯೂ ಸ್ಥಾಪನೆಯಾಗಿ ನೂರಾರು ವಿದ್ವಾಂಸರನ್ನು ನಾಡಿಗೆ ನೀಡಿದ ಕೀರ್ತಿಗೆ ಭಾಜನವಾಗಿದೆ ಅಭಿನವ ಶಂಕರಾಲಯ.
ನಮ್ಮೆಲ್ಲರಿಗೆ ಧನ್ಯತೆ: ಮೈಸೂರಿನಲ್ಲೇ ಜನಿಸಿ ಶ್ರೀ ಶಾರದಾ ಪೀಠದ ಪರಂಪರೆ ಯನ್ನು ಬೆಳಗಿದವರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಸ್ವಾಮೀಜಿ. ಅವರ ಸಾಧನೆ ಅಪಾರ ಮತ್ತು ಅನನ್ಯ. ಅವರು ಹೆಚ್ಚು ಸಂದೇಶ ನೀಡಲಿಲ್ಲ, ಜೀವನ ಸಾಧನೆ ಮಾಡಿ ಜಗತ್ತಿಗೆ ಗುರುಶಕ್ತಿ ತೋರಿದರು. ಸತ್ಯಂ, ಶಿವಂ, ಸುಂದರಂ- ಎಂಬಂತೆ ಬಾಳಿದರು. ಹಿಂದಿನ ಯತಿಗಳಿಗೆ ವಿನೀತರಾಗಿ, ಮುಂದಿನ ಪರಂಪರೆಗೆ ಆದರ್ಶವಾಗಿ ನಡೆದರು. ಅಂತರಂಗ- ಬಹಿರಂಗ ಸಾಧನೆಗೆ ಮಿಡಿದರು.
ತೈವಾನ್‌ನಲ್ಲಿ ಭೀಕರ ಭೂಕಂಪ, 7ಕ್ಕೂ ಹೆಚ್ಚು ಜನರ ಸಾವು, ನೂರಾರು ಮಂದಿ ಗಂಭೀರ! ಪ್ರಧಾನಿ ಮೋದಿ ಸಂತಾಪ