ಹಿಮ್ಮಡಿ ನೋವಿಗೆ ಪರಿಹಾರವೇನು?

| ಡಾ. ವಸುಂಧರಾ ಭೂಪತಿ

  • ಕಾಲಿನ ಹಿಮ್ಮಡಿ ತುಂಬ ನೋವಾಗುತ್ತಿದೆ. ಸೆಳೆತ ಬರುತ್ತದೆ. ಸ್ವಲ್ಪ ಬೆಚ್ಚಗೆ ಮಾಡಿಕೊಂಡರೆ ಸರಿ. ಇಲ್ಲವಾದರೆ ನಡೆಯಲಿಕ್ಕೂ ಆಗದಷ್ಟು ನೋವು. ಮನೆಯೊಳಗೆ ಸಾಕ್ಸ್ ಹಾಕಿಕೊಂಡೇ ಓಡಾಡುತ್ತಿದ್ದೇನೆ. ಇದು ಗುಣವಾಗಲು ಏನು ಮಾಡಲಿ?

-ಸುಲಕ್ಷಣಾ ಹೆಬ್ಬಾರ್, ಬೆಂಗಳೂರು

ನೀವು ಪ್ರತಿದಿನ ಕ್ಷೀರಬಲಾ ತೈಲವನ್ನು ಹಿಮ್ಮಡಿಗೆ ಹಚ್ಚಿ ಮಸಾಜ್ ಮಾಡಿಕೊಂಡು ಬಿಸಿನೀರಿನಲ್ಲಿ ಕಾಲಿರಿಸಿಕೊಳ್ಳಬೇಕು. ದೇಹದ ತೂಲ ಅಧಿಕವಾಗಿದ್ದಲ್ಲಿ ಕಡಿಮೆ ಮಾಡಿಕೊಳ್ಳಬೇಕು. ಮಲಗುವ ಸಮಯದಲ್ಲಿ ಕಾಲನ್ನು ಎತ್ತರಿಸಿ (ದಿಂಬಿನ ಮೇಲಿರಿಸಿ) ಮಲಗುವುದು ಉತ್ತಮ. ರಸ್ನಾದಿ ಗುಗ್ಗುಳು ಮಾತ್ರೆಯನ್ನು ದಿನಕ್ಕೆರಡು ಬಾರಿ ಎರಡು ಮಾತ್ರೆಯಂತೆ ಊಟದ ನಂತರ ಸೇವಿಸಿ. ಬಿಸಿನೀರನ್ನು ರಾತ್ರಿ ಮಲಗುವ ಸಮಯದಲ್ಲಿ ಕುಡಿಯಿರಿ. ಆಹಾರದಲ್ಲಿ ಶುಂಠಿ, ಬೆಳ್ಳುಳ್ಳಿ, ಮೊಸರು ಬಳಸಿ.

  • ನನ್ನ ಮಗನಿಗೆ ಪದೇ ಪದೆ ಭೇದಿಯಾಗುತ್ತದೆ. ಆಹಾರ ತಿಂದ ತಕ್ಷಣ ಭೇದಿ ಮಾಡಿಕೊಳ್ಳುತ್ತಾನೆ. ಸರಿಯಾಗಿ ಜೀರ್ಣವಾಗಿರುವುದಿಲ್ಲ. ಹೀಗಾಗಿಯೋ ಏನೋ, ಆಗಾಗ ತಿನ್ನುತ್ತಲೇ ಇರುತ್ತಾನೆ. ಸಿಹಿ ಅಂದರೆ ಬಹಳ ಪ್ರೀತಿ. ಅದರಿಂದ ಏನಾದರೂ ಸಮಸ್ಯೆ ಆಗುವುದೇ? ಅವನಿಗೆ ಈಗ ಮೂರು ವರ್ಷ.

-ಚೇತನಾ, ಕುಮಟಾ

ನಿಮ್ಮ ಮಗನಿಗೆ ದಾಡಿಮಾವಲೇಹವನ್ನು ಒಂದು ಚಮಚೆಯಷ್ಟನ್ನು ಊಟಕ್ಕೆ ಮುಂಚೆ ಎರಡು ಬಾರಿ ಸೇವಿಸಲು ಕೊಡಿ. ಅಲ್ಲದೆ, ಪದೇ ಪದೆ ತಿನ್ನುವ ಅಭ್ಯಾಸವನ್ನು ತಿಳಿಹೇಳಿ ಬಿಡಿಸಿ. ಕನಿಷ್ಠ 3-4 ಗಂಟೆಗಳ ಅಂತರದಲ್ಲಿ ಆಹಾರ ಸೇವನೆ ಮಾಡಿಸಿ. ಸಿಹಿ ಸೇವನೆಯನ್ನೂ ಮಿತಿಗೊಳಿಸಿ. ಊಟದ ನಂತರ ನೇರಳೆ ಶರಬತ್ತನ್ನು ಎರಡು ಚಮಚೆಯಷ್ಟನ್ನು ನೀರು ಬೆರೆಸಿ ಕುಡಿಯಲು ಕೊಡಿ. ಕಾಯಿಸಿ ಆರಿಸಿದ ನೀರನ್ನೇ ಕುಡಿಸಿ.

ಆಪ್ತ ವಿಭಾಗಕ್ಕೆ ಪ್ರಶ್ನೆ ಕಳಿಸುವವರು ವಿಜಯವಾಣಿ ಲಲಿತಾ ಪುರವಣಿಗೆ ಕಳುಹಿಸಿ.