ತಿದ್ದುಪಡಿಗೆ ಕೊಟ್ಟ ಆಧಾರ್ ತಿರಸ್ಕೃತ

ಅವಿನ್ ಶೆಟ್ಟಿ ಉಡುಪಿ
ಆಧಾರ್ ತಿದ್ದುಪಡಿಗೆ ನೀಡಿದ ಬಹುತೇಕ ಅರ್ಜಿಗಳು ತಿರಸ್ಕೃತಗೊಳ್ಳುತ್ತಿವೆ. ಇದರಿಂದಾಗಿ ಸಾರ್ವಜನಿಕರು ಸರ್ಕಾರದ ಸೌಲಭ್ಯಗಳನ್ನು ಪಡೆಯಲಾಗದೆ, ಮಕ್ಕಳ ಶಾಲಾ ಸೇರ್ಪಡೆ ದಾಖಲಾತಿಯೂ ಸಾಧ್ಯವಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಹೊಸ ಆಧಾರ್ ಕಾರ್ಡ್‌ನಲ್ಲಿ ತಪ್ಪುಗಳಿದ್ದರೆ ಸರಿಪಡಿಸಿ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿದಾಗ ಅರ್ಜಿಗಳು ತಿರಸ್ಕೃತಗೊಳ್ಳುತ್ತಿವೆ. ಪಂಚಾಯಿತಿಗಳಲ್ಲಿರುವ ಆಧಾರ್ ಕೇಂದ್ರಕ್ಕೆ ನೀಡಲಾದ ಕ್ಲೈಂಟ್ ಐಡಿ ಸಹ ಲಿಂಕ್ ಆಗದೆ ಆಧಾರ್ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಸರ್ವರ್ ಸಮಸ್ಯೆ ಸಹಿತ ತಾಂತ್ರಿಕ ಅಡಚಣೆಗಳಿಂದ ಸೇವೆಗಳಲ್ಲಿ ವ್ಯತ್ಯಯವಾಗಿದೆ. ಒಂದು ವೇಳೆ ಅರ್ಜಿ ಪಾಸ್ ಆದರೂ ಪರಿಶೀಲನೆಯಲ್ಲಿ ತಿರಸ್ಕೃತಗೊಳ್ಳುತ್ತಿರುವುದರಿಂದ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ.

ಏನು ಕಾರಣ?: ಬಹುತೇಕ ಕಡೆಗಳಲ್ಲಿ ಅರ್ಜಿದಾರರು ವಾಸ್ತವ್ಯ ದೃಢೀಕರಣ ಪತ್ರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಿಂದ ಪಡೆದುಕೊಂಡು ಅರ್ಜಿ ಸಲ್ಲಿಸುತ್ತಿದ್ದಾರೆ. ಕಂದಾಯ ಇಲಾಖೆಯಿಂದಲೇ ಪ್ರಮಾಣೀಕೃತವಾದ ವಾಸ್ತವ್ಯ ದೃಢೀಕರಣ ಪತ್ರ ದಾಖಲೆಯನ್ನು ಆಧಾರ್‌ಗೆ ಪರಿಗಣಿಸಲಾಗುತ್ತದೆ. ಯಾವುದೇ ದಾಖಲೆ ಇಲ್ಲದವರು ಗ್ರಾಪಂ ಅಧ್ಯಕ್ಷರ ದೃಢೀಕರಣ ಪತ್ರ ಸಲ್ಲಿಸುತ್ತಿದ್ದಾರೆ. ಇದರ ಫಾರ್ಮ್ಯಾಟ್‌ನಲ್ಲಿ ವಿಳಾಸ, ಪಿನ್‌ಕೋಡ್ ಹಾಕದಿರುವುದರಿಂದ ಬಹುತೇಕ ಅರ್ಜಿಗಳು ತಿರಸ್ಕೃತಗೊಳ್ಳುತ್ತಿವೆ. ಸದ್ಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಈ ದಾಖಲೆಯನ್ನು ಪರಿಗಣಿಸುತ್ತಿಲ್ಲ. ಸ್ಥಳೀಯ ದಾಖಲೆ ಇಲ್ಲದವರು ಎ ಗೆಜೆಟೆಡ್ ಅಧಿಕಾರಿಗಳಿಂದಲೂ ದೃಢೀಕರಣ ಪತ್ರ ಪಡೆದು ಆಧಾರ್ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು. ಆದರೆ ಹೆಚ್ಚಿನ ಅರ್ಜಿಗಳಲ್ಲಿ ಖಾಲಿ ಹಾಳೆ ಮೇಲಿನ ಬರಹ, ಸೀಲು, ಸಹಿ ಮಾತ್ರ ಇರುತ್ತದೆ. ಅಧಿಕಾರಿಯ ಲೆಟೆರ್‌ಹೆಡ್‌ನಿಂದ ಅನುಮೋದಿಸಿದ ದೃಢೀಕರಣ ಪತ್ರವನ್ನು ಮಾತ್ರ ಪರಿಗಣಿಸಲಾಗುತ್ತದೆ ಎಂದು ಆಧಾರ್ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದಾಖಲೆ ಪರಿಶೀಲನೆ ಬಿಗಿ: ಯುಐಡಿಎಐ ಸಾಕಷ್ಟು ಕಠಿಣ ಕ್ರಮಗಳನ್ನು ಅನುಸರಿಸುತ್ತಿದ್ದು, ದಾಖಲೆ ಪರಿಶೀಲನೆಯನ್ನು ಅತ್ಯಂತ ಬಿಗಿಗೊಳಿಸಿದ್ದೇ ಅರ್ಜಿಗಳು ತಿರಸ್ಕೃತಗೊಳ್ಳಲು ಕಾರಣ ಎಂದು ಆಧಾರ್ ನೋಂದಣಿ ಏಜೆನ್ಸಿ ಅಧಿಕಾರಿ ತಿಳಿಸಿದ್ದಾರೆ. ಹಿಂದೆಲ್ಲ ಹೊಸ ಮತ್ತು ತಿದ್ದುಪಡಿಗೆ ನೀಡಿದ ಅರ್ಜಿಗಳಲ್ಲಿ ಸಣ್ಣಪುಟ್ಟ ತಪ್ಪುಗಳಿದ್ದರೂ ಆಧಾರ್ ಜನರೇಟ್ ಆಗುತಿತ್ತು. ಈಗ ಆಪರೇಟರ್ ಡಾಟಾ ಎಂಟ್ರಿ ಡೆಮೊಗ್ರಫಿ ಸ್ಕ್ರೀನಿಂಗ್- ವ್ಯಕ್ತಿಯ ದೃಢೀಕರಣ ಪತ್ರ ಅಥವಾ ಪೂರಕ ದಾಖಲೆ- ಎನ್ರೋಲ್ಮೆಂಟ್ ಫಾರಂ ಈ ಮೂರು ಸಮರ್ಪಕವಾಗಿದ್ದಲ್ಲಿ ಮಾತ್ರ ಆಧಾರ್ ಜನರೇಟ್ ಆಗುತ್ತದೆ. ಒಂದಕ್ಷರ ಅಚೀಚೆ ಇದ್ದರೂ ಅರ್ಜಿ ತಿರಸ್ಕೃತಗೊಳ್ಳುತ್ತದೆ.

ಮಾಹಿತಿ ನೀಡುವುದಿಲ್ಲ: ತಿದ್ದುಪಡಿ ಅರ್ಜಿಗಳು ಯಾಕೆ ತಿರಸ್ಕೃತವಾಗುತ್ತಿದೆ? ಸಮರ್ಪಕವಾಗಿ ಯಾವ ದಾಖಲೆ ನೀಡಬೇಕು? ಯುಐಡಿಎಐ ಇತ್ತೀಚೆಗೆ ತೆಗದುಕೊಂಡ ಹೊಸ ನಿಯಮಗಳೇನು? ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಸಂಬಂಧಪಟ್ಟವರು ನಮಗೆ ನೀಡುತ್ತಿಲ್ಲ. ಸಾಕಷ್ಟು ಗೊಂದಲಗಳಿದ್ದು, ಸಾರ್ವಜನಿಕರಿಗೆ ಉತ್ತರಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಪಿಡಿಒಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಇಒ ಆದೇಶ ವಿವಾದ: ವಾಸದೃಢ ಪತ್ರ ನೀಡುವ ಬಗ್ಗೆ ಕಾರ್ಕಳ ತಹಸೀಲ್ದಾರ್ ಆದೇಶದ ಮೇರೆಗೆ ಕಾರ್ಕಳ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪಿಡಿಒಗಳಿಗೆ ನೀಡಿದ ಆದೇಶ ವಿವಾದಕ್ಕೊಳಗಾಗಿದೆ. ಆಧಾರ್ ನೋಂದಣಿ ಮತ್ತು ತಿದ್ದುಪಡಿಗೆ ಅರ್ಜಿ ಸಲ್ಲಿಸುವ ಸಾರ್ವಜನಿಕರಿಗೆ ವಾಸದೃಢ ಪತ್ರ ನೀಡುವಂತೆ ಪಿಡಿಒಗಳಿಗೆ ಕಾನೂನು ಬಾಹಿರವಾಗಿ ಆದೇಶ ನೀಡಲಾಗಿದೆ ಎಂದು ಕೆಲವು ಗ್ರಾಪಂನ ಪಿಡಿಒಗಳು ದೂರಿದ್ದಾರೆ. ಕಂದಾಯ ಇಲಾಖೆ ನೀಡುವ ದೃಢೀಕೃತ ಪ್ರಮಾಣಪತ್ರವನ್ನು ಪಿಡಿಒಗಳು ನೀಡಲು ಹೇಗೆ ಸಾಧ್ಯ? ಸರ್ಕಾರದ ನಿಯಮ ಮೀರಿ ಈ ಕೆಲಸ ಮಾಡಿದಂತಾಗುತ್ತದೆ ಎಂದು ಪಿಡಿಒಗಳು ಹೇಳಿದ್ದಾರೆ. ಈ ಆದೇಶ ನೀಡಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ, ಪರಿಶೀಲಿಸುವುದಾಗಿ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ತಿಳಿಸಿದ್ದಾರೆ.

ಆಧಾರ್ ತಿದ್ದುಪಡಿ ಅರ್ಜಿ ಮತ್ತು ಹೊಸ ಅರ್ಜಿಗಳು ತಿರಸ್ಕೃತಗೊಳ್ಳುತ್ತಿರುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ದಾಖಲಾತಿಗಳು ಪೂರಕವಾಗಿರದಿದ್ದರೆ ಸಮಸ್ಯೆ ಆಗಲಿದೆ. ವಾಸ ದೃಢೀಕರಣ ಪತ್ರ ಕಂದಾಯ ಇಲಾಖೆ ಸೇವೆಯಾಗಿದೆ, ಇದನ್ನು ತಹಸೀಲ್ದಾರ್‌ಗಳೇ ನೀಡಬೇಕು. ಗ್ರಾಮ ಪಂಚಾಯಿತಿ ಅಧ್ಯಕ್ಷರು ನೀಡುವಂತಿಲ್ಲ. ಈ ಬಗ್ಗೆ ಸ್ಪಷ್ಟವಾಗಿ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗುವುದು.
 ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ, ಉಡುಪಿ 

Leave a Reply

Your email address will not be published. Required fields are marked *