More

  ರಾಜ್ಯದಲ್ಲಿ ಸಾವಿರ ಕೋಟಿ ರೂಪಾಯಿ ಸೈಬರ್ ಕಳ್ಳರ ಪಾಲು!

  | ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

  ರಾಜ್ಯದಲ್ಲಿ ಸೈಬರ್ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, 2021ರಿಂದ 2024ರ ಮಾರ್ಚ್ 26ರ ವೇಳೆಗೆ 48,081 ಸೈಬರ್ ಕ್ರೖೆಂ ದಾಖಲಾಗಿವೆ. ಅಮಾಯಕರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುವ ಖದೀಮರು ಇದುವರೆಗೆ 1,024 ಕೋಟಿ ರೂಪಾಯಿ ದೋಚಿದ್ದು, ಇದರ ಪ್ರಮಾಣ ವರ್ಷದಿಂದ ವರ್ಷಕ್ಕೆ ಶೇ.200 ಏರುಮುಖ ಆಗುತ್ತಿರುವುದು ಆತಂಕದ ವಿಚಾರವಾಗಿದೆ ಎಂಬುದು ಹಿರಿಯ ಅಧಿಕಾರಿಗಳ ಅಭಿಪ್ರಾಯವಾಗಿದೆ.

  ಸೈಬರ್ ಕ್ರೖೆಂ ಹೆಚ್ಚಾಗಿರುವ ಕಾರಣಕ್ಕೆ ಸಿಇಎನ್ ಪೊಲೀಸ್ ಠಾಣೆಗಳಲ್ಲಿ ಮಾತ್ರವಲ್ಲದೆ ಸಿವಿಲ್ ಠಾಣೆಗಳಲ್ಲಿಯೂ ಸೈಬರ್ ಅಪರಾಧ ಕುರಿತು ದೂರು ಸ್ವೀಕರಿಸುವಂತೆ ಗೃಹ ಇಲಾಖೆ ಆದೇಶಿಸಿರುವುದರಿಂದ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿವೆ.

  ಕೋವಿಡ್ ಲಾಕ್​ಡೌನ್ ಬಳಿಕ ಚೀನಾದ ಲೋನ್ ಆಪ್​ಗಳ ಹಾವಳಿ ಹೆಚ್ಚಾಗಿತ್ತು. ಇತ್ತೀಚೆಗೆ ಅಧಿಕೃತ ಆಪ್​ಗಳು ಬಂದಿವೆ. ಜತೆಗೆ ಕೇಂದ್ರ ಗೃಹ ಸಚಿವಾಲಯ ಮತ್ತು ಸಿಐಡಿ ಅಧಿಕಾರಿಗಳು ಸಾಲದ ಆಪ್​ಗಳನ್ನು ಬ್ಲಾಕ್ ಮಾಡುವ ಮೂಲಕ ವಂಚನೆಯಿಂದ ಮುಕ್ತಿ ಕೊಡಿಸಿದರು. ಇತ್ತೀಚೆಗೆ ಸೈಬರ್ ಕ್ರೖೆಂನಲ್ಲಿ ‘ಡಿಜಿಟಲ್ ಆರೆಸ್ಟ್’ ಟ್ರೆಂಡ್ ಶುರುವಾಗಿದೆ. ಇದರಲ್ಲಿ ಐಐಎಸ್​ಸಿ ವಿಜ್ಞಾನಿಗಳು, ಐಐಟಿ ವಿದ್ಯಾರ್ಥಿಗಳು, ಸಾಫ್ಟ್ ವೇರ್ ಇಂಜಿನಿಯರ್​ಗಳು, ಉದ್ಯಮಿ ಸೇರಿ ವಿದ್ಯಾವಂತರೇ ‘ಡಿಜಿಟಲ್ ಆರೆಸ್ಟ್’ ಆಗುತ್ತಿದ್ದಾರೆ.

  ಸಾಮಾನ್ಯವಾಗಿ ಮುಂಬೈ ಸೈಬರ್ ಕ್ರೖೆಂ ಪೊಲೀಸರ ಸೋಗಿನಲ್ಲಿ ವಂಚಕರು ಕರೆ ಮಾಡುತ್ತಾರೆ. ಫೆಡೆಕ್ಸ್ ಕೋರಿಯರ್​ನಲ್ಲಿ ನಿಮ್ಮ ಹೆಸರಿನಲ್ಲಿ ಡ್ರಗ್ಸ್, ಸಿಮ್ಾರ್ಡ್, ನಕಲಿ ಪಾಸ್​ಪೋರ್ಟ್ ಮತ್ತು ಹವಾಲ ಹಣ ವರ್ಗಾವಣೆ ಆಗುತ್ತಿದೆ. ಸಿಮ್ ಕಾರ್ಡ್​ಗಳನ್ನು ಬಳಸಿಕೊಂಡು ಸಮಾಜಘಾತುಕ ಕೃತ್ಯಗಳು ಮತ್ತು ಶಾಂತಿ ಕದಡುವಂತಹ ಸಂದೇಶಗಳು ವೈರಲ್ ಆಗುತ್ತಿವೆ. ಈ ಬಗ್ಗೆ ಸೈಬರ್ ಕ್ರೖೆಂನಲ್ಲಿ ಎಫ್​ಐಆರ್ ದಾಖಲಾಗಿದೆ. ಮೊದಲು ವರ್ಚುವಲ್​ನಲ್ಲಿ ವಿಚಾರಣೆ ನಡೆಸಬೇಕಾಗಿದೆ. ಅದಕ್ಕಾಗಿ ಸ್ಕೈಪ್ ಆಪ್ ಡೌನ್​ಲೋಡ್ ಮಾಡಿಕೊಳ್ಳುವಂತೆ ಬೆದರಿಸುತ್ತಾರೆ.

  ಸಂತ್ರಸ್ತ ವ್ಯಕ್ತಿ, ಆಪ್ ಡೌನ್​ಲೋಡ್ ಮಾಡಿಕೊಂಡರೆ ವಿಡಿಯೋ ಕಾಲ್ ಮೂಲಕ ಮುಂಬೈ ಪೊಲೀಸ್ ಅಥವಾ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವಿಚಾರಣೆ ಶುರು ಮಾಡುತ್ತಾರೆ. ಆನ್​ಲೈನ್​ನಲ್ಲಿ ಇದ್ದಾಗಲೇ ಬ್ಯಾಂಕ್ ಖಾತೆಗಳ ವಿವರ ಪಡೆದು ಅಕ್ರಮ ಹಣ ವರ್ಗಾವಣೆ ಆಗಿದೆ ಎಂದು ಹೆದರಿಸಿ ಸಂತ್ರಸ್ತರಿಗೆ ನಿಮ್ಮ ಖಾತೆಯಲ್ಲಿರುವ ಹಣವನ್ನು ಆರ್​ಬಿಐ ಖಾತೆಗೆ ವರ್ಗಾವಣೆ ಮಾಡಿ, ತನಿಖೆ ಮುಗಿದ ಮೇಲೆ ಸ್ವಯಂಚಾಲಿತವಾಗಿ ವಾಪಸ್ ಬರಲಿದೆ ಎಂದು ಕಟ್ಟಾಜ್ಞೆ ಮಾಡುತ್ತಾರೆ. ವಾರಗಟ್ಟಲೆ ಮನೆಯಿಂದ ಹೊರಗೆ ಬಾರದಂತೆ ಡಿಜಿಟಲ್ ಆರೆಸ್ಟ್ ಮಾಡಿ ಅವರಿಂದ ಎಷ್ಟು ಸಾಧ್ಯವಾಗುತ್ತೋ ಅಷ್ಟು ಹಣವನ್ನು ಖಾತೆಗೆ ಹಾಕಿಸಿಕೊಂಡು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  ‘ಗ್ರೂಪ್, ವೆಬ್​ಸೈಟ್ ಬ್ಲಾಕ್: ಸಿಐಡಿಯ ಸೈಬರ್ ಅಪರಾಧ ವಿಭಾಗ (ಸಿಸಿಡಿ) ಸಾಮಾಜಿಕ ಜಾಲತಾಣಗಳ ಮೇಲೆ ಸದಾ ನಿಗಾವಹಿಸಲಿದೆ. ಅಲ್ಲದೆ, ಸಂತ್ರಸ್ತರು ಕೊಡುವ ದೂರಿನಲ್ಲಿ ಉಲ್ಲೇಖಿತ ವೆಬ್​ಸೈಟ್, ಟೆಲಿಗ್ರಾಮ್ ಗ್ರೂಪ್, ಬ್ಯಾಂಕ್ ಖಾತೆ, ವೆಬ್​ಸೈಟ್ ಮತ್ತು ಪೋಸ್ಟರ್​ಗಳನ್ನು ಬ್ಲಾಕ್ ಮಾಡುವುದು ಮತ್ತು ತೆರವು ಮಾಡುತ್ತಿದೆ. ಈ ರೀತಿಯಾಗಿ 2023ರಲ್ಲಿ 35 ಮತ್ತು 2024ರಲ್ಲಿ 3 ಖಾತೆ, ಗ್ರೂಪ್, ಪೋಸ್ಟ್ ಗಳನ್ನು ಬ್ಲಾಕ್, ರದ್ದುಪಡಿಸಲಾಗಿದೆ. ಇನ್ನೂ 16 ವೆಬ್​ಸೈಟ್​ಗಳನ್ನು ಬ್ಲಾಕ್ ಮಾಡಿ ಸಾರ್ವಜನಿಕರಿಗೆ ಸಿಗದಂತೆ ಮಾಡಿದ್ದು, ಇದು ಸಿಐಡಿಯ ಸಿಸಿಡಿ ವಿಭಾಗದಿಂದ ನಿರಂತರವಾಗಿ ನಡೆಯುತ್ತಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  ಅಪರಿಚಿತ ಕರೆಗಳು, ಲಿಂಕ್​ಗಳಿಗೆ ವೈಯಕ್ತಿಕ ಮಾಹಿತಿ, ಬ್ಯಾಂಕ್ ವಿವರ ಕೊಡಬೇಡಿ. ಸೈಬರ್ ವಂಚನೆಗೆ ಒಳಗಾದರೆ ಕೂಡಲೆ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಿ.

  | ಡಾ.ಎಂ.ಎ.ಸಲೀಂ ಸಿಐಡಿ, ಡಿಜಿಪಿ

  ಡಿಕೆ ಬ್ರದರ್ಸ್​ ಕೋಟೆಯಲ್ಲಿ ಅಮಿತ್ ಶಾ ಬೃಹತ್ ರೋಡ್​ ಶೋ..!ಫೋಟೋಗಳು ಇಲ್ಲಿವೆ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts