ಕಾಶ್ಮೀರ ಕಣಿವೆಯಲ್ಲಿ ಸುಧಾರಿತ ಸ್ಫೋಟಕಗಳ ವಾಹನ ಸ್ಫೋಟದ ಹಿಂದೆ ಅಬ್ದುಲ್​ ರಶೀದ್​ ಘಾಜಿ ಕೈವಾಡ?

ನವದೆಹಲಿ: ಉಗ್ರರು ನಡೆಸಿರುವ ವಾಹನಗಳ ಸ್ಫೋಟ ಪ್ರಕರಣದ ಹಿಂದೆ ಸುಧಾರಿತ ಸ್ಫೋಟಕ ತಯಾರಿಕೆಯ ನಿಪುಣ ಮತ್ತು ಪಾಕ್​ನ ಬಾಲಾಕೋಟ್​ನಲ್ಲಿರುವ ಜೈಷ್​ ಎ ಮೊಹಮ್ಮದ್​ ಉಗ್ರರ ಶಿಬಿರದಲ್ಲಿ ತರಬೇತುದಾರನಾಗಿದ್ದ ಅಬ್ದುಲ್​ ರಶೀದ್​ ಘಾಜಿ ಕೈವಾಡ ಇದೆ ಎನ್ನಲಾಗಿದೆ. ಭಾರತೀಯ ಬೇಹುಗಾರಿಕೆ ಪಡೆ ಅಧಿಕಾರಿಗಳು ಮತ್ತು ಉಗ್ರನಿಗ್ರಹ ಕಾರ್ಯಾಚರಣೆಯ ತಜ್ಞರು ಇಂತಹ ಒಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಕಳೆದ ಸೋಮವಾರದಂದು ಪುಲ್ವಾಮಾದ ಅರಿಹಾಲ್​ನಲ್ಲಿ ಸೇನಾ ಗಸ್ತು ವಾಹನದ ಮೇಲೆ ಉಗ್ರರು ಸುಧಾರಿತ ಸ್ಫೋಟಕಗಳಿದ್ದ ವಾಹನವನ್ನು ಡಿಕ್ಕಿ ಹೊಡೆಸುವ ಮೂಲಕ ದಾಳಿ ಮಾಡಿದ್ದರು. ಈ ದಾಳಿಯಲ್ಲಿ 12ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದರು. ಇವರ ಪೈಕಿ ಇಬ್ಬರು ಹುತಾತ್ಮರಾಗಿದ್ದರು. ಸೇನಾಪಡೆಯ ಪ್ರಕಾರ ಉಗ್ರರ ವಿಫಲದಾಳಿ ಇದಾಗಿತ್ತು. ಜತೆಗೆ, ಶೋಪಿಯಾನ್​ನಲ್ಲಿ ಬುಧವಾರ ಸುಧಾರಿತ ಸ್ಫೋಟಕಗಳಿದ್ದ ವಾಹವನ್ನು ಪತ್ತೆ ಮಾಡಿ, ಸ್ಫೋಟಕವನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಪುಲ್ವಾಮಾದಲ್ಲಿ ಫೆ.14ರಂದು ಉಗ್ರರು ನಡೆಸಿದ್ದ ಸುಧಾರಿತ ಸ್ಫೋಟಕವಿದ್ದ ವಾಹನದ ದಾಳಿಯಲ್ಲಿ ಸಿಆರ್​ಪಿಎಫ್​ನ 40 ಯೋಧರು ಹುತಾತ್ಮರಾಗಿದ್ದರು.

ಅಫ್ಘಾನಿಸ್ತಾನ ಯುದ್ಧದಲ್ಲಿ ಭಾಗಿಯಾಗಿದ್ದ ಅಬ್ದುಲ್​ ರಶೀದ್​ ಘಾಜಿ
ಅಬ್ದುಲ್​ ರಶೀದ್​ ಘಾಜಿ ಅಫ್ಘಾನಿಸ್ತಾನದ ಯುದ್ಧದಲ್ಲಿ ಭಾಗಿಯಾಗಿದ್ದ ಅನುಭವ ಹೊಂದಿದ್ದಾನೆ. ಈತ ಪಾಕಿಸ್ತಾನದ ಖೈಬರ್​ ಪಖ್ತಾನ್ವಾದ ಮನ್ಶೇರಾ ಮೂಲದವನು. ಇದರ ಸಮೀಪದಲ್ಲೇ ಬಾಲಾಕೋಟ್ ಇದೆ. ಸದ್ಯ ಈತ ಜಮ್ಮು ಮತ್ತು ಕಾಶ್ಮೀರದಲ್ಲಿದ್ದು, ಜೈಷ್​ ಉಗ್ರರಿಗೆ ಸ್ಫೋಟಕಗಳ ನಿರ್ವಹಣೆ ಕುರಿತು ತರಬೇತಿ ನೀಡುತ್ತಿದ್ದಾನೆ ಎನ್ನಲಾಗಿದೆ.

ಜೈಷ್​ ಎ ಮೊಹಮ್ಮದ್​ನ ಪ್ರಮುಖ ಉಗ್ರ ಮಸೂದ್​ ಅಜರ್​ನ ಸಂಬಂಧಿಕರಾದ ಉಸ್ಮಾನ್​ ಹೈದರ್​ ಮತ್ತು ತಲ್ಹಾ ರಶೀದ್​ನನ್ನು ಭಾರತೀಯ ಭದ್ರತಾಪಡೆಗಳು 2017 ಮತ್ತು 2018ರಲ್ಲಿ ಹತ್ಯೆ ಮಾಡಿದ್ದವು. ಉಸ್ಮಾನ್​ ಹೈದರ್​ನನ್ನು ಉಗ್ರವಾದದತ್ತ ಸೆಳೆದಿದ್ದ ಅಬ್ದುಲ್​ ರಶೀದ್​ ಘಾಜಿ, ಆತನನ್ನು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಸಿದ್ದ. 2018ರಲ್ಲಿ ಶಾಖಾರ್​ಗಢ ಪ್ರಾಂತ್ಯದಲ್ಲಿ ಇವರೆಲ್ಲರೂ ಹಿಂಸಾ ಕೃತ್ಯಗಳಲ್ಲಿ ತೊಡಗಿಕೊಂಡಿದ್ದರು. ಆದರೆ 2018ರ ಅಕ್ಟೋಬರ್​ 30ರಂದು ತಮ್ಮ ಕೈಗೆ ಸಿಕ್ಕಿಬಿದ್ದಿದ್ದ ಹೈದರ್​ನನ್ನು ಭದ್ರತಾಪಡೆ ಸಿಬ್ಬಂದಿ ಗುಂಡಿಟ್ಟು ಹತ್ಯೆ ಮಾಡಿದ್ದರು. ಇವರಿಬ್ಬರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಅಬ್ದುಲ್​ ರಶೀದ್​ ಘಾಜಿ ಕಾಶ್ಮೀರ ಕಣಿವೆಯಲ್ಲಿ ಕಾರ್ಯಾಚರಿಸುತ್ತಿದ್ದಾನೆ ಎನ್ನಲಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *