ಟಿಡಿಪಿಯ ಆ್ಯಪ್​ ಅಭಿವೃದ್ಧಿಪಡಿಸುತ್ತಿರುವ ಸಂಸ್ಥೆ ಬಳಿ 7.8 ಕೋಟಿ ಜನರ ಆಧಾರ್​ ಮಾಹಿತಿ: ಯುಐಡಿಎಐನಿಂದ ದೂರು

ಹೈದರಾಬಾದ್​: ಆಂಧ್ರಪ್ರದೇಶದಲ್ಲಿ ಆಡಳಿತಾರೂಢ ಟಿಡಿಪಿಯ ಸೇವಾ ಮಿತ್ರ ಎಂಬ ಮೊಬೈಲ್​ ಆ್ಯಪ್​ ಸಿದ್ಧಪಡಿಸುತ್ತಿರುವ ಐಟಿ ಕಂಪನಿ ಐಟಿ ಗ್ರಿಡ್ಸ್​ (ಇಂಡಿಯಾ) ಬಳಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸೇರಿ ಒಟ್ಟು 7.8 ಕೋಟಿ ಜನರ ಆಧಾರ್​ ಮಾಹಿತಿ ಇರುವುದಾಗಿ ಆರೋಪಿಸಿ ಭಾರತೀಯ ವಿಶಿಷ್ಠ ಗುರುತಿನ ಪ್ರಾಧಿಕಾರ ಯುಐಡಿಎಐ ಸೈಬರಾಬಾದ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದೆ. ಪೊಲೀಸರು ಪ್ರಕರಣದ ಎಫ್​ಐಆರ್​ ದಾಖಲಿಸಿದ್ದಾರೆ.

ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಒಟ್ಟು 8.4 ಕೋಟಿ ಜನಸಂಖ್ಯೆ ಇದೆ. ಇವರ ಪೈಕಿ 7.8 ಕೋಟಿ ಜನರ ಮಾಹಿತಿ ಐಟಿ ಗ್ರಿಡ್ಸ್​ (ಇಂಡಿಯಾ) ಬಳಿ ಇದೆ. ಈ ಮಾಹಿತಿಯು ರಿಮೂವಬಲ್​ ಸ್ಟೋರೇಜ್​ ಡಿವೈಸ್​ನಲ್ಲಿ ಇದೆ. ಕೇಂದ್ರ ಮಾಹಿತಿ ಕೇಂದ್ರ ಅಥವಾ ರಾಜ್ಯ ಮಾಹಿತಿ ಕೇಂದ್ರದಿಂದ ಅಕ್ರಮವಾಗಿ ಪಡೆದುಕೊಂಡು, ಪ್ರತ್ಯೇಕವಾಗಿ ಇರಿಸಿಕೊಂಡಿರಬಹುದು ಎಂದು ಯುಐಡಿಎಐ ತನ್ನ ದೂರಿನಲ್ಲಿ ತಿಳಿಸಿದೆ.

ಇದಕ್ಕೂ ಮುನ್ನ ಐಟಿ ಗ್ರಿಡ್ಸ್​ (ಇಇಂಡಿಯಾ) ಬಳಿ ಇರುವ ಹಾರ್ಡ್​ ಡಿಸ್ಕ್​ಗಳನ್ನು ವಶಕ್ಕೆ ಪಡೆದು ತೆಲಂಗಾಣ ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ವಿಶ್ಲೇಷಣೆಗೆ ಒಳಪಡಿಸಿದಾಗ ಅದರಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಒಟ್ಟು 7,82,21,397 ಜನರ ಆಧಾರ್​ ಮಾಹಿತಿ ಇರುವುದು ಖಚಿತಪಟ್ಟಿತ್ತು. ಯುಐಡಿಎಐ ಹೊಂದಿರುವ ಆಧಾರ್​ ಮಾಹಿತಿಯನ್ನೇ ಈ ಮಾಹಿತಿಯು ಹೋಲುತ್ತಿತ್ತು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಡೇಟಾ ಕಳ್ಳತನಕ್ಕೆ ಸಂಬಂಧಿಸಿದಂತೆ ಈಗಾಗಲೆ ನಡೆಯುತ್ತಿರುವ ವಿಶೇಷ ತನಿಖಾ ತಂಡದ ತನಿಖೆಗೆ ಈ ಪ್ರಕರಣವನ್ನೂ ಒಪ್ಪಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. (ಏಜೆನ್ಸೀಸ್​)