ಭಿನ್ನ ಟ್ರೇಲರ್​ಗೆ ಆಮೀರ್ ಮೆಚ್ಚುಗೆ

ಬೆಂಗಳೂರು: ದೇಶ-ವಿದೇಶದ ಹಲವು ಸಿನಿಮೋತ್ಸವಗಳಲ್ಲಿ ಸ್ಪರ್ಧಿಸಿ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿರುವ ಆದರ್ಶ್ ಈಶ್ವರಪ್ಪ ನಿರ್ದೇಶನದ ‘ಭಿನ್ನ’ ಚಿತ್ರಕ್ಕೆ ಬಾಲಿವುಡ್​ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಬೆಂಬಲ ಸಿಕ್ಕಿದೆ. ‘ಭಿನ್ನ’ ಚಿತ್ರದ ಟ್ರೇಲರ್ ವೀಕ್ಷಣೆ ಮಾಡಿದ ಅವರು, ಚಿತ್ರತಂಡದ ಪ್ರಯತ್ನಕ್ಕೆ ಬೆನ್ನುತಟ್ಟಿದ್ದಾರೆ. ಅಷ್ಟೇ ಅಲ್ಲ, ಸಿನಿಮಾ ನೋಡುವ ಇಂಗಿತವನ್ನೂ ಆಮೀರ್ ವ್ಯಕ್ತಪಡಿಸಿದ್ದು, ಅದು ಚಿತ್ರತಂಡದ ಖುಷಿಯನ್ನು ದ್ವಿಗುಣಗೊಳಿಸಿದೆ.

ಇತ್ತೀಚೆಗಷ್ಟೇ 9ನೇ ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್​ನಲ್ಲಿ ‘ಅತ್ಯುತ್ತಮ ಸ್ಕ್ರೀನ್​ಪ್ಲೇ’ ವಿಭಾಗದಲ್ಲಿ ‘ಭಿನ್ನ’ ಪ್ರಶಸ್ತಿ ಗಿಟ್ಟಿಸಿಕೊಂಡಿತ್ತು. ಅದಾದ ಬಳಿಕ ಹಲವು ಅವಾರ್ಡ್​ಗಳು ‘ಭಿನ್ನ’ ಮುಡಿಗೇರಿವೆ. ಇಟಲಿಯ ಒನಿರೋಸ್ ಸಿನಿಮೋತ್ಸವದಲ್ಲಿ ‘ಅತ್ಯುತ್ತಮ ಥ್ರಿಲ್ಲರ್ ಚಿತ್ರ’, ‘ಅತ್ಯುತ್ತಮ ನಿರ್ದೇಶಕ’, ‘ಬೆಸ್ಟ್ ಒರಿಜಿನಲ್ ಸೌಂಡ್​ಟ್ರ್ಯಾಕ್’ ವಿಭಾಗದಲ್ಲಿ ಅವಾರ್ಡ್​ಗಳನ್ನು ಪಡೆದುಕೊಂಡಿದೆ.

ಯೂರೋಪಿಯನ್ ಸಿನಿಮಾಟೋಗ್ರಾಫಿ ಫೆಸ್ಟಿವಲ್​ನಲ್ಲಿ ‘ಅತ್ಯುತ್ತಮ ಫೀಚರ್ ಫಿಲಂ’ ಪ್ರಶಸ್ತಿ ಬಂದಿದೆ. ಹೀಗೆ ಸಾಲು ಸಾಲು ಪ್ರಶಸ್ತಿ ಪಡೆದುಕೊಳ್ಳುತ್ತಿರುವ ‘ಭಿನ್ನ’ ತಂಡಕ್ಕೆ ಈಗ ಆಮೀರ್ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರದ ಡಿಜಿಟಲ್ ವ್ಯವಹಾರದ ಸಲುವಾಗಿ ಸೋಮವಾರ ಮುಂಬೈಗೆ ತೆರಳಿದ್ದ ಚಿತ್ರದ ಕಾರ್ಯಕಾರಿ ನಿರ್ವಪಕ ಗಣೇಶ್ ಪಾಪಣ್ಣ, ಆಮೀರ್ ಖಾನ್​ರನ್ನು ಭೇಟಿ ಮಾಡಿದ್ದಾರೆ. ಅವರೊಂದಿಗೆ ‘ಭಿನ್ನ’ ಸೇರಿ ಕನ್ನಡ ಸಿನಿಮಾರಂಗದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ರ್ಚಚಿಸಿದ್ದಾರೆ.

‘ಮೊದಲಿಗೆ ಟೈಟಲ್ ಕೇಳಿ ‘ಇದು ಹಾರರ್ ಚಿತ್ರವಾ?’ ಎಂದು ಆಮೀರ್ ಕೇಳಿದರು. ಬಳಿಕ ಟ್ರೇಲರ್ ನೋಡಿ ಖುಷಿಪಟ್ಟರು. ಸಿನಿಮಾದ ಕಥೆ ಹೇಳುತ್ತಿದ್ದಂತೆಯೇ, ‘ಬೇಡ ನಾನು ಪೂರ್ತಿ ಚಿತ್ರವನ್ನೇ ನೋಡುತ್ತೇನೆ. ಶೀಘ್ರದಲ್ಲಿ ಸಿನಿಮಾದ ಲಿಂಕ್ ಕಳುಹಿಸಿಕೊಡಿ’ ಎಂದರು. ಆಮೀರ್ ಪತ್ನಿ ಕಿರಣ್ ರಾವ್ ಸಹ ಟ್ರೇಲರ್ ಮೆಚ್ಚಿದರು. ನಿಜಕ್ಕೂ ಆಮೀರ್ ‘ಭಿನ್ನ’ ಚಿತ್ರದ ಟ್ರೇಲರ್ ನೋಡಿ, ಮೆಚ್ಚಿದ್ದು ನಮ್ಮ ತಂಡಕ್ಕೆ ದೊಡ್ಡ ಸಂಭ್ರಮ’ ಎನ್ನುತ್ತಾರೆ ಗಣೇಶ್. ಸೈಕಲಾಜಿಕಲ್ ಥ್ರಿಲ್ಲರ್ ವಿಷಯವನ್ನು ಹೊಂದಿರುವ ಈ ಚಿತ್ರದಲ್ಲಿ ರಂಗಭೂಮಿ ಹಿನ್ನೆಲೆಯ ಶಶಾಂಕ್ ಪುರುಷೋತ್ತಮ್ ಸಿದ್ಧಾರ್ಥ್ ಮಾಧ್ಯಮಿಕ, ಪಾಯಲ್ ರಾಧಾಕೃಷ್ಣ, ಸೌಮ್ಯಾ ಜಗನ್​ವುೂರ್ತಿ ನಟಿಸಿದ್ದಾರೆ. ಸದ್ಯ ಡಿಜಿಟಲ್ ಪಾಲುದಾರಿಕೆಗಾಗಿ ಮಾತುಕತೆಗಳು ನಡೆದಿದ್ದು, ಇನ್ನು ಕೆಲವೇ ತಿಂಗಳಲ್ಲಿ ಚಿತ್ರ ಬಿಡುಗಡೆ ಆಗಲಿದೆ.

ಲೋಕಲ್ ಕಂಟೆಂಟ್ ಬಳಸಿ ಕೊಂಡು ಸಿನಿಮಾ ಮಾಡಿದರೂ, ಅದು ಜಾಗತಿಕವಾಗಿ ಎಲ್ಲರಿಗೂ ಹತ್ತಿರ ಎನಿಸಬೇಕು. ಕನ್ನಡದಲ್ಲಿ ‘ಕೆಜಿಎಫ್’ ಚಿತ್ರ ಅಂಥದ್ದೊಂದು ಸಾಧನೆ ಮಾಡಿದೆ. ಟ್ರೇಲರ್ ನೋಡಿದ ಮೇಲೆ ‘ಭಿನ್ನ’ದಲ್ಲೂ ಅಂಥ ಅಂಶಗಳಿವೆ ಎಂದು ನನಗನಿಸುತ್ತದೆ.

| ಆಮೀರ್ ಖಾನ್ ನಟ

Leave a Reply

Your email address will not be published. Required fields are marked *