ಹೊಸ ವರ್ಷ ಎಂದಾಕ್ಷಣ ಅಲ್ಲೊಂದು ಸಂಭ್ರಮ ಸಹಜ. ಇರುಳುರುಳಿ ಹಗಲಾಗಿ ಹೊಸ ಹರುಷ ಅರಳುವ ಆ ಕ್ಷಣಗಳನ್ನು ಹಲವರು ಹಲವು ರೀತಿಯಲ್ಲಿ ಆಚರಿಸುತ್ತಾರೆ. ಅಂಥ ಕ್ಷಣಗಳನ್ನು ತಾರೆಯರು ಹೇಗೆ ಕಳೆಯುತ್ತಾರೆ ಎಂಬ ಕುತೂಹಲಕ್ಕೆ ಅವರೇ ಇಲ್ಲಿ ಉತ್ತರಿಸಿದ್ದಾರೆ. ಮಾತ್ರವಲ್ಲ ಅವರ ಪಾಲಿಗೆ 2019 ಹೇಗಿತ್ತು, 2020ರ ಬಗ್ಗೆ ಇರುವ ನಿರೀಕ್ಷೆಗಳೇನು ಎಂಬ ಕುರಿತಾದ ಮಾಹಿತಿಯನ್ನು ಕೂಡ ಅವರ ಮಾತುಗಳಲ್ಲೇ ವಿಜಯವಾಣಿ ಇಲ್ಲಿ ನಿಮ್ಮ ಮುಂದಿಟ್ಟಿದೆ.
ಪ್ರತಿ ವರ್ಷ ಸ್ನೇಹಿತರ ಜತೆಗೆ ಹೊರಗಡೆ ಎಲ್ಲಾದರೂ ನ್ಯೂ ಈಯರ್ ಆಚರಣೆ ಮಾಡುತ್ತಿದ್ದೆ. ಈ ವರ್ಷ ಯಾವ ಪಾರ್ಟಿಯೂ ಇಲ್ಲ, ಆಚರಣೆಯೂ ಇಲ್ಲ. ಮನೆಯಲ್ಲಿಯೇ ಸಮಯ ಕಳೆಯಲಿದ್ದೇನೆ. ಈಗಾಗಲೇ ಅಪ್ಪ-ಅಮ್ಮ ಟ್ರಿಪ್ಗೆ ಹೋಗಿದ್ದಾರೆ. ನಾನು ಮತ್ತೆ ಅಕ್ಕ ಅನುಷಾ ಮನೆಯಲ್ಲೇ ಸೆಲೆಬ್ರೆಟ್ ಮಾಡುತ್ತೇವೆ. ಸಿನಿಮಾ ಸಲುವಾಗಿಯೇ ವಿದೇಶ ಸುತ್ತಾಡಿ ಬಂದಿದ್ದೆ, ರೆಸ್ಟ್ ಅಗತ್ಯವಿದೆ. ಹಾಗಾಗಿ ಕೆಲವು ದಿನ ಹಾಯಾಗಿ ಇರಬೇಕು ಎಂದುಕೊಂಡಿದ್ದೇನೆ. 2019ರಲ್ಲಿನ ನನ್ನ ಕೆಲ ಕನಸುಗಳು ಸಾಕಾರಗೊಂಡಿವೆ.
‘ರಂಗಮಂದಿರ’, ‘ರೇಮೊ’, ‘ಅವತಾರ ಪುರುಷ’ ತಂಡಗಳ ಜತೆ ತೊಡಗಿಸಿಕೊಂಡಿದ್ದೆ. ಆ ಎಲ್ಲ ಪ್ರಾಜೆಕ್ಟ್ಗಳ ಫಲಿತಾಂಶ 2020ಕ್ಕೆ ಸಿಗಲಿದೆ. ಒಂದೊಂದು ಚಿತ್ರವೂ ವಿಭಿನ್ನ ಅನುಭವ ನೀಡಿವೆ. ನ್ಯೂ ಈಯರ್ಗೆ ಫಿಟ್ನೆಸ್ ಕಡೆಗೆ ಗಮನ ಹರಿಸುವುದರ ಜತೆಗೆ ಒಂದಷ್ಟು ಹೂಡಿಕೆ ಮಾಡಬೇಕು ಎಂದುಕೊಂಡಿದ್ದೇನೆ. ಡಾನ್ಸ್ನಲ್ಲಿ ಹೊಸ ಪ್ರಯೋಗ ಮಾಡಲೇಬೇಕು. ಆಲಸ್ಯ ಬದಿಗಿಟ್ಟು, ಆಕ್ಟಿವ್ ಆಗಿರಬೇಕು ಅಂತ ಅಂದುಕೊಂಡಿದ್ದೇನೆ.
| ಆಶಿಕಾ ರಂಗನಾಥ್