More

    ಆ ಕ್ಷಣ ಅಂಕಣ… ತ್ರಿಕೋನಪ್ರೇಮದ ದುರಂತ

    ಆ ಕ್ಷಣ ಅಂಕಣ… ತ್ರಿಕೋನಪ್ರೇಮದ ದುರಂತತಾಲ್ಲೂಕು ಕೇಂದ್ರವೊಂದರ ಪೊಲೀಸ್ ಠಾಣೆಯಲ್ಲಿ 32 ವರ್ಷದ ಕವಿತಾ ಪೊಲೀಸ್ ಕಾನ್​ಸ್ಟೇಬಲ್ ಆಗಿದ್ದಳು. ಆಕೆಗೆ 13 ವರ್ಷದ ಮಗ ಮತ್ತು 10 ವರ್ಷದ ಮಗಳಿದ್ದರು. ಮಗನನ್ನು ನೆರೆಯ ಜಿಲ್ಲೆಯಲ್ಲಿದ್ದ ವಸತಿ ಶಾಲೆಗೆ ಸೇರಿಸಿದ್ದಳು. 2 ವರ್ಷದ ಹಿಂದೆ ಪತಿ ನಿಧನ ಹೊಂದಿದಾಗ ಕವಿತಾ ಮಗಳೊಡನೆ ತವರು ಮನೆಗೆ ಬಂದು ತಾಯಿಯೊಡನೆ ವಾಸಿಸತೊಡಗಿದಳು. ಒಂದು ರಾತ್ರಿ ಮಾಮೂಲಿನಂತೆ ಕವಿತಾ ಮನೆಗೆ ಬಾರದಿದ್ದಾಗ ತಾಯಿ ಅವಳ ಮೊಬೈಲ್​ಗೆ ಫೋನ್ ಮಾಡಿದಳು. ಅದು ಸ್ವಿಚಾಫ್ ಆಗಿತ್ತು. ಹೆದರಿದ ಆಕೆ ವಿಚಾರಿಸಲು ಠಾಣೆಗೆ ಹೋದಳು. ಅಲ್ಲಿದ್ದವರು ಕವಿತಾ ಡ್ಯೂಟಿ ಮುಗಿಸಿಕೊಂಡು ಸಂಜೆ 6ಕ್ಕೇ ಮನೆಗೆ ಹೋದದ್ದಾಗಿ ತಿಳಿಸಿದರು.

    ಮಾರನೆಯ ಬೆಳಗ್ಗೆಯಾದರೂ ಕವಿತಾ ವಾಪಸಾಗದಿದ್ದಾಗ ಹೆದರಿದ ಅವಳ ತಾಯಿ ಮತ್ತೆ ಠಾಣೆಗೆ ಧಾವಿಸಿದಳು. ಮಗನನ್ನು ನೋಡಲು ಕವಿತಾ ಅವನ ವಸತಿ ಶಾಲೆಗೆ ಹೋಗಿರಬಹುದು ಎಂದರು ಠಾಣಾಧಿಕಾರಿ. ವಸತಿ ಶಾಲೆಗೆ ಫೋನ್ ಮಾಡಿದರೆ ಅಲ್ಲಿಗೂ ಕವಿತಾ ಬಂದಿರಲಿಲ್ಲ. ಗಾಬರಿಯಾದ ತಾಯಿ ಮಿಸ್ಸಿಂಗ್ ಕಂಪ್ಲೇಂಟನ್ನು ದಾಖಲಿಸಲು ಕೋರಿದಾಗ ಠಾಣಾಧಿಕಾರಿ ಇನ್ನೊಂದು ದಿನ ಕಾದು ನೋಡಲು ಸೂಚಿಸಿದರು. ಏತನ್ಮಧ್ಯೆ ಸಾಮಾಜಿಕ ಜಾಲತಾಣವೊಂದರಲ್ಲಿ ಠಾಣೆಯಿಂದ ಮಹಿಳಾ ಪೊಲೀಸ್ ಕಾಣೆಯಾಗಿದ್ದಾರೆ, ಹುಡುಕಿಕೊಡಿ ಎನ್ನುವ ಶೀರ್ಷಿಕೆಯಲ್ಲಿ ಯಾರೋ ಕವಿತಾ ನಾಪತ್ತೆಯಾದ ಬಗ್ಗೆ ಪೋಸ್ಟ್ ಹಾಕಿದ್ದರು. ಇದು ವೈರಲ್ ಆಗಿ ವೃತ್ತಪತ್ರಿಕೆಗಳಲ್ಲಿ ವರದಿಯಾಯಿತು. ಆಗ ಅನಿವಾರ್ಯವಾಗಿ ಠಾಣಾಧಿಕಾರಿ ಕವಿತಾ ಕಾಣೆಯಾದ ಕೇಸನ್ನು ದಾಖಲಿಸಿದರು. ಅವಳ ಫೋಟೋಗಳನ್ನು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಕಳಿಸಿದರು.

    ಅದೇ ದಿನ ನೆರೆಯ ಜಿಲ್ಲಾ ಕೇಂದ್ರದ ಲಾಜ್ ಒಂದರಲ್ಲಿ 26 ವರ್ಷದ ಸಂಜಯ್ ಎನ್ನುವವನ ಶವ ಪತ್ತೆಯಾಯಿತು. ಆತ ಎರಡು ದಿನಗಳ ಹಿಂದೆ ರೂಮ್ ಬಾಡಿಗೆಗೆ ಪಡೆದಿದ್ದ. ಆತ ರೂಮಿನಿಂದ ಒಂದು ಬಾರಿಯೂ ಹೊರಗೆ ಬರದಿದ್ದಾಗ ಅನುಮಾನಗೊಂಡ ಸಿಬ್ಬಂದಿ ರೂಮಿನ ಕದ ಬಡಿದರು. ಅದು ತೆರೆಯಲಿಲ್ಲ. ಕದ ಒಡೆದು ಒಳಗೆ ಹೋದರು. ಮಂಚದ ಮೇಲೆ ಸಂಜಯ್ ಶವವಾಗಿ ಬಿದ್ದಿದ್ದನ್ನು ಕಂಡು ಪೊಲೀಸರಿಗೆ ತಿಳಿಸಿದರು. ಪೊಲೀಸರು ಸ್ಥಳ ಮಹಜರು ಮಾಡುವಾಗ ಟೇಬಲ್ ಮೇಲೆ ಸಂಜಯ್ ಬರೆದಿಟ್ಟಿದ್ದ ಡೆತ್​ನೋಟ್ ದೊರಕಿತು. ಅದರಲ್ಲಿ ಸ್ಪೋಟಕ ಮಾಹಿತಿಯೊಂದನ್ನು ಆತ ಬರೆದಿದ್ದ. ತಾನು ತನ್ನ ದೊಡ್ಡಪ್ಪನ ಮಗಳಾದ ಕವಿತಾಳನ್ನು ಸ್ನೇಹಿತ ರಾಕೇಶ್​ನ ಜತೆ ಸೇರಿ ಕೊಲೆ ಮಾಡಿದ್ದು ಅವಳ ಶವವನ್ನು ಅದೇ ಜಿಲ್ಲೆಯ ಗಡಿಯ ಹೆದ್ದಾರಿಯ ಪಕ್ಕದಲ್ಲಿ ಪೊದೆಯೊಂದರಲ್ಲಿ ಎಸೆದಿರುವುದಾಗಿ ಬರೆದಿದ್ದ. ತಾನು ನಿದ್ರೆಮಾತ್ರೆಗಳನ್ನು ಸೇವಿಸಿದ್ದಾಗಿ ತಿಳಿಸಿದ್ದ ಸಂಜಯ್ ಪಾಪಪ್ರಜ್ಞೆ ಕಾಡುತ್ತಿರುವುದರಿಂದ ಆತ್ಮಹತ್ಯೆಗೆ ಶರಣಾದೆ ಎಂದು ಬರೆದಿದ್ದ.

    ಆದರೆ, ಆ ಪತ್ರದಲ್ಲಿ ರಾಕೇಶ್​ನ ಅಥವಾ ಕವಿತಾಳ ವಿವರಗಳು ಇರಲಿಲ್ಲ. ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿ ಶವವನ್ನು ಪೋಸ್ಟ್​ಮಾರ್ಟಂಗೆ ಕಳಿಸಿದರು. ಇದಲ್ಲದೆ, ಜಿಲ್ಲಾ ಗಡಿಯ ಹೆದ್ದಾರಿಗಳ ಬಳಿ ಯಾವುದಾದರೂ ಸ್ತ್ರೀ ಶವವಿದೆಯೇ ಎಂದು ಹುಡುಕಲು ತನಿಖಾ ಟೀಮುಗಳನ್ನು ಕಳಿಸಿದರು. ಒಂದು ದಿನದ ತೀವ್ರ ಹುಡುಕಾಟದ ನಂತರ ಮಹಿಳೆ ಶವವು ರಸ್ತೆ ಬದಿಯ ಪೊದೆಯಲ್ಲಿ ಸಿಕ್ಕಿತು. ಅದು ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿತ್ತು.

    ಏತನ್ಮಧ್ಯೆ ಲಾಜ್​ನಲ್ಲಿ ಮರಣ ಹೊಂದಿದ್ದ ಸಂಜಯ್ ರೂಮನ್ನು ಪಡೆಯುವ ಮುನ್ನ ಕೊಟ್ಟಿದ್ದ ವಿಳಾಸ ಮತ್ತು ಆತ ಬರೆದಿದ್ದ ಡೆತ್​ನೋಟನ್ನು ಮತ್ತೊಮ್ಮೆ ಪೊಲೀಸರು ಕೂಲಂಕಷವಾಗಿ ಪರಿಶೀಲಿಸಿದರು. ಅದರಿಂದ ಹೊರಹೊಮ್ಮಿದ ಮಾಹಿತಿಯನ್ವಯ ಸಂಬಂಧಪಟ್ಟ ಪೊಲೀಸ್ ಠಾಣೆಯನ್ನು ಸಂರ್ಪಸಿ ಮಾಹಿತಿ ನೀಡಿದರು. ಕೂಡಲೇ ಕವಿತಾಳ ನಾಪತ್ತೆ ಕೇಸನ್ನು ದಾಖಲಿಸಿದ್ದ ಠಾಣಾಧಿಕಾರಿ ಶವ ಗುರುತಿಸಲು ಕವಿತಾಳ ತಾಯಿಯನ್ನು ಕರೆದುಕೊಂಡು ನೆರೆಯ ಜಿಲ್ಲೆಗೆ ಹೋದರು. ಶವವು ಕೊಳೆತಿದ್ದ ಕಾರಣ ಅದನ್ನು ಗುರುತಿಸುವುದು ಕಷ್ಟವಾಯಿತು. ಶವದ ಮೇಲಿದ್ದ ಬಟ್ಟೆ ಮತ್ತು ಕೈ ಮೇಲಿದ್ದ ಹಚ್ಚೆಯ ಗುರುತಿನ ಆಧಾರದ ಮೇಲೆ ಕವಿತಾಳ ತಾಯಿ ಅದು ತನ್ನ ಮಗಳದ್ದೇ ಎಂದು ಗುರುತಿಸಿದಳು. ಶವ ಸಿಕ್ಕ ಜಾಗದ ವ್ಯಾಪ್ತಿ ಹೊಂದಿದ್ದ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಯಿತು.

    ಡೆತ್​ನೋಟಿನಲ್ಲಿ ನಮೂದಿಸಿದ್ದ ರಾಕೇಶ್ ಯಾರೆಂಬುದನ್ನು ತಿಳಿಯಲು ಕವಿತಾಳ ತಾಯಿ ಮತ್ತು ಅವಳ ಜತೆಗಿದ್ದ ಠಾಣಾಧಿಕಾರಿಯನ್ನು ವಿಚಾರಿಸಲಾಯಿತು. ಆತ ಕವಿತಾಳಿದ್ದ ಊರಿನಲ್ಲಿಯೇ ಮೋಟಾರ್ ಬಿಡಿಭಾಗಗಳನ್ನು ಮಾರುವ ಅಂಗಡಿ ಇಟ್ಟುಕೊಂಡಿದ್ದು, ಬಹಳ ವರ್ಷಗಳಿಂದ ಕವಿತಾಗೆ ಪರಿಚಯವಿದನೆಂದು ತಿಳಿಯಿತು. ಅವನನ್ನು ಠಾಣೆಗೆ ಕರೆಸಿ ವಿಚಾರಿಸಿದಾಗ ಆತ ಹೀಗೆಂದ:‘ನನಗೆ ಚಿಕ್ಕಂದಿನಿಂದಲೂ ಕವಿತಾ ಪರಿಚಯವಿದ್ದಳು. ಲಾಜ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಂಜಯ್ ಅವಳ ಚಿಕ್ಕಪ್ಪನ ಮಗ. ಸಂಜಯ್ ಯಾವ ನೌಕರಿಯನ್ನೂ ಸರಿಯಾಗಿ ಮಾಡುತ್ತಿರಲಿಲ್ಲ. ಏಕೆಂದರೆ ಅವನಿಗೆ ಕುಡಿತ ಹಾಗೂ ಜೂಜಾಟದ ಚಟವಿತ್ತು. ಅವನನ್ನು ಅವನ ಮಾತಾಪಿತರು ಮನೆಯಿಂದ ಓಡಿಸಿದ ನಂತರ ಆತನ ಮೇಲೆ ಕವಿತಾ ಕರುಣೆ ತೋರಿ ಅವನಿಗೆ ತನ್ನ ಗಂಡನಿರುವಷ್ಟು ಕಾಲ ತನ್ನ ಮನೆಯಲ್ಲಿ ಆಶ್ರಯ ಕೊಟ್ಟಿದ್ದಳು. ಅವನಿಗೆ ನನ್ನ ಅಂಗಡಿಯಲ್ಲಿ ನೌಕರಿ ಕೊಡಲು ಆಕೆ ಕೋರಿದ ಕಾರಣ ನಾನು ಅವನಿಗೆ ನೌಕರಿ ನೀಡಿದ್ದೆ. ಕಾಲಕ್ರಮೇಣ ನಾವಿಬ್ಬರೂ ಉತ್ತಮ ಗೆಳೆಯರಾದೆವು.

    ಸಂಜಯ್ ಜೂಜಾಟದಲ್ಲಿ ಹಣ ಕಳೆದುಕೊಂಡು ಎರಡು ಲಕ್ಷ ರೂಗಳಷ್ಟು ಸಾಲ ಮಾಡಿದ್ದ. ಸಾಲಗಾರರು ಹಣ ಮರಳಿಸಲು ಪೀಡಿಸತೊಡಗಿದಾಗ ಆತ ಕವಿತಾಳನ್ನು ಸಾಲ ಕೇಳಿದ. ಆಕೆ ಕೊಡಲಿಲ್ಲ. ಆಗಾತ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ. ಏತನ್ಮಧ್ಯೆ ಅವನನ್ನು ಕವಿತಾಳ ಸಹೋದ್ಯೋಗಿ ಮಹಿಳಾ ಕಾನ್​ಸ್ಟೇಬಲ್ ಮಾಲತಿ ಸಂರ್ಪಸಿದಳು. ಅವಿವಾಹಿತಳಾಗಿದ್ದ ಮಾಲತಿ ಬೇರೊಂದು ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಮೋಹನ್ ಎನ್ನುವ ಪೊಲೀಸನನ್ನು ಪ್ರೀತಿಸುತ್ತಿದ್ದಳು. ಆದರೆ, ಅದೇ ವ್ಯಕ್ತಿಯನ್ನೇ ಕವಿತಾ ಸಹ ಪ್ರೀತಿಸಲಾರಂಭಿಸಿದಳು. ಮೋಹನ್ ಕವಿತಾಳತ್ತ ವಾಲುತ್ತಿದ್ದುದನ್ನು ಕಂಡ ಮಾಲತಿಗೆ ಕವಿತಾಳ ಮೇಲೆ ವೈಷಮ್ಯ ಮೂಡಿತು. ಮೋಹನನನ್ನು ಮರೆಯಲು ಮಾಲತಿ ತಾಕೀತು ಮಾಡಿದಾಗ ಕವಿತಾ ಒಪ್ಪಲಿಲ್ಲ. ಎರಡು ಮಕ್ಕಳ ತಾಯಿಯಾಗಿದ್ದ ವಿಧವೆ ತನ್ನ ಪ್ರೇಮಕ್ಕೆ ಅಡ್ಡಿ ಬರುತ್ತಿದ್ದ ಕಾರಣ ಏನಾದರೂ ಮಾಡಿ ಕವಿತಾಳನ್ನು ಮುಗಿಸಿದರೆ ಮಾತ್ರ ತನಗೆ ಪ್ರಿಯಕರ ಲಭ್ಯವಾಗುವುದು ಎಂದು ಮಾಲತಿ ರ್ತಸಿದಳು. ಆಗ ಅವಳ ಕಣ್ಣಿಗೆ ಬಿದ್ದದ್ದು ಸಂಜಯ್.

    ಸಾಲಗಾರನಾಗಿದ್ದ ಸಂಜಯ್ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದುದು ಮಾಲತಿಗೆ ಗೊತ್ತಿತ್ತು. ಒಂದು ದಿನ ಅವನನ್ನು ಡಾಬಾವೊಂದಕ್ಕೆ ಕರೆದೊಯ್ದ ಮಾಲತಿ ಅವನಿಗೆ ಚೆನ್ನಾಗಿ ಕುಡಿಸಿ ಏನಾದರೂ ಮಾಡಿ ಕವಿತಾಳನ್ನು ಕೊಂದರೆ ಐದು ಲಕ್ಷ ರೂ.ಗಳನ್ನು ಕೊಡುವುದಾಗಿ ತಿಳಿಸಿದಳು. ಮನೆಯಲ್ಲಿ ತನಗೆ ಆಶ್ರಯ ನೀಡಿ ತನಗೆ ನೌಕರಿ ಕೊಡಿಸಿದ್ದ ಅಕ್ಕನನ್ನು ಕೊಲ್ಲಲಾರೆ ಎಂದ ಸಂಜಯ್. ‘ನಿನಗೆ ಸಾಲಗಾರರು ಕಾಡುವಾಗ ಅಕ್ಕ ನಿನ್ನ ನೆರವಿಗೆ ಬರಲಿಲ್ಲ ಎಂದು ನೆನಪಿಸಿಕೋ’ ಎಂದ ಮಾಲತಿ, ‘ನಾನು ಕೊಡುವ ಹಣದಿಂದ ನಿನ್ನ ಎಲ್ಲ ಸಾಲವೂ ತೀರುತ್ತದೆ, ನೀನು ಆರಾಮಾಗಿ ಇರಬಹುದು’ಎಂದಳು. ಸಂಜಯ್ ಒಲ್ಲದ ಮನಸ್ಸಿನಿಂದಲೇ ಈ ಕೃತ್ಯಕ್ಕೆ ಒಪ್ಪಿಕೊಂಡ. ಕವಿತಾ ತನ್ನ ಮಗನನ್ನು ನೋಡಲು ವಸತಿ ಶಾಲೆಗೆ ಹೋಗಿ ಬರುವ ಸಮಯದಲ್ಲಿ ಅವಳನ್ನು ಕೊಲೆ ಮಾಡಿ ಶವವನ್ನು ಮಾರ್ಗ ಮಧ್ಯದಲ್ಲೆಸೆಯಬೇಕೆಂದು ಮಾಲತಿ ಸೂಚಿಸಿದಳು.

    ಆನಂತರ ಅವಳು ನನ್ನನ್ನು ಕರೆದು ನನ್ನ ಕಾರಿನಲ್ಲಿಯೇ ಕವಿತಾ ಮತ್ತು ಸಂಜಯ್ರನ್ನು ಕರೆದೊಯ್ಯಬೇಕೆಂದು ಸೂಚಿಸಿದಳು. ನಾನು ನಿರಾಕರಿಸಿದಾಗ ನನ್ನ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸುವುದಾಗಿ ಬೆದರಿಸಿದಳು. ನನಗೇನೂ ಆಗದಂತೆ ತಾನು ನೋಡಿಕೊಳ್ಳುವುದಾಗಿ ಆಶ್ವಾಸನೆ ನೀಡಿದಳು. ಮಾಲತಿ ಹೇಳಿಕೊಟ್ಟ ಪ್ಲಾನ್​ನಂತೆ ನಾವು ಇದೇ ತಿಂಗಳ ಮೊದಲ ವಾರ ನನ್ನ ಕಾರಿನಲ್ಲಿ ಕವಿತಾಳನ್ನು ಕರೆದೊಯ್ದೆವು. ಆದರೆ, ಶಾಲೆಯಿಂದ ವಾಪಾಸಾಗುವಾಗ ಕವಿತಾಳ ಮಗನೂ ಜತೆಯಲ್ಲಿ ಬಂದ ಕಾರಣ ಅವಳನ್ನು ಕೊಲೆ ಮಾಡಲಾಗಲಿಲ್ಲ. ಇದರಿಂದ ಮಾಲತಿ ಸಿಟ್ಟಾಗಿ ಇನ್ನೊಂದು ವಾರದಲ್ಲಿ ಹೇಳಿದ ಕೆಲಸವನ್ನು ಮುಗಿಸಲೇಬೇಕೆಂದು ಸೂಚಿಸಿದಳು.

    ಐದು ದಿನಗಳ ಹಿಂದೆ ನನಗೆ ಅಕಸ್ಮಾತ್ತಾಗಿ ಕವಿತಾ ಫೋನ್ ಮಾಡಿ ತಾನು ಆಸ್ಪತ್ರೆಗೆ ಅರ್ಜೆಂಟಾಗಿ ಹೋಗಬೇಕಾಗಿರುವುದರಿಂದ ಅಲ್ಲಿಗೆ ತನ್ನನ್ನು ಕಾರಿನಲ್ಲಿ ಬಿಡಲು ಕೋರಿದಳು. ಅವಳನ್ನು ಕೊಲೆ ಮಾಡಲು ಅದೇ ಸೂಕ್ತ ಸಮಯವೆಂದು ತಿಳಿದ ನಾನು ಸಂಜಯನನ್ನು ಸಂರ್ಪಸಿ ಅವನನ್ನು ನಿರ್ದಿಷ್ಟ ಸ್ಥಳಕ್ಕೆ ಬರಹೇಳಿದೆ. ಕವಿತಾಳನ್ನು ಠಾಣೆಯ ಬಳಿ ಪಿಕ್​ಅಪ್ ಮಾಡಿದ ನಾನು ಆಸ್ಪತ್ರೆಗೆ ಹೋಗದೆ ಸಂಜಯ್ ಕಾಯುತ್ತಿದ್ದ ಜಾಗಕ್ಕೆ ಹೋಗಿ ಅವನನ್ನು ಕಾರಿನಲ್ಲಿ ಹತ್ತಿಸಿಕೊಂಡು ಹೆದ್ದಾರಿಗೆ ಹೋದೆ. ಆಗ ಕವಿತಾ ಪ್ರತಿಭಟಿಸತೊಡಗಿದಾಗ ಸಂಜಯ್ ಅವಳ ಕಣ್ಣಿಗೆ ಪೆಪ್ಪರ್ ಸ್ಪ್ರೇ ಹಾಕಿದ. ಅವಳು ಅವಾಕ್ಕಾದಾಗ ಅವಳು ಧರಿಸಿದ್ದ ವೇಲ್​ನಿಂದಲೇ ಅವಳ ಕುತ್ತಿಗೆಯನ್ನು ಬಿಗಿದು ಕೊಂದ. ಅವಳ ಮೊಬೈಲನ್ನು ಒಡೆದು ಹಾಕಿದ. ನಂತರ ನಾವು ಜಿಲ್ಲಾ ಗಡಿಯ ರಸ್ತೆಯ ಬದಿಯಲ್ಲಿ ಅವಳ ದೇಹವನ್ನೆಸೆದೆವು. ಸಂಜಯ್ ಕಾರಿನಿಂದಿಳಿದು ಎಲ್ಲಿಗೋ ಹೊರಟುಹೋದ. ನಾನು ಒಬ್ಬನೇ ಮನೆಗೆ ವಾಪಸಾದೆ.’

    ಸಂಜಯ್, ರಾಕೇಶ್, ಮತ್ತು ಮೃತ ಕವಿತಾಳ ಸೆಲ್​ಫೋನ್ ಕರೆಗಳ ದಾಖಲೆಗಳನ್ನು ಪರಿಶೀಲಿಸಲಾಗಿ ಕವಿತಾ ಕೊಲೆಯಾದ ಸಂಜೆ ಅವರೆಲ್ಲರೂ ಒಂದೇ ಜಾಗದಲ್ಲಿದ್ದರೆಂದು ತಿಳಿಯಿತು. ಮೃತ ಸಂಜಯ್ನ ಡೆತ್ ನೋಟ್ ಮೇರೆಗೆ ಮಾಲತಿ ಮತ್ತು ರಾಕೇಶ್​ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ. ಆದರೆ, ಈಗಿರುವ ಸಾಕ್ಷ್ಯಗಳು ಆರೋಪಿಗಳ ಮೇಲಿನ ಆರೋಪ ಸಾಬೀತುಪಡಿಸಲು ಸಾಕಾಗುವುದಿಲ್ಲ. ತನಿಖಾಧಿಕಾರಿ ಯಾವ ರೀತಿ ಇಬ್ಬರೂ ಆರೋಪಿಗಳಿಗೆ ಶಿಕ್ಷೆ ಕೊಡಿಸುತ್ತಾರೆ ಎನ್ನುವುದನ್ನು ಕಾದುನೋಡಬೇಕಾಗಿದೆ. ‘ಅಸೂಯೆಯ ಜ್ವಾಲೆಗಳಿಂದ ಸುತ್ತಲ್ಪಟ್ಟವರು ಚೇಳಿನಂತೆ ತಮ್ಮ ವಿಷದ ಮೊನೆಯನ್ನು ತಮ್ಮತ್ತಲೇ ಗುರಿ ಮಾಡಿಕೊಳ್ಳುತ್ತಾರೆ’ ಎಂಬ ಫ್ರೆಂಚ್ ತತ್ವಜ್ಞಾನಿ ಫ್ರೆಡ್ರಿಕ್ ನೀಷೆಯ ಹೇಳಿಕೆ ಮಾಲತಿಯ ಪಾಲಿಗೆ ಸತ್ಯವಾಯಿತು.

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts