ಅಭಿನಂದನ್‌ಗೆ ಕೃಷ್ಣಮಠದಿಂದ ಗೌರವ

<<ಉಡುಪಿಗೆ ಕಳುಹಿಸಿಕೊಡಲು ರಕ್ಷಣಾ ಸಚಿವರಿಗೆ ಪರ್ಯಾಯ ಶ್ರೀಗಳಿಂದ ಮನವಿ>>

ವಿಜಯವಾಣಿ ಸುದ್ದಿಜಾಲ ಉಡುಪಿ
ಕೇಂದ್ರದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಬೆಳಗ್ಗೆ ಕೃಷ್ಣ ಮಠಕ್ಕೆ ಆಗಮಿಸಿ ದೇವರ ದರ್ಶನ ಬಳಿಕ ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶತೀರ್ಥ ಸ್ವಾಮೀಜಿಯವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.

ವಿಂಗ್ ಕಮಾಂಡರ್ ಅಭಿನಂದನ್ ಅವರ ಪರಾಕ್ರಮ ನಮಗೆ ಬಹಳ ಮೆಚ್ಚುಗೆಯಾಗಿದೆ. ಅವರನ್ನು ಕೃಷ್ಣ ಮಠದ ವತಿಯಿಂದ ಗೌರವಿಸಲು ಉದ್ದೇಶಿಸಲಾಗಿದ್ದು, ಕಳುಹಿಸಿಕೊಡಿ ಎಂದು ಶ್ರೀಗಳು ಈ ಸಂದರ್ಭ ಕೋರಿದರು. ಪ್ರತಿಕ್ರಿಯಿಸಿದ ಸಚಿವರು, ಕಾನೂನಾತ್ಮಕ ಅಡೆತಡೆ ಇಲ್ಲದಿದ್ದರೆ ಕಳುಹಿಸಿಕೊಡುತ್ತೇವೆ. ಈ ಸಂಬಂಧ ಮಠದ ವತಿಯಿಂದ ರಕ್ಷಣಾ ಇಲಾಖೆಗೆ ಪತ್ರ ಕಳುಹಿಸಿ ಎಂದರು.

ಸಚಿವರ ಬೇಡಿಕೆ: ಆಧ್ಯಾತ್ಮಿಕ ಶ್ರೀಗಳಲ್ಲಿ ನನ್ನ ಲೌಕಿಕ ವಿನಂತಿ ಇದೆ. ಈ ಬಾರಿ ಕೃಷ್ಣನಲ್ಲಿ ದೇಶಕ್ಕಾಗಿ ಪ್ರಾರ್ಥಿಸಬೇಕು. ದೇಶ ಸುರಕ್ಷಿತರ ಕೈಯ್ಯಲ್ಲಿರುವಂತೆ ದೇವರಲ್ಲಿ ಪ್ರಾರ್ಥಿಸಿ ಆಶೀರ್ವದಿಸಬೇಕು ಎಂದು ಸಚಿವೆ ವಿನಂತಿಸಿದರು.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್, ಬಿಜೆಪಿ ಮುಖಂಡ ಉದಯಕುಮಾರ ಶೆಟ್ಟಿ, ಶ್ರೀಶ ನಾಯಕ್, ಪ್ರದೀಪ್ ರಾವ್, ವಿಜಯ್ ಭಟ್, ಭಾರತಿ ಶೆಟ್ಟಿ, ಸುವರ್ಧನ್ ನಾಯಕ್, ಪರ್ಯಾಯ ಮಠದ ಪಿಆರ್‌ಒ ಶ್ರೀಶ ಭಟ್ ಕಡೆಕಾರ್ ಮತ್ತಿತರರಿದ್ದರು.

ಬ್ರಹ್ಮಕಲಶೋತ್ಸವದಲ್ಲಿ ಭಾಗಿ
ಉಡುಪಿ ಜತೆ ನನಗೆ ಬಾಲ್ಯದಿಂದಲೂ ನಂಟು ಇದೆ. ಶ್ರೀಕ್ಷೇತ್ರ ಕೊಲ್ಲೂರು, ಕೃಷ್ಣ ಮಠದ ಜತೆ ನಿರಂತರ ಸಂಪರ್ಕವಿದೆ. ಜೂ.6ರಂದು ನಡೆಯುವ ಮಠದ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಸೌಜನ್ಯ ಮೆರೆದ ರಕ್ಷಣಾ ಸಚಿವೆ
ರಕ್ಷಣಾ ಸಚಿವೆ ಕನಕನ ಕಿಂಡಿ ಮೂಲಕ ಕೃಷ್ಣ ದರ್ಶನಕ್ಕೆ ಆಗಮಿಸಿದಾಗ ಭಕ್ತರೊಬ್ಬರು ಕಿಂಡಿಯ ಮೂಲಕ ದರ್ಶನ ಮಾಡುತ್ತಿದ್ದರು. ಪೊಲೀಸರು ಅವರನ್ನು ಕಳುಹಿಸಲು ಮುಂದಾದಾಗ ತಡೆದ ನಿರ್ಮಲಾ ಸೀತಾರಾಮನ್, ಪ್ರಾರ್ಥನೆಗೆ ಅಡ್ಡಿಪಡಿಸದಂತೆ ಸೂಚಿಸಿದರು. ಬಳಿಕ ಸರದಿಯಲ್ಲಿ ನಿಂತು ದರ್ಶನ ಮಾಡಿದರು. ರಕ್ಷಣಾ ಸಚಿವರ ಈ ನಡೆ ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು.