ಗುರುಗಳಿಂದ ದೇವರ ನಿಜ ದರ್ಶನ

<ಆರಾಧನಾ ಮಹೋತ್ಸವದಲ್ಲಿ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅಭಿಪ್ರಾಯ>

ಕುಂದಾಪುರ: ನಮ್ಮ ಸಮಾಜದಲ್ಲಿ ಗುರುಪೀಠಕ್ಕೆ ಅತ್ಯಂತ ಹೆಚ್ಚಿನ ಮಹತ್ವವಿದೆ. ಮಾರ್ಗದರ್ಶನ ನೀಡಿದ ಗುರುವರ್ಯರನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಗುರುಗಳು ಜ್ಞಾನದ ಜತೆಯಲ್ಲಿ ಜೀವನವನ್ನು ಸುಖ ಸಮೃದ್ಧಿಯಿಂದ ಮುನ್ನಡೆಸಲು ನಮಗೆ ಅನುಗ್ರಹಿಸುತ್ತಾರೆ. ದೇವರ ನಿಜ ದರ್ಶನ ಗುರುಗಳ ಮೂಲಕ ಸಾಧ್ಯ ಎಂದು ಕಾಶೀ ಮಠ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಕೋಟ ಶ್ರೀ ಕಾಶೀ ಮಠ ಶ್ರೀ ಮುರಲೀಧರ ಕೃಷ್ಣ ಮುಖ್ಯಪ್ರಾಣ ದೇವಸ್ಥಾನದಲ್ಲಿ ಶುಕ್ರವಾರ ಶ್ರೀ ಕಾಶೀ ಮಠದ ಶ್ರೀ ಸುಕೃತೀಂದ್ರ ತೀರ್ಥ ಸ್ವಾಮೀಜಿ ಪುಣ್ಯತಿಥಿ ಆರಾಧನಾ ಮಹೋತ್ಸವದಲ್ಲಿ ಮಾತನಾಡಿದರು.

ದೇವದತ್ತ ಭಟ್, ಸುಧಾಕರ ಭಟ್ ಹಾಗೂ ಶ್ರೀಕಾಂತ್ ಭಟ್ ಸುಕೃತೀಂದ್ರ ತೀರ್ಥರ ಮಹತ್ವವನ್ನು ದೃಷ್ಟಾಂತದ ಮೂಲಕ ಹೇಳಿದರು. ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ರಮೇಶ ಪಡಿಯಾರ್, ಅಧ್ಯಕ್ಷ ರಾಧಾಕೃಷ್ಣ ನಾಯಕ್, ದೇವಳ ಅರ್ಚಕ ಕಪಿಲದಾಸ ಭಟ್, ಅರವಿಂದ ಭಟ್, ಕಾರ್ಯದರ್ಶಿ ವೇದವ್ಯಾಸ ಪೈ ಉಪಸ್ಥಿತರಿದ್ದರು. ಪೂರ್ವಾಹ್ನ ಶ್ರೀ ವೇದವ್ಯಾಸ ದೇವರಿಗೆ ಲಘು ವಿಷ್ಣು ಅಭಿಷೇಕ, ಪಾದೂಕಾ ಪೂಜೆ, ರಾತ್ರಿ ಸ್ವರ್ಣ ಗರುಡ ವಾಹನ ಪೂಜೆ ನಡೆಯಿತು.

ನಮ್ಮ ಹಿರಿಯರು ಅತ್ಯಂತ ಕಷ್ಟ ಕಾಲದಲ್ಲಿ ಗುರು ಪರಂಪರೆ ಉಳಿಸಿಕೊಂಡು ಬಂದಿರುತ್ತಾರೆ. ಇಂತಹ ಭವ್ಯ ಇತಿಹಾಸದ ಕುರಿತು ಸಮಾಜದ ಸರ್ವರಿಗೂ ತಿಳಿ ಹೇಳಬೇಕು ಹಾಗೂ ಇಂದಿನ ಕಾಲಘಟ್ಟದಲ್ಲಿ ಇದನ್ನು ಮುನ್ನಡೆಸುವುದು ನಮ್ಮೆಲ್ಲರ ಜವಾಬ್ದಾರಿ.
ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ, ಕಾಶೀ ಮಠಾಧೀಶ

Leave a Reply

Your email address will not be published. Required fields are marked *