ಅದ್ದೂರಿಯಾಗಿ ನಡೆದ ವಿಶ್ವಾರಾಧ್ಯರ ರಥೋತ್ಸವ

ಯಾದಗಿರಿ: ಸುಕ್ಷೇತ್ರ ಅಬ್ಬೆತುಮಕೂರಿನ ಸಿದ್ಧಿ ಪುರುಷ ಶ್ರೀ ವಿಶ್ವಾರಾಧ್ಯರ ರಥೋತ್ಸವ ಭಕ್ತರ ಜಯಘೋಷದ ಮಧ್ಯೆ ಸಡಗರದಿಂದ ಸೋಮವಾರ ಸಂಜೆ ಜರುಗಿತು.

ಸೂರ್ಯ ಮುಳುಗುವ ಸಂದರ್ಭದಲ್ಲಿ ಸಿದ್ಧ ಸಂಸ್ಥಾನ ಮಠದ ಆವರಣದಲ್ಲಿ ಲಕ್ಷಾಂತರ ಭಕ್ತರು ವಿಶ್ವಾರಾಧ್ಯರ ರಥೋತ್ಸವದ ಉತ್ಸುಕದಲ್ಲಿದ್ದರು. ಪೀಠಾಧಿಪತಿ ಶ್ರೀ ಡಾ.ಗಂಗಾಧರ ಸ್ವಾಮೀಜಿ ಸಂಜೆ 6.30ಕ್ಕೆ ರಥವನ್ನೇರಿ ಚಾಲನೆ ನೀಡಿದ್ದೇ ತಡ ಭಕ್ತ ವೃಂದ ವಿಶ್ವಾರಾಧ್ಯ ಮಹಾರಾಜ ಕೀ ಜೈ, ಗಂಗಾಧರ ಮಹಾರಾಜ ಕೀ ಜೈ ಎಂದು ಜಯಘೋಷ ಮೊಳಗಿಸುತ್ತ ನೂತನ ರಥವನ್ನು ಎಳೆದು ಸಂಭ್ರಮಿಸಿದರು.

ದಿನವಿಡೀ ಸುಡು ಬಿಸಿಲಲ್ಲಿ ಭಕ್ತರು ತಂಡೋಪ ತಂಡವಾಗಿ ಅಬ್ಬೆತುಮಕೂರಿನತ್ತ ಬರುತ್ತಲೇ ಇದ್ದರು. ನೆರೆದ ಭಕ್ತ ಸಮೂಹ ಖಾರಿಕ, ಉತ್ತತ್ತಿ, ಬಾಳೆಹಣ್ಣುಗಳನ್ನು ರಥದ ಮೇಲೆ ಎಸೆದು ಭಕ್ತಿಯಿಂದ ಕೈ ಜೋಡಿಸಿ ನಮಿಸಿ, ಇಷ್ಟಾರ್ಥ ಈಡೇರಿಸುವಂತೆ ಆರಾಧ್ಯದೈವನಲ್ಲಿ ಬೇಡಿಕೊಂಡರು.

ಬೆಳಗ್ಗೆ ಸೂರ್ಯೊದಯವಾಗುತ್ತಲೇ ಶ್ರೀ ವಿಶ್ವಾರಾಧ್ಯರ ಗದ್ದುಗೆಗೆ ಗೋರ್ಟಾ ಸಂಗೀತ ಬಳಗದವರಿಂದ ವಿಶೇಷ ರುದ್ರಾಭಿಷೇಕ ಜರುಗಿತು. ತರುವಾಯ ದುಧನಿಯ ಶಂಕರ ಮೇತ್ರಿ ದಂಪತಿ ರಥೋತ್ಸವ ಮಹಾಪೂಜೆ ಮತ್ತು ರಥಾಂಗ ಹೋಮ ನೆರವೇರಿಸಿದರು. ಜಿಲ್ಲೆಯ ಪ್ರತಿಷ್ಠಿತ ಆಧ್ಯಾತ್ಮಿಕ ಕೇಂದ್ರವೆಂದು ಖ್ಯಾತವಾದ ಸಿದ್ಧ ಸಂಸ್ಥಾನದ ಶ್ರೀ ವಿಶ್ವಾರಾಧ್ಯರ ಜಾತ್ರೆ ಎಂದರೆ ಕರ್ನಾಟಕ ಮಾತ್ರವಲ್ಲ, ನೆರೆಯ ತೆಲಂಗಾಣ, ಆಂಧ್ರ, ಮಹಾರಾಷ್ಟ್ರಗಳಿಂದಲೂ ಅಸಂಖ್ಯಾತ ಭಕ್ತರು ಆಗಮಿಸಿ ದರ್ಶನಾಶೀರ್ವಾದ ಪಡೆದರು.

ಶ್ರೀಮಠದ ಕೈಲಾಸ ಕಟ್ಟೆ ಹತ್ತಿರ ಶ್ರೀ ಡಾ.ಗಂಗಾಧರ ಸ್ವಾಮೀಜಿ ನೂರಾರು ಸಾಧು ಸಂತರ ಮಧ್ಯೆ ಧುನಿ ಪೂಜೆ ನೆರವೇರಿಸುವುದರೊಂದಿಗೆ ಜಾತ್ರೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ನೆರೆದಿದ್ದ ಸಾಧು ಸಂತರಿಗೆ ಶ್ರೀಗಳು ಕಪನಿಗಳನ್ನು ನೀಡಿದರು. 11 ದಿನಗಳಿಂದ ಸಾಗಿಬಂದ ವಿಶ್ವಾರಾಧ್ಯ ಪುರಾಣ, ಪಲ್ಲಕ್ಕಿ ಉತ್ಸವ ಮಂಗಲ ವಾದ್ಯಗಳೊಂದಿಗೆ ಪುರವಂತರ ಸೇವೆ ಸಮೇತ ನಡೆಯಿತು. ಪ್ರವಚನಕಾರ ಮಲ್ಲಿಕಾಜರ್ುನ ಶಾಸಿ ಐನಾಪುರ ಅವರು ಶ್ರೀ ಡಾ.ಗಂಗಾಧರ ಸ್ವಾಮೀಜಿ ನೇತೃತ್ವದಲ್ಲಿ ಶ್ರೀ ವಿಶ್ವಾರಾಧ್ಯರ ಪುರಾಣ ಮಂಗಲಗೊಳಿಸಿದರು.

ಬಳಿಕ ಶ್ರೀಗಳು ತೇರಿಗೆ ವಿಶೇಷ ಪೂಜೆ ನೆರವೇರಿಸಿ ಕಳಸವನ್ನು ಆರೋಹಣ ಮಾಡಿದರು. ಹಲಗೆ, ಬಾಜಾ ಭಜಂತ್ರಿ, ಡೊಳ್ಳು ಮುಂತಾದ ಮಂಗಲವಾದ್ಯಗಳ ಸದ್ದು, ಭಕ್ತರ ಸಂಭ್ರಮ, ಪುರವಂತರ ಸೇವೆ ಇಡೀ ಅಬ್ಬೆತುಮಕೂರು ಗ್ರಾಮವನ್ನು ಭಕ್ತಿಯ ಬೀಡನ್ನಾಗಿಸಿತು. ದಾಸೋಹ ಮನೆ ಸೇರಿ ಶಹಾಬಾದ್ ಮತ್ತು ನಾಯ್ಕಲ್ ದಾಸೋಹಿಗಳು ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಿದರು. ರುಚಿ ರುಚಿ ಮಾಲದಿ, ಸಜ್ಜಿ ಮತ್ತು ಜೋಳದ ರೊಟ್ಟಿ, ವಿವಿಧ ಪಲ್ಯ, ಅನ್ನ-ಸಾರಿನ ದಾಸೋಹ ಎಡೆಬಿಡದೆ ನಡೆಯಿತು.