ಕೋಡಿ ಮಲ್ಲೇಶ್ವರ ಸ್ವಾಮಿ ಜಾತ್ರೆಗೆ ತೆರೆ

ಐಮಂಗಲ: ಹೋಬಳಿಯ ಮರಡಿದೇವಿಗೆರೆಯಲ್ಲಿ ಬುಧವಾರ ಹೂವಿನ ಪಲ್ಲಕ್ಕಿ ಉತ್ಸವದೊಂದಿಗೆ ಐದು ದಿನಗಳ ಶ್ರೀ ಕೋಡಿ ಮಲ್ಲೇಶ್ವರ ಸ್ವಾಮಿ ಜಾತ್ರೆಗೆ ತೆರೆ ಬಿದ್ದಿತು.

ಮಂಗಳವಾರ ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಸಂಜೆ ಕೆಂಡೋತ್ಸವ ನೆರವೇರಿತು. ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಶ್ರೀಸ್ವಾಮಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ಮೆರವಣಿಗೆ ಮೂಲಕ ಅಗ್ನಿ ಕುಂಡದ ಬಳಿ ಕರೆತರಲಾಯಿತು.

ಮಡಿ ಉಟ್ಟವರು ಅಗ್ನಿ ಕುಂಡಕ್ಕೆ ಪೂಜೆ ಸಲ್ಲಿಸಿ ಅನ್ನ, ಬಾಳೆಹಣ್ಣಿನ ನೈವೇದ್ಯ ಅರ್ಪಿಸಿದರು. ದೇವರ ಪಲ್ಲಕ್ಕಿ ಹೊತ್ತವರು ಕೆಂಡ ಹಾಯ್ದ ಬಳಿಕ ಹರಕೆ ಹೊತ್ತ ಭಕ್ತರು ತೆಂಗಿನ ಕಾಯಿ, ಬಾಳೆಹಣ್ಣು, ಕರ್ಪೂರ, ಮಂಗಳ ದ್ರವ್ಯಗಳನ್ನು ಅಗ್ನಿಕುಂಡಕ್ಕೆ ಅರ್ಪಿಸಿ ಭಕ್ತಿ ಮೆರೆದರು. ಕೆಂಡ ತುಳಿಯುವಾಗ ಸಮಾಳ, ಮಂಗಳ ವಾದ್ಯಗಳು ಮೊಳಗಿದವು.