ಪಂಜಾಬ್​ನ ಎಲ್ಲ ಲೋಕಸಭೆ ಕ್ಷೇತ್ರಗಳಲ್ಲೂ ಮೈತ್ರಿ ಇಲ್ಲದೆ ಎಎಪಿ ಸ್ಪರ್ಧಿಸಲಿದೆ ಎಂದ ಕೇಜ್ರಿವಾಲ್​

ಚಂಡೀಗಢ: ಮುಂಬರುವ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಆಮ್​ ಆದ್ಮಿ ಪಕ್ಷವು ಪಂಜಾಬ್​ನ ಎಲ್ಲ 13 ಕ್ಷೇತ್ರಗಳಲ್ಲಿಯೂ, ಸ್ಪರ್ಧೆ ಮಾಡಲಿದೆ. ಅಲ್ಲದೆ, ಪಕ್ಷವು ಮೈತ್ರಿಗೆ ಮುಂದಾಗುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ, ಆಮ್​ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್​ ಶುಕ್ರವಾರ ತಿಳಿಸಿದ್ದಾರೆ.

ಪಂಜಾಬ್​ನ ಆಮ್​ ಆದ್ಮಿ ಪಕ್ಷದ ಶಾಸಕರೊಬ್ಬರ ವಿವಾಹ ಸಮಾರಂಭದಲ್ಲಿ ಭಾಗವಹಿಸಲೆಂದು ಬಂಜಾಬ್​ನ ಬಟಿಂಡಾಗೆ ಆಗಮಿಸಿದ್ದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿದರು. ಪಂಜಾಬ್​ನ ಮಟ್ಟಿಗೆ ಯಾವ ಮೈತ್ರಿಕೂಟವನ್ನೂ ಸೇರದೇ ಸ್ಪರ್ಧಿಸುವುದಾಗಿ ಅವರು ತಿಳಿಸಿದರು.

ಇದೇ ವೇಳೆ ಪಂಜಾಬ್​ನ ಆಡಳಿತಾರೂಢ ಕಾಂಗ್ರೆಸ್​ ಪಕ್ಷವನ್ನು ತೀವ್ರವಾಗಿ ಟೀಕಿಸಿದ ಅವರು, “ಅಮರಿಂದರ್​ ಸರ್ಕಾರ ಎಲ್ಲ ರಂಗಗಳಲ್ಲಿಯೂ ವಿಫಲವಾಗಿದೆ. ರಾಜ್ಯದ ಪ್ರತಿ ಕುಟುಂಬ ಸದಸ್ಯರಿಗೂ ನೌಕರಿ ನೀಡುವುದಾಗಿ ಅವರು ಹೇಳಿದ್ದರು. ಯಾರಾದರೂ, ನಿರುದ್ಯೋಗಿಗಳಾಗಿ ಉಳಿದಿದ್ದರೆ ಅವರಿಗೆ ನಿರುದ್ಯೋಗ ಮಾಸಾಶನ ನೀಡುವುದಾಗಿ ತಿಳಿಸಿದ್ದರು. ಸಾಮಾಜಿಕ ಭದ್ರತಾ ಮಾಸಾಶನ ನೀಡುವುದಾಗಿ ಹೇಳಿದ್ದರು. ಕೃಷಿಕರ ಸಾಲಮನ್ನಾ ಮಾಡುವುದಾಗಿ ತಿಳಿಸಿದ್ದರು. ಯುವಕರಿಗೆ ಸ್ಮಾರ್ಟ್​ ಫೋನ್​ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ, ಎಲ್ಲವೂ ಕೇವಲ ಭರವಸೆಯಾಗಿಯೇ ಉಳಿದಿವೆ. ಅವರು ಸುಳ್ಳು ಹೇಳಿ ಅಧಿಕಾರ ಪಡೆದರು. ಅವರ ಭರವಸೆಗಳನ್ನು ಕೇಳಿ ಪಂಜಾಬ್​ ಜನ ಈಗ ಬೇಸತ್ತಿದ್ದಾರೆ,” ಎಂದು ಆರೋಪಿಸಿದರು.

ಇದಿಷ್ಟೇ ಆಲ್ಲ, ಪಂಜಾಬ್​ ಅನ್ನು ಮಾದಕ ವ್ಯಸನಮುಕ್ತವಾಗಿಸುವುದಾಗಿಯೂ ಅಮರಿಂದರ್​ ಸಿಂಗ್​ ಹೇಳಿದ್ದರು. ಆದರೆ, ರಾಜ್ಯದಲ್ಲಿ ಸಮಸ್ಯೆ ಇನ್ನೂ ಇದೆ ಎಂದು ಅವರು ಟೀಕಿಸಿದರು.

Leave a Reply

Your email address will not be published. Required fields are marked *