ಗುಡಿಸಲಲ್ಲಿ ವಾಸ್ತವ್ಯವಿದ್ದ ಮಹಿಳೆಗೆ ಸುಸಜ್ಜಿತ ಮನೆ

|ಯಶೋಧರ ವಿ.ಬಂಗೇರ ಮೂಡುಬಿದಿರೆ
ಕಡಂದಲೆ ಬಳಿ ಗುಡಿಸಲು ಮನೆಯಲ್ಲಿ ಶೋಚನೀಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದ ಮಹಿಳೆಗೆ ರೋಶನ್ ಬೆಳ್ಮಣ್ ನೇತೃತ್ವದ ಹ್ಯುಮಾನಿಟಿ ಸಂಸ್ಥೆ ಸುಸಜ್ಜಿತ ಮನೆ ನಿರ್ಮಿಸಿಕೊಡುವ ಮೂಲಕ ಆಸರೆ ಒದಗಿಸಿದೆ.
ಮೂಡುಬಿದಿರೆ ತಾಲೂಕಿನ ಕಡಂದಲೆ ಗ್ರಾಮ ಬೊಳಂತೆ ಎಂಬಲ್ಲಿ ಮಗಳ ಜತೆ ವಾಸವಾಗಿರುವ ರತ್ನಾ ಪುರುಷ ಹಲವು ವರ್ಷಗಳಿಂದ ಗುಡಿಸಲಲ್ಲೇ ಬದುಕು ಸಾಗಿಸುತ್ತಿದ್ದರು. ಬಡತನದಲ್ಲೇ ಜೀವನ ಸಾಗಿಸುತ್ತಿದ್ದ ರತ್ನಾ ಅವರ ಪತಿ ದೂರವಾಗಿ ಬದುಕು ಮತ್ತಷ್ಟು ದುಸ್ತರವಾಗಿತ್ತು. ಸೋಗೆ ಗುಡಿಸಲು ಮನೆಯಲ್ಲಿ ವಾಸವಾಗಿದ್ದ ರತ್ನಾ ಬೀಡಿ ಕಟ್ಟಿ ಮಗಳನ್ನು ಸಾಕುತ್ತಿದ್ದರು. ಮನೆಗೆ ನೀರಿಲ್ಲದೆ ದೂರದ ಹೊಳೆಯಿಂದ ನೀರು ತಂದು ಬದುಕುವ ಅನಿವಾರ್ಯತೆ. ಬಡತನದಿಂದ ಆಧುನಿಕ ಸೌಲಭ್ಯಗಳು ಸೋಕದೆ ಚಿಮಿಣಿ ದೀಪಕ್ಕೆ ಒಗ್ಗಿಕೊಳ್ಳುವ ಸ್ಥಿತಿ ಅವರದಾಗಿತ್ತು.

ಹೊಸ ಬೆಳಕು: ತಾಯಿ ಮಗಳ ದಯನೀಯ ಸ್ಥಿತಿ ಅರಿತ ಸ್ಥಳೀಯರಾದ ವಸಂತಿ ಜಗದೀಶ್ ಹ್ಯುಮಾನಿಟಿ ಸಂಸ್ಥೆಯ ರೋಶನ್ ಬೆಳ್ಮಣ್ ಗಮನಕ್ಕೆ ತಂದಿದ್ದಾರೆ. ಹ್ಯುಮಾನಿಟಿ ಸಂಸ್ಥೆ 215ನೇ ಸೇವಾ ಯೋಜನೆಯಾಗಿ ರತ್ನಾ ಪುರುಷರಿಗೆ ಸುಸಜ್ಜಿತ ಮನೆ ಕಟ್ಟಿಕೊಡುವ ಚಿಂತನೆ ನಡೆಸಿತು. ಯೋಜನೆಗೆ ಕುವೈಟ್ ತುಳು ಕೂಟವನ್ನು ಸಂಪರ್ಕಿಸಿದ್ದು, ಮನೆ ನಿರ್ಮಾಣದ ವೆಚ್ಚ ಭರಿಸುವ ಸಕಾರಾತ್ಮಕ ಸ್ಪಂದನೆ ಕೂಟದಿಂದ ದೊರೆಯಿತು. ರೋಶನ್ ಮುತುವರ್ಜಿಯಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ಅಂಬ ಮೇಸ್ತ್ರಿ 5 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಮನೆ ನಿರ್ಮಿಸಿಕೊಟ್ಟಿದ್ದು ಮೇ 10ರಂದು ರತ್ನ ಅವರಿಗೆ ಹಸ್ತಾಂತರಿಸಲಾಯಿತು. ವಸಂತ್ ಆಚಾರ್ಯ ಸಹಿತ ಹಲವರು ಸೇವಾಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಸ್ಥಳೀಯರ ನೆರವಿನೊಂದಿಗೆ ಹೊಸ ಮನೆಗೆ ನೀರಿನ ಸೌಲಭ್ಯ, ವಿದ್ಯುತ್ ಸೌಲಭ್ಯ ಕೂಡ ಕಲ್ಪಿಸಲಾಗಿದೆ.

ರತ್ನ ಪುರುಷ ಅವರ ಮನೆ ನಿರ್ಮಾಣಕ್ಕೆ ಜಾತಿ ಧರ್ಮ ಮರೆತು ಸ್ಥಳೀಯರು, ದಾನಿಗಳು ಕೈಜೋಡಿಸುತ್ತಿದ್ದಾರೆ. ಯೋಜನೆಯ ಸಂಪೂರ್ಣ ವೆಚ್ಚ ಭರಿಸಿದ ಕುವೈಟ್ ತುಳುಕೂಟದ ಪ್ರತಿಯೊಬ್ಬರ ಸಹಕಾರಕ್ಕೆ ಚಿರಋಣಿ. ಮಾನವೀಯತೆ ಶ್ರೇಷ್ಠ ಧರ್ಮ. ಅದಕ್ಕೆ ಅನುಗುಣವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
| ರೋಶನ್ ಬೆಳ್ಮಣ್ ಹ್ಯುಮಾನಿಟಿ ಸಂಸ್ಥೆ

ನಮಗೆ ಸರ್ಕಾರದಿಂದ ಯಾವುದೇ ಸೌಲಭ್ಯವಿಲ್ಲ. ಆರ್ಥಿಕ ಸಂಕಷ್ಟದಿಂದಾಗಿ ನನ್ನ ಮಗಳು ಶಿಕ್ಷಣವನ್ನು ಮುಂದುವರಿಸದೇ ಕೆಲಸಕ್ಕೆ ಹೋಗುವಂತಾಗಿತ್ತು. ನಮ್ಮ ಸಂಕಷ್ಟವನ್ನು ಅರಿತು ನಮಗೆ ಸುರಕ್ಷಿತ ಮನೆ ಕಟ್ಟಿಕೊಟ್ಟ ಹ್ಯೂಮನಿಟಿ ಸಂಸ್ಥೆ ಹಾಗೂ ಕುವೈಟ್ ತುಳುಕೂಟಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ.
| ರತ್ನಾ ಪುರುಷ, ಫಲಾನುಭವಿ

Leave a Reply

Your email address will not be published. Required fields are marked *