ಮದುವೆಯಾಗಿ ಎರಡು ದಿನಗಳಿಲ್ಲ… ಹರಕೆ ತೀರಿಸುವ ನೆಪದಲ್ಲಿ ಓಡಿ ಹೋದಳು ಪತ್ನಿ: ಪರಿತಪಿಸುತ್ತಿರುವ ಪತಿ!

ಜಿಂದ್​: ಆತ ಮದುವೆಯಾಗಿ ಸುಂದರ ಬದುಕು ಕಟ್ಟಿಕೊಳ್ಳುವ ಕನಸಿನಲ್ಲಿದ್ದ. ತನ್ನವರೆಂದು ಹೇಳಿಕೊಳ್ಳಲು ಯಾರೂ ಇಲ್ಲದ್ದರಿಂದ ಪತ್ನಿಯೇ ಸರ್ವಸ್ವ ಎಂದು ಭಾವಿಸಿದ್ದ. ಮದುವೆಯೂ ಆಗಿತ್ತು. ಆದರೆ, ಮದುವೆಯಾಗಿ ಎರಡು ದಿನ ಕಳೆಯುವಷ್ಟರಲ್ಲೇ ಆತನ ಪತ್ನಿ ಆತನನ್ನು ತೊರೆದು ಓಡಿ ಹೋಗಿದ್ದಾಳೆ!

ಇದು ಹರಿಯಾಣದ ಜಿಂದ್​ ನಿವಾಸಿಯೊಬ್ಬನ ಕಥೆ. ಸುಂದರ ಬದುಕಿನ ಕನಸಿನಲ್ಲಿದ್ದ ಈತ ಮಧ್ಯವರ್ತಿಯೊಬ್ಬರ ಮೂಲಕ ಕನ್ಯೆಯನ್ನು ನೋಡಿದ. ಬಳಿಕ ಆಕೆಯ ಬೇಡಿಕೆಯಂತೆ 70 ಸಾವಿರ ರೂಪಾಯಿ ವಧುದಕ್ಷಿಣೆಯನ್ನೂ ಕೊಟ್ಟಿದ್ದ. ನಿಗದಿಯಂತೆ ಮದುವೆಯೇನೋ ಆಯಿತು. ಆದರೆ, ಎರಡೇ ದಿನದಲ್ಲಿ ಆಕೆ ಪರಾರಿಯಾಗಿದ್ದಾಳೆ!

ತನ್ನ ಮದುವೆಯಾದರೆ ಲೂಧಿಯಾನದ ದೇಗುಲದಲ್ಲಿ ಜಾಗರಣೆ ಮಾಡುವುದಾಗಿ ಹರಕೆ ಹೊತ್ತಿದ್ದೆ. ಅದನ್ನು ತೀರಿಸಬೇಕಿದೆ ಎಂದು ಹೇಳಿದಳು. ಅದರಂತೆ ಲೂಧಿಯಾನಕ್ಕೆ ತೆರಳಲು ಆಕೆಯೊಂದಿಗೆ ನಾನು ರೈಲ್ವೆ ನಿಲ್ದಾಣಕ್ಕೆ ಬಂದೆ. ಆದರೆ, ಆಕೆ ದಿಢೀರನೆ ನಾಪತ್ತೆಯಾದಳು. ಎಷ್ಟೇ ಹುಡುಕಿದರೂ ಆಕೆ ಸಿಗಲಿಲ್ಲ ಎಂದು ಪತಿ ಅಲವತ್ತುಕೊಂಡಿದ್ದಾನೆ. ಇತ್ತ ಕಷ್ಟಪಟ್ಟು ದುಡಿದು ಕೂಡಿಟ್ಟಿದ್ದ 70 ಸಾವಿರ ರೂಪಾಯಿಯೂ ಇಲ್ಲ, ಅತ್ತ ಪತ್ನಿಯೂ ಎಲ್ಲ ಎಂಬ ನೋವಿನಲ್ಲಿ ಆತ ಈ ಬಗ್ಗೆ ಜಿಂದ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *