ಅಮೃತಸರದ ಆಪ್​ ಹಿರಿಯ ನಾಯಕನ ಮೇಲೆ ಗುಂಡಿನ ದಾಳಿ

ಚಂಡೀಗಢ: ನಿನ್ನೆಯಷ್ಟೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರ ಮೇಲೆ ವ್ಯಕ್ತಿಯೊಬ್ಬ ಖಾರದ ಪುಡಿ ದಾಳಿ ನಡೆಸಿದ್ದ ಬೆನ್ನಲ್ಲೇ ಇಂದು ಎಎಪಿಯ ನಾಯಕ ಸುರೇಶ್‌ ಶರ್ಮಾ ಅವರ ಮೇಲೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ.

ಅಮೃತಸರ ಘಟಕದ ಆಮ್‌ಆದ್ಮಿ ಪಕ್ಷದ ಹಿರಿಯ ನಾಯಕ ಸುರೇಶ್‌ ಶರ್ಮಾ ಅವರ ಮೇಲೆ ಮಂಗಳವಾರ ಸಂಜೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಜೆ 6.30ರ ವೇಳೆ ಅಪರಿಚಿತನೋರ್ವ ಶರ್ಮಾ ಅವರ ಫರ್ನೀಚರ್‌ ಅಂಗಡಿ ಬಳಿಗೆ ಬಂದು ಹತ್ತಿರದಿಂದಲೇ ಮೂರ್ನಾಲ್ಕು ಬಾರಿ ಶೂಟ್‌ ಮಾಡಿದ್ದಾನೆ. ಅದಾದ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.

ಅಮೃತಸರದಲ್ಲಿ ಆರ್‌ಟಿಐ ಕಾರ್ಯಕರ್ತರಾಗಿಯೂ ಗುರುತಿಸಿಕೊಂಡಿದ್ದ ಶರ್ಮಾ ಅವರೀಗ ಚೇತರಿಸಿಕೊಳ್ಳುತ್ತಿದ್ದಾರೆ.

ಘಟನೆ ಕುರಿತಂತೆ ಎಎಪಿ ದಾಳಿಯನ್ನು ತೀವ್ರವಾಗಿ ಖಂಡಿಸಿದೆ. ವಿಪಕ್ಷ ನಾಯಕ ಹರ್ಪಾಲ್‌ ಸಿಂಗ್‌ ಚೀಮಾ ಮಾತನಾಡಿ, ಪಂಜಾಬ್‌ ನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)