ರಾತ್ರಿ ಕನಸು ಬೆಳಗ್ಗೆ ಏಳುವಷ್ಟರಲ್ಲಿ ನಿಜವಾಗಿತ್ತು…ರೈಲು ಜೋರಾಗಿ ಓಡುತ್ತಿತ್ತು…ಈಕೆಯ ಎಂಗೇಜ್​ಮೆಂಟ್ ರಿಂಗ್​ ಕಳೆದೇ ಹೋಗಿತ್ತು..! ಅಪರೂಪದ ವಿಲಕ್ಷಣ ಸ್ಟೋರಿ ಇದು..

ಕ್ಯಾಲಿಫೋರ್ನಿಯಾ: ಸಾನ್​ ಡಿಯಾಗೋದಲ್ಲೊಂದು ವಿಲಕ್ಷಣ ಘಟನೆ ನಡೆದಿದೆ. ಇಲ್ಲೊಬ್ಬಳು ರಾತ್ರಿ ಮಲಗುವಾಗ ತನ್ನ ಕೈ ಬೆರಳಲ್ಲಿದ್ದ ನಿಶ್ಚಿತಾರ್ಥದ ಉಂಗುರವನ್ನು ಬೆಳಗ್ಗೆಯಷ್ಟರಲ್ಲಿ ಕಳೆದುಕೊಂಡಿದ್ದಾಳೆ. ಇದರಲ್ಲೇನು ವಿಚಿತ್ರ ಎನ್ನಬೇಡಿ…ಈ ಸ್ಟೋರಿ ಓದಿ…

ತನಗಾದ ವಿಚಿತ್ರ ಅನುಭವವನ್ನು, ತನ್ನ ಉಂಗುರ ಬೆಳಗಾಗುವಷ್ಟರಲ್ಲಿ ಎಲ್ಲಿ ಹೋಯಿತು ಎಂಬುದನ್ನು ತನ್ನ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾಳೆ. ಆ ಪೋಸ್ಟ್​ ಈಗಾಗಲೇ 60,000ಗಳಷ್ಟು ಶೇರ್​ ಆಗಿದ್ದು, ಇನ್ನೂ ಶೇರ್​ ಆಗುತ್ತಲೇ ಇದೆ. ಹಾಗೇ 30,000ಗಳಷ್ಟು ಕಾಮೆಂಟ್​ಗಳೂ ಬಂದಿವೆ.

ಜೆನ್ನಾ ಈವನ್ಸ್​ ಎಂಬ ಯುವತಿ ಪೋಸ್ಟ್​ ಮಾಡಿದ್ದು ಹೀಗೆ. ‘ರಾತ್ರಿ ಮಲಗುವಾಗ ನನ್ನ ನಿಶ್ಚಿತಾರ್ಥದ ಉಂಗುರ ನನ್ನ ಬೆರಳಲ್ಲಿತ್ತು. ಆದರೆ ನಿದ್ರೆ ಮಾಡುತ್ತಿದ್ದ ನನಗೆ, ನಾನು ನನ್ನ ಉಂಗುರವನ್ನು ತಿಂದಂತೆ ಕನಸು ಬಿತ್ತು. ಆ ಕ್ಷಣಕ್ಕೆ ಅರೆಬರೆ ಎಚ್ಚರವಾದರೂ ಇದು ನನ್ನ ಕನಸು ಎಂದು ಸುಮ್ಮನಾದೆ. ಹಾಗೇ ಮತ್ತೆ ಮಲಗಿ ನಿದ್ರಿಸಿಬಿಟ್ಟೆ. ಆದರೆ ಮರುದಿನ ಬೆಳಗ್ಗೆ ಎದ್ದು ನೋಡಿದಾಗ ನಿಜಕ್ಕೂ ನನ್ನ ಬೆರಳಲ್ಲಿ ಉಂಗುರ ಇರಲಿಲ್ಲ. ಬಳಿಕ ವಿಷಯವನ್ನು ಕೂಡಲೇ ನನ್ನ ಪ್ರಿಯತಮ ಬಾಬ್​ ಹಾವೆಲ್​ಗೆ ತಿಳಿಸಿದೆ’ ಎಂದು ಬರೆದುಕೊಂಡಿದ್ದಾರೆ. ಹಾಗೇ ಆಕೆಯ ಹೊಟ್ಟೆಯೊಳಗೆ ಉಂಗುರ ಇರುವುದು ಎಕ್ಸ್​-ರೇ ಇಮೇಜ್​ನಿಂದ ದೃಢಪಟ್ಟಿದ್ದು ಆ ಫೋಟೋಗಳನ್ನು ಫೇಸ್​ಬುಕ್​ನಲ್ಲಿ ಹಾಕಿಕೊಂಡಿದ್ದಾರೆ.

ಅಂತೂ ನನಗೆ ನನ್ನ ಉಂಗುರ ಮರಳಿ ಸಿಕ್ಕಿದೆ. ಇನ್ಯಾವತ್ತೂ ಮತ್ತೆ ಉಂಗುರ ತಿನ್ನುವುದಿಲ್ಲ ಎಂದು ನನ್ನ ಪ್ರಿಯತಮನಿಗೆ ಪ್ರಾಮಿಸ್​ ಮಾಡಿದ್ದೇನೆ. ನಾವು ಶೀಘ್ರವೇ ಮದುವೆಯಾಗಲಿದ್ದೇವೆ ಎಂದು ಜೆನ್ನಾ ಈವನ್ಸ್​ ಹೇಳಿದ್ದಾರೆ.

ತನಗೇನು ಕನಸು ಬಿತ್ತು, ತಾನು ಯಾಕೆ ಆ ಉಂಗುರ ತಿಂದೆ ಎಂಬ ಬಗ್ಗೆಯೂ ಜೆನ್ನಾ ಬರೆದಿದ್ದಾರೆ. ‘ನಾನು ಮತ್ತು ಬಾಬಿ (ಆಕೆಯ ಪ್ರಿಯತಮ) ಒಂದು ರೈಲಿನಲ್ಲಿ ಹೋಗುತ್ತಿದ್ದೆವು. ಆ ರೈಲು ತುಂಬ ಜೋರಾಗಿ ಓಡುತ್ತಿತ್ತು. ಹಾಗೇ ಅದರಲ್ಲಿ ಕೆಲವು ದರೋಡೆಕೋರರಂತೆ ಕಾಣುವ ಜನರೂ ಇದ್ದರು. ಅವರನ್ನು ನೋಡಿದ ಬಾಬಿ ನನ್ನ ಬಳಿ, ನೀನು ಆ ಉಂಗುರವನ್ನು ನುಂಗಿಬಿಡು, ಇಲ್ಲದಿದ್ದರೆ ಅವರು ಅದನ್ನು ಕಸಿದುಕೊಳ್ಳುತ್ತಾರೆ ಎಂದು ಹೇಳಿದ. ನಾನು ಏನೂ ಯೋಚನೆ ಮಾಡದೆ ಆ ಉಂಗುರವನ್ನು ಕೈಯಿಂದ ತೆಗೆದು ಬಾಯಿಯಲ್ಲಿ ಇಟ್ಟೆ. ಹಾಗೇ ಒಂದು ಲೋಟ ನೀರಿನೊಂದಿಗೆ ಅದನ್ನು ನುಂಗಿದೆ. ಅಷ್ಟರಲ್ಲೇ ನನಗೆ ಎಚ್ಚರವಾಯಿತು. ಆದರೆ ಆ ಕ್ಷಣಕ್ಕೆ ನಾನು ಮಾಡಿದ ಎಡವಟ್ಟು ನನಗೆ ಅರ್ಥವಾಗಲಿಲ್ಲ. ಯಾರಾದರೂ ಉಂಗುರವನ್ನು ತಿನ್ನುತ್ತಾರಾ? ಎಂದು ನನ್ನಷ್ಟಕ್ಕೇ ಅಂದುಕೊಂಡು ಮಲಗಿದೆ ಎಂದು ತಮ್ಮ ಕನಸನ್ನೂ ವಿಸ್ತಾರವಾಗಿ ಬರೆದುಕೊಂಡಿದ್ದಾರೆ.

ಅಲ್ಲದೆ ಆಸ್ಪತ್ರೆಗೆ ಹೋಗಿ ವೈದ್ಯರು, ನರ್ಸ್​ ಬಳಿ ನಾನು ರಿಂಗ್​ ನುಂಗಿದ್ದಾಗಿ ತಿಳಿಸಿದೆ. ಆಗಲೇ ನಾನು ನರ್ವಸ್​ ಆಗಿದ್ದೆ. ಇದೇನೂ ದೊಡ್ಡ ವಿಷಯವಲ್ಲ, ಚಿಂತೆ ಮಾಡಬೇಡಿ ಎಂದು ಅವರು ನನಗೆ ಧೈರ್ಯ ತುಂಬಿದರು. ಆದರೂ ಒಂದೊಮ್ಮೆ ನೀವು ಮೃತಪಟ್ಟರೆ ನಾವು ಹೊಣೆಯಲ್ಲ ಎಂದು ಸಹಿ ಮಾಡಿಕೊಡಿ ಎಂದು ಫಾರ್ಮ್​ ಕೊಟ್ಟರು. ಆಗ ಅಳಲು ಪ್ರಾರಂಭಿಸಿದೆ. ಯಾಕೆಂದರೆ ನಾನು ನನ್ನ ಎಂಗೇಜ್​ಮೆಂಟ್​ ರಿಂಗ್​ಗಾಗಿ ಬಹಳ ದಿನಗಳಿಂದ ಕಾದಿದ್ದೆ. ಅಲ್ಲದೆ ಬಾಬಿಯನ್ನು ಮದುವೆಯಾಗುವ ಕನಸು ನುಚ್ಚುನೂರು ಆಗಿಹೋಯಿತಲ್ಲ ಎಂದು ಅತ್ತೆ ಎಂದಿದ್ದಾರೆ.

ಬಳಿಕ ವೈದ್ಯರು ನನಗೆ ಮತ್ತು ಬರುವ ಔಷಧಿ ನೀಡಿ ನನ್ನ ಕರುಳಲ್ಲಿ ಇದ್ದ ಉಂಗುರವನ್ನು ತೆಗೆದು ಬಾಬಿಗೆ ನೀಡಿದರು. ಆತ ನನಗೆ ಮರಳಿಸಿದ. ಈಗ ಎಲ್ಲವೂ ಸರಿಯಾಗಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *