ಏನಾಗ್ತಿದೆ ಪೂರ್ವ ದೆಹಲಿಯ ಆಪ್​ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ? ಅತಿಶಿ ಅಳ್ತಾರೆ, ಗೌತಮ್​ ಸವಾಲು ಹಾಕ್ತಾರೆ

ನವದೆಹಲಿ: ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಆಮ್​ ಆದ್ಮಿ ಪಕ್ಷದ ಅಭ್ಯರ್ಥಿ ಅತಿಶಿ ಇಂದು ಸುದ್ದಿಗೋಷ್ಠಿಯಲ್ಲಿ ಕಣ್ಣಲ್ಲಿ ನೀರು ಹಾಕಿದರು. ಅವಳು ಅಳಲು ಇದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಕ್ರಿಕೆಟರ್​ ಗೌತಮ್​ ಗಂಭೀರ್​ ಕಾರಣವಂತೆ.

ಅತಿಶಿ ಇಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್​ ಸಿಸೋದಿಯಾ ಅವರೊಂದಿಗೆ ಸೇರಿ ಸುದ್ದಿ ಗೋಷ್ಠಿ ನಡೆಸಿದರು. ಇದೇ ವೇಳೆ ಮಾತನಾಡುತ್ತ ಗಳಗಳನೆ ಅತ್ತರು. ಗೌತಮ್​ ಗಂಭೀರ್​ ತಮ್ಮ ಬಗ್ಗೆ ಅಶ್ಲೀಲ ಹಾಗೂ ಅವಹೇಳನಕಾರಿಯಾಗಿ ಮುದ್ರಿಸಿದ ಕರಪತ್ರಗಳನ್ನು ಎಲ್ಲೆಡೆ ವಿತರಿಸುತ್ತಿದ್ದಾರೆ. ಇದರಿಂದ ನನ್ನ ವ್ಯಕ್ತಿತ್ವಕ್ಕೆ ಧಕ್ಕೆಯಾಗಿದೆ ಎಂದೂ ಆರೋಪಿಸಿದರು.

ಮಾಧ್ಯಮದವರ ಎದುರಲ್ಲೇ ಆ ಕರಪತ್ರವನ್ನೂ ಓದಿದರು. ಗೌತಮ್​ ಗಂಭೀರ್​ ಅವರು ರಾಜಕೀಯ ಪ್ರವೇಶ ಮಾಡಿದ್ದನ್ನು ಸ್ವಾಗತಿಸುತ್ತೇನೆ. ಆದರೆ ಅವರು ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಎಂದುಕೊಂಡಿರಲಿಲ್ಲ. ಅವರನ್ನು ಬಿಜೆಪಿ ತಡೆಯಬೇಕು ಎಂದು ಆಗ್ರಹಿಸಿದರು.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಆಪ್​ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ರ ಕೇಜ್ರಿವಾಲ್​ ಕೂಡ ಟ್ವೀಟ್​ ಮಾಡಿದ್ದು, ಗೌತಮ್ ಗಂಭೀರ್​ ಈ ಮಟ್ಟಕ್ಕೆ ಇಳಿಯುತ್ತಾರೆ ಎಂದುಕೊಂಡಿರಲಿಲ್ಲ. ಇಂಥ ಮನಸ್ಥಿತಿಯ ಜನರ ನಡುವೆ ಮಹಿಳೆಯರು ಹೇಗೆ ಸುರಕ್ಷಿತರಾಗಿ ಇರಲು ಸಾಧ್ಯ? ಅತಿಶಿ, ನೀವು ಧೈರ್ಯವಾಗಿರಿ. ಇದನ್ನೆಲ್ಲ ಸಹಿಸಿಕೊಳ್ಳುವುದು ಎಷ್ಟು ಕಷ್ಟ ಎಂದು ನನಗೂ ಗೊತ್ತು. ಇದರ ವಿರುದ್ಧ ಹೋರಾಡೋಣ ಎಂದು ಪೋಸ್ಟ್​ ಮಾಡಿದ್ದಾರೆ.

ಆದರೆ ಗೌತಮ್​ ಗಂಭೀರ್​ ತಮ್ಮ ವಿರುದ್ಧದ ಆರೋಪವನ್ನು ತಳ್ಳಿ ಹಾಕಿದ್ದಾರೆ. ನಾನು ಯಾವುದೇ ಕರಪತ್ರಗಳನ್ನೂ ಮುದ್ರಿಸಿ ವಿತರಿಸುತ್ತಿಲ್ಲ ಎಂದು ಹೇಳಿರುವ ಅವರು, ಅರವಿಂದ್​ ಕೇಜ್ರಿವಾಲ್​ ಅವರನ್ನು ಟ್ಯಾಗ್​ ಮಾಡಿ ಟ್ವೀಟ್​ ಮಾಡಿದ್ದಾರೆ. ಮಹಿಳೆಯರ ಸಭ್ಯತೆಗೆ ಭಂಗತರುವ ನಿಮ್ಮ ಕೆಲಸದ ಬಗ್ಗೆ ಅಸಹ್ಯ ಪಡುತ್ತೇನೆ. ಚುನಾವಣೆಯಲ್ಲಿ ಗೆಲ್ಲಲು ಇದನ್ನೆಲ್ಲ ನೀವೇ ಮಾಡುತ್ತಿದ್ದೀರಿ ಎಂಬುದು ನನಗೆ ಗೊತ್ತು. ನೀವೊಬ್ಬರು ಹೊಲಸು ಮನಸ್ಸಿನ ಮುಖ್ಯಮಂತ್ರಿ. ನಿಮ್ಮ ಕೊಳಕು ಮನಸನ್ನು ಸ್ವಚ್ಛಗೊಳಿಸಲು ಯಾರಾದರೂ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಈ ಕರಪತ್ರವನ್ನು ನಾನೇ ಮುದ್ರಿಸಿದ್ದು ಎಂದು ಸಾಬೀತಾದರೆ ಲೋಕಸಭಾ ಚುನಾವಣೆ ನಾಮಪತ್ರವನ್ನು ನಾನೇ ವಾಪಸ್​ ಪಡೆಯುತ್ತೇನೆ. ಅದೊಮ್ಮೆ ನಾನು ಅಲ್ಲವೆಂದಾದರೆ ನೀವು ರಾಜಕೀಯ ಬಿಡಬೇಕಾಗುತ್ತದೆ ಎಂದು ಅರವಿಂದ್​ ಕೇಜ್ರಿವಾಲ್​ಗೆ ಸವಾಲು ಹಾಕಿದ್ದಾರೆ.