ಪಾಕ್​ ಯುದ್ಧವಿಮಾನ ಹೊಡೆದುರುಳಿಸಿದ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ಗೆ ವೀರ ಚಕ್ರ ಪದಕ ಖಚಿತ

ನವದೆಹಲಿ: ಭಾರತದ ವಾಯುಗಡಿಯನ್ನು ಉಲ್ಲಂಘಿಸಿ ನುಗ್ಗಲು ಯತ್ನಿಸಿದ್ದ ಪಾಕಿಸ್ತಾನದ ಎಫ್​ 16 ಯುದ್ಧವಿಮಾನವನ್ನು ಹೊಡೆದುರುಳಿಸಿದ ಸಾಹಸಕ್ಕಾಗಿ ಭಾರತೀಯ ವಾಯುಪಡೆಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ಗೆ ಸರ್ಕಾರ ವೀರ ಚಕ್ರ ಪದಕ ಗೌರವ ದೊರೆಯುವುದು ಬಹುತೇಕ ಖಚಿತವಾಗಿದೆ.

ಜತೆಗೆ ಪಾಕ್​ನ ಬಾಲಾಕೋಟ್​ನಲ್ಲಿನ ಉಗ್ರರ ನೆಲೆಗಳ ಮೇಲೆ ಸದ್ದಿಲ್ಲದೆ ವೈಮಾನಿಕ ದಾಳಿ ನಡೆಸಿ ಸುರಕ್ಷಿತವಾಗಿ ಹಿಂದುರಿಗಿದ ಮಿರಾಜ್​ 2000 ಯುದ್ಧವಿಮಾನಗಳ 5 ಪೈಲಟ್​ಗಳಿಗೆ ವಾಯು ಸೇನಾ ಪದಕ ಗೌರವ ಲಭಿಸುವುದು ಬಹುತೇಕ ಖಚಿತವಾಗಿದೆ. ಈ ಬಾರಿ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಈ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.

ಭಾರತೀಯ ವಾಯುಪಡೆಯ ಮೂಲಗಳು ಈ ವಿಷಯವನ್ನು ಖಚಿತಪಡಿಸಿವೆ. ಬಾಲಾಕೋಟ್​ ಮೇಲಿನ ವೈಮಾನಿಕ ದಾಳಿ ನಡೆದ ಮರುದಿನ ಅಂದರೆ, 2019ರ ಫೆ.27ರಂದು ಪಾಕಿಸ್ತಾನದ ಯುದ್ಧವಿಮಾನಗಳು ಭಾರತದ ವಾಯುಗಡಿ ಉಲ್ಲಂಘಿಸಿ ಪ್ರವೇಶಿಸಲು ಯತ್ನಿಸಿದ್ದವು. ಈ ಸಂದರ್ಭದಲ್ಲಿ ತಮ್ಮ ಮಿಗ್​ 21 ಬೈಸನ್​ ಯುದ್ಧವಿಮಾನದಲ್ಲಿ ಅವುಗಳನ್ನು ಬೆನ್ನಟ್ಟಿಕೊಂಡು ಹೋಗಿದ್ದ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಎಫ್​ 16 ಯುದ್ಧವಿಮಾನವೊಂದನ್ನು ಹೊಡೆದುರುಳಿಸಿದ್ದರು.

ಈ ವೇಳೆ ಅವರಿದ್ದ ಯುದ್ಧವಿಮಾನ ಕೂಡ ಹಾನಿಗೊಂಡು ಪತನಗೊಂಡಿತ್ತು. ತಕ್ಷಣವೇ ಅವರು ವಿಮಾನದಿಂದ ಹೊರಜಿಗಿದು ಪ್ರಾಣ ಉಳಿಸಿಕೊಂಡಿದ್ದರು. ಆದರೆ ಅವರು ಪಾಕ್​ ಆಕ್ರಮಿತ ಕಾಶ್ಮೀರದೊಳಗೆ ಇಳಿದಿದ್ದರಿಂದ, ಪಾಕ್​ ಸೇನಾಪಡೆ ಅವರನ್ನು ಬಂಧಿಸಿತ್ತು. ಪಾಕ್​ ಮೇಲೆ ಜಾಗತಿಕವಾಗಿ ಒತ್ತಡ ಹೇರಿದ್ದ ಭಾರತ, ಅಭಿನಂದನ್​ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಇದಕ್ಕೂ ಮುನ್ನ ಫೆ.14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ನಡೆಸಿದ್ದ ದಾಳಿಯಲ್ಲಿ ಸಿಆರ್​ಪಿಎಫ್​ನ 40 ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಭಾರತೀಯ ವಾಯುಪಡೆಯ 5 ಮಿರಾಜ್​ 2000 ಯುದ್ಧವಿಮಾನಗಳು ಪಾಕ್​ನ ಬಾಲಾಕೋಟ್​ನಲ್ಲಿದ್ದ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿದ್ದವು. ಇದಕ್ಕೆ ಪ್ರತಿಯಾಗಿ ಪಾಕ್​ನ ವಾಯುಪಡೆ ಯುದ್ಧವಿಮಾನಗಳು ಭಾರತದ ವೈಮಾನಿಕ ಗಡಿ ದಾಳಿ ಒಳಬರಲು ಯತ್ನಿಸಿದ್ದವು.

ಇನ್ನೂ ಚೇತರಿಸಿಕೊಳ್ಳುತ್ತಿರುವ ಅಭಿನಂದನ್​ ವರ್ಧಮಾನ್​
ಪಾಕ್​ನ ಎಫ್​ 16 ಯುದ್ಧವಿಮಾನವನ್ನು ಹೊಡೆದುರುಳಿಸಿದ ಬಳಿಕ ತಮ್ಮ ಮಿಗ್​ 21 ಬೈಸನ್​ ಯುದ್ಧವಿಮಾನಕ್ಕೆ ಹಾನಿಯಾಗಿದ್ದರಿಂದ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ತಮ್ಮ ವಿಮಾನದಿಂದ ಹೊರಹಾರಿ ಪ್ರಾಣವುಳಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಅವರಿಗೆ ಗಂಭೀರ ಗಾಯಗಳಾಗಿದ್ದವು.

ಸದ್ಯ ಅಭಿನಂದನ್​ ಅವರು ತಮ್ಮ ಗಾಯಗಳಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರು ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಬೆಂಗಳೂರಿನಲ್ಲಿರುವ ಏರೋಸ್ಪೇಸ್​ ವೈದ್ಯಕೀಯ ಸಂಸ್ಥೆಯಲ್ಲಿ (ಇನ್​ಸ್ಟಿಟ್ಯೂಟ್​ ಆಫ್​ ಏರೋಸ್ಪೇಸ್​ ಮೆಡಿಸಿನ್​) ಹಲವು ಬಗೆಯ ಸರಣಿ ಪರೀಕ್ಷೆಗಳಿಗೆ ಒಳಪಡಲಿದ್ದಾರೆ. ಆನಂತರದಲ್ಲಿ ಮತ್ತೆ ಯುದ್ಧವಿಮಾನಗಳನ್ನು ಚಲಾಯಿಸಲು ಅವರಿಗೆ ಅವಕಾಶ ಮಾಡಿಕೊಡುವ ಬಗ್ಗೆ ಭಾರತೀಯ ವಾಯುಪಡೆ ಅಧಿಕಾರಿಗಳು ನಿರ್ಧರಿಸಲಿರುವುದಾಗಿ ವಾಯುಪಡೆ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *