ಚಿತ್ರದುರ್ಗ: ಯುವಶಕ್ತಿಯನ್ನು ದುಶ್ಚಟಗಳಿಗೆ ದಾಸರನ್ನಾಗಿಸಿ, ಭವ್ಯ ಪರಂಪರೆ ಇರುವ ಭಾರತವನ್ನು ಡ್ರಗ್ಸ್ ಜಿಹಾದ್ ಮೂಲಕ ಬರ್ಬಾದ್ ಮಾಡಲು ದುಷ್ಟಶಕ್ತಿಗಳು ಷಡ್ಯಂತ್ರ ನಡೆಸುತ್ತಿವೆ ಎಂದು ಬಜರಂಗದಳ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ ಆರೋಪಿಸಿದರು.
ಶೌರ್ಯ ಜಾಗರಣ ರಥದ ಕರ್ನಾಟಕ ದಕ್ಷಿಣ ಪ್ರಾಂತ ಯಾತ್ರೆಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ರಾಷ್ಟ್ರ ದ್ರೋಹಿಗಳನ್ನು ಸೃಷ್ಟಿಸುವ ತುಕಡೆ ಗ್ಯಾಂಗ್ ದೇಶದೊಳಗೆ ಸಕ್ರಿಯವಾಗಿದೆ. ಕೆಲ ವಿಶ್ವವಿದ್ಯಾಲಯಗಳಲ್ಲಿ ಬ್ರೈನ್ ವಾಶ್ ಮಾಡಲಾಗುತ್ತಿದೆ. ದುರ್ಬುದ್ಧಿ ಜೀವಿಗಳು ಭಾರತ ಮತ್ತು ಹಿಂದು ಧರ್ಮಕ್ಕೆ ಮಾರಕವಾಗಿದ್ದಾರೆ. ಈ ಕುರಿತು ಅರಿವು ಮೂಡಿಸುವಲ್ಲಿ ದೇಶಾದ್ಯಂತ ವ್ಯಾಪಿಸಿರುವ ವಿಎಚ್‌ಪಿಯ 55 ಸಾವಿರ ಘಟಕಗಳು ಕಾರ್ಯಪ್ರವೃತ್ತವಾಗಿವೆ ಎಂದರು.
ವಿಎಚ್‌ಪಿ ಕೇಂದ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಸ್ಥಾಣುಮಾಲಯನ್ ಮಾತನಾಡಿ, ಸನಾತನ ಹಿಂದು ಧರ್ಮವನ್ನೇ ಟಾರ್ಗೆಟ್ ಮಾಡುತ್ತಿರುವ ಪ್ರಸಂಗ ಕೆಲ ರಾಜ್ಯಗಳಲ್ಲಿ ನಡೆಯುತ್ತಿವೆ. ಕಳೆದ 2 ವರ್ಷಗಳಲ್ಲಿ ತಮಿಳುನಾಡಿನಲ್ಲಿ ಬೇರೆ ಧಾರ್ಮಿಕ ಕೇಂದ್ರಗಳು ಸಾವಿರಾರು ಸಂಖ್ಯೆಯಲ್ಲಿ ನಿರ್ಮಾಣವಾಗಿದ್ದು, ಹಿಂದು ದೇಗುಲಗಳು 35 ಮಾತ್ರ ಎಂದು ಮಾಹಿತಿ ನೀಡಿದರು.
ಜತೆಗೆ ಅಭಿವೃದ್ಧಿ ನೆಪದಲ್ಲಿ 10 ಸಾವಿರಕ್ಕೂ ಅಧಿಕ ಸಣ್ಣ-ದೊಡ್ಡ ಹಿಂದು ದೇಗುಲಗಳನ್ನು ಕೆಡವಲಾಗಿದೆ ಎಂದು ಆರೋಪಿಸಿದರು.
ಕೇರಳದ ಅನಂತ ಪದ್ಮನಾಭ, ಆಂಧ್ರದ ತಿರುಪತಿ ಒಳಗೊಂಡು ಪ್ರಸಿದ್ಧ ಹಿಂದು ದೇಗುಲದ ಹಣವನ್ನು ಎಲ್ಲ ಧರ್ಮೀಯರಿಗಾಗಿ ಅಲ್ಲಿನ ಸರ್ಕಾರಗಳು ಬಳಸುತ್ತಿವೆ. ಆದರೆ, ಅನ್ಯ ಧಾರ್ಮಿಕ ಕೇಂದ್ರಗಳ ಒಂದು ರೂಪಾಯಿ ಬೇರೆ ಕಾರ್ಯಕ್ಕೆ ಬಳಕೆಯಾಗುತ್ತಿಲ್ಲ ಎಂದರು.
ನಮ್ಮ ಸ್ವಾಮೀಜಿಗಳು ತಪ್ಪು ಮಾಡಿದರೆ, ಶಿಕ್ಷೆಗೆ ಒಳಗಾಗುತ್ತಾರೆ. ಆದರೆ, ಬೇರೆ ಧರ್ಮಾಧಿಕಾರಿಗಳು ಮಾಡಿದ ತಪ್ಪು ಬೆಳಕಿಗೆ ಬರುವುದಿಲ್ಲ. ಯಾವ ಧರ್ಮಕ್ಕೆ ಹೆಚ್ಚು ಅನ್ಯಾಯವಾಗುತ್ತಿದೆ ಎಂಬುದನ್ನು ನಾವೇ ಪ್ರಶ್ನಿಸಿಕೊಳ್ಳಬೇಕು ಎಂದು ಹೇಳಿದರು.
ಆರ್‌ಎಸ್‌ಎಸ್‌ನ ದಕ್ಷಿಣ ಪ್ರಾಂತ ಸಹ ಕಾರ್ಯವಾಹರು ಪಟ್ಟಾಭಿರಾಮ ಮಾತನಾಡಿ, ಭಾರತೀಯ ಸಂಸ್ಕೃತಿ, ಸಂಸ್ಕಾರ, ಹಿಂದು ಪರಂಪರೆ ಹಾಗೂ ಇಸ್ಲಾಂ, ಕ್ರೈಸ್ತ ಧರ್ಮಗಳು ಉಳಿಯಬೇಕಾದರೆ ಶ್ರೀಕೃಷ್ಣನ ಧರ್ಮ ನೀತಿಯಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟರು.