ಮರಿದೇವ ಹೂಗಾರ ಹುಬ್ಬಳ್ಳಿ
ಹು-ಧಾ ಅವಳಿ ನಗರದಲ್ಲಿ ಆಗಾಗ ಹನಿಟ್ರ್ಯಾಪ್ ಪ್ರಕರಣಗಳು ಹೊರಬರುತ್ತಿವೆ. ಉದ್ಯಮಿ, ವ್ಯಾಪಾರಿ ಹಾಗೂ ಸರ್ಕಾರಿ ನೌಕರರನ್ನು ಬಲೆಗೆ ಬೀಳಿಸಿ, ಹಣ ಪೀಕಿದ್ದಲ್ಲದೇ ಠಾಣೆ ಮೆಟ್ಟಿಲೇರಿಸಿವೆೆ. ಕೈಯಲ್ಲಿ ಮೊಬೈಲ್ ಫೋನ್ಗಳು, ಚಿಕ್ಕ ಕ್ಯಾಮರಾವುಳ್ಳ ವಸ್ತುಗಳನ್ನು ಅಡಗಿಸಿಟ್ಟು ಮಾಡುವ ಈ ದಂಧೆ ಅವ್ಯಾಹತವಾಗಿ ಹರಡಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ಶ್ರೀಮಂತರನ್ನು ಸಂರ್ಪಸಿ ವಿವಿಧ ಆಮಿಷವೊಡ್ಡಿ ಮಹಿಳೆಯರು ಖೆಡ್ಡಾ ತೋಡುತ್ತಿದ್ದಾರೆ. ಹಣಕ್ಕೆ ಬೇಡಿಕೆ ಇಟ್ಟು ನಂತರ ತಮಗನಿಸಿದಷ್ಟು ಹಣ ಸಿಗದೇ ಹೋದಾಗ ಪ್ರಕರಣ ದಾಖಲಿಸುವ, ಮಾಧ್ಯಮಗಳ ಮುಂದೆ ಪ್ರಸ್ತಾಪ ಮಾಡುವುದಾಗಿ ಬೆದರಿಕೆಯೊಡ್ಡುತ್ತಿದ್ದಾರೆ. ಇದರಿಂದ ಬಹಳಷ್ಟು ಜನರು ನೊಂದು ದೂರು ದಾಖಲಿಸಿದ ಉದಾಹರಣೆಗಳಿವೆ.
ಅಶೋಕನಗರ ಠಾಣೆ ವ್ಯಾಪ್ತಿಯಲ್ಲಿ ಹನಿಟ್ರಾ್ಯಪ್ ಮಾಡಿದ್ದ ಇಬ್ಬರು ಮಹಿಳೆಯರು ಸೇರಿ ಐವರ ಗ್ಯಾಂಗ್ ಅನ್ನು ಸಿಸಿಬಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಈ ಗ್ಯಾಂಗ್ ಬೆಳಗಾವಿ, ವಿಜಯನಗರ ಹಾಗೂ ಗೋವಾದಲ್ಲಿಯೂ ಬೀಡುಬಿಟ್ಟಿತ್ತು. ಹೇಗೋ ಮಾಡಿ ಮೊಬೈಲ್ ಫೋನ್ ಸಂಖ್ಯೆ ಪಡೆಯುವ ಗ್ಯಾಂಗ್ ನಂತರ ಸಲುಗೆ ಬೆಳೆಸಿಕೊಂಡು ಅಶ್ಲೀಲಚಿತ್ರ ಮಾಡಿಟ್ಟುಕೊಂಡು ಹಣಕ್ಕೆ ಬೇಡಿಕೆ ಇಡುತ್ತಿತ್ತು. ಇಂಥದ್ದೇ ಘಟನಾವಳಿಗಳು ಧಾರವಾಡದಲ್ಲಿಯೂ ನಡೆದಿವೆ.
2017ರಲ್ಲಿ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ, 2019ರಲ್ಲಿ ವೈದ್ಯರೊಬ್ಬರಿಗೆ ಅಮರಗೋಳದ ಮಹಿಳೆ ವಂಚಿಸಿದ್ದು, ವಿದ್ಯಾನಗರ ಠಾಣೆ ವ್ಯಾಪ್ತಿಯಲ್ಲಿ 2021ರಲ್ಲಿ ಮನೆಗೆ ಬಾ ಎಂದು ಕರೆಸಿಕೊಂಡಿದ್ದ ಯುವತಿ ತನ್ನ ಜತೆಗಿನ ವಿಡಿಯೋ ಮಾಧ್ಯಮಗಳಿಗೆ ನೀಡುವುದಾಗಿ ಬೆದರಿಸಿ 5 ಲಕ್ಷ ರೂ. ಪೀಕಿದ್ದಳು. 2022ರಲ್ಲಿ ನಿವೃತ್ತ ಪ್ರಾಧ್ಯಾಪಕನನ್ನು ಹನಿಟ್ರ್ಯಾಪ್ ಜಾಲಕ್ಕೆ ಬೀಳಿಸಿದ್ದ ಯುವತಿ ಬರೋಬ್ಬರಿ 21 ಲಕ್ಷ ರೂ. ದೋಚಿದ್ದಳು. ಇವು ಕೇವಲ ಸ್ಯಾಂಪಲ್ಗಳಷ್ಟೇ. ಇಂಥ ಅದೆಷ್ಟೋ ಪ್ರಕರಣಗಳು ನಡೆದು ಹೋಗಿವೆ.
ಹಣಕ್ಕಾಗಿಯೇ ವ್ಯವಹಾರ
ಕೆಲ ಸ್ಪಾ, ಯುನಿಸೆಕ್ಸ್, ಸಲೂನ್ಗಳಲ್ಲೂ ಈಗ ಮಾಂಸ ದಂಧೆ ನಡೆಯುತ್ತಿದೆ. ಮಹಿಳೆಯರನ್ನು ಒಳಗೊಂಡ ಹನಿಟ್ರ್ಯಾಪ್ ತಂಡ ದೊಡ್ಡ ದೊಡ್ಡ ಕುಳಗಳ ಬೆನ್ನು ಬಿದ್ದಿದೆ. ಅದ್ಹೇಗೋ ಫೋನ್ ನಂಬರ್ ಪಡೆದು ನಂತರ ಮೋಸದ ಜಾಲಕ್ಕೆ ಕೆಡವಿ ಹಣ ದೋಚಿದೆ. ಮತ್ತೆ ಮತ್ತೆ ಹಣ ಕೊಡುವಂತೆ ತಂಡ ಬೆನ್ನು ಬಿದ್ದಾಗ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರಿವೆ. ಹೋರಾಟಗಾರರು, ಮುಖಂಡರು ಕೂಡ ಈ ಜಾಲಕ್ಕೆ ಸಿಕ್ಕು ವಿಲವಿಲ ಒದ್ದಾಡುತ್ತಿದ್ದಾರೆ.
ಆನ್ಲೈನ್ ಸೆಕ್ಸ್ ಮಾಯೆ
ಒಂದೆಡೆ ಹನಿಟ್ರ್ಯಾಪ್ ದಂಧೆಗಳು ಎಗ್ಗಿಲ್ಲದೆ ನಡೆಯುತ್ತಿದ್ದರೆ, ಮತ್ತೊಂದೆಡೆ ಯುವ ಜನರ ದಾರಿ ತಪ್ಪಿಸುತ್ತಿರುವ ಆನ್ಲೈನ್ ಸೆಕ್ಸ್ ಮಾಯೆ ವ್ಯಾಪಕವಾಗಿ ಹರಡಿದೆ. ಕೆಲ ವೆಬ್ಸೈಟ್ಗಳಲ್ಲಿ ಸೆಕ್ಸ್ ಹೆಸರಿನಲ್ಲಿ ಯುವತಿಯರ ವಾಟ್ಸ್ ಆಪ್ ನಂಬರ್ ಪ್ರಕಟಿಸಲಾಗುತ್ತಿದೆ. ಆ ನಂಬರ್ ಪಡೆದು ಕರೆ ಮಾಡುವ ಯುವಕರೊಂದಿಗೆ ಯುವತಿಯರು ನೇರವಾಗಿ ವಿಷಯಕ್ಕೆ ಬರುತ್ತಾರೆ. ಎಲ್ಲೋ ಕುಳಿತು ನಗರದ ಪ್ರಮುಖ ಸ್ಥಳವೊಂದರ ಬಳಿ ಬರುವಂತೆ ಸೂಚಿಸುತ್ತಾರೆ. ಅಲ್ಲಿಗೆ ಬಂದು ಕರೆ ಮಾಡಿದರೆ, ‘ನಾನು ಇಲ್ಲೇ ಪಕ್ಕದ ಕಟ್ಟಡದಲ್ಲಿ ಇದ್ದೇನೆ. ನಿಮ್ಮನ್ನು ನೋಡಿದ್ದೇನೆ’ ಎಂದು ಬಣ್ಣ ಬಣ್ಣದ ಮಾತಾಡುತ್ತಾರೆ. ಮೊದಲು ಗೂಗಲ್ ಪೇ ಅಥವಾ ಪೇಟಿಎಂನಿಂದ ಅಡ್ವಾನ್ಸ್ ಹಣ ಕಳುಹಿಸಿ ಎಂದು ಹೇಳುತ್ತಾರೆ. ಅದನ್ನು ನಂಬಿ ಹಣ ಕಳುಹಿಸಿದ ಕೂಡಲೇ ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ವಂಚಿಸುತ್ತಾರೆ. ಆನ್ಲೈನ್ನಲ್ಲಿ ಡೇಟಿಂಗ್, ಚಾಟಿಂಗ್ ವೆಬ್ಸೈಟ್ಗಳು ಖುಲ್ಲಂ ಖುಲ್ಲ ತೆರೆದುಕೊಂಡಿರುತ್ತವೆ. ಸೆಕ್ಸ್ ಆಕರ್ಷಣೆಗೆ ಒಳಗಾಗುವ ಹರೆಯದವರಿಗೆ ವಾಟ್ಸ್ ಆಪ್ ನಂಬರ್ ಕೊಟ್ಟು ಸಂಪರ್ಕ ಸಾಧಿಸುತ್ತಿದ್ದಾರೆ.
ಜಾಗೃತರಾಗುವುದು ಹೇಗೆ?
ಸಾಮಾಜಿಕ ಜಾಲತಾಣಗಳಲ್ಲಿ ಸಂಭಾಷಣೆಗೆ ಮುನ್ನ ಎಚ್ಚೆತ್ತುಕೊಳ್ಳುವುದು
ಬಂದ ಕರೆ ಅಥವಾ ಇತರ ಜಾಲದ ಬಗ್ಗೆ ತಿಳಿದುಕೊಳ್ಳುವುದು
ಕುಟುಂಬದವರೊಂದಿಗೆ ರ್ಚಚಿಸಿ ಮುಂದಿನ ಹೆಜ್ಜೆ ಇಡುವುದು
ಹತ್ತಿರದ ಠಾಣೆಗೆ ತೆರಳಿ ಪೊಲೀಸರಿಗೆ ಮಾಹಿತಿ ನೀಡುವುದು