ನದಿಯಲ್ಲಿ ಮುಳುಗಿ ಬಾಲಕ ಮೃತ್ಯು

ವಿಜಯವಾಣಿ ಸುದ್ದಿಜಾಲ ಬಂಟ್ವಾಳ/ಉಳ್ಳಾಲ
ನೇತ್ರಾವತಿ ನದಿಯಲ್ಲಿ ಕಪ್ಪೆಚಿಪ್ಪು ಹೆಕ್ಕಲು ಗೆಳೆಯರೊಂದಿಗೆ ತೆರಳಿದ ಪುದು ಗ್ರಾಮ ಅಮ್ಮೆಮಾರ್ ನಿವಾಸಿ ಬಶೀರ್ ಎಂಬುವರ ಪುತ್ರ ಅಬ್ದುಲ್ ಸತ್ತಾರ್(13) ಇನೋಳಿ ಬಳಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಮುಷ್ಕರ ಕಾರಣ ಮಂಗಳವಾರ ಶಾಲೆಗೆ ರಜೆಯಿದ್ದ ಹಿನ್ನೆಲೆಯಲ್ಲಿ ಅಬ್ದುಲ್ ಸತ್ತಾರ್ ಐವರು ಸ್ನೇಹಿತರ ಜತೆ ಕಪ್ಪೆಚಿಪ್ಪು ಹೆಕ್ಕಲು ತೆರಳಿದ್ದರು. ದೋಣಿ ಮೂಲಕ ನದಿಯ ಇನ್ನೊಂದು ಬದಿ ಪಾವೂರು ಗ್ರಾಮದ ಇನೋಳಿ ನೇತ್ರಾವತಿ ತಟಕ್ಕೆ ಮಧ್ಯಾಹ್ನ 2 ಗಂಟೆಗೆ ತಲುಪಿದ್ದರು. ಇನೋಳಿ ಜುಮಾ ಮಸೀದಿ ಸಮೀಪ ನದಿಯಲ್ಲಿ ಕಪ್ಪೆಚಿಪ್ಪು ಹೆಕ್ಕುತ್ತಾ ಬಾಲಕರು ಮುಂದೆ ಸಾಗಿದ್ದಾರೆ. ಈ ಸಂದರ್ಭ ಅಬ್ದುಲ್ ಸತ್ತಾರ್ ಆಳವಾದ ಜಾಗದಲ್ಲಿ ಆಯತಪ್ಪಿ ಬಿದ್ದಿದ್ದಾನೆ. ಆ ಪ್ರದೇಶದಲ್ಲಿ ಸುಳಿ ವಿಪರೀತವಾಗಿದ್ದು, ಸುಳಿಗೆ ಸಿಲುಕಿ ನೀರು ಪಾಲಾಗಿದ್ದಾನೆ. ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರು ನಿರಂತರ ಹುಡುಕಾಟ ನಡೆಸಿ ಸಾಯಂಕಾಲ 6 ಗಂಟೆ ವೇಳೆಗೆ ಮೃತದೇಹ ಮೇಲಕ್ಕೆತ್ತಿದ್ದಾರೆ.

ಘಟನಾ ಸ್ಥಳಕ್ಕೆ ಮಂಗಳೂರು ಸಹಾಯಕ ಆಯುಕ್ತ ರವಿಚಂದ್ರ ನಾಯಕ್, ಬಂಟ್ವಾಳ ತಹಸೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು ಮತ್ತಿತರರು ಭೇಟಿ ನೀಡಿದರು.