ಕಂಪನಿ ಕಟ್ಟಿದ ಹಳ್ಳಿ ಹುಡುಗಿ

ಆಧುನಿಕ ಹೆಣ್ಣಿಗೆ ಯಾವ ಕ್ಷೇತ್ರವೂ ಕೈಗೆಟುಕದ ಕುಸುಮವಲ್ಲ. ಸಾಧಿಸುವ ಛಲವೇ ಹೆಣ್ಣಿಗಿರುವ ಶಕ್ತಿ. ಐಟಿ ಕ್ಷೇತ್ರದಲ್ಲಿ ದೇಶದಲ್ಲೇ ಪ್ರಬಲ ವ್ಯಕ್ತಿಯಾಗಿ ಗುರುತಿಸಿಕೊಂಡವರಲ್ಲೊಬ್ಬರು ಡಾ.ಸ್ನೇಹಾ ರಾಕೇಶ್. ವೃತ್ತಿ ಶ್ರೇಷ್ಠತೆಗೆ ಕೊಡಮಾಡುವ ಡಾ. ಎಪಿಜೆ ಅಬ್ದುಲ್ ಕಲಾಂ ಪ್ರಶಸ್ತಿ ಇವರ ಸಾಧನೆಗಳ ಸಾಲಿಗೆ ಕೆಲದಿನಗಳ ಹಿಂದಷ್ಟೇ ಸೇರ್ಪಡೆಗೊಂಡ ಮತ್ತೊಂದು ಗರಿ.

ಐಟಿ ಕ್ಷೇತ್ರದ ಹಾದಿ ಇವರಿಗೆ ಸುಗಮವಾಗೇನೂ ಇರಲಿಲ್ಲ. ಯಾವುದೇ ಸಾಧನೆಯ ಹಿಂದೆ ಸವಾಲುಗಳ ಪರ್ವತವೇ ಇರುತ್ತದೆ. ಇವರೂ ಸಾಕಷ್ಟು ಸವಾಲುಗಳನ್ನು ಎದುರಿಸಿಯೇ ತಂತ್ರಜ್ಞಾನ ಕ್ಷೇತ್ರದಲ್ಲಿ 2018ರ ಸಾಲಿನ ದೇಶದ ಪ್ರಬಲ ಮಹಿಳೆಯರಲ್ಲಿ 6ನೇ ಸ್ಥಾನ ಪಡೆದುಕೊಂಡ ಧೀರೆ. 22ನೇ ವಯಸ್ಸಿನಲ್ಲೇ ಅಕರ್​ವಾಕ್ಸ್ ಟೆಕ್ನಾಲಜಿ ಪ್ರೖೆ.ಲಿಮಿಟೆಡ್ ಎನ್ನುವ ಐಟಿ ಕಂಪನಿಯನ್ನು ಸ್ಥಾಪಿಸಿದ ಈಕೆ ಸ್ನೇಹಾ ರಾಕೇಶ್. ಇವರು ಅಪ್ಪಟ ಕನ್ನಡತಿ ಎನ್ನುವುದು ನಮ್ಮ ಪಾಲಿಗೆ ಹೆಮ್ಮೆಯ ಸಂಗತಿ.

ಬಾಲ್ಯದಲ್ಲಿ ವಿವಿಧ ಕಷ್ಟಗಳನ್ನು ಅನುಭವಿಸಿರುವ ಸ್ನೇಹಾ ಅವರ ಮನೋಸ್ಥೈರ್ಯ ಮಾತ್ರ ಯಾವತ್ತೂ ಕುಗ್ಗಿಲ್ಲ. ಸ್ವಂತ ಉದ್ಯಮ ಪ್ರಾರಂಭಿಸಬೇಕೆಂಬ ಕನಸು ಕಂಡು ಅದನ್ನು ನನಸು ಮಾಡಿಕೊಂಡ ಛಲಗಾತಿ. ಎರಡನೇ ವಯಸ್ಸಿನಲ್ಲೇ ಖಾಸಗಿ ಕಾರಣಗಳಿಂದ ಹೆತ್ತವರ ಆರೈಕೆಯಿಂದಲೂ ದೂರವಾಗಿ ತಾತನ ಮಾರ್ಗದರ್ಶನದಲ್ಲೇ ಬೆಳೆದವರು. ಹುಟ್ಟೂರು ಹಾಸನದ ಚೆನ್ನರಾಯಪಟ್ಟಣ ತಾಲೂಕಿನ ಹುಲ್ಲೇನಹಳ್ಳಿ. ಸರ್ಕಾರಿ ಶಾಲೆಯಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ. ಸರ್ಕಾರಿ ಹಾಸ್ಟಲ್​ನಲ್ಲಿದ್ದುಕೊಂಡು ಡಿಪ್ಲೊಮಾ ಓದಿದರು. ಬೆಂಗಳೂರಿಗೆ ಬಂದು ಕೆಲಸಕ್ಕೆ ಸೇರಿಕೊಂಡಾಗ ಎಲ್ಲೂ ದೀರ್ಘಕಾಲ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಹಳ್ಳಿಯಿಂದ ಬಂದಿದ್ದರಿಂದ ಸಂವಹನ ಕೌಶಲವೂ ಅಷ್ಟೇನೂ ಉತ್ತಮವಾಗಿರಲಿಲ್ಲ. ಹಾಗೆಂದು ಸುಮ್ಮನೆ ಕೂರದೆ ಉದ್ಯೋಗದ ಜತೆಜತೆಗೆ ಎಜುಕೇಶನ್ ಲೋನ್ ಪಡೆದು ಶ್ರಮವಹಿಸಿ ಇಂಜಿನಿಯರಿಂಗ್ ಪದವಿ ಹಾಗೂ ರಾಮಯ್ಯ ಕಾಲೇಜಿನಲ್ಲಿ ಎಂಎಸ್ಸಿ ಪೂರ್ಣಗೊಳಿಸಿದರು. ವಿದ್ಯಾಭ್ಯಾಸದ ಜತೆಗೇ ಆನ್​ಲೈನ್​ನಲ್ಲಿ ಫ್ರೀಲಾನ್ಸರ್​ಆಗಿ ಪ್ರಾಜೆಕ್ಟ್ ತೆಗೆದುಕೊಳ್ಳಲಾರಂಭಿಸಿದ್ದುದು ಸ್ನೇಹಾರ ಅನ್ವೇಷಣಾ ಮನೋಭಾವಕ್ಕೆ ಸಾಕ್ಷಿ. ಹೀಗೆ ದೊರೆತ ಅನುಭವ ಮತ್ತು ಜ್ಞಾನ ಬಳಸಿಕೊಂಡು, ಸ್ನೇಹಿತರ ಸಹಕಾರ ಪಡೆದು 2012ರಲ್ಲಿ 12 ಲಕ್ಷ ರೂ. ಬಂಡವಾಳದೊಂದಿಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಅಕರ್​ವಾಕ್ಸ್ ಕಂಪನಿ ಆರಂಭಿಸಿದರು.

ಆರಂಭದಲ್ಲಿ ತೀವ್ರ ಆರ್ಥಿಕ ಸಮಸ್ಯೆ ಎದುರಾಗಿತ್ತು. ಸಾಲದ ಬಡ್ಡಿ ತೀರಿಸಲೂ ಕಷ್ಟಪಟ್ಟಿದ್ದರು. ಬಳಿಕ, ಒಂದೊಂದೇ ಪ್ರಾಜೆಕ್ಟ್​ಗಳು ಕೈಗೆ ಸಿಗಲಾರಂಭಿಸಿದಾಗ ಸಮರ್ಥವಾಗಿ ನಿಭಾಯಿಸಿ ಮತ್ತಷ್ಟು ಪ್ರಾಜೆಕ್ಟ್ ಗಳು ಸಿಗುವಂತೆ ನೋಡಿಕೊಂಡರು. ಕಂಪನಿ ಚೇತರಿಕೆ ಕಂಡಿತು. ಮತ್ತೆ ಸ್ನೇಹಾ ಹಿಂತಿರುಗಿ ನೋಡಿದ್ದೇ ಇಲ್ಲ. ಇದೀಗ, ಈ ಕಂಪನಿ ಸುಮಾರು 150 ಮಂದಿಗೆ ಉದ್ಯೋಗ ನೀಡಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. 2014ರಲ್ಲಿ ರಾಕೇಶ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟು ಹೆಣ್ಣು ಮಗುವಿನ ತಾಯಿಯಾಗಿ ಸಂತಸದ ಸಂಸಾರ ನಡೆಸುತ್ತಿದ್ದಾರೆ. ಹಳ್ಳಿಯಿಂದ ನಗರಕ್ಕೆ ಉದ್ಯೋಗ ಅರಸಿ ಬಂದ ಹುಡುಗಿ ಈಗ ಉದ್ಯಮಿಯಾಗಿ ಸಾಕಷ್ಟು ಮಂದಿಗೆ ಕೆಲಸ ನೀಡಿರುವುದು ಅಸಾಮಾನ್ಯ ಸಾಧನೆಯೇ ಸರಿ. ಸ್ನೇಹಾರ ಅಕರ್​ವಾಕ್ಸ್ ಕಂಪನಿ ವೆಬ್ ರಿಸರ್ಚ್, ಆಪ್ ಡೆವಲಪ್​ವೆುಂಟ್, ಸಾಫ್ಟ್​ವೇರ್ ಡೆವಲಪ್​ವೆುಂಟ್, ವೆಬ್ ಬೇಸ್ಡ್ ಸಾಫ್ಟ್​ವೇರ್ ಡೆವಲಪ್​ವೆುಂಟ್, ಪ್ರಾಜೆಕ್ಟ್ ಔಟ್​ಸೋರ್ಸ್, ಇನ್​ಫಾಮೇಷನ್ ಟೆಕ್ನಾಲಜಿ, ಡಿಜಿಟಲ್ ಮಾರ್ಕೆಟಿಂಗ್ ಸರ್ವೀಸಸ್ ಇತ್ಯಾದಿ ಸೇವೆ ನೀಡುತ್ತದೆ.

ಪ್ರಬಲ ಮಹಿಳೆಯರ ಪಟ್ಟಿಯಲ್ಲಿ 6ನೇ ಸ್ಥಾನ

ಅಂತಾರಾಷ್ಟ್ರೀಯ ಮಟ್ಟಕ್ಕೆ ಕಂಪನಿಯನ್ನು ಮುನ್ನಡೆಸುವುದು ನನ್ನ ಗುರಿ. ಯಾವುದೂ ಸುಲಭವಾಗಿ ದೊರಕುವುದಿಲ್ಲ. ಕಷ್ಟಪಟ್ಟರೆ ಯಶಸ್ಸು ಸಿಗುತ್ತದೆ. ಇನ್ನಷ್ಟು ಮಂದಿಗೆ ಉದ್ಯೋಗ ನೀಡಿ ಸಂಸ್ಥೆಯನ್ನು ವಿಸ್ತರಿಸಲು ಶ್ರಮಿಸುತ್ತಿದ್ದೇನೆ. ಸಾಧ್ಯವಿಲ್ಲ ಎಂದು ಕುಳಿತರೆ ಏನೂ ಸಾಧ್ಯವಾಗುವುದಿಲ್ಲ. ನನ್ನಿಂದ ಸಾಧ್ಯ ಎಂದು ಧೈರ್ಯ ತಂದುಕೊಂಡರೆ ಮಾತ್ರ ಸಾಧಿಸಲು ಸಾಧ್ಯ.

| ಡಾ. ಸ್ನೇಹಾ ರಾಕೇಶ್

ಉಚಿತ ಕೌಶಲ ತರಬೇತಿ

2017ರಲ್ಲಿ ಸ್ನೇಹಾ ಸಮಗ್ರ ಅಭಿವೃದ್ಧಿ ಟ್ರಸ್ಟ್ ಆರಂಭಿಸಿ ಈ ಮೂಲಕ ಸುಮಾರು 2000 ಯುವಕ-ಯುವತಿಯರಿಗೆ ತರಬೇತಿ ನೀಡಿದ್ದಾರೆ. ಆರಂಭದಲ್ಲಿ ತಾವು ಅನುಭವಿಸಿದ ಕಷ್ಟ ಇತರರಿಗೂ ಬರಬಾರದೆಂಬ ದೃಷ್ಟಿಯಿಂದ ಆರಂಭಿಸಿದ ಟ್ರಸ್ಟ್ ಮೂಲಕ ನಿರುದ್ಯೋಗಿಗಳಿಗೆ, ಆರ್ಥಿಕವಾಗಿ ಹಿಂದುಳಿದ ಯುವಕರಿಗೆ ಐಟಿ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಬೇಕಾದ ಕೌಶಲಗಳನ್ನು ತರಬೇತಿ ಮೂಲಕ ಹೇಳಿಕೊಡುತ್ತಿದ್ದಾರೆ. ಇದೇ ತರಬೇತಿ ಬೇರೆಡೆ ಪಡೆಯಲು ಕನಿಷ್ಠ 25ರಿಂದ 30 ಸಾವಿರ ರೂ. ಪಾವತಿಸಬೇಕು. ಆದರೆ ಇಲ್ಲಿ ಉಚಿತವಾಗಿ ತರಬೇತಿ ನೀಡಲಾಗುತ್ತದೆ.

ಸಾಧನೆಗೆ ಪ್ರಶಸ್ತಿಗಳೇ ಸಾಕ್ಷಿ

ಗ್ಲೋಬಲ್ ಅಚೀವರ್ ಮಹಾತ್ಮ ಗಾಂಧಿ ಲೀಡರ್​ಷಿಪ್ ಅವಾರ್ಡ್(ಹೌಸ್ ಆಫ್ ಕಾಮನ್ಸ್, ಬ್ರಿಟಿಷ್ ಪಾರ್ಲಿಮೆಂಟ್, ಯುಕೆ), ಇಂಟರ್​ನ್ಯಾಷನಲ್ ಅಚೀವರ್ ಅವಾರ್ಡ್ (ಬ್ಯಾಂಕಾಕ್), ಹಿಂದು ರತ್ನ ಅವಾರ್ಡ್ (ದೆಹಲಿ), ನ್ಯಾಚುರಲ್ ರಿಸೋರ್ಸ್ ಆಫ್ ಇಂಡಿಯಾ ಅವಾರ್ಡ್(ಚಂಡೀಗಢ), ಕಾಯಕ ರತ್ನ ಪ್ರಶಸ್ತಿ, ಕೆಂಪೇಗೌಡ ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಯುವ ಪುರಸ್ಕಾರ, ವರ್ಷದ ಮಹಿಳಾ ಸಾಧಕಿ(2018) ಅಲ್ಲದೆ ಸಾಕಷ್ಟು ಪುರಸ್ಕಾರಗಳು ಸ್ನೇಹಾ ಅವರಿಗೆ ಸಂದಿವೆ. ಇಂಡಿಯನ್ ವರ್ಚುವಲ್ ಯುನಿವರ್ಸಿಟಿ ಮಹಿಳಾ ಉದ್ಯಮ ಕ್ಷೇತ್ರದ ಸಾಧನೆಗೆ 2018ರ ಸೆಪ್ಟೆಂಬರ್​ನಲ್ಲಿ ಡಾಕ್ಟರೇಟ್ ಪ್ರದಾನ ಮಾಡಿದೆ.

|ಹರ್ಷಿತಾ ವಿಷ್ಣುಪ್ರಸಾದ್​