More

    ದನದ ಕೊಟ್ಟಿಗೆಯಿಂದ ರಾಷ್ಟ್ರಮಟ್ಟದವರೆಗೆ ಪಮೋಹಿ ಕುಗ್ರಾಮದ ಬುಡಕಟ್ಟು ಮಕ್ಕಳು

    ಎಲ್ಲಾ ಮಕ್ಕಳಿಗೂ ಶಿಕ್ಷಣ ಸಿಗಬೇಕು ಎಂದು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳ ಪಟ್ಟಿ ಬೆಳೆಯುತ್ತಲೇ ಇದೆ. ಇದನ್ನೇ ದೃಷ್ಟಿಯಲ್ಲಿಟ್ಟುಕೊಂಡು ಅಲ್ಲಲ್ಲಿ ಕೆಲವು ಯುವಕರು ಶಿಕ್ಷಣದ ಬೀಜ ಬಿತ್ತುತ್ತಿದ್ದಾರೆ. ಅಂಥವರ ಪೈಕಿ ಮೂವರು ‘ಸಾಧಕರ’ ಪರಿಚಯ ಇಲ್ಲಿದೆ…

    ಅಸ್ಸಾಂನಲ್ಲಿ ಬುಡಕಟ್ಟು ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಕ್ಷರ ಎಂದರೇನು ಎಂಬುದರ ಪರಿವೇ ಇಲ್ಲದ ಪಮೋಹಿ ಎಂಬ ಕುಗ್ರಾಮದಲ್ಲಿರುವ ಬುಡಕಟ್ಟು ಮಕ್ಕಳು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಇಂಥದ್ದೊಂದು ಅಚ್ಚರಿಯ ಹಿಂದಿರುವ ಶಕ್ತಿ ಉತ್ತಮ್ ಥೇರನ್ ಎಂಬ ಯುವಕ.

    ‘ಪುಷ್ಪ ಪಾರಿಜಾತ’ ಹೆಸರಿನಲ್ಲಿ ಶಾಲೆಯೊಂದರನ್ನು ತೆರೆದಿರುವ ಥೇರನ್ ಇಂದು ಸಂಪೂರ್ಣ ಗ್ರಾಮದ ಚಿತ್ರಣವನ್ನೇ ಬದಲಿಸಿದ್ದಾರೆ. ಬುಡಕಟ್ಟು ಮಕ್ಕಳಿಗೆ ಪಠ್ಯ ಶಿಕ್ಷಣ ಮಾತ್ರವಲ್ಲದೇ ಜೀವನಕ್ಕೆ ಬೇಕಾದ ಕೌಶಲಗಳನ್ನೂ ಕಲಿಸುತ್ತಿದ್ದಾರೆ.

    ಪಮೋಹಿಯವರೇ ಆದ ಥೇರನ್ ದಿನವೂ ಕಂದಮ್ಮಗಳು ಹೊಲಗಳಲ್ಲಿ ದುಡಿಯುವುದನ್ನು ನೋಡುತ್ತಿದ್ದರು. ಈ ಮಕ್ಕಳಿಗಾಗಿ ಏನಾದರೊಂದು ಸೌಕರ್ಯ ಕಲ್ಪಿಸಲೇಬೇಕು ಎಂಬ ಪಣ ತೊಟ್ಟರು. ಎಲ್ಲವನ್ನೂ ಸಾಧ್ಯವಾಗಿಸುವುದು ಶಿಕ್ಷಣವೊಂದೇ ಎಂಬುದು ಅವರಿಗೆ ಅರಿವಾಯಿತು. ‘ದುಡಿಯುವ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ ಪ್ರಯೋಜನವೇನು?, ಅವರು ಶಾಲೆಗಳಲ್ಲಿ ಕಲಿಯುತ್ತಿದ್ದರೆ ದುಡಿದು ಹಾಕುವವರು ಯಾರು?’ ಎಂಬ ಪಾಲಕರ ಮನವೊಲಿಸಿ, ಅವರಿಗೆ ಶಿಕ್ಷಣದ ಮಹತ್ವ ಸಾರಲು ಉತ್ತಮ್ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಕೊನೆಗೂ ಒಂದಷ್ಟು ಮಂದಿ ಒಪ್ಪಿಕೊಂಡರು.

    ಆದರೆ ಜಾಗ ಎಲ್ಲಿ? ಥೇರನ್ ಬಳಿ ಇದ್ದುದು ಕೇವಲ 800 ರೂಪಾಯಿ. ಅದನ್ನೇ ಖರ್ಚು ಮಾಡಿ 2002ರಲ್ಲಿ ದನದ ಕೊಟ್ಟಿಗೆಯಲ್ಲಿ ಶಾಲೆ ಆರಂಭಿಸಿದರು. ಆಗ ಅಂತೂ ಇಂತೂ 32 ಮಕ್ಕಳ ಪಾಲಕರ ಮನ ಒಲಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಆ ಮಕ್ಕಳನ್ನು ಉಳಿಸಿಕೊಳ್ಳುವುದು ಸಾಹಸದ ಕೆಲಸವಾಗಿತ್ತು. ಆದ್ದರಿಂದ ಮೊದಲು ಮಕ್ಕಳಿಗೆ ಆಟೋಟಗಳ ಪರಿಚಯ ಮಾಡಿಸಿದರು. ಮಕ್ಕಳಿಗೆ ಇದು ತುಂಬಾ ಖುಷಿಕೊಟ್ಟಿತು. ನಂತರ ನಿಧಾನವಾಗಿ ಕಲಿಕೆ ಆರಂಭಿಸಿ ಇಂಗ್ಲಿಷ್, ಹಿಂದಿ ಮತ್ತು ಅಸ್ಸಾಮಿ ಕಲಿಸಿದರು.

    ಮಕ್ಕಳಿಗೆ ಮಣ್ಣಿನ ಆಟ ಆಡಿಸಿದರು. ಜತೆಗೆ, ಮಕ್ಕಳಿಂದಲೇ ಒಂದಿಷ್ಟು ಕಾರ್ಯಚಟುವಟಿಕೆಗಳನ್ನು ಮಾಡಿಸಿ ಅವರ ಕೈಯಲ್ಲಿ ಅಲ್ಪಸ್ವಲ್ಪ ದುಡ್ಡನ್ನೂ ಕೊಡಲು ಶುರುಮಾಡಿದರು. ಮಕ್ಕಳಲ್ಲಿ ಏನೋ ಒಂದು ರೀತಿಯ ಸುಧಾರಣೆ ಆಗುತ್ತಿರುವುದನ್ನು ಕಂಡ ಸುತ್ತಮುತ್ತ ಹಳ್ಳಿಗರು ಆಕರ್ಷಿತರಾಗಿ ತಮ್ಮ ಮಕ್ಕಳನ್ನೂ ಕಳುಹಿಸುವ ಆಸಕ್ತಿ ತೋರಿದರು. ಹೀಗೆ ಮಕ್ಕಳ ಸಂಖ್ಯೆ ಬೆಳೆಯುತ್ತಾ ಸಾಗಿತು. ಕೈಯಲ್ಲಿ ಕಾಸಿಲ್ಲದಿದ್ದರೂ ಮಕ್ಕಳಿಗೆ ಉಜ್ವಲ ಭವಿಷ್ಯ ರೂಪಿಸುವ ಕನಸು ಮಾತ್ರ ಥೇರನ್ ಅವರಿಗಿತ್ತು.

    ಅದೊಂದು ದಿನ ಅಂದರೆ 2005 ರಲ್ಲಿ ಉತ್ತಮ್ ಬೋಧ್ ಗಯಾ ಪ್ರವಾಸದಲ್ಲಿದ್ದ ಜಪಾನಿನ ಪ್ರವಾಸಿಗರ ತಂಡವು ಈ ಶಾಲೆಯ ಬಗ್ಗೆ ತಿಳಿದುಕೊಂಡು ಭೇಟಿ ನೀಡಿತು. ಥೇರನ್ ಅವರ ಅಪೂರ್ವ ಸಾಹಸ ಕಂಡು ಅವರಿಗೆ ವಿಪರೀತ ಖುಷಿಯಾಯಿತು. ನಂತರ ಈ ತಂಡವು ಖುದ್ದು ಧನಸಹಾಯ ಮಾಡಿದ್ದಲ್ಲದೇ ಇತರ ಸಂಘ ಸಂಸ್ಥೆಗಳಿಂದ ಧನಸಹಾಯ ಒದಗಿಸಲು ನೆರವು ನೀಡಿತು. ಇದರಿಂದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ಸಮವಸ್ತ್ರ, ಶಾಲೆಗೆ ಮೂಲಭೂತ ಸೌಕರ್ಯಗಳು ದಾನಿಗಳ ನೆರವಿನಿಂದ ಹರಿದುಬಂದಿತು.

    ಇಂದು, ಅಕಾಡೆಮಿ ಪೂರ್ಣ ಪ್ರಮಾಣದ ಶಿಕ್ಷಣ ಸಂಸ್ಥೆಯಾಗಿದ್ದು, 500ಕ್ಕೂ ಅಧಿಕ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ನರ್ಸರಿಯಿಂದ 10 ನೇ ತರಗತಿಯವರೆಗೆ ಇಲ್ಲಿ ಕಲಿಸಲಾಗುತ್ತಿದೆ. ಮಕ್ಕಳ ಸಂಖ್ಯೆ ಹೆಚ್ಚುತ್ತಿರುವ ಕಾರಣ, ವಿದ್ಯಾರ್ಥಿನಿಲಯವನ್ನೂ ಸ್ಥಾಪಿಸಲಾಗಿದೆ. ಉತ್ತಮ್ ಅವರ ಜತೆ 20 ಮಂದಿ ಶಿಕ್ಷಕರು ಕೈಜೋಡಿಸಿದ್ದಾರೆ. ದನದ ಕೊಟ್ಟಿಗೆಯಲ್ಲಿ ಆರಂಭಗೊಂಡ ಈ ಶಾಲೆ ತನ್ನದೇ ಆದ ಗ್ರಂಥಾಲಯವನ್ನು ಹೊಂದಿದೆ. ಇಲ್ಲಿನ ವಿದ್ಯಾರ್ಥಿಗಳು ಕಂಪ್ಯೂಟರ್, ಹೊಲಿಗೆ, ಕ್ರೀಡೆ ಮತ್ತು ನೃತ್ಯ ಸೇರಿದಂತೆ ಹಲವಾರು ರೀತಿಯ ಶಿಕ್ಷಣಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿ ಕಲಿತಿರುವ ಅನೇಕ ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ರಾಷ್ಟ್ರೀಯ ಮಟ್ಟದವರೆಗೂ ಗುರುತಿಸಿಕೊಂಡಿದ್ದಾರೆ.

    ಶಿಕ್ಷಣದ ಜತೆ ಊಟದ ವ್ಯವಸ್ಥೆ: ಉತ್ತರ ಪ್ರದೇಶದ ಘಾಜಿಯಾಬಾದ್​ನಲ್ಲಿ ಕಟ್ಟಡ ಕಾರ್ವಿುಕರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರೆಲ್ಲರೂ ಶಾಲೆಯ ಮುಖ ಕಾಣದವರು. ಇವರ ಜತೆಗೆ, ಇಲ್ಲಿ ಬಾಲಕಾರ್ವಿುಕರ ಸಂಖ್ಯೆಯೂ ಹೆಚ್ಚಿದೆ. ಇಂಥ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ ದೆಹಲಿಯಲ್ಲಿ ಭಾರತೀಯ ರೈಲ್ವೆ ಇಲಾಖೆಯಲ್ಲಿ ಹಿರಿಯ ಇಂಜಿನಿಯರ್ ಆಗಿರುವ ಸುಶೀಲ್ ಕುಮಾರ್. ಆದ್ದರಿಂದಲೇ ಇವರು ಇಂಥ ಮಕ್ಕಳಿಗಾಗಿ ಅಧ್ಯಯನ ಕೇಂದ್ರಗಳನ್ನು ತೆರೆದಿದ್ದಾರೆ.

    ಅಲ್ಲಿ ಸದ್ಯ 245 ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಬೆಳಗ್ಗೆ 9 ರಿಂದ ಸಂಜೆಯರೆಗೆ ಅಕ್ಷರಾಭ್ಯಾಸ ಮಾಡಿಸಲಾಗುತ್ತಿದ್ದು, ಮಕ್ಕಳ ಪರಿಸ್ಥಿತಿಗೆ ಹಾಗೂ ಅವರ ಕೆಲಸಕ್ಕೆ ಅನುಗುಣವಾಗಿ ಕಲಿಸಲಾಗುತ್ತಿದೆ. ಅಷ್ಟೇ ಅಲ್ಲದೇ, ಈ ವಿದ್ಯಾರ್ಥಿಗಳ ಮೂಲಭೂತ ಸೌಕರ್ಯ ನೀಡುವುದರ ಜತೆಗೆ ಮಕ್ಕಳಿಗೆ ಒಂದೊತ್ತಿನ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ. ಇವರು ಕನಿಷ್ಠ 1000 ಮಕ್ಕಳಿಗೆ ಶಿಕ್ಷಣ ನೀಡುವ ಗುರಿ ಹೊಂದಿದ್ದಾರೆ. ಆದರೆ ಹಣದ ಕೊರತೆಯಿಂದ ಸದ್ಯ ಅದು ಸಾಧ್ಯವಾಗುತ್ತಿಲ್ಲ. ಮಕ್ಕಳಿಗೆ ಎರಡೂ ಹೊತ್ತಿನ ಊಟ ಸಿಕ್ಕರೆ ಅವರು ಕೂಲಿ ಕೆಲಸ, ಚಿಂದಿ ಆಯುವ ಕೆಲಸ ಮಾಡುವುದಿಲ್ಲ ಎನ್ನುವ ಭರವಸೆ ಸುಶೀಲ್ ಅವರದ್ದು.

    ಮೆಟ್ರೋ ಸೇತುವೆ ಅಡಿಯೇ ಶಾಲೆ!

    ಶಿಕ್ಷಣ ಕಲಿಸಲು ಜಾಗ ಯಾವುದಾದರೇನು? ಕಲಿಸುವ ಶಕ್ತಿ, ಕಲಿಯುವ ಮನಸು ಇದ್ದರೆ ಮುಖ್ಯ ಎನ್ನುವುದಕ್ಕೆ ಸಾಕ್ಷಿಯಾಗಿದೆ ದೆಹಲಿಯ ಯಮುನಾ ನದಿ ತೀರದ ಬಳಿ ಮೆಟ್ರೋ ಸೇತುವೆ. ಇದರ ಅಡಿ ನಿತ್ಯವೂ 300ಕ್ಕೂ ಅಧಿಕ ಮಕ್ಕಳಿಗೆ ವಿದ್ಯಾರ್ಜನೆ ಮಾಡುತ್ತಿದ್ದಾರೆ ರಾಜೇಶ್ ಕುಮಾರ್ ಶರ್ಮಾ ಎಂಬ ಶಿಕ್ಷಕ.

    13 ವರ್ಷಗಳಿಂದ ಇದೇ ಜಾಗದಲ್ಲಿ ರಾಜೇಶ್ ಅವರು ಕಡುಬಡತನದಲ್ಲಿ ಇರುವ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಈ ಶಾಲೆಗೆ ಅವರಿಟ್ಟಿರುವ ಹೆಸರು ‘ದಿ ಫ್ರೀ ಸ್ಕೂಲ್ ಅಂಡರ್ ದಿ ಬ್ರಿಡ್ಜ್’. ಬೆಳಗ್ಗೆ 9 ರಿಂದ 11 ರವರೆಗೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ 4.30ರವರೆಗೆ ತರಗತಿಗಳನ್ನು ಅವರು ನಡೆಸುತ್ತಿದ್ದಾರೆ. ಮೊದಮೊದಲು ಒಬ್ಬರೇ ನಡೆಸುತ್ತಿದ್ದ ಈ ಶಾಲೆಯಲ್ಲೀಗ ಏಳು ಶಿಕ್ಷಕರು ಸ್ವಯಂ ಪ್ರೇರಣೆಯಿಂದ ಬಂದಿದ್ದಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಕಲಿಸುವ ಮೂಲಕ ಸ್ವಯಂ ಸೇವೆಯಲ್ಲಿ ತೊಡಗಿದ್ದಾರೆ. ಈ ತೆರೆದ ಶಾಲೆಯಲ್ಲಿ ಕೇವಲ ಗೋಡೆಯ ಮೇಲೆ ಕಪ್ಪು ಬಣ್ಣದ ಕೋಟ್ ಪೇಂಟಿಂಗ್ ಮಾಡಿದ ಐದು ಬ್ಲಾ್ಯಕ್​ಬೋರ್ಡ್​ಗಳಷ್ಟೇ ಇವೆ.

    ಈ ಶಾಲೆಯಲ್ಲಿ ಬಾಲಕಿಯರು ಮತ್ತು ಬಾಲಕರಿಗಾಗಿ ಪ್ರತ್ಯೇಕ ಶೌಚಾಲಯ ಸೌಲಭ್ಯವೂ ಇದ್ದು, ಮಕ್ಕಳಿಗೆ ನೈರ್ಮಲ್ಯ ಮತ್ತು ಸ್ವಚ್ಛತೆಯ ಬಗ್ಗೆ ಸಹ ಕಲಿಸಲಾಗುತ್ತದೆ. ಇಷ್ಟು ವರ್ಷವಾದರೂ ಸ್ವಂತ ಶಾಲೆ ಮಾಡಲು ವ್ಯರ್ಥ ಪ್ರಯತ್ನ ಮಾಡಿರುವ ನೋವು ರಾಜೇಶ್ ಅವರದ್ದು. ‘ನಾನು ಆರಂಭದಲ್ಲಿ ಸ್ವಂತ ಶಾಲೆಯ ಬಗ್ಗೆ ಸಂಬಂಧಿತ ಅಧಿಕಾರಿಗಳ ಜತೆ ರ್ಚಚಿಸಿದ್ದೆ. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ. ಎಲ್ಲರೂ ಅನುಮಾನದಿಂದಲೇ ಕಾಣತೊಡಗಿದರು.

    ಆದ್ದರಿಂದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇಲ್ಲಿಯೇ ಮುಂದುವರಿಸಿದ್ದೇನೆ’ ಎಂದು ವಿಷಾದಿಸುತ್ತಾರೆ. ರಾಜೇಶ್ ಅವರು ಸ್ಥಿತಿವಂತರಲ್ಲದ ಕಾರಣ, ಮಕ್ಕಳಿಗೆ ಹೆಚ್ಚಿನ ನೆರವು ನೀಡುವುದು ಕಷ್ಟವಾಗುತ್ತಿದೆ. ಕಿರಾಣಿ ಅಂಗಡಿಯಿಂದ ಅವರು ಜೀವನ ನಡೆಸುತ್ತಿದ್ದಾರೆ. ಇದರ ಹೊರತಾಗಿಯೂ ಕಲಿಸುವ ಛಲ ಅವರು ಬಿಟ್ಟಿಲ್ಲ. ವಿದ್ಯಾರ್ಥಿಗಳ ಬಗ್ಗೆ ನಿಗಾವಹಿಸಲು ಹಾಜರಾತಿ ದಾಖಲೆಯನ್ನು ಸಹ ನಿರ್ವಹಿಸುತ್ತಿದ್ದು, ಯಾರಾದರೂ ಹೆಚ್ಚು ದಿನಗಳ ಕಾಲ ತರಗತಿಗಳಿಗೆ ಗೈರುಹಾಜರಾದರೆ ಅದಕ್ಕೆ ಕಾರಣವನ್ನು ತಿಳಿಯಲು ಅವರು ಪೋಷಕರನ್ನು ಭೇಟಿಮಾಡುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts