ದೆಹಲಿಯಲ್ಲಿ ಕೈ-ಆಪ್ ದೋಸ್ತಿ?

ನವದೆಹಲಿ: ಕಾಂಗ್ರೆಸ್ ವಿರುದ್ಧ ಹೋರಾಡಿಕೊಂಡೇ ರಾಜಕೀಯ ಪ್ರವೇಶಿಸಿದ ಆಮ್ ಆದ್ಮಿ ಪಕ್ಷ(ಆಪ್) ದೆಹಲಿಯಲ್ಲಿ ಅದೇ ಪಕ್ಷದ ಜತೆಗೆ ಲೋಕಸಭಾ ಚುನಾವಣೆ ಮೈತ್ರಿ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

ಆಪ್ ಪಕ್ಷದ ಮೂಲಗಳ ಪ್ರಕಾರ, ದೆಹಲಿಯ 7 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಹಾಗೂ ಆಪ್ ತಲಾ 3 ಸೀಟುಗಳಲ್ಲಿ ಸ್ಪರ್ಧಿಸಲಿವೆ. ಬಾಕಿ 1 ಸೀಟನ್ನು ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿಯ ಬಂಡಾಯ ನಾಯಕ ಯಶವಂತ್ ಸಿನ್ಹಾಗೆ ನೀಡಲು ನಿರ್ಧರಿಸಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಎಲ್ಲ 7 ಸೀಟುಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಬಳಿಕ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಜಯಗಳಿಸಿ ಪ್ರತಿಪಕ್ಷಗಳಿಗೆ ಕೇವಲ 3 ಸೀಟು ಬಿಟ್ಟುಕೊಟ್ಟಿತ್ತು.

ನಾಯಕರು ಆಪ್ ಬಿಡಲು ಕಾರಣ: ಆಪ್ ಹಾಗೂ ಕಾಂಗ್ರೆಸ್ರ ನಡುವಿನ ಸಂಭಾವ್ಯ ಮೈತ್ರಿ ಹಿನ್ನೆಲೆಯಲ್ಲಿ ಪಂಜಾಬ್ ಹಾಗೂ ದೆಹಲಿಯಲ್ಲಿ ಎರಡೂ ಪಕ್ಷಗಳ ಮುಖಂಡರಲ್ಲಿ ಭಿನ್ನಮತ ಭುಗಿಲೆದ್ದಿದೆ. ಹಿರಿಯ ನಾಯಕರಾದ ಎಚ್.ಎಸ್. ಫುಲ್ಕಾ ಮತ್ತು ಸುಖಪಾಲ್ ಖೈರಾ ಆಪ್ ತ್ಯಜಿಸಲು ಈ ರಹಸ್ಯ ಮೈತ್ರಿಯೇ ಕಾರಣ ಎನ್ನಲಾಗಿದೆ. ಬಿಜೆಪಿಯನ್ನು ಸೋಲಿಸಬೇಕು ಎಂಬ ಹಠದಿಂದ ಕೇಜ್ರಿವಾಲ್ ಈ ನಿರ್ಣಯಕ್ಕೆ ಮುಂದಾಗಿದ್ದಾರೆ ಎಂದು ಆಪ್​ನ ಕೆಲವು ಮುಖಂಡರು ಆರೋಪಿಸಿದ್ದಾರೆ. ಆದರೆ ಈ ವರದಿಗಳನ್ನು ಆಪ್ ವಕ್ತಾರ ಸಂಜಯ್ ಸಿಂಗ್ ನಿರಾಕರಿಸಿದ್ದಾರೆ. ಇಂತಹ ಚರ್ಚೆ ನಡೆದಿಲ್ಲ ಎಂದಿದ್ದಾರೆ.