ಅಭಿನಂದನ್​ ಬಿಡುಗಡೆಗೆ ತಡೆಕೋರಿ ಪಾಕಿಸ್ತಾನ ನ್ಯಾಯಾಲಯಕ್ಕೆ ಅರ್ಜಿ

ಇಸ್ಲಾಮಾಬಾದ್​: ತನ್ನ ಹಿಡಿತದಲ್ಲಿರುವ ಭಾರತೀಯ ವಾಯುಪಡೆ ಪೈಲಟ್​ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರ ಬಿಡುಗಡೆಗೆ ತಡೆ ಕೋರಿ ಸಾಮಾಜಿಕ ಕಾರ್ಯಕರ್ತನೊಬ್ಬ ಪಾಕಿಸ್ತಾನದ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾನೆ.

ಈತನನ್ನು ಬಿಡುಗಡೆ ಮಾಡುತ್ತಿರುವ ಔಚಿತ್ಯ ಏನು ಎಂದು ಆತ ತನ್ನ ಅರ್ಜಿಯಲ್ಲಿ ಪ್ರಶ್ನಿಸಿರುವುದಾಗಿ ಹೇಳಲಾಗಿದೆ. ಭಾರತೀಯ ವಾಯುಗಡಿ ಪ್ರವೇಶಿಸಿದ್ದ ಪಾಕಿಸ್ತಾನದ ಎಫ್​16 ಯುದ್ಧವಿಮಾನಗಳನ್ನು ರಷ್ಯಾ ನಿರ್ಮಿತ ಮಿಗ್​-21 ಬೈಸನ್​ ಜೆಟ್​ ಯುದ್ಧವಿಮಾನದಲ್ಲಿ ಬೆನ್ನಟ್ಟಿ ಹೋಗಿದ್ದ ಅಭಿನಂದನ್​, ಒಂದು ವಿಮಾನವನ್ನು ಹೊಡೆದುರುಳಿಸಿದ್ದರು. ತಮ್ಮ ವಿಮಾನದ ಮೇಲೆ ದಾಳಿ ನಡೆದು, ಅದು ಹಾನಿಗೊಂಡಿದ್ದನ್ನು ಗಮನಿಸಿದ್ದ ಅವರು ವಿಮಾನದಿಂದ ಜಿಗಿದಿದ್ದರು. ದುರದೃಷ್ಟವಶಾತ್​ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಇಳಿದಿದ್ದ ಅವರನ್ನು ಪಾಕ್​ ಸೇನಾಪಡೆ ಸಿಬ್ಬಂದಿ ವಶಕ್ಕೆ ಪಡೆದಿದ್ದರು.

ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಿದ್ದರಿಂದ ಹಾಗೂ ಜಿನೀವಾ ಒಪ್ಪಂದದ ಪ್ರಕಾರ ಅಭಿನಂದನ್​ ಅವರನ್ನು ಬಿಡುಗಡೆ ಮಾಡುವ ಅನಿವಾರ್ಯತೆಗೆ ಸಿಲುಕಿದ್ದ ಪಾಕಿಸ್ತಾನ ಅಭಿನಂದನ್​ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿತ್ತು. (ಏಜೆನ್ಸೀಸ್​)