More

    ಆ ಕ್ಷಣ | ಪತಿಗೆ ಫಜೀತಿ ತರಲು ಹೋಗಿ…

    ಆ ಕ್ಷಣ | ಪತಿಗೆ ಫಜೀತಿ ತರಲು ಹೋಗಿ...2016ರ ಮಧ್ಯಭಾಗದಲ್ಲಿ ಒಂದು ದಿನ ಆಶಾ ಎನ್ನುವವಳು ಜಿಲ್ಲಾ ಕೇಂದ್ರವೊಂದರ ಮಹಿಳಾ ಪೊಲೀಸ್ ಠಾಣೆಗೆ ಹಾಜರಾಗಿ ಈ ರೀತಿ ದೂರು ನೀಡಿದಳು:‘ನನಗೆ ಈಗ 28 ವರ್ಷ. ಬಿ.ಕಾಂ ಪದವೀಧರೆ. ನನ್ನ ತಂದೆ ಸಣ್ಣ ವ್ಯಾಪಾರ ಮಾಡುತ್ತಾರೆ. ಅಪ್ಪ, ಅಮ್ಮನಿಗೆ ನಾವಿಬ್ಬರು ಹೆಣ್ಣು ಮಕ್ಕಳು. ಅಕ್ಕನಿಗೆ ಮದುವೆಯಾಗಿ ಮುಂಬೈನಲ್ಲಿ ಗಂಡನ ಜೊತೆ ಸಂಸಾರ ನಡೆಸುತ್ತಿದ್ದಾಳೆ. ನಾನು ಪದವಿ ನಂತರ ಕಾಲೇಜೊಂದರಲ್ಲಿ ಕಾರಕೂನಳಾಗಿ ನೌಕರಿಗೆ ಸೇರಿದೆ. ನಾಲ್ಕು ವರ್ಷಗಳ ಹಿಂದೆ ನನಗೆ ಸೀತಾರಾಂ ಎನ್ನುವವನ ಜೊತೆ ಮದುವೆಯಾಯಿತು. ಅವನು ನನಗಿಂತ ಏಳು ವರ್ಷ ದೊಡ್ಡವನಾಗಿದ್ದರೂ ಮಾತಾಪಿತರ ಬಲವಂತಕ್ಕೆ ಲಗ್ನವಾದೆ. ಆತ ಸಣ್ಣದಾಗಿ ರಿಯಲ್ ಎಸ್ಟೇಟ್ ಏಜೆಂಟನ ಕೆಲಸ ಮಾಡುತ್ತಿದ್ದ. ಮದುವೆಯಾದ ನಂತರವೂ ನಾನು ಕೆಲಸ ಮುಂದುವರಿಸಿದ್ದೆ.

    ನನ್ನ ಮಾತಾಪಿತರಿಗೆ ಗಂಡು ಸಂತಾನವಿರದ ಕಾರಣ ತಂದೆಯ ಸೂಚನೆಯ ಮೇರೆಗೆ ಸೀತಾರಾಂ ನನ್ನ ತವರುಮನೆಯಲ್ಲಿಯೇ ವಾಸವಾಗಿದ್ದ. ಮದುವೆಯಾದ ವರ್ಷದ ನಂತರ ನನಗೆ ಹೆಣ್ಣು ಮಗು ಜನಿಸಿದಾಗ, ಗಂಡನಿಗೆ ನಾವಿಲ್ಲಿರುವುದು ಬೇಡವೆಂದು ಹೇಳಿ ಬೇರೆ ಕಡೆ ಮನೆ ಮಾಡಲು ಸೂಚಿಸಿದೆ. ಸೀತಾರಾಂ ಬೇರೆ ಬಡಾವಣೆಯಲ್ಲಿ ಮನೆಯನ್ನು ಬಾಡಿಗೆಗೆ ತೆಗೆದುಕೊಂಡ. ನಾವು ಅಲ್ಲಿಯೇ ವಾಸಮಾಡತೊಡಗಿದೆವು. ಕೆಲವು ತಿಂಗಳ ನಂತರ ಆತ ತನಗೆ ವ್ಯವಹಾರದಲ್ಲಿ ನಷ್ಟವಾಗಿರುವ ಕಾರಣ ನನ್ನ ತಂದೆಯಿಂದ ಒಂದು ಲಕ್ಷ ರೂಗಳನ್ನು ಸಾಲವಾಗಿ ತಂದು ಕೊಡಲು ಕೋರಿದ. ‘ನಮ್ಮ ಮದುವೆಯ ಸಂದರ್ಭದಲ್ಲಿ ನಿನಗೆ ಮೂರು ಲಕ್ಷ ರೂ. ನಗದು ಹಣ, ಚಿನ್ನದ ಸರ, ಉಂಗುರ, ಮೋಟರ್ ಸೈಕಲ್ ಕೊಡಿಸಿರುವ ಕಾರಣ ನನ್ನ ತಂದೆಗೆ ಈಗ ಹಣ ಕೊಡಲು ಸಾಧ್ಯವಾಗದು’ಎಂದು ನಾನು ಉತ್ತರಿಸಿದೆ.

    ‘ನಿಮ್ಮಪ್ಪನಿಗೆ ಸಾಕಷ್ಟು ಆಸ್ತಿಯಿರುವುದು ನನಗೆ ತಿಳಿದಿದೆ. ನನಗೆ ವ್ಯಾಪಾರದಲ್ಲಿ ತೊಂದರೆಯಾದ ಕಾರಣ, ಸದ್ಯಕ್ಕೆ ಹಣದ ಅವಶ್ಯಕತೆಯಿದೆ, ನೀನು ಏನಾದರೂ ಮಾಡಿ ಹಣ ತೆಗೆದುಕೊಂಡು ಬಾ’ ಎಂದು ಪೀಡಿಸಿದ. ನಾನು ತಂದೆಯ ಬಳಿ ಹೋಗಿ ಹಣ ಕೇಳಿದಾಗ, ಅವರು ತನ್ನ ಬಳಿ ಹಣವಿಲ್ಲವೆಂದು ಹೇಳಿ ಸುಮಾರು 50 ಸಾವಿರ ರೂ.ಗಳನ್ನು ಕೊಟ್ಟರು. ಅದನ್ನು ಗಂಡನಿಗೆ ತಂದುಕೊಟ್ಟೆ. ಇಷ್ಟರಿಂದ ತೃಪ್ತಿಯಾಗದ ಸೀತಾರಾಂ ನನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲು ಆರಂಭಿಸಿದ. ನಾನು ಮಗಳಿಗಾಗಿ ಎಲ್ಲವನ್ನೂ ಸಹಿಸಿಕೊಂಡು ಬಂದೆ. ಪ್ರತಿದಿನವೂ ಮದ್ಯಪಾನ ಮಾಡಿ ಮನೆಗೆ ಬಂದು ನನಗೆ ಹೊಡೆದು ಹಣ ತರಲು ಪೀಡಿಸುತ್ತಿದ್ದ. ಕೆಲವು ದಿನಗಳ ನಂತರ ಆತ ಮನೆಗೆ ಬರುವುದನ್ನೇ ಬಿಟ್ಟ. ನನಗೆ ಬರುತ್ತಿದ್ದ ಸಂಬಳದಲ್ಲೇ ಸಂಸಾರ ನಿರ್ವಹಿಸತೊಡಗಿದೆ. ಆತ ತನ್ನ ರಿಯಲ್ ಎಸ್ಟೇಟ್ ಕಚೇರಿಯಲ್ಲಿಯೇ ಕೆಲಸ ಮಾಡುತ್ತಿದ್ದ ವೀಣಾ ಎನ್ನುವ ಸ್ಪುರದ್ರೂಪಿ ಯುವತಿಯ ಜತೆಗೆ ಗಂಡ ಸಂಬಂಧ ಬೆಳೆಸಿದ್ದಾನೆ ಎಂದು ತಿಳಿಯಿತು. ವಾರದ ನಂತರ ಮನೆಗೆ ವಾಪಸಾದ ಸೀತಾರಾಂ ತಾನು ತೀವ್ರ ಆರ್ಥಿಕ ತೊಂದರೆಯಲ್ಲಿರುವುದಾಗಿ ತಿಳಿಸಿ ಕೂಡಲೇ ಒಂದು ಲಕ್ಷ ರೂ. ತಂದುಕೊಡಲು ಕೋರಿದ. ‘ನೀನು ಹಣ ತರದಿದ್ದರೆ ನನ್ನ ಮನೆಗೆ ಮರಳಿ ಬರಬೇಡ’ ಎಂದು ಹೆದರಿಸಿದ. ನಾನು ಮತ್ತೊಮ್ಮೆ ತಂದೆಯ ಬಳಿ ಹೋದಾಗ, ಅವರು ಹಣವಿಲ್ಲ ಎಂದು ಕೈಚೆಲ್ಲಿದರು. ಇದನ್ನು ಸೀತಾರಾಂಗೆ ಹೇಳಿದಾಗ ಆತ ಕೆಂಡಾಮಂಡಲನಾಗಿ ಮಗಳ ಎದುರೇ ನನ್ನನ್ನು ಥಳಿಸಿ ಮನೆಯಿಂದ ಹೊರಹೋಗಲು ಹೇಳಿದ. ಆದರೂ ನಾನು ಸಹಿಸಿಕೊಂಡು ಏನೂ ಆಗದಂತೆ ಸಂಸಾರವನ್ನು ಮುಂದುವರಿಸಿದೆ. ಈಗ ಕೆಲವು ದಿನಗಳಿಂದ ಮತ್ತೆ ಆತ ಹಣ ತಂದುಕೊಡಲು ಪೀಡಿಸುತ್ತಿದ್ದಾನೆ. ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲು ಮಾಡಿ ಅವನಿಗೆ ಬುದ್ಧಿ ಕಲಿಸಿ.’

    ಸಾಮಾನ್ಯವಾಗಿ ಇಂತಹ ಪ್ರಕರಣಗಳು ಬಂದಾಗ ಪೊಲೀಸ್ ಅಧಿಕಾರಿಗಳು ಸಂಬಂಧಪಟ್ಟವರನ್ನು ಆಪ್ತಸಮಾಲೋಚನೆಗೆ ಒಳಪಡಿಸಿ ಬುದ್ಧಿವಾದ ಹೇಳಲು ಪ್ರಯತ್ನಿಸುವ ಕಾರಣ ದೂರನ್ನು ಸ್ವೀಕರಿಸಿದ ಮಹಿಳಾ ಪೊಲೀಸ್ ಠಾಣೆಯ ಇನ್​ಸ್ಪೆಕ್ಟರ್ ಮಂಜುಳಾ ಕೂಡಲೇ ಪ್ರಕರಣವನ್ನು ದಾಖಲಿಸದೆ ಸೀತಾರಾಂನನ್ನು ಠಾಣೆಗೆ ಕರೆಸಿದರು.

    ಆತನ ವಿರುದ್ಧ ಬಂದ ದೂರನ್ನು ಸೀತಾರಾಂಗೆ ಓದಿ ಹೇಳಿದಾಗ ಆತ ತನ್ನ ಪತ್ನಿಯ ಎದುರೇ ಆ ದೂರನ್ನು ಸಾರಾಸಗಟಾಗಿ ಅಲ್ಲಗಳೆದು, ‘ಮದುವೆಯ ಸಮಯದಲ್ಲಿ ಮಾವನಿಂದ ಕೆಲವು ಚಿನ್ನದ ಆಭರಣಗಳು ಹಾಗೂ ಬಟ್ಟೆಬರೆ ತೆಗೆದುಕೊಂಡಿದ್ದು ನಿಜ, ಆಗಲೂ ಒಂದು ಪೈಸೆ ವರದಕ್ಷಿಣೆ ತೆಗೆದುಕೊಂಡಿಲ್ಲ, ಈಗಲೂ ಕೇಳುತ್ತಿಲ್ಲ. ನನ್ನ ರಿಯಲ್ ಎಸ್ಟೇಟ್ ಉದ್ಯಮ ಉತ್ತಮವಾಗಿ ಬೆಳೆಯುತ್ತಿದೆ. ನನಗೇನೂ ಹಣದ ತೊಂದರೆಯಿಲ್ಲ, ಮೇಲಾಗಿ ಮಾವನ ಹಣದ ಅವಶ್ಯಕತೆ ನನಗಿಲ್ಲ’ ಎಂದ.

    ಆಶ್ಚರ್ಯಗೊಂಡ ಇನ್​ಸ್ಪೆಕ್ಟರ್ ಆಶಾಳನ್ನು ವಿಚಾರಿಸಿದಾಗ ಆಕೆ ಸೀತಾರಾಂ ಸುಳ್ಳನ್ನು ಹೇಳುತ್ತಿದ್ದಾನೆ ಎಂದು ಹೇಳಿ ಆತನ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲು ಮಾಡಲೇಬೇಕೆಂದು ಒತ್ತಾಯಿಸಿದಳು. ಠಾಣೆಯಲ್ಲಿಯೇ ಗಂಡ ಹೆಂಡಿರ ಮಧ್ಯೆ ವಾದವಿವಾದಗಳಾದವು. ಕಡೆಗೆ ಆಶಾ ತನಗೆ ಹತ್ತು ಲಕ್ಷರೂಗಳನ್ನು ಪರಿಹಾರವಾಗಿ ಕೊಡಿಸಿ ಸೀತಾರಾಂನಿಂದ ವಿಚ್ಛೇದನ ಕೊಡಿಸಬೇಕೆಂದು ಪೊಲೀಸ್ ಅಧಿಕಾರಿಗಳನ್ನು ಕೋರಿದಳು. ಪೊಲೀಸರು ಇಬ್ಬರನ್ನೂ ಸಮಾಧಾನ ಪಡಿಸಿ ಮನೆಗೆ ಕಳುಹಿಸಿದರು. ಯಾವುದೇ ಪ್ರಕರಣ ದಾಖಲಿಸಲಿಲ್ಲ. ಕೆಲವೇ ಗಂಟೆಗಳ ಬಳಿಕ ಠಾಣೆಗೆ ವಾಪಸಾದ ಸೀತಾರಾಂ, ಆಶಾ ತನ್ನ ಕಾಲೇಜಿನ ಲೆಕ್ಚರರ್ ಒಬ್ಬನ ಜತೆ ಸಂಬಂಧ ಬೆಳೆಸಿದ್ದು ತಾನು ಅವಳನ್ನು ತರಾಟೆಗೆ ತೆಗೆದುಕೊಂಡ ಕಾರಣ ಸುಳ್ಳು ದೂರನ್ನು ದಾಖಲಿಸಲು ಬಂದಿದ್ದಾಳೆಂದು ತಿಳಿಸಿ ಆಕೆ ತನ್ನೊಡನೆ ಸರಿಯಾಗಿ ಜೀವನ ಮಾಡಿಕೊಂಡರೆ ಅವಳನ್ನು ಕ್ಷಮಿಸುವುದಾಗಿ ತಿಳಿಸಿದ. ಸುಮಾರು ಒಂದು ತಿಂಗಳ ನಂತರ ಆಶಾ ಮಹಿಳಾ ಸಂಘಟನೆಯೊಂದರ ಕೆಲವು ಕಾರ್ಯಕರ್ತೆಯರೊಂದಿಗೆ ಅದೇ ಪೊಲಿಸ್ ಠಾಣೆಗೆ ಆಗಮಿಸಿದಳು. ಆಶಾ ಸಂಜ್ಞೇಯ ಅಪರಾಧದ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲದ ಕಾರಣ ಕೂಡಲೇ ದೂರನ್ನು ದಾಖಲಿಸಿ ಸೀತಾರಾಂನನ್ನು ಬಂಧಿಸಿ ಜೈಲಿಗೆ ಕಳಿಸದಿದ್ದಲ್ಲಿ ತಾವು ಠಾಣೆಯ ಎದುರು ಧರಣಿ ಸತ್ಯಾಗ್ರಹ ಮಾಡುವುದಾಗಿ ಸಂಘಟನೆಯ ಅಧ್ಯಕ್ಷೆಯು ಪೊಲೀಸ್ ಇನ್​ಸ್ಪೆಕ್ಟರ್ ಮಂಜುಳಾಗೆ ಬೆದರಿಸಿದಳು. ‘ನೀವು ದೂರನ್ನು ದಾಖಲಿಸದ ಕಾರಣದಿಂದಲೇ ಸೀತಾರಾಂ ಆಶಾಳ ಮೇಲೆ ಇನ್ನೂ ಹೆಚ್ಚಿನ ಕಿರುಕುಳ ನೀಡುತ್ತಿದ್ದಾನೆ’ ಎಂದು ಆಪಾದಿಸಿದಳು.

    ಈ ಒತ್ತಡಕ್ಕೆ ಮಣಿದ ಮಂಜುಳಾ ಸೀತಾರಾಂ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದರು. ಅವನನ್ನು ವಿಚಾರಣೆಗಾಗಿ ಠಾಣೆಗೆ ಕರೆಸಿದಾಗ ತಾನು ಆಶಾಳಿಗೆ ಯಾವುದೇ ರೀತಿಯ ಮಾನಸಿಕ ಇಲ್ಲವೇ ದೈಹಿಕ ಕಿರುಕುಳ ನೀಡಿಲ್ಲವೆಂದು ತಿಳಿಸಿ ತನ್ನ ಪುಟ್ಟ ಮಗಳನ್ನಲ್ಲದೇ ಆಶಾಳ ತಂದೆ ತಾಯಿ ಮತ್ತು ಬಂಧುಬಳಗದವರನ್ನೂ ಈ ಬಗ್ಗೆ ವಿಚಾರಿಸಲು ಕೋರಿದ. ತನಿಖೆಯಲ್ಲಿ ಆಶಾಳ ದೂರಿನಲ್ಲಿ ಹುರುಳಿಲ್ಲ ಎಂದು ತಿಳಿದ ನಂತರ ಅದನ್ನು ಸುಳ್ಳು ದೂರೆಂದು ಪರಿಗಣಿಸಿ ಕೇಸನ್ನು ಮುಕ್ತಾಯ ಮಾಡಲಾಯಿತು.

    ಎರಡು ತಿಂಗಳ ನಂತರ ಆಶಾ ಆ ಊರಿನ ಸೈಬರ್ ಪೊಲೀಸ್ ಠಾಣೆಗೆ ಹೋಗಿ, ‘ನನ್ನ ಗಂಡ ನನ್ನ ಕೆಲವು ಬೆತ್ತಲೆ ಚಿತ್ರಗಳನ್ನು ಮತ್ತು ನಮ್ಮಿಬ್ಬರ ಖಾಸಗಿ ಕ್ಷಣಗಳಿರುವ ವಿಡಿಯೋಗಳನ್ನು ತನ್ನ ಫೋನ್ ಕ್ಯಾಮರಾದಲ್ಲಿ ಸೆರೆಹಿಡಿದು ಅವನ್ನು ವಾಟ್ಸಾಪ್ ಮೂಲಕ ತನ್ನ ಕೆಲವು ಸ್ನೇಹಿತರಿಗೆ ಕಳುಹಿಸಿದ್ದಾನೆ, ತನಗೆ ಹಣ ಕೊಡದೆ ಹೋದರೆ ಆ ಚಿತ್ರಗಳನ್ನು ಯೂಟ್ಯೂಬ್​ನಲ್ಲಿ ಹಾಕಿ ಜಗಜ್ಜಾಹೀರು ಮಾಡುವುದಾಗಿ ಬೆದರಿಸುತ್ತಿದ್ದಾನೆ’ ಎಂದು ದೂರಿತ್ತಳು. ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ದೂರನ್ನು ದಾಖಲಿಸಿದ ಪೊಲೀಸರು ಸೀತಾರಾಂನ ಮನೆಗೆ ಹೋಗಿ ಅವನ ಮೊಬೈಲ್ ಫೋನ್ ಮತ್ತು ಲ್ಯಾಪ್​ಟಾಪ್ ವಶಪಡಿಸಿಕೊಂಡರು. ಅವನ ಫೋನಿನಲ್ಲಿ ಆಶಾಳ ಒಂದು ನಗ್ನಚಿತ್ರವಿದ್ದು, ಅದನ್ನು ಆ ಫೋನಿನಿಂದ ಇನ್ನೊಬ್ಬರಿಗೆ ಕಳುಹಿಸಿದ್ದು ದಾಖಲಾಗಿತ್ತು. ಆಶಾಳ ನಗ್ನಫೋಟೋವನ್ನು ತಾನು ತೆಗೆದೇ ಇಲ್ಲವೆಂದೂ ಮತ್ತು ಯಾರಿಗೂ ಕಳುಹಿಸಿಲ್ಲವೆಂದೂ ಸೀತಾರಾಂ ಸಾಧಿಸಿ, ಆ ಫೋಟೋ ಯಾರಿಗೆ ಹೋಗಿದೆಯೋ ಅವರನ್ನೇ ಕರೆದು ವಿಚಾರಿಸಿ ಎಂದ. ಆ ಫೋನಿನಿಂದ ಫೋಟೋ ಹೋಗಿದ್ದ ಟೆಲಿಫೋನ್ ನಂಬರನ್ನು ಪರಿಶೀಲಿಸಿದಾಗ ಅದು ಆಶಾಳದ್ದೇ ಎಂದು ತಿಳಿದು ತನಿಖಾಧಿಕಾರಿಗೆ ಆಶ್ಚರ್ಯವಾಯಿತು. ಆಶಾ ಗಂಡನ ಫೋನ್​ನಲ್ಲಿ ತನ್ನದೇ ಬೆತ್ತಲೆ ಚಿತ್ರವನ್ನು ಸೆರೆಹಿಡಿದು ಅದನ್ನು ತನ್ನ ಫೋನಿಗೇ ವಾಟ್ಸಾಪ್ ಮೂಲಕ ಕಳುಹಿಸಿಕೊಂಡು ತನ್ನ ಫೋನಿನ ಮೂಲಕ ಗಂಡನ ಸ್ನೇಹಿತನೊಬ್ಬನಿಗೆ ಕಳಿಸಿದ್ದು ತಿಳಿಯಿತು.

    ತಾನು ಪ್ರೀತಿಸುತ್ತಿದ್ದವನನ್ನು ಲಗ್ನವಾಗಬೇಕೆಂಬ ಉದ್ದೇಶದಿಂದ ಆಶಾ ಸೀತಾರಾಂನಿಂದ ವಿಚ್ಛೇದನ ಪಡೆದು ಅವನಿಂದ ಪರಿಹಾರರೂಪವಾಗಿ ಲಕ್ಷಗಟ್ಟಲೆ ಹಣ ಪಡೆಯಬೇಕೆಂದು ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾಗಿ ತಿಳಿದುಬಂದಾಗ ಅವಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಸುಳ್ಳು ಪ್ರಕರಣ ದಾಖಲಿಸಿ ಸೀತಾರಾಂಗೆ ಕಿರುಕುಳ ನೀಡಿದ್ದಕ್ಕಾಗಿ ನ್ಯಾಯಾಧೀಶರು ಅವಳಿಗೆ ಎರಡು ವರ್ಷ ಜೈಲುಶಿಕ್ಷೆ ವಿಧಿಸಿದರು.

    ‘ಹೆಂಡತಿಯ ಕೈತವವ ಗಂಡ ತಾ ಬಲ್ಲನೇ ಗುಂಡಿ ನೀರೊಳಗೆ ಮೀನುಗಳ ಹೆಜ್ಜೆಯನು ಕಂಡವರುಂಟೆ ಸರ್ವಜ್ಞ’ ಎಂಬ ವಚನವನ್ನು ಆಶಾ ದೃಢೀಕರಿಸಿದಳು.

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts