ಅಭಿನಂದನ್ ಬಿಡುಗಡೆಗೆ ದಾವಣಗೆರೆಯಲ್ಲಿ ಸಡಗರ, ವಿಜಯೋತ್ಸವ

ದಾವಣಗೆರೆ : ಶತ್ರು ರಾಷ್ಟ್ರದಲ್ಲಿ ಬಂಧಿಯಾಗಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಬಿಡುಗಡೆಗೆ ಪಾಕಿಸ್ತಾನದ ಪ್ರಧಾನಿ ಸಮ್ಮತಿಸಿದ ಬೆನ್ನಲ್ಲೇ ನಗರಾದ್ಯಂತ ವಿವಿಧ ಸಂಘಟನೆಗಳು ಶುಕ್ರವಾರ ವಿಜಯೋತ್ಸವ ನಡೆಸಿದವು.

ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಜಯದೇವ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ವೀರಯೋಧ ಅಭಿನಂದನ್ ಪರ ಜಯಕಾರ ಮೊಳಗಿತು. ಪಾಕಿಸ್ತಾನದ ವಿರುದ್ಧ ಕ್ಕಾರ ಕೂಗಿದರು.

ಬಿಜೆಪಿ ಉತ್ತರ ವಲಯ ಕಾರ್ಯಕರ್ತರು ನಿಟುವಳ್ಳಿಯಲ್ಲಿ ಪರಸ್ಪರ ಸಿಹಿ ತಿನ್ನಿಸಿ ವಿಜಯೋತ್ಸವ ಆಚರಿಸಿದರು. ಕಮಾಂಡರ್ ಅಭಿನಂದನ್ ವರ್ಧಮಾನ್ ಸುರಕ್ಷಿತವಾಗಿ ಭಾರತಕ್ಕೆ ಮರಳುವಂತೆ ಪ್ರಾರ್ಥಿಸಿ ಶ್ರೀ ದುರ್ಗಾಂಬಿಕಾ ದೇವಿಗೆ ಪೂಜೆ ಸಲ್ಲಿಸಿದರು. ಕಮಾಂಡರ್ ಪರ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎ.ರವೀಂದ್ರನಾಥ್, ಭಾರತೀಯ ಯೋಧರನ್ನು ಹತ್ಯೆಗೈದಿದ್ದ ಉಗ್ರರ ಅಡಗುದಾಣದ ಮೇಲೆ ದಾಳಿ ನಡೆಸುವ ಮೂಲಕ ಪಾಕಿಸ್ತಾನದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ದಿಟ್ಟ ಕ್ರಮ ಕೈಗೊಂಡಿದ್ದಾರೆ. ಒತ್ತೆಯಾಳಾಗಿಸಿದ ಕಮಾಂಡರ್ ಅವರನ್ನು ಕೂಡಲೆ ಬಿಡುಗಡೆಗೊಳಿಸಬೇಕೆಂದರು.

ಸುವರ್ಣ ಕರ್ನಾಟಕ ವೇದಿಕೆ ಕಾರ್ಯಕರ್ತರು, ಶಾಲಾ ಮಕ್ಕಳು, ನಾಗರಿಕರು ನಿಟುವಳ್ಳಿ ಹೊಸ ಬಡಾವಣೆಯಲ್ಲಿ ವಿಜಯೋತ್ಸವ ಆಚರಿಸಿದರು. ಸಿಹಿ ಹಂಚಿದರು. ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಭಾರತೀಯ ವೀರಯೋಧರು ಮತ್ತು ಭಾರತಾಂಬೆಗೆ ಜಯವಾಗಲಿ ಎಂಬ ಘೋಷಣೆ ಕೂಗಿದರು.