More

    ವೋಟರ್ ಐಡಿಗೆ ಆಧಾರ್ ಜೋಡಣೆ?

    ನವದೆಹಲಿ: ಮತದಾರರ ಗುರುತಿನ ಚೀಟಿಗೆ (ವೋಟರ್ ಐಡಿ ಕಾರ್ಡ್) ಆಧಾರ್ ಸಂಖ್ಯೆ ಜೋಡಿಸುವ ಪ್ರಸ್ತಾವನೆಗೆ ಕೇಂದ್ರ ಕಾನೂನು ಸಚಿವಾಲಯ ಹಸಿರು ನಿಶಾನೆ ತೋರಿದೆ. ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗ ಬಯಸುವವರು, ಹಾಲಿ ಮತದಾರರೂ ಆಧಾರ್ ಲಿಂಕ್ ಮಾಡಲು ಅವಕಾಶ ನೀಡುವಂತೆ ಚುನಾವಣೆ ಆಯೋಗ ಪ್ರಸ್ತಾವನೆ ಸಲ್ಲಿಸಿತ್ತು. ನಕಲಿ ಮತದಾನ ತಡೆಯಲು ಈ ಕ್ರಮ ಅಗತ್ಯ ಎಂದು ಆಯೋಗ ಪ್ರತಿಪಾದಿಸಿತ್ತು. ಇದರಿಂದ ರಾಷ್ಟ್ರೀಯ ಹಿತ ರಕ್ಷಣೆಯಾಗುತ್ತದೆ ಎಂದಿತ್ತು. 12 ಅಂಕಿಗಳ ಆಧಾರ್ ಸಂಖ್ಯೆ ಜೋಡಣೆಗೆ ಕಾನೂನಾತ್ಮಕ ಅಧಿಕಾರ ನೀಡುವಂತೆ ಅದು ಕೇಂದ್ರ ಸರ್ಕಾರವನ್ನು ಕೋರಿತ್ತು. ಇದಕ್ಕೆ ಒಪ್ಪಿಗೆ ನೀಡಿರುವ ಕಾನೂನು ಸಚಿವಾಲಯ, ಕಾನೂನಿಗೆ ಸೂಕ್ತ ತಿದ್ದುಪಡಿ ತರಲು ಕ್ರಮ ಕೈಗೊಳ್ಳುತ್ತಿದೆ.

    ಆದರೂ, ಆಧಾರ್ ವಿವರ ನೀಡಲು ನಿರಾಕರಿಸುವವರಿಗೆ ಮತದಾರರ ಪಟ್ಟಿಯಲ್ಲಿ ಸೇರುವ ಅವಕಾಶದಿಂದ ವಂಚಿಸಲಾಗುವುದಿಲ್ಲ. ಈಗಾಗಲೇ ಇರುವವರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

    ಮತದಾರರ ಪಟ್ಟಿ ಶುದ್ಧೀಕರಣ: 2016ರ ಆಧಾರ್ ಕಾನೂನು ಮತ್ತು 1956ರ ಪ್ರಜಾ ಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ ತರುವಂತೆ ಚುನಾವಣಾ ಆಯೋಗ 2019ರ ಆಗಸ್ಟ್ ನಲ್ಲಿ ಕೇಂದ್ರ ಕಾನೂನು ಕಾರ್ಯದರ್ಶಿಗೆ ಪತ್ರ ಬರೆದಿತ್ತು. ಪ್ರಸ್ತಾಪಿತ ತಿದ್ದುಪಡಿ ಆಧಾರ್ ದತ್ತಾಂಶ ಪಡೆಯಲು ಹಾಗೂ ಬಳಸಲು ಆಯೋಗಕ್ಕೆ ಕಾನೂನಿನ ಅಧಿಕಾರ ಸಿಗುತ್ತದೆ. ಮತದಾರರ ಪಟ್ಟಿಯ ಶುದ್ಧೀಕರಣ ಇದರ ಗುರಿಯಾಗಿದೆ ಎಂದು ಅದು ಪ್ರತಿಪಾದಿಸಿದೆ. ಸರ್ಕಾರಿ ಪ್ರಾಯೋಜಿತ ಯೋಜನೆಗಳ ಫಲಾನುಭವಕ್ಕಲ್ಲದೆ ಬೇರೆ ಉದ್ದೇಶಗಳಿಗೆ ಆಧಾರ್ ದತ್ತಾಂಶ ಪಡೆಯಲು ಸುಪ್ರೀಂಕೋರ್ಟ್ ನಿಗದಿಪಡಿಸಿದ ಮಾರ್ಗದರ್ಶಿ ಸೂತ್ರಗಳನ್ನು ಆಯೋಗ ಪಾಲಿಸಬೇಕಾಗುತ್ತದೆ ಎಂದು ಸೆಪ್ಟೆಂಬರ್​ನಲ್ಲಿ ಬರೆದ ಉತ್ತರದಲ್ಲಿ ಕಾನೂನು ಸಚಿವಾಲಯ ಹೇಳಿತ್ತು.

    ಸುರಕ್ಷತೆಗೆ ಆದ್ಯತೆ

    ಪ್ರಸ್ತಾಪನೆ ಒಪ್ಪಿರುವ ಕಾನೂನು ಸಚಿವಾಲಯ ಆಧಾರ್ ದತ್ತಾಂಶದ ಸುರಕ್ಷತೆಯನ್ನು ಖಾತರಿಪಡಿಸುವಂತೆ ಸೂಚಿಸಿದೆ. ದತ್ತಾಂಶ ದುರುಪಯೋಗ, ಕಳವು, ಸೋರಿಕೆಯಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದೆ. ಸಚಿವಾಲಯದ ಸೂಚನೆಗಳಿಗೆ ಕಳೆದ ಡಿಸೆಂಬರ್​ನಲ್ಲೇ ಪ್ರತಿಕ್ರಿಯಿಸಿದ ಆಯೋಗ, ಸುರಕ್ಷತೆಗೆ ಕೈಗೊಳ್ಳುವ ಕ್ರಮದ ಪಟ್ಟಿಯನ್ನು ಸಲ್ಲಿಸಿದೆ. ಆಧಾರ್ ದತ್ತಾಂಶ ಮತ್ತು ಮತದಾರರ ಪಟ್ಟಿಯ ವ್ಯವಸ್ಥೆ ಪ್ರತ್ಯೇಕವಾಗಿಯೇ ಇರುತ್ತವೆ ಎಂದೂ ಅದು ಸ್ಪಷ್ಟಪಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts