More

    ಕಡೆಗೂ ಬಂದಿಯಾದ ಚಾಲಾಕಿ: ಆ ಕ್ಷಣ ಅಂಕಣ..

    ಕಡೆಗೂ ಬಂದಿಯಾದ ಚಾಲಾಕಿ: ಆ ಕ್ಷಣ ಅಂಕಣ..ನೇಪಾಳದಿಂದ ಕೊಲ್ಕತಾಗೆ ಆಗಮಿಸಿದ ಶೋಭರಾಜ್ ಪಂಚತಾರಾ ಹೋಟೆಲ್ ಒಂದರಲ್ಲಿ ತಂಗಿದ್ದ ಇಸ್ರೇಲಿ ಪ್ರವಾಸಿ ಪೊ›. ಜಾಕೋಬ್ ಎನ್ನುವವನ ಗೆಳೆತನ ಬೆಳೆಸಿದ. ಜಾಕೋಬ್​ನ ಕೊಲೆ ಮಾಡಿ ಅವನ ಪಾಸ್​ಪೋರ್ಟನ್ನೇ ಬಳಸಿ ಸಿಂಗಪೂರಕ್ಕೆ ಹೋದ. ಕೆಲ ದಿನಗಳ ತರುವಾಯ ಗೋವಾಕ್ಕೆ ಬಂದ. ಅಲ್ಲಿ ಹಲವಾರು ವಿದೇಶಿ ಪ್ರವಾಸಿಗರಿಗೆ ಮೋಸ ಮಾಡಿ ಮಲೇಷಿಯಾಗೆ ಹೋದ. ಅಲ್ಲಿನ ಆಭರಣಗಳ ಅಂಗಡಿಯೊಂದಕ್ಕೆ ಹೋಗಿ ತಾನೊಬ್ಬ ದೊಡ್ಡ ವ್ಯಾಪಾರಿಯೆಂದು ಬಿಂಬಿಸಿಕೊಂಡ. ಅಜಯನ ಸಹಾಯದಿಂದ ಅಲ್ಲಿ ಐವತ್ತು ಲಕ್ಷ ರೂ. ಬೆಲೆಯ ವಜ್ರಗಳನ್ನು ಕಳ್ಳತನ ಮಾಡಿದ. ಇದಾದ ಕೆಲ ದಿನಗಳಲ್ಲಿ ಅಜಯ್ ನಾಪತ್ತೆಯಾದ. ಅವನನ್ನು ಶೋಭರಾಜ್ ಕೊಲೆ ಮಾಡಿರಬೇಕೆಂಬ ಸಂಶಯವಿರುವುದಾದರೂ ಆತನ ದೇಹ ಇನ್ನೂ ಸಿಕ್ಕಿಲ್ಲ. ಮಲೇಷಿಯದಿಂದ ಶೋಭರಾಜ್ ಮತ್ತು ಮೇರಿ ಸ್ವಿಜರ್ಲೆಂಡ್​ಗೆ ಹೋದರು. ಕಳ್ಳತನ ಮಾಡಿದ್ದ ವಜ್ರಗಳನ್ನು ಜಿನೀವಾದಲ್ಲಿ ಮಾರಿ ಹಲವಾರು ತಿಂಗಳು ಐಷಾರಾಮಿ ಜೀವನ ನಡೆಸಿ 1976ರಲ್ಲಿ ಬ್ಯಾಂಕಾಕಿಗೆ ವಾಪಾಸಾದರು.

    ತಾನು ಬ್ಯಾಂಕಾಕಿನಲ್ಲಿಲ್ಲದಿದ್ದಾಗಲೂ ಶೋಭರಾಜ್ ತನ್ನ ಮನೆಯಲ್ಲಿದ್ದ ಫ್ರೆಂಚ್ ಯುವಕ ಡಾಮಿನಿಕ್​ನನ್ನು ಅಲ್ಲಿಯೇ ವಾಸಿಸಲು ಬಿಟ್ಟಿದ್ದ. ಅವನನ್ನು ನೋಡಲು ಪಕ್ಕದ ಮನೆಯ ನದೀನ್ ಕಾಲಕಾಲಕ್ಕೆ ಬರುತ್ತಿದ್ದಳು. ಒಂದು ದಿನ ಡಾಮಿನಿಕ್ ಆ ಮನೆಯಿಂದ ಪರಾರಿಯಾಗಲು ತನಗೆ ಸಹಾಯ ಮಾಡಲು ಅವಳನ್ನು ಕೋರಿದ. ತನ್ನ ಪಾಸ್​ಪೋರ್ಟನ್ನು ಅಲೈನ್ (ಶೋಭರಾಜ್ ಬ್ಯಾಂಕಾಕಿನಲ್ಲಿಟ್ಟುಕೊಂಡಿದ್ದ ಹೆಸರು) ಇಟ್ಟುಕೊಂಡಿರುವುದರಿಂದ ತನಗೆ ಥೈಲೆಂಡ್ ಬಿಡಲಾಗುತ್ತಿಲ್ಲ ಎಂದ. ‘ನಿನ್ನ ಪಾಸ್​ಪೋರ್ಟನ್ನು ಆತ ತನ್ನ ತಿಜೋರಿಯಲ್ಲೇನಾದರೂ ಇಟ್ಟಿರುವನೇ ಎಂದು ನೋಡುವೆ. ಅವನು ತಿಜೋರಿಯ ಕೀಲಿಕೈ ಎಲ್ಲಿಟ್ಟಿರುತ್ತಾನೆಂದು ನನಗೆ ಗೊತ್ತು’ ಎಂದ ಆಕೆ ಶೋಭರಾಜ್​ನ ತಿಜೋರಿ ತೆಗೆದಳು. ಆಗ ಅವಳಿಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ಕನಿತ್ ಹೌಸಿನಿಂದ ಅಲ್ಲಿಯವರೆಗೆ ನಾಪತ್ತೆಯಾಗಿದ್ದ ಹಲವಾರು ಪ್ರವಾಸಿಗರ ಪಾಸ್​ಪೋರ್ಟ್​ಗಳು ಅಲ್ಲಿದ್ದವು. ಬೆದರಿದ ಆಕೆ ಡಾಮಿನಿಕ್​ನ ಪಾಸ್​ಪೋರ್ಟನ್ನಷ್ಟೇ ತೆಗೆದು ಅದನ್ನವನಿಗೆ ಮರಳಿಸಿ ಅವನು ಸ್ವದೇಶಕ್ಕೆ ವಾಪಾಸಾಗಲು ಸಹಾಯ ಮಾಡಿದಳು. ಥೈಲೆಂಡಿಗೆ ಮರಳಿದ ಕೂಡಲೇ ಡಾಮಿನಿಕ್ ನಾಪತ್ತೆಯಾಗಿರುವುದನ್ನು ಕಂಡ ಶೋಭರಾಜ್ ಕೆಂಡಾಮಂಡಲಗೊಂಡ. ಅವನ ಎಸ್ಕೇಪಿಗಾಗಿ ನದೀನ್​ಳನ್ನೇ ಸಂಶಯಿಸಿದ. ಅಷ್ಟರಲ್ಲಾಗಲೇ ನಾಪತ್ತೆಯಾಗಿದ್ದ ಇತರ ವಿದೇಶಿಯರ ಸಂಬಂಧಿಕರು ಬ್ಯಾಂಕಾಕ್​ಗೆ ಬಂದು ವಿಚಾರಣೆ ನಡೆಸುತ್ತಿರುವ ಮಾಹಿತಿ ಶೋಭರಾಜ್​ಗೆ ಬಂದಿತು. ಆತ ತನ್ನ ಮುಂದಿನ ನಡೆಯನ್ನು ಯೋಜಿಸತೊಡಗಿದ. ಅದೇ ಸಮಯಕ್ಕೆ ಪೊಲೀಸರು ಅವನ ಮನೆಗೆ ಬಂದರು. ಇದರ ಹಿನ್ನೆಲೆ ಹೀಗಿತ್ತು.

    1975ರ ಅಂತ್ಯಕ್ಕೆ ಬ್ಯಾಂಕಾಕ್​ನಲ್ಲಿನ ನೆದರ್​ಲ್ಯಾಂಡ್ ದೂತಾವಾಸದ ಹರ್ಮನ್ ಎನ್ನುವ ಅಧಿಕಾರಿಗೆ ಆ ದೇಶದ ಯುವ ಜೋಡಿಯೊಂದು ಥೈಲೆಂಡಿನಿಂದ ನಾಪತ್ತೆಯಾಗಿದ್ದು ಅವರ ಬಗ್ಗೆ ವಿಚಾರಿಸಬೇಕೆಂಬ ಕೋರಿಕೆ ಬಂದಿತ್ತು. ಆತ ಸ್ಥಳೀಯ ಪೊಲೀಸರನ್ನು ಸಂರ್ಪಸಿದ. ಅವರಿಂದ ಸಹಕಾರ ದೊರೆಯದಿದ್ದಾಗ ತಾನೇ ತನಿಖೆಯನ್ನಾರಂಭಿಸಿದ. ಕೆಲವು ವಿದೇಶೀಯರ ಸುಟ್ಟ ದೇಹಗಳು ಪೊಲೀಸರಿಗೆ ಸಿಕ್ಕಿವೆ ಎಂದವನಿಗೆ ತಿಳಿಯಿತು. ಆತ 1976ರ ಮಾರ್ಚ್​ನಲ್ಲಿ ಪೊಲೀಸ್ ಶವಾಗಾರಕ್ಕೆ ಭೇಟಿಯಿತ್ತ. ಯಾವುದಾದರೂ ವಿದೇಶಿ ಗಂಡು ಹೆಣ್ಣಿನ ಜೋಡಿ ದೇಹಗಳು ಅಲ್ಲಿವೆಯೇ ಎಂದು ವಿಚಾರಿಸಿದ. ಹೌದೆಂದ ಅಧಿಕಾರಿಗಳು ಆ ದೇಹಗಳು ಆಸ್ಟ್ರೇಲಿಯಾದಿಂದ ಬಂದಿದ್ದ ಇಬ್ಬರು ಪ್ರವಾಸಿಗಳದ್ದೆಂದು ತಿಳಿಸಿ ಆ ಶವಗಳನ್ನು ತೋರಿಸಿದರು. ಆದರೆ, ಅವು ಗುರುತು ಸಿಗದಂತೆ ಸುಟ್ಟು ಕರಕಲಾಗಿದ್ದವು. ನಂತರ ಹರ್ಮನ್ ಆಸ್ಟ್ರೇಲಿಯಾ ದೂತಾವಾಸಕ್ಕೆ ಹೋಗಿ ಶವಗಳ ಬಗ್ಗೆ ವಿಚಾರಿಸಿದ. ತಮ್ಮ ದೇಶದ ಪ್ರವಾಸಿ ಜೋಡಿ ಪತ್ತೆಯಾಗಿದ್ದು ಸ್ವದೇಶಕ್ಕೆ ಮರಳಿದರೆಂದೂ ಶವಾಗಾರದಲ್ಲಿರುವ ದೇಹಗಳು ಬೇರೆ ಯಾರದ್ದೋ ಇರಬೇಕೆಂದು ಅವರು ಹೇಳಿದರು. ಆ ದೇಹಗಳು ನೆದರ್​ಲ್ಯಾಂಡಿನ ಬಿಂಟಾನ್ಯ ಮತ್ತು ಹೇಮ್ಕರ್ ಇವರದೇ ಇದ್ದಿರಬಹುದೆಂದು ಹರ್ಮನ್ ರ್ತಸಿದ.

    ಫ್ರೆಂಚ್ ನಾಗರಿಕನಾಗಿದ್ದ ಗೌತಿಯೇ ಎಂಬ ಪ್ರಶಸ್ತ ಹರಳುಗಳ ವ್ಯಾಪಾರಿಯ ಬ್ಯಾಂಕಾಕಿನ ಮನೆಗೆ ವಿದೇಶಿ ಯುವ ಜೋಡಿಗಳು ಬರುತ್ತಿದ್ದವೆಂದು ಹರ್ಮನ್​ನಿಗೆ ತಿಳಿಯಿತು. ಗೌತಿಯೇ ಎದುರು ಮನೆಯಲ್ಲಿ ನದೀನ್ ಎನ್ನುವ ಫ್ರೆಂಚ್ ಮಹಿಳೆಯಿದ್ದು ಆಕೆಗೆ ಈ ಬಗ್ಗೆ ಮಾಹಿತಿಯಿರಬಹುದೆಂದು ರ್ತಸಿ ಹರ್ಮನ್ ಅವಳನ್ನು ಭೇಟಿಯಾದ. ಗೌತಿಯೇ ಮನೆಗೆ ನೆದರ್​ಲ್ಯಾಂಡಿನ ಒಂದು ಯುವ ಜೋಡಿ ಬಂದಿತ್ತು ಎಂದವಳು ಹೇಳಿದಾಗ ಅವಳಿಗಾತ ಬಿಂಟಾನ್ಯ ಮತ್ತು ಹೇಮ್ಕರರ ಫೋಟೋಗಳನ್ನು ತೋರಿಸಿದ. ಆಕೆ ಇಬ್ಬರ ಗುರುತೂ ಹಿಡಿದಳು.

    ಶವಾಗಾರದಲ್ಲಿನ ದೇಹಗಳು ಬಿಂಟಾನ್ಯ ಮತ್ತು ಹೇಮ್ಕರ್ ಇವರದ್ದೇ ಇರಬೇಕೆಂದು ಶಂಕಿಸಿದ ಹರ್ಮನ್ ತನ್ನ ದೇಶದಿಂದ ಅವರಿಬ್ಬರ ಹಲ್ಲುಗಳ ದಾಖಲಾತಿಗಳನ್ನು ತರಿಸಿದ. ಬ್ಯಾಂಕಾಕಿನಲ್ಲಿನ ಡಚ್ ದಂತವೈದ್ಯನೊಬ್ಬನನ್ನು ಸಂರ್ಪಸಿ ಅವನೊಡನೆ ಶವಾಗಾರಕ್ಕೆ ಹೋದ. ಸ್ಥಳೀಯ ಪೊಲೀಸರ ಅನುಮತಿ ಪಡೆದು ಮೃತದೇಹಗಳ ಹಲ್ಲುಗಳ ಪರೀಕ್ಷೆ ಮಾಡಿಸಿದ. ಶವಾಗಾರದಲ್ಲಿದ್ದ ದೇಹಗಳು ಬಿಂಟಾನ್ಯ ಮತ್ತು ಹೇಮ್ಕರ್ ಅವರದ್ದೇ ಎನ್ನುವುದು ಸಾಬೀತಾಯಿತು. ಯುವಜೋಡಿಯ ಕೊಲೆಯನ್ನು ಅಲೈನ್​ನೇ ಮಾಡಿರಬಹುದೆಂದು ಸಂಶಯಿಸಿದ ಹರ್ಮನ್ ಥೈಲೆಂಡಿನ ಪೊಲೀಸರಿಗೆ ಕೊಲೆಯ ಬಗ್ಗೆ ದೂರು ನೀಡಿದ. ಈ ಮೇರೆಗೆ ಪೊಲೀಸರು ಶೋಭರಾಜ್​ನ ಮನೆಗೆ ಬಂದಾಗ ತನ್ನ ಹೆಸರು ಅಲೈನ್ ಅಲ್ಲವೆಂದೂ ತಾನೊಬ್ಬ ಅಮೆರಿಕನ್ ಪ್ರಜೆಯೆಂದೂ ಆತ ತಿಳಿಸಿದ. ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ದಾಗ ಶೋಭರಾಜ್ ಹಿರಿಯ ಪೊಲೀಸ್ ಅಧಿಕಾರಿಯೊಬ್ಬನಿಗೆ ಲಂಚ ಕೊಟ್ಟು ಬಚಾವಾದ. ಮಾರನೆಯ ದಿನವೇ ಮೇರಿ ಮತ್ತು ಅಜಯರೊಡನೆ ಮುಂಬೈಗೆ ಪರಾರಿಯಾದ.

    ಪೊಲೀಸರು ಶೋಭರಾಜ್​ನನ್ನು ಸರಿಯಾಗಿ ವಿಚಾರಣೆ ಮಾಡದೆ ಬಿಟ್ಟಿದ್ದನ್ನು ಕೇಳಿದ ಹರ್ಮನ್​ಗೆ ಆಘಾತವಾಯಿತು. ಆತ ಫ್ರೆಂಚ್ ಮಹಿಳೆ ನದೀನ್​ಳನ್ನು ಮತ್ತೊಮ್ಮೆ ಸಂರ್ಪಸಿದ. ಗೌತಿಯೇ ಮನೆಯಲ್ಲಿ ಆತನ ಕುಕೃತ್ಯಗಳ ಬಗ್ಗೆ ಕುರುಹುಗಳು ಸಿಗಬಹುದೇ ಎಂದು ವಿಚಾರಿಸಿದ. ತಿಜೋರಿಯಲ್ಲಿ ಹಲವಾರು ಪಾಸ್​ಪೋರ್ಟ್ ನೋಡಿದ್ದಾಗಿ ಆಕೆ ತಿಳಿಸಿದಳು. ಹರ್ಮನ್ ಮತ್ತೊಮ್ಮೆ ಬ್ಯಾಂಕಾಕಿನ ಪೊಲೀಸರಿಗೆ ಗಂಟುಬಿದ್ದು ಗೌತಿಯೇ ನಿವಾಸ ಶೋಧಿಸಲು ಒತ್ತಡ ಹೇರಿದ. ಅವನ ಸಮ್ಮುಖದಲ್ಲಿಯೇ ಪೊಲೀಸರು ನಿವಾಸವನ್ನು ಶೋಧಿಸಿ ದರು. ಅಲ್ಲಿದ್ದ ತಿಜೋರಿಯನ್ನು ಒಡೆದರು. ಅದರಲ್ಲಿ ಬಿಂಟಾನ್ಯ ಮತ್ತು ಹೇಮ್ಕರ್ ಇವರದ್ದಲ್ಲದೆ ಕೊಲೆಯಾಗಿದ್ದ ಇನ್ನಿಬ್ಬರು ವಿದೇಶೀಯರ ಪಾಸ್​ಪೋರ್ಟ್ ದೊರೆತವು. ಅಂದಾಜು ಐದು ಕಿಲೋ ಭೇದಿ ಔಷಧಿಗಳು, ಸಿರಿಂಜುಗಳು ಮತ್ತು ಮಾದಕದ್ರವ್ಯಗಳು ದೊರೆತವು. ಆಗ ಪೊಲೀಸರು ಅಲೈನ್ ಅಲಿಯಾಸ್ ಶೋಭರಾಜ್ ವಿರುದ್ಧ ನಾಲ್ಕು ಕೊಲೆ ಪ್ರಕರಣಗಳು ಹಾಗೂ ಒಂದು ಮಾದಕ ವಸ್ತುಗಳ ಪ್ರಕರಣ ದಾಖಲಿಸಿದರು. ಆತ ಪರಾರಿಯಾಗಿದ್ದ ಕಾರಣ ಆತನನ್ನು ಎಲ್ಲಿ ಕಂಡರೂ ಬಂಧಿಸಿ ತಮಗೊಪ್ಪಿಸಬೇಕೆಂದು ಇಂಟರ್​ಪೋಲ್ ಮುಖಾಂತರ ಅಂತಾರಾಷ್ಟ್ರೀಯ ಲುಕ್ ಔಟ್ ನೋಟಿಸ್ ಜಾರಿ ಮಾಡಿದರು. ಇಷ್ಟರಲ್ಲಾಗಲೇ ಮೇರಿಯೊಡನೆ ಮುಂಬೈಗೆ ಬಂದಿಳಿದಿದ್ದ ಶೋಭರಾಜ್ ಅಲ್ಲಿ ಬಾರ್ಬರಾ ಮತ್ತು ಎಲ್ಲೆನ್ ಎನ್ನುವ ಅಮೆರಿಕನ್ ಯುವತಿಯರನ್ನು ತನ್ನ ತಂಡಕ್ಕೆ ಸೇರಿಸಿಕೊಂಡ. ಅವರ ಸಹಕಾರದೊಂದಿಗೆ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಿ ಅವರಿಗೆ ಮತ್ತು ಬರಿಸುವ ಔಷಧಿ ನೀಡಿ ಅವರ ಹಣವನ್ನು ದೋಚುತ್ತಿದ್ದ. ಕೆಲವು ದಿನಗಳ ನಂತರ ಆತ ದೆಹಲಿಗೆ ಬಂದು ಅಲ್ಲಿನ ಪಂಚತಾರಾ ಹೋಟೆಲೊಂದರಲ್ಲಿ ತಂಗಿದ್ದ ಸಾಲೊಮನ್ ಎನ್ನುವ ಫ್ರೆಂಚ್ ನಾಗರಿಕನನ್ನು ಪರಿಚಯ ಮಾಡಿಕೊಂಡು ದೋಚುವ ಉದ್ದೇಶದಿಂದ ಅವನಿಗೆ ಮತ್ತು ಬರಿಸುವ ಔಷಧಿ ನೀಡಿದ. ಔಷಧಿಯ ಓವರ್​ಡೋಸಿನಿಂದಾಗಿ ಸಾಲೊಮನ್ ಕೆಲವೇ ಕ್ಷಣಗಳಲ್ಲಿ ಸತ್ತುಬಿದ್ದ. ಹೆದರಿದ ಶೋಭರಾಜ್ ಅಲ್ಲಿಂದ ಪರಾರಿಯಾದ.

    1976ರ ಜುಲೈ 11ರಂದು ಆತ ತನ್ನ ಸಹಚರರೊಡಗೂಡಿ ದೆಹಲಿಯ ವಿಕ್ರಂ ಹೋಟೆಲ್​ನಲ್ಲಿ ತಂಗಿದ್ದ 60 ಜನರಿದ್ದ ಫ್ರಾನ್ಸ್ ದೇಶದ ವಿದ್ಯಾರ್ಥಿನಿಯರ ಗುಂಪೊಂದನ್ನು ಸಂರ್ಪಸಿದ. ಅವರನ್ನು ದೋಚಲುದ್ದೇಶಿಸಿ ಕೆಲವರಿಗೆ ತಂಪು ಪಾನೀಯದಲ್ಲಿ ಔಷಧಿ ಬೆರೆಸಿಕೊಟ್ಟ. ಅದನ್ನು ಕುಡಿದ ಕೆಲವೇ ಕ್ಷಣಗಳಲ್ಲಿ ಇಬ್ಬರು ವಿದ್ಯಾರ್ಥಿನಿಯರು ಕುಸಿದು ಕೆಳಗೆ ಬಿದ್ದರು. ಇತರರು ಗಾಬರಿಗೊಂಡು ಶೋಭರಾಜ್ ಮತ್ತವನ ಸಹಚರರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಗಾಬರಿಯಾದ ಮೇರಿ ಪೊಲೀಸರ ಮುಂದೆ ಶೋಭರಾಜ್ ಮತ್ತು ತಾನು ವಿದ್ಯಾರ್ಥಿನಿಯರನ್ನು ದೋಚಲುದ್ದೇಶಿಸಿದ್ದೆವು ಎಂದು ಹೇಳಿ ಕೊಲ್ಕತಾ ಹಾಗೂ ದೆಹಲಿಯಲ್ಲಿ ಶೋಭರಾಜ್ ಮಾಡಿದ ಕೊಲೆಗಳ ಬಗ್ಗೆ ಮಾಹಿತಿಯಿತ್ತಳು. ಈ ಎಲ್ಲ ಪ್ರಕರಣಗಳಲ್ಲಿಯೂ ಆರೋಪಪಟ್ಟಿಗಳನ್ನು ಸಲ್ಲಿಸಲಾಯಿತು. ಇಸ್ರೇಲಿ ಪೊ›ಫೆಸರ್ ಕೊಲೆ ಪ್ರಕರಣದಲ್ಲಿ ಬಿಡುಗಡೆಯಾದರೂ ಸಾಲೊಮನ್​ನ ಕೊಲೆಗಾಗಿ ಅವನಿಗೆ 10 ವರ್ಷಗಳ ಜೈಲು ಶಿಕ್ಷೆಯಾಯಿತು. ಮೇರಿಗೂ ಜೈಲು ಶಿಕ್ಷೆಯಾಯಿತು. ಇಬ್ಬರನ್ನೂ ತಿಹಾರ್ ಕಾರಾಗೃಹದಲ್ಲಿಡಲಾಯಿತು.

    ಅಂದಾಜು 200 ಎಕರೆ ವಿಸ್ತೀರ್ಣದಲ್ಲಿದ್ದು, 9 ಕೇಂದ್ರ ಕಾರಾಗೃಹಗಳನ್ನು ಹೊಂದಿದ್ದು 20,000 ಕೈದಿಗಳಿರುವ ದೆಹಲಿಯ ತಿಹಾರ್, ವಿಶ್ವದ ಅತಿ ದೊಡ್ಡ ಜೈಲುಗಳಲ್ಲೊಂದು. ಜೈಲಿಗೆ ಬಂದ ದಿನಗಳಿಂದಲೇ ತಾನು ವಿದೇಶೀ ನಾಗರಿಕನೆಂದೂ, ತನಗೆ ಕಾನೂನುಗಳ ಅರಿವಿದೆಯೆಂದೂ ಹೇಳಿ ತನ್ನೊಡನೆ ಸರಿಯಾಗಿ ವರ್ತಿಸದಿದ್ದಲ್ಲಿ ನ್ಯಾಯಾಲಯಕ್ಕೆ ದೂರುವುದಾಗಿ ಜೈಲು ವಾರ್ಡರ್​ಗಳನ್ನು ಶೋಭರಾಜ್ ಹೆದರಿಸತೊಡಗಿದ. ಜೈಲಿನ ಅಧಿಕಾರಿಗಳು ಕೈದಿಗಳಿಂದ ಲಂಚಕ್ಕೆ ಬೇಡಿಕೆಯಿಡುವ ಸಂಭಾಷಣೆಗಳನ್ನು ತನ್ನ ಪ್ಯಾಂಟಿನೊಳಗೆ ಅಡಗಿಸಿಕೊಂಡಿದ್ದ ಪುಟ್ಟ ಟೇಪ್ ರೆಕಾರ್ಡರ್​ನಲ್ಲಿ ರೆಕಾರ್ಡ್ ಮಾಡಿಕೊಂಡು ಅದನ್ನು ಜಾಹೀರು ಮಾಡುವುದಾಗಿ ಹೇಳುತ್ತಿದ್ದ. ಬೆದರಿದ ಅಧಿಕಾರಿಗಳು ಶೋಭರಾಜ್​ಗೆ ಜೈಲಿನಲ್ಲಿ ಸುಸಜ್ಜಿತ ವಿಶೇಷ ಕೋಣೆ ನೀಡಿದ್ದಲ್ಲದೆ, ಅಲ್ಲಿಯೇ ಅಡುಗೆ ಮಾಡಿಕೊಳ್ಳುವ ವ್ಯವಸ್ಥೆಯನ್ನೂ ಮಾಡಿಕೊಟ್ಟರು. ಅವನ ಸೇವೆ ಮಾಡಲು ಮೂರು ಜನ ಕೈದಿಗಳನ್ನು ನೇಮಿಸಿದರು. ತನ್ನನ್ನು ಕಾಣಲು ಬರುವ ಪ್ರೇಯಸಿಯರೊಂದಿಗೆ ಚಕ್ಕಂದವಾಡಲು ಶೋಭರಾಜನಿಗೆ ಜೈಲಿನ ಅಧಿಕಾರಿಯೊಬ್ಬರ ಕೋಣೆಯನ್ನೇ ಕೊಟ್ಟರು. ಶೋಭರಾಜ್ ಕೊಡುತ್ತಿದ್ದ ಭಾರಿ ಮೊತ್ತದ ಲಂಚ ತಿಂದು ಆತನಿಗೆ ಜೈಲಿನಲ್ಲಿಯೇ ಡ್ರಗ್ ಸರಬರಾಜು ಮಾಡಲು ಅನುಕೂಲ ಮಾಡಿಕೊಟ್ಟರು. ತಿಹಾರಿನ ‘ಅನಭಿಷಿಕ್ತ ರಾಜ’ನೆಂದು ಆತ ಕುಖ್ಯಾತನಾದ. ಇಷ್ಟರಲ್ಲಿ ಜೈಲಿನಲ್ಲಿದ್ದ ಮೇರಿಗೆ ಕ್ಯಾನ್ಸರ್ ಬಂದ ಕಾರಣ ಅವಳನ್ನು ಬಿಡುಗಡೆ ಮಾಡಲಾಯಿತು. ತನ್ನ ದೇಶಕ್ಕೆ ಹೋದ ಕೂಡಲೇ ಆಕೆ ಮರಣ ಹೊಂದಿದಳು. ಇದೇ ಸಮಯಕ್ಕೆ ಥೈಲೆಂಡ್ ಸರ್ಕಾರವು ಶೋಭರಾಜ್​ನನ್ನು ತನ್ನ ದೇಶದ ಕೊಲೆ ಮೊಕದ್ದಮೆಗಳಲ್ಲಿ ವಿಚಾರಣೆಯನ್ನೆದುರಿಸಲು ಹಸ್ತಾಂತರಿಸಲು ಕೋರಿತು. ಈ ಮನವಿಗೆ ನಮ್ಮ ಸರ್ಕಾರ ಒಪ್ಪಲಿಲ್ಲ.

    (ಮುಂದುವರಿಯುವುದು)

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    ತಲೆ ಮೇಲೇ ಆಕ್ಸಿಜನ್ ಸಿಲಿಂಡರ್ ಬಿದ್ದು ಸಾವಿಗೀಡಾದ 9 ವರ್ಷದ ಬಾಲಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts