ನಿವೃತ್ತಿ ಪಡೆದಿದ್ದರೂ ವಿಶ್ವಕಪ್​ನಲ್ಲಿ ಆಡಲು ಬಯಸಿದ್ದ ಸ್ಫೋಟಕ ಬ್ಯಾಟ್ಸ್​ಮೆನ್​ ಎಬಿ ಡಿವಿಲಿಯರ್ಸ್​ ತಿರಸ್ಕೃತಗೊಂಡಿದ್ದು ಯಾಕೆ ಗೊತ್ತಾ?

ಕೇಪ್​ಟೌನ್​​: ಕಳೆದ ವರ್ಷ ಮೇ ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದ ದಕ್ಷಿಣಾಫ್ರಿಕಾದ ಮಾಜಿ ನಾಯಕ, ಸ್ಫೋಟಕ ಬ್ಯಾಟ್ಸ್​ಮೆನ್​ ಎಬಿ ಡಿವಿಲಿಯರ್ಸ್​ ಈ ಬಾರಿ ವಿಶ್ವಕಪ್​ನಲ್ಲಿ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ದರಂತೆ.

ವಿಶ್ವಕಪ್​ಗೆ ದಕ್ಷಿಣಾಫ್ರಿಕಾ ತಂಡವನ್ನು ಆಯ್ಕೆ ಮಾಡುವುದಕ್ಕೂ 24 ಗಂಟೆಗಳ ಮೊದಲು ದಕ್ಷಿಣಾಫ್ರಿಕಾ ಕ್ರಿಕೆಟ್​ ಆಯ್ಕೆ ಸಮಿತಿಗೆ ಮನವಿ ಸಲ್ಲಿಸಿ, ತಮಗೂ ಈ ವಿಶ್ವಕಪ್​ನಲ್ಲಿ ಆಡಲು ಅವಕಾಶ ಮಾಡಿಕೊಡಿ ಎಂದಿದ್ದರಂತೆ. ಆದರೆ ನಿರ್ವಹಣಾ ಸಮಿತಿ ಅದನ್ನು ತಿರಸ್ಕರಿಸಿದೆ.

ದಕ್ಷಿಣ ಆಫ್ರಿಕಾ ತಂಡದ ನಾಯಕ ಹಾಗೂ ಎಬಿಡಿ ಅವರ ಆತ್ಮೀಯ ಸ್ನೇಹಿತ ಫ್ಲಾಪ್ ಡು ಪ್ಲೆಸಿಸ್​, ಮುಖ್ಯ ಕೋಚ್​ ಒಟ್ಟಿಸ್​ ಗಿಬ್ಸನ್​ ಹಾಗೂ ಆಯ್ಕೆ ಸಮಿತಿ ಸಂಚಾಲಕ ಲಿಂದಾ ಜೋಂಡಿ ಅವರ ಎದುರು ಈ ಕೋರಿಕೆಯನ್ನು ಮುಂದಿಟ್ಟಿದ್ದರು. ತಂಡದಲ್ಲಿ ನನ್ನನ್ನೂ ಸೇರಿಸಿಕೊಳ್ಳಿ ಎಂದಿದ್ದರು. ಆದರೆ ಅವರು ಅಂತಾರಾಷ್ಟ್ರೀಯ ಅಥವಾ ರಾಷ್ಟ್ರೀಯ ಕ್ರಿಕೆಟ್​ ಆಟಗಾರರಿಗೆ ಕಡ್ಡಾಯವಾಗಿರುವ ಆಯ್ಕೆ ಸಮಿತಿಯ ಮಾನದಂಡಗಳನ್ನು ಪೂರೈಸಲಿಲ್ಲ ಮತ್ತು 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದಲೇ ನಿವೃತ್ತಿ ಘೋಷಿಸಿದ್ದರು. ಇವೆರಡು ಕಾರಣಗಳಿಂದ ಮತ್ತೆ ವಿಶ್ವಕಪ್​ ತಂಡಕ್ಕೆ ಅವರನ್ನು ಆಯ್ಕೆ ಸಮಿತಿ ಸೇರಿಸಲಿಲ್ಲ.

ಅಲ್ಲದೆ ಅವರೀಗ ವಾಪಸ್​ ಬಂದರೆ ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ರಸ್ಸಿ ವಾನ್ ಡಸ್ಸೆನ್​ರಂತಹ ಹಲವು ಆಟಗಾರರಿಗೆ ಅನ್ಯಾಯವಾಗುತ್ತದೆ ಎಂಬುದನ್ನೂ ಕ್ರಿಕೆಟ್​ ಆಯ್ಕೆ ಸಮಿತಿ ಆಡಳಿತ ಮಂಡಳಿ ಪರಿಗಣಿಸಿದೆ ಎಂದು ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿದೆ.

Leave a Reply

Your email address will not be published. Required fields are marked *