ಬೆಂಗಳೂರು: ರಸ್ತೆಬದಿಯ ವಿದ್ಯುತ್ ಕಂಬದಲ್ಲಿ ತಂತಿ ತುಂಡಾಗಿ ಬಿದ್ದ ಪರಿಣಾಮ ಮಹಿಳೆ ಸ್ಥಳದಲ್ಲೇ ಹೊತ್ತಿ ಉರಿದು ಸಾವನ್ನಪ್ಪಿದ್ದಾರೆ. ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಅನಾಹುತಕ್ಕೆ ಕಾರಣವೆಂದು ಗ್ರಾಮಸ್ಥರು ಮತ್ತು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂ. ದಕ್ಷಿಣ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ಮಂಜಮ್ಮ (50) ಮೃತ ಮಹಿಳೆ. ಮತ್ತೊಬ್ಬ ಮಹಿಳೆಗೂ ವಿದ್ಯುತ್ ಪ್ರವಹಿಸಿದ್ದು, ಸ್ಥಳೀಯರ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಿಕ್ಕನಹಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ 10 ಗಂಟೆಗೆ ಮಂಜಮ್ಮ ಸೇರಿ ಮೂವರು ಮಹಿಳೆಯರು ಮನೆ ಮುಂದೆ ನಿಂತು ಮಾತನಾಡುತ್ತಿದ್ದರು. ಏಕಾಏಕಿ ವಿದ್ಯುತ್ ತಂತಿ ತುಂಡಾಗಿ ಮಂಜಮ್ಮ ಮೇಲೆ ಬಿದ್ದಿದೆ. ಮತ್ತೊಬ್ಬ ಮಹಿಳೆ ಭಯದಲ್ಲಿ ಓಡಿಹೋಗಿದ್ದರು. ಮತ್ತೊಬ್ಬ ಮಹಿಳೆ ಮಂಜಮ್ಮನನ್ನು ಕಾಪಾಡಲು ಹಿಡಿದು ಎಳೆಯಲು ಮುಂದಾದಾಗ ವಿದ್ಯುತ್ ಪ್ರವಹಿಸಿದೆ. ಚೀರಾಟ ಕೇಳಿಸಿಕೊಂಡ ವ್ಯಕ್ತಿಯೊಬ್ಬ, ಓಡಿ ಬಂದು ಮಂಜಮ್ಮನನ್ನು ಹಿಡಿದ್ದ ಮಹಿಳೆಯನ್ನು ಎಚ್ಚರಿಕೆಯಿಂದ ಎಳೆದುಕೊಂಡು ಪ್ರಾಣ ರಕ್ಷಣೆ ಮಾಡಿದ್ದಾರೆ. ಆದರೆ, ಮಂಜಮ್ಮ ಮೇಲೆ ವಿದ್ಯುತ್ ತಂತಿ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ. ಅಕ್ಕಪಕ್ಕದ ಮನೆಯವರು ರಕ್ಷಣೆ ಮಾಡಲು ಸಾಧ್ಯವಾಗದೆ ಮೂಕಪ್ರೇಕ್ಷಕರಾಗಿದ್ದರು.
ಘಟನೆ ಸಂಬಂಧ ತಾವರೆಕೆರೆ ಠಾಣೆಗೆ ಮಂಜಮ್ಮನ ಮೈದುನ ಶಿವರಾಮ ದೂರು ಸಲ್ಲಿಸಿದ್ದರು. ನಿರ್ಲಕ್ಷ್ಯ ಆರೋಪದ ಮೇಲೆ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಹಿಂದೆ ಕಾಡುಗೋಡಿ ಬಳಿ ವಿದ್ಯುತ್ ತಂತಿ ತುಳಿದು ತಾಯಿ, ಮಗು ಪತಿಯ ಕಣ್ಮುಂದೆಯೇ ಸುಟ್ಟು ಕರಕಲಾಗಿದ್ದರು. ಇದೀಗ ಚಿಕ್ಕನಹಳ್ಳಿ ಗ್ರಾಮದಲ್ಲಿ ಅನಾಹುತ ಸಂಭವಿಸಿದೆ.