ಯಶಸ್ವಿಯಾದ ಒಂದು ಮೊಟ್ಟೆಯ ಕತೆ…

blank

ಯಶಸ್ವಿಯಾದ ಒಂದು ಮೊಟ್ಟೆಯ ಕತೆ...ಇಂದು ಡಾ.ಸಲೀಂ ಅಲಿ ಜನ್ಮದಿನ

ಈ ಬಾರಿ ರಾಜಸ್ಥಾನದ ಪೋಖ್ರಾನ್​ನಲ್ಲಿ ದೀಪಾವಳಿ ಸಂಭ್ರಮ ತುಸು ಹೆಚ್ಚೇ ಜೋರಾಗಿತ್ತು. ಆದರೆ, ಇದು ಅಣುಬಾಂಬ್ ಕುರಿತ ಸುದ್ದಿಯಲ್ಲ. ಪೋಖ್ರಾನ್​ನ ಸಣ್ಣ ಕೊಠಡಿಯೊಂದರಲ್ಲಿ ಮೊಟ್ಟೆಯೊಂದರಿಂದ ಪುಟ್ಟಹಕ್ಕಿ ಮರಿ ಹೊರಬಂದ ಸಂಭ್ರಮ. ಅಣುಬಾಂಬ್ ನಮ್ಮ ರಕ್ಷಣಾ ತಂತ್ರಜ್ಞಾನದ ಸಾಮರ್ಥ್ಯ ತೋರ್ಪಡಿಸುವ ಕಾರ್ಯವಾದರೆ ಈ ಹಕ್ಕಿ ಮರಿಯು ಉನ್ನತ ತಂತ್ರಜ್ಞಾನವನ್ನು ಬಳಸಿ ಪಕ್ಷಿಯೊಂದರ ಅಸ್ತಿತ್ವ ಉಳಿಸುವ ಪ್ರಯತ್ನದ ದ್ಯೋತಕವಾಗಿದೆ.

ಈ ಭೂಮಿಯ ಮೇಲಿರುವ ಅತ್ಯಂತ ದೊಡ್ಡ ಪಕ್ಷಿ ಸುಮಾರು ಎರಡು ಮುಕ್ಕಾಲು ಮೀಟರ್ ಉದ್ದ ಬೆಳೆಯುವ ಆಸ್ಟ್ರಿಚ್. ಭಾರತದಲ್ಲಿನ ದೊಡ್ಡ ಪಕ್ಷಿ ‘ದಿ ಗ್ರೇಟ್ ಇಂಡಿಯನ್ ಬಸ್ಟರ್ಡ್’ ಉರ್ಫ್ ದೊರೆವಾಯನ ಹಕ್ಕಿ (ಎರ್ಲಡ್ಡುಗಳು). ಒಂದು ಮೀಟರ್​ನಷ್ಟು ಎತ್ತರ ಬೆಳೆಯುವ ಈ ಪಕ್ಷಿ ‘ಭಾರತದ ಆಸ್ಟ್ರಿಚ್’ ಎಂದೇ ಖ್ಯಾತಿಯಾಗಿದೆ. ಆದರೆ, ಭಾರತದಲ್ಲಿ ಇವುಗಳ ಸಂಖ್ಯೆ 150ರ ಹತ್ತಿರ ಬಂದು ನಿಂತಿದೆ. ಒಂದುಕಾಲದಲ್ಲಿ ಭಾರತದ ಉದ್ದಗಲದಲ್ಲಿ ರಾಜನಂತೆ ಓಡಾಡಿ ಮೆರೆಯುತ್ತಿದ್ದ ದೊರೆವಾಯನ ಹಕ್ಕಿಯ ಸಂಖ್ಯೆ ಕುಸಿಯಲು ಹಲವು ಕಾರಣಗಳಿವೆ.

ನೀಳಕಾಯ, ಬಿಳಿ ಕತ್ತು ಮತ್ತು ತಲೆ, ನೆತ್ತಿಯ ಮೇಲೆ ಕಪ್ಪುಪಟ್ಟಿ, ಕಂದುಬಣ್ಣದ ರೆಕ್ಕೆ ಮತ್ತು ಬೆನ್ನು ಎದೆಯ ಮೇಲೆ ಅಲ್ಲಲ್ಲಿ ಇಣುಕಿರುವ ಕಪ್ಪುಪಟ್ಟಿಗಳನ್ನು ಹೊಂದಿರುವ ದೊರೆವಾಯನ ಹಕ್ಕಿಯ ಸೌಂದರ್ಯಕ್ಕೆ ಮನಸೋಲದವರಿಲ್ಲ. ಈ ಪಕ್ಷಿಗಳು ನಮ್ಮಲ್ಲಿ ಮತ್ತು ಪಾಕಿಸ್ತಾನದ ಸಿಂಧ ಪ್ರದೇಶಗಳಿಗಷ್ಟೇ ಸೀಮಿತ. ದೊರೆವಾಯನ ಹಕ್ಕಿಗಳ ಮಾಂಸಕ್ಕೆ ರುಚಿ ಹೆಚ್ಚು ಮತ್ತು ಅದು ಹಲವು ಔಷಧ ಗುಣಗಳನ್ನು ಹೊಂದಿದೆಯೆಂಬ ನಂಬಿಕೆಯಿಂದ ಅವುಗಳ ಹತ್ಯೆಗಳೂ ನಡೆಯುತ್ತಿದ್ದರೂ ಅದು ಒಂದು ಹಂತಕ್ಕಷ್ಟೇ ಸೀಮಿತವಾಗಿತ್ತು. ಆದರೆ ಇವುಗಳ ಶಿಕಾರಿ ವೇಗ ಪಡೆದದ್ದು ಮೊಘಲರ ಕಾಲದಲ್ಲಿ. ಮುಘಲ್ಲರ ದೊರೆ ಬಾಬರ್​ನಂತೂ ಈ ಹಕ್ಕಿಯ ಮಾಂಸದ ದೊಡ್ಡ ಅಭಿಮಾನಿ. 15 ಕಿಲೋ ತೂಗುವ ಈ ಪಕ್ಷಿಯ ಮಾಂಸದಿಂದ ತಯಾರಾಗುತ್ತಿದ್ದ ಖರ್ಚಿಲ್ ಎಂಬ ಖಾದ್ಯ ಆತನ ಊಟದ ತಾಟಿನಲ್ಲಿ ಕಾಯಂ ಕಂಡುಬರುತ್ತಿತ್ತು. ಇನ್ನು ಬ್ರಿಟಿಷರ ಆಳ್ವಿಕೆಯಲ್ಲಿ ಅವರ ನೆಚ್ಚಿನ ಹಕ್ಕಿಯನ್ನು ಜೀವಂತ ಹಿಡಿಯುವ ಕ್ರೀಡೆಗೆ ತನ್ನ ತೂಕದ ಕಾರಣ ನಿಧಾನವಾಗಿ ಓಡುವ ಮತ್ತು ಕಡಿಮೆ ದೂರವಷ್ಟೇ ಹಾರಬಲ್ಲ ಈ ಎರ್ಲಡ್ಡು ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಿತ್ತು.

ಕ್ರಿಮಿಕೀಟಗಳು, ಕಾಳು, ಸರಿಸೃಪಗಳನ್ನು ತಿನ್ನುತ್ತ ಅವುಗಳು ಹೆಚ್ಚು ವಾಸಿಸುವ ಕುರುಚಲು ಕಾಡಿಗೆ ಹೊಂದಿಕೊಂಡಿರುವ ಒಣಬಯಲು ಪ್ರದೇಶವನ್ನು ಆವಾಸವನ್ನಾಗಿ ಆಯ್ದುಕೊಳ್ಳುತ್ತಿದ್ದ ಈ ಹಕ್ಕಿಗಳ ವಾಸಸ್ಥಾನ ನಗರೀಕರಣ, ಔದ್ಯೋಗಿಕರಣ ಹೆಚ್ಚಿದಂತೆ ಕೃಷಿಕ್ಷೇತ್ರವಾಗಿ ಅಥವಾ ಸೌರವಿದ್ಯುತ್​ನಂತಹ ಅಸಾಂಪ್ರದಾಯಿಕ ವಿದ್ಯುತ್ ಉತ್ಪಾದನೆಗೆ ಬಳಕೆಯಾಗಿ ನಾಶವಾಗುತ್ತ ಬಂತು. ಜೊತೆಗೆ ಈ ಹಕ್ಕಿಗಳ ದೂರದೃಷ್ಟಿ ಮಂದವಾಗಿರುವ ಕಾರಣದಿಂದ. ವಿದ್ಯುತ್ ಉತ್ಪಾದನೆಗೆ ನಿರ್ವಣವಾದ ಯೋಜನೆಗಳಿಂದ ವಿದ್ಯುತ್ತನ್ನು ಹೊತ್ತು ಸಾಗುವ ತಂತಿಗಳನ್ನು ಭಾರಿ ತೂಕವನ್ನು ಹೊತ್ತುಕೊಂಡು ಹೆಚ್ಚು ಎತ್ತರಕ್ಕೆ ಹಾರಲಾಗದ ಎರ್ಲಡ್ಡುಗಳು ರ್ಸ³ಸಿ ಸಾಯುವ ಪ್ರಕರಣಗಳೂ ಹೆಚ್ಚತೊಡಗಿದವು. ಇವುಗಳ ಸಂಖ್ಯೆ ನಶಿಸಲು ಅತಿಮುಖ್ಯ ಕಾರಣ ಈ ಪಕ್ಷಿಗಳ ಬಾಣಂತನದ ಪ್ರಕ್ರಿಯೆ.

ವರ್ಷಕ್ಕೊಂದೇ ಮೊಟ್ಟೆಯಿಡುವ ಹೆಣ್ಣು ಹಕ್ಕಿಯು ಮುಂದಿನ ಮೂರು ವರ್ಷಗಳವರೆಗೆ ತನ್ನ ಮರಿಗಳ ಲಾಲನೆಪಾಲನೆಯಲ್ಲೇ ತೊಡಗಿರುತ್ತದೆ. ಹೀಗಾಗಿ ಈ ಪಕ್ಷಿ ಒಮ್ಮೆ ಮೊಟ್ಟೆಯಿಟ್ಟ ನಂತರ ಮತ್ತೆ ಮುಂದಿನ ಮೂರು ವರ್ಷಗಳವರೆಗೆ ಸಂತಾನಾಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಹೀಗಾಗಿ ಭಾರತದಲ್ಲಿ 1969ರಲ್ಲಿ 1260ರ ಸಂಖ್ಯೆಯಲ್ಲಿದ್ದ ಈ ಪಕ್ಷಿಗಳು 2018ರಲ್ಲಿ 150ಕ್ಕೆ ಕುಸಿದಿವೆ. ಪಾಕಿಸ್ತಾನದಲ್ಲಂತೂ ಎರ್ಲಡ್ಡುಗಳು ಸಂಪೂರ್ಣವಾಗಿ ನಿರ್ನಾಮವಾಗಿವೆಯೆಂದು ಹೇಳಲಾಗುತ್ತದೆ. ಅವುಗಳ ಕುಟುಂಬದ ಹತ್ತಿರ ಸಂಬಂಧಿಯಾಗಿರುವ ಹೌಬಾರಾ ಎರ್ಲಡ್ಡುಗಳು ಪಾಕಿಸ್ತಾನದ ಬಲೂಚಿಸ್ತಾನದ ಪ್ರದೇಶಕ್ಕೆ ಪ್ರತಿವರ್ಷ ಚಳಿಗಾಲದಲ್ಲಿ ವಲಸೆ ಬರುತ್ತವೆ. ಈ ಪಕ್ಷಿಗಳನ್ನು ಆ ದೇಶ ರಾಜತಾಂತ್ರಿಕವಾಗಿ ಬಳಸಿಕೊಳ್ಳುತ್ತಿರುವುದಕ್ಕೆ ದಶಕಗಳ ಹಿನ್ನೆಲೆಯಿದೆ. ಕೊಲ್ಲಿಯ ದೊರೆಗಳಿಗೆ ಪಕ್ಷಿಗಳ ಬೇಟೆಯೊಂದು ಖಯಾಲಿ. ಅಲ್ಲಿನ ಕೆಲವು ರಾಷ್ಟ್ರಗಳಲ್ಲಿ ವಾರ್ಷಿಕವಾಗಿ ನಡೆಯುವ ಪಕ್ಷಿ ಬೇಟೆ ಉತ್ಸವಕ್ಕೆ ಜಾತ್ರೆಯಂತೆ ಜನ ಸೇರುತ್ತಾರೆ.

ಅದರಲ್ಲೂ ಹೌಬಾರಾ ಎರ್ಲಡ್ಡುಗಳ ಬೇಟೆಯೆಂದರೆ ಅವರಿಗೆ ಪಂಚಪ್ರಾಣ. 1960ರ ಆಸುಪಾಸಿನಲ್ಲಿ ಕೊಲ್ಲಿಗೆ ವಲಸೆ ಬರುವ ಎರ್ಲಡ್ಡುಗಳ ಸಂಖ್ಯೆ ಕ್ಷೀಣಿಸಿದ ಪರಿಣಾಮವಾಗಿ ಅವುಗಳನ್ನು ಹುಡುಕಿಕೊಂಡು ಬೇರೆಡೆಗೆ ಈ ದೊರೆಗಳು ಹೋಗುವಂತಾಯ್ತು. ಎರ್ಲಡ್ಡುಗಳು ವಲಸೆಯ ಪಥ ಬದಲಿಸಿ ಪಾಕಿಸ್ತಾನದ ಕೆಲ ಪ್ರದೇಶಗಳಲ್ಲಿ ಠಿಕಾಣಿ ಹೂಡುತ್ತಿರುವುದನ್ನು ಗಮನಿಸಿದ ಪಾಕಿಸ್ತಾನದ ಸರ್ಕಾರಕ್ಕೆ ಇಲ್ಲೊಂದು ರಾಜತಾಂತ್ರಿಕ ಅವಕಾಶ ಕಂಡಿತು. ತನ್ನ ನೆಲದಲ್ಲಿ ಎರ್ಲಡ್ಡು ಶಿಕಾರಿಗಾಗಿ ಕೊಲ್ಲಿ ದೊರೆಗಳಿಗೆ ರತ್ನಗಂಬಳಿ ಹಾಸಿ ತನ್ಮೂಲಕ ತನ್ನ ವಾಣಿಜ್ಯ ವ್ಯವಹಾರಗಳ ವೃದ್ಧಿಯ ದಾಳವನ್ನು ಉರುಳಿಸಿದ ಅಲ್ಲಿನ ಸರ್ಕಾರದ ನಡೆ ಹೌಬಾರಾಗಳ ಮಾರಣಹೋಮಕ್ಕೆ ಮುನ್ನುಡಿ ಬರೆಯಿತು. ಪಾಕಿಸ್ತಾನದ ಬಲೂಚಿಸ್ತಾನ ಮತ್ತು ಪಂಜಾಬಿನ ಕೆಲ ಪ್ರದೇಶಗಳನ್ನು ಕೊಲ್ಲಿ ದೊರೆಗಳ ವಾರ್ಷಿಕ ಬೇಟೆಗೆಂದೇ ನಿಗದಿ ಮಾಡಲಾಗಿದ್ದು, ಅಲ್ಲಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧವಿದೆ. ಎರ್ಲಡ್ಡುಗಳು ವಲಸೆ ಬರುವ ಸಮಯದಲ್ಲಿ ಆರಂಭವಾಗುವ ಈ ಉತ್ಸವಕ್ಕೆ ಅಲ್ಲಿನ ಸರ್ಕಾರವು ಕೊಲ್ಲಿಯ ಧಣಿಗಳಿಗೆ ಆಹ್ವಾನ ನೀಡುತ್ತದೆ. ಬರುವ ಅತಿಥಿಗಳಿಗೆ ಇಂತಿಷ್ಟು ಪಕ್ಷಿಗಳನ್ನು ಕೊಲ್ಲಬಹುದೆಂಬ ಅನುಮತಿ ಪತ್ರವನ್ನು ಪಾಕ್ ಸರ್ಕಾರ ನೀಡುತ್ತದೆಯಾದರೂ ನೈಜ ಸಂಖ್ಯೆ ಅದಕ್ಕಿಂತ ಎಷ್ಟೋ ಪಟ್ಟು ಮೀರಿರುತ್ತದೆ.

2014ರಲ್ಲಂತೂ ಈ ಬೇಟೆಗಾರರ ದೌರ್ಜನ್ಯ ಮಿತಿಮೀರಿ ಕೊಲ್ಲಲ್ಪಟ್ಟ ಪಕ್ಷಿಗಳ ಸಂಖ್ಯೆ ಅದ್ಹೇಗೋ ಹೊರಬಂದು ವಿಶ್ವಾದ್ಯಂತ ಪಕ್ಷಿಪ್ರೇಮಿಗಳಿಂದ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಲ್ಲಿನ ಸುಪ್ರೀಂಕೋರ್ಟು ಎರ್ಲಡ್ಡುಗಳ ಹತ್ಯೆಯನ್ನು 2015ರಲ್ಲಿ ನಿಷೇಧಿಸಿತು. ಈ ನಿಷೇಧ ಇಂದಿಗೂ ಜಾರಿಯಲ್ಲಿದ್ದರೂ ಕೊಲ್ಲಿ ದೊರೆಗಳಿಗೆ ಮಾತ್ರ ಅದು ಅನ್ವಯಿಸುವುದಿಲ್ಲ. ಖುದ್ದು ಸರ್ಕಾರವೇ ಈ ಕಾರ್ಯಕ್ರಮದ ನೇತೃತ್ವ ವಹಿಸಿಕೊಳ್ಳುವುದರಿಂದ ಅಲ್ಲಿನ ಪಕ್ಷಿಪ್ರಿಯರೂ ಇದೀಗ ಕೈಚೆಲ್ಲಿದ್ದಾರೆ. ಇಂತಹುದೊಂದು ಪ್ರಕ್ರಿಯೆ ಭಾರತದಲ್ಲೂ ಆರಂಭವಾಗುವುದರಲ್ಲಿತ್ತು. ಕೊಲ್ಲಿಯ ದೊರೆಗಳು ಬಂದು ರಾಜಸ್ಥಾನದಲ್ಲಿ ನಡೆಸಿದ ದೌರ್ಜನ್ಯಗಳು ಗಮನಕ್ಕೆ ಬಂದು ಇಲ್ಲಿನ ಪರಿಸರಪ್ರಿಯರು ಸರ್ಕಾರದ ಗಮನ ಸೆಳೆದ ಪರಿಣಾಮ 1972ರಲ್ಲಿ ಎರ್ಲಡ್ಡುಗಳ ಹತ್ಯೆಯನ್ನು ನಮ್ಮಲ್ಲಿ ನಿಷೇಧಿಸಲಾಯಿತು. ಭಾರತದ ಅಸ್ಟ್ರಿಚ್​ನ ಸಂಖ್ಯೆ ಕುಸಿಯುತ್ತ ಬಂದು ಕೊನೆಯ ಗುಂಪು ರಾಜಸ್ಥಾನದಲ್ಲಿರುವುದನ್ನು ಮನಗಂಡ ಅಲ್ಲಿನ ಸರ್ಕಾರ 2013ರಲ್ಲಿ ಎರ್ಲಡ್ಡುವನ್ನು ರಾಜ್ಯಪಕ್ಷಿಯಾಗಿ ಘೊಷಿಸಿ ಅವುಗಳಿರುವ ಪ್ರದೇಶವನ್ನು ಬೇಲಿಹಾಕಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸುವುದರ ಜೊತೆಗೆ ಸ್ಥಳೀಯರಲ್ಲಿ ಪಕ್ಷಿ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿತು.

ಈ ಪ್ರಯತ್ನಗಳ ಮುಂದುವರಿದ ಭಾಗವಾಗಿ ರಾಜಸ್ಥಾನದ ಅರಣ್ಯ ಇಲಾಖೆ, ಕೇಂದ್ರ ಸರ್ಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಇಲಾಖೆಗಳು ಜಂಟಿಯಾಗಿ ಭಾರತೀಯ ವನ್ಯಜೀವಿ ಸಂಸ್ಥೆಯ ಮಾರ್ಗದರ್ಶನದಲ್ಲಿ ರೂಪಿಸಿದ ಕಾರ್ಯಕ್ರಮದ ಅಂಗವಾಗಿ ರಾಜಸ್ಥಾನದ ಪೋಖ್ರಾನ್ ವ್ಯಾಪ್ತಿಯ ರಾಮ್ದೆವ್ರ ಮತ್ತು ಜೈಸಲ್ಮೇರ್ ವ್ಯಾಪ್ತಿಯ ಸಮ್್ಮ ಗ್ರಾಮಗಳಲ್ಲಿ ಎರ್ಲಡ್ಡು ಸಂರಕ್ಷಣಾ ಶಿಬಿರಗಳನ್ನು ಸ್ಥಾಪಿಸಲಾಯಿತು. ಅಬುದಾಭಿಯಲ್ಲಿರುವ ಹೌಬಾರಾ ಎರ್ಲಡ್ಡುಗಳ ಸಂರಕ್ಷಣಾ ಕೇಂದ್ರದ ಜೊತೆಗೆ ತಾಂತ್ರಿಕ ಸಹಯೋಗದ ಒಡಂಬಡಿಕೆಯ ಪರಿಣಾಮ ಅಲ್ಲಿನ ತಾಂತ್ರಿಕ ನೆರವು ಈ ಸಂರಕ್ಷಣಾ ಶಿಬಿರಗಳಿಗೆ ದೊರಕಿತು. ಮೊದಲ ಹಂತದಲ್ಲಿ ಎರ್ಲಡ್ಡುಗಳ ಮೊಟ್ಟೆಗಳನ್ನು ಆಯ್ದು ತಂದು ಸಂರಕ್ಷಣಾ ಕೇಂದ್ರದಲ್ಲಿ ಅವುಗಳಿಗೆ ಕಾವು ಕೊಟ್ಟು ಮರಿಗಳನ್ನು ಮಾಡಿ ಒಂದು ಹಂತದವರೆಗೆ ಅವುಗಳನ್ನು ಬೆಳೆಸಿ ನಂತರ ಕಾಡಿನಲ್ಲಿ ಬಿಡುವ ಯೋಜನೆ ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಇಲ್ಲಿಯವರೆಗೆ 32 ಮೊಟ್ಟೆಗಳನ್ನು ಇಲ್ಲಿಗೆ ತಂದು ಮರಿಮಾಡಲಾಗಿದ್ದು, ಈ ಮರಿಗಳು ಬೆಳೆದು ಕೇಂದ್ರದಲ್ಲೇ ಸಂಗಮವಾದ ಪರಿಣಾಮವಾಗಿ ಮತ್ತೆ ಹೊಸ 13 ಮರಿಗಳು ಹುಟ್ಟಿವೆ.

ಇದೀಗ ಸಂರಕ್ಷಣಾ ಕೇಂದ್ರದಲ್ಲಿ ಸಂಭ್ರಮ ಮನೆಮಾಡಿದ್ದು ಎರಡನೇ ಹಂತದ ಯೋಜನೆ ಯಶಸ್ವಿ ಆಗಿರುವದಕ್ಕೆ. ರಾಮ್ದೆವ್ರ ಕೇಂದ್ರದಲ್ಲಿನ ಗಂಡು ಹಕ್ಕಿಯೊಂದನ್ನು ಪಳಗಿಸಿ ಅದನ್ನು ಹೆಣ್ಣುಹಕ್ಕಿಯ ಪ್ರತಿಕೃತಿಯ ಜೊತೆಗೆ ಮಿಲನಕ್ಕೆ ಪ್ರಚೋದಿಸಿ ಗಂಡುಹಕ್ಕಿ ಬಿಡುಗಡೆ ಮಾಡಿದ ವೀರ್ಯವನ್ನು ಹಿಡಿದಿಟ್ಟುಕೊಂಡು ಅದನ್ನು ಅಲ್ಲಿಂದ ಮೂರುಗಂಟೆ ಪ್ರಯಾಣದ ಜೈಸಲ್ಮೇರ್​ನ ಸಮ್ಮ್​ ಕೇಂದ್ರಕ್ಕೆ ಸಾಗಿಸಿ ಅಲ್ಲಿರುವ ಹೆಣ್ಣುಹಕ್ಕಿಯ ದೇಹದೊಳಗೆ ಸೇರಿಸಿ ಕೃತಕ ಗರ್ಭಧಾರಣೆ ಮಾಡಿಸಿ ಆ ಹಕ್ಕಿ ಹಾಕಿದ ಮೊಟ್ಟೆಯನ್ನು ಸಂರಕ್ಷಣಾ ಶಿಬಿರದ ನಿಗರಾಣಿಯಲ್ಲಿ ಕಾವು ಕೊಟ್ಟ ಪರಿಣಾಮ ಅಕ್ಟೋಬರ್ ಕೊನೆಯ ವಾರದಲ್ಲಿ ಭಾರತದ ಮೊದಲ ಕೃತಕ ಗರ್ಭಧಾರಣಾ ಎರ್ಲಡ್ಡು ಜನ್ಮತಳೆದಿದೆ. ಸಂರಕ್ಷಣಾ ಕೇಂದ್ರದ ತಂಡದ ಈ ಯಶಸ್ಸಿನ ಹಿಂದೆ ಅಗಾಧ ಪರಿಶ್ರಮವಿದೆ. ಹಕ್ಕಿಗಳ ಜೊತೆಗೆ ಸತತ ಸಂಪರ್ಕದಲ್ಲಿದ್ದುಕೊಂಡು ಅವುಗಳ ವಿಶ್ವಾಸಗಳಿಸಿ ಪ್ರತಿಕೃತಿಯ ಜೊತೆಗೆ ಮಿಲನಕ್ಕೆ ಪುಸಲಾಯಿಸುವುದಕ್ಕೆ ಇಲ್ಲಿನ ತಂತ್ರಜ್ಞರುಗಳು ತಮ್ಮ ವರ್ಷಗಳನ್ನೇ ವ್ಯಯಿಸಿದ್ದಾರೆ.

ಕೃತಕ ಗರ್ಭಧಾರಣೆಗೆ ಎರಡು ಬೇರೆ-ಬೇರೆ ಕೇಂದ್ರಗಳಿಂದ ಹಕ್ಕಿಯನ್ನು ಆಯ್ದುಕೊಂಡಿರುವುದಕ್ಕೂ ಕಾರಣಗಳಿವೆ. ಈ ಎರಡು ಪಕ್ಷಿಗಳೂ ರಾಜಸ್ಥಾನದಲ್ಲಿದ್ದರೂ ವಿಭಿನ್ನ ಹವಾಗುಣದಲ್ಲಿ ಬೆಳೆದಿವೆ. ಹೀಗಾಗಿ ಜೀವವೈವಿಧ್ಯ ಜೊತೆಗೆ ಹುಟ್ಟುವ ಮರಿಯು ಪ್ರತಿಕೂಲ ಹವಾಮಾನದಲ್ಲಿಯೂ ಬೆಳೆಯಬಲ್ಲ ಕ್ಷಮತೆ ಹೊಂದುವುದೆಂಬ ಯೋಚನೆ ಇದರ ಹಿಂದಿದೆ. ಜೊತೆಗೆ ಎರ್ಲಡ್ಡುಗಳಲ್ಲಿ ಹೆಣ್ಣು ಮತ್ತು ಗಂಡುಗಳಲ್ಲಿ ಸಂತಾನಾಭಿವೃದ್ಧಿಯ ಸಮಯ ಬೇರೆ-ಬೇರೆಯಾಗಿರುವುದರಿಂದ ಅವುಗಳ ಮಿಲನದ ಸಂಭವನೀಯತೆಯೂ ಕಡಿಮೆಯೇ. ಇಂತಹ ಪರಿಸ್ಥಿತಿಯಲ್ಲಿ ಕೃತಕ ಗರ್ಭಧಾರಣೆಯ ಯಶಸ್ಸು ಮುಂದಿನ ದಿನಗಳಲ್ಲಿ ಈ ಪಕ್ಷಿಗಳ ಸಂಖ್ಯೆ ಹೆಚ್ಚಲು ಕಾರಣವಾಗಬಲ್ಲದು. ಈ ನಡುವೆ ಈ ರೀತಿ ಸಂರಕ್ಷಣಾ ಕೇಂದ್ರದಲ್ಲಿ ಬೆಳೆದ ಪಕ್ಷಿಗಳನ್ನು ಮೂರನೇ ಹಂತದ ಯೋಜನೆಯಂತೇ ಹೊರಗೆ ಬಿಟ್ಟಾಗ ಅವುಗಳು ನೂತನ ಪರಿಸರದಲ್ಲಿ ಹೇಗೆ ಬೇರೆಯಲಿವೆ ಎನ್ನುವುದನ್ನೂ ಕಾದು ನೋಡಬೇಕಿದೆ ಮತ್ತು ಅಲ್ಲೇ ಈ ಪೂರ್ತಿ ಯೋಜನೆಯ ಯಶಸ್ಸು ಅಡಗಿದೆ.

ನವೆಂಬರ್ 12 ಭಾರತದ ಪಕ್ಷಿ ಪಿತಾಮಹ ಡಾ.ಸಲೀಂ ಅಲಿಯವರ ಜನ್ಮದಿನ. ನಮ್ಮ ರಾಷ್ಟ್ರಪಕ್ಷಿಯನ್ನು ನಿರ್ಧರಿಸುವ ಸಮಯದಲ್ಲಿ ಅಲಿಯವರು ಕೇವಲ ಭಾರತದಲ್ಲಷ್ಟೇ ಕಂಡುಬರುವ ಎರ್ಲಡ್ಡುಗಳ ಪರ ಬ್ಯಾಟಿಂಗ್ ನಡೆಸಿದ್ದರು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಆದರೆ ಈ ವರ್ಷ ಅವರ ಜನ್ಮದಿನದ ಆಸುಪಾಸಿನಲ್ಲೇ ನಮ್ಮ ತಂತ್ರಜ್ಞರು ಈ ಒಂದು ಪ್ರಥಮವನ್ನು ಸಾಧಿಸಿ ಎರ್ಲಡ್ಡುಗಳ ಸಂರಕ್ಷಣೆ ನಿಟ್ಟಿನಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಈ ಸಾಧನೆ ಡಾ.ಅಲಿಯವರ ಆತ್ಮಕ್ಕೆ ಸಮಾಧಾನ ತಂದಿರಬಹುದು.

ಆಧಾರ್​ ಕಾರ್ಡ್ ಬಳಕೆದಾರರೇ ಇದೇ ನಿಮಗೆ ಕಡೆಯ ದಿನಾಂಕ​! ತಪ್ಪಿದರೆ ರದ್ದಾಗಬಹುದು ಇರಲಿ ಎಚ್ಚರ

Share This Article

Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!

Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು  ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…

Health Tips: ನೆಲದ ಮೇಲೆ ಕುಳಿತುಕೊಂಡು ತಿನ್ನಲು ಸಾಧ್ಯವಿಲ್ಲವೇ? ಆದ್ರೆ ಈ ಅದ್ಭುತ ಪ್ರಯೋಜನಗಳೇನು ಗೊತ್ತಾ?

Health Tips: ನಮ್ಮ ಹಿರಿಯರು ಊಟ ಮಾಡುವಾಗ ನೆಲದ ಮೇಲೆ ಕಾಲು ಮಡಚಿ ಕೂರುತ್ತಿದ್ದರು. ಆಧುನಿಕ ಕಾಲದಲ್ಲಿ…

Alcohol In Winter: ಚಳಿಯಲ್ಲಿ ಮದ್ಯ ಸೇವನೆ ಎಷ್ಟು ಅಪಾಯಕಾರಿ ಗೊತ್ತಾ?

Alcohol In Winter: ಚಳಿಗಾಲ ಆರಂಭವಾಗಿದೆ ಮತ್ತು ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಲ್ಲದೆ, ಜ್ವರ…