ಬೆಂಕಿಯ ಜತೆ ಸರಸ ಬೇಡ, ಸರ್ವೋಚ್ಚ ನ್ಯಾಯಾಲಯ ನಿಯಂತ್ರಿಸುವ ಸಾಹಸ ಬೇಡ: ಸುಪ್ರೀಂ ಖಡಕ್​ ಸಂದೇಶ

ನವದೆಹಲಿ: ಸುಪ್ರೀಂ ಕೋರ್ಟ್​ ಸಿಜೆಐ ರಂಜನ್​ ಗೊಗೊಯ್​ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಹಿಂದೆ ಷಡ್ಯಂತ್ರ ನಡೆದಿದೆ ಹಾಗೂ ಸುಪ್ರೀಂಕೋರ್ಟ್​ನ ಪ್ರಕ್ರಿಯೆಗಳನ್ನು ಕೆಲವರು ನಿಯಂತ್ರಣ ಮಾಡುತ್ತಿದ್ದಾರೆ ಎಂದು ವಕೀಲ ಉತ್ಸವ್ ಬೈನ್ಸ್ ಸಲ್ಲಿಸಿರುವ ಪ್ರಮಾಣಪತ್ರದ ವಿಚಾರಣೆ ಇಂದು ನಡೆಯಿತು.
ವಿಚಾರಣೆ ನಡೆಸಿದ ಮೂವರು ನ್ಯಾಯಮೂರ್ತಿಗಳನ್ನೊಂಡ ಸಮಿತಿ, ಹಣ ಹಾಗೂ ರಾಜಕೀಯ ಬಲದಿಂದ ನ್ಯಾಯಾಂಗ ವ್ಯವಸ್ಥೆಯನ್ನು ನಿಯಂತ್ರಿಸುವುದರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಬೆಂಕಿಯ ಜತೆ ಆಟವಾಡಬೇಡಿ ಎಂದು ಹೇಳಿದೆ.

ಶ್ರೀಮಂತರು ಮತ್ತು ಅಧಿಕಾರ ಇರುವವರು ಈ ನ್ಯಾಯಾಲಯ ನಡೆಸಲು, ನಿಯಂತ್ರಿಸಲು ಬರಬೇಡಿ ಎಂದು ಇಡೀ ದೇಶದ ಜನರಿಗೆ ಎಚ್ಚರಿಕೆ ಸಂದೇಶ ನೀಡುತ್ತಿದ್ದೇವೆ ಎಂದು ನ್ಯಾಯಮೂರ್ತಿ ಅರುಣ್​ ಮಿಶ್ರಾ ಹೇಳಿದರು.

ಮುಖ್ಯ ನ್ಯಾಯಮೂರ್ತಿಯ ವಿರುದ್ಧದ ದೌರ್ಜನ್ಯ ಆರೋಪದ ವಿಚಾರಣೆ ಹಾಗೂ ಅವರ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಮಾಡಲಾದ ಆರೋಪದ ವಿಚಾರಣೆಗಳು ಬೇರೆಬೇರೆ. ಇವರೆಡರ ವಿಚಾರಣೆಯ ಪ್ರಕ್ರಿಯೆಗಳೂ ಬೇರೆ ಎಂದು ಮಿಶ್ರಾ ತಿಳಿಸಿದರು.

ನ್ಯಾಯಾಂಗ ವ್ಯವಸ್ಥೆಯನ್ನು ಮೂರು ನಾಲ್ಕು ವರ್ಷಗಳಿಂದ ನಡೆಸಿಕೊಳ್ಳುತ್ತಿರುವ ನೀತಿ ನೋಡಿ ದುಃಖಿತರಾಗಿದ್ದೇವೆ. ಹೀಗಾದರೆ ಇದು ಪೂರ್ತಿಯಾಗಿ ಸಾಯುತ್ತದೆ ಎಂದು ಸಮಿತಿ ಹೇಳಿದೆ.
ಸಿಜೆಐ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಪಿತೂರಿಯ ಮೂಲ ಕಂಡು ಹಿಡಿಯುವವರೆಗೂ ವಿಚಾರಣೆ ನಡೆಸುತ್ತೇವೆ ಎಂದು ನಿನ್ನೆ ಸುಪ್ರೀಂಕೋರ್ಟ್​ ಹೇಳಿತ್ತು. ಅಲ್ಲದೆ, ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಪರಿಶೀಲಿಸುವಂತೆ, ಅಗತ್ಯ ವಸ್ತುಗಳನ್ನು ವಶಪಡಿಸಿಕೊಳ್ಳುವಂತೆ ಸಿಬಿಐ ಮುಖ್ಯಸ್ಥರು, ಗುಪ್ತಚರ ಇಲಾಖೆ ಹಾಗೂ ದೆಹಲಿ ಪೋಲೀಸರಿಗೆ ಸೂಚಿಸಿತ್ತು.

ಲೈಂಗಿಕ ಕಿರುಕುಳ ಆರೋಪದಲ್ಲಿ ಸಿಜೆಐ ಸಿಲುಕಿಸಲು ಯತ್ನ ನಡೆಯುತ್ತಿದೆ ಎಂದು ವಕೀಲ ಉತ್ಸವ್ ಮೂರು ದಿನಗಳ ಹಿಂದೆ ಆರೋಪ ಮಾಡಿದ್ದರು. ಬುಧವಾರ ಬೆಳಗ್ಗೆ ಸುಪ್ರೀಂಕೋರ್ಟ್​ನ ವಿಶೇಷ ಪೀಠಕ್ಕೆ ಅವರು ಮುಚ್ಚಿದ ಲಕೋಟೆಯಲ್ಲಿ ಪ್ರಮಾಣಪತ್ರ ಹಾಗೂ ದಾಖಲೆಗಳನ್ನು ಸಲ್ಲಿಸಿದ್ದರು.

ಷಡ್ಯಂತ್ರದಲ್ಲಿ ಭೂಗತಪಾತಕಿಗಳೂ ಶಾಮೀಲಾಗಿದ್ದಾರೆ. ಸಂತ್ರಸ್ತೆ ಪರ ವಾದ ಮಂಡಿಸಲು ಅಪರಿಚಿತ ವ್ಯಕ್ತಿಯೊಬ್ಬ ಕೋಟಿಗಟ್ಟಲೆ ಹಣದ ಆಮಿಷ ಒಡ್ಡಿದ್ದ. ಇದರ ಹಿಂದೆ ಪ್ರಭಾವಿ ಉದ್ಯಮಿ ಕೈವಾಡ ಇದೆ ಎಂದು ಅಫಿಡವಿಟ್​ನಲ್ಲಿ ವಕೀಲ ಉತ್ಸವ್ ಬೈನ್ಸ್ ವಿವರಿಸಿದ್ದಾರೆ ಎನ್ನಲಾಗಿದೆ. ಆರೋಪಗಳಿಗೆ ಪೂರಕವಾಗಿ ಸಿಸಿಟಿವಿ ದೃಶ್ಯಾವಳಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದಾರೆ. ನಾಳೆ ಮತ್ತೆ ಈ ಸಮಿತಿ ಪ್ರಕರಣ ವಿಚಾರಣೆ ನಡೆಸಲಿದೆ.