ನರೇಗಲ್ಲ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೀದಿಬದಿ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿಗಾಗಿ ಸಾಕಷ್ಟು ಯೋಜನೆ ಜಾರಿಗೆ ತಂದಿದ್ದು ಅವುಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಮುಂದುವರಿಯಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಮಪ್ಪ ಹೊಸಮನಿ ಹೇಳಿದರು.
ಪಟ್ಟಣ ಪಂಚಾಯಿತಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಬೀದಿ ಬದಿ ವ್ಯಾಪಾರಸ್ಥರ ಸರ್ವೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬೀದಿ ವ್ಯಾಪಾರವು ಸ್ವ-ಉದ್ಯೋಗದ ಮೂಲವಾಗಿದೆ. ಬೀದಿಬದಿ ವ್ಯಾಪಾರಸ್ಥರ ಸರ್ವೆ ಕಾರ್ಯ ಮುಗಿದ ನಂತರ ಎಲ್ಲರಿಗೂ ಗುರುತಿನ ಚೀಟಿ ವಿತರಿಸಲಾಗುವುದು. ಕಾಲ ಕಾಲಕ್ಕೆ ಬೀದಿಬದಿ ವ್ಯಾಪಾರಸ್ಥರ ಸಭೆ ನಡೆಸಿ ಅವರ ಕುಂದು- ಕೊರತೆಗಳನ್ನು ಪರಿಹರಿಸಲಾಗುತ್ತದೆ. ವ್ಯಾಪಾರ ವೃದ್ಧಿಗಾಗಿ ವಿಶೇಷ ತರಬೇತಿ ಸೇರಿ ಸಾಲ ಸೌಲಭ್ಯಗಳನ್ನು ನೀಡುವ ಗುರಿ ಹೊಂದಲಾಗಿದೆ ಎಂದರು.
ಸಮುದಾಯ ಸಂಘಟಿಕ ವಿ.ವೈ. ಮಡಿವಾಳರ, ಸಿಆರ್ಪಿ ಅಶ್ವಿನಿ ಹಿರೇಮಠ, ಶಂಕ್ರಪ್ಪ ದೊಡ್ಡಣ್ಣವರ, ಆರೀಫ್ ಮಿರ್ಜಾ, ರಮೇಶ ಹಲಗಿ, ಟಿವಿಸಿ ಕಮಿಟಿ ಸದಸ್ಯರಾದ ವೀರಪ್ಪ ಹುರಕಡ್ಲಿ, ಶಿವಾನಂದ ಪದ್ಮಸಾಲಿ, ಶಿವು ಮುಳಗುಂದ, ದ್ಯಾಮಪ್ಪ ಕಡೇತೊಟದ, ದೇವಕ್ಕ ರಾಠೋಡ, ಇತರರಿದ್ದರು.