ಸಂತೋಷ ವೈದ್ಯ ಹುಬ್ಬಳ್ಳಿ
ವಿಧಾನಸಭೆ ಚುನಾವಣೆ (2023) ಬಳಿಕ ವಿಪರೀತವಾಗಿ ವಿದ್ಯುತ್ ದರ ಏರಿಕೆ ಮಾಡಿದ್ದರ ಪರಿಣಾಮ ಗ್ರಾಹಕರಿಗೆ ಮತ್ತೊಂದು ರೀತಿಯಲ್ಲಿ ಶಾಕ್ ತಟ್ಟಿದೆ. ಅಂದಾಜು ಪ್ರತಿ ಮೂವರಲ್ಲಿ ಒಬ್ಬರು ಹೆಚ್ಚುವರಿ ಭದ್ರತಾ ಠೇವಣಿ (ಎಎಸ್ಡಿ) ಪಾವತಿಸುವ ಪರಿಸ್ಥಿತಿ ಬಂದೊಂದಗಿದೆ.
ಈ ಸಂಬಂಧ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) 10 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ನೋಟಿಸ್ ಜಾರಿ ಮಾಡಿ ವಸೂಲಿ ಪ್ರಕ್ರಿಯೆ ಆರಂಭಿಸಿದೆ. ಎಎಸ್ಡಿ ರೂಪದಲ್ಲಿ ಹೆಸ್ಕಾಂ ಖಜಾನೆಗೆ 150ರಿಂದ 200 ಕೋಟಿ ರೂ. ಜಮೆ ಆಗುವ ನಿರೀಕ್ಷೆ ಇದೆ. ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ , ಬೆಳಗಾವಿ, ಬಾಗಲಕೋಟ ಹಾಗೂ ವಿಜಯಪುರ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಹೆಸ್ಕಾಂ ನಲ್ಲಿ ಒಟ್ಟು 62 ಲಕ್ಷ ಗ್ರಾಹಕರಿದ್ದಾರೆ. ಇದರಲ್ಲಿ 33.54 ಲಕ್ಷ ಗ್ರಾಹಕರು ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಗೃಹ ಬಳಕೆ, ವಾಣಿಜ್ಯ ಹಾಗೂ ಕೈಗಾರಿಕಾ ಘಟಕಗಳಿಗೆ ಮಾತ್ರ ಎಎಸ್ಡಿ ಅನ್ವಯವಾಗುತ್ತದೆ.
ಹೆಸ್ಕಾಂ ಹುಬ್ಬಳ್ಳಿ ವಿಶ್ವೇಶ್ವರನಗರ ಸೆಕ್ಷನ್ ಕಚೇರಿಯ ಒಟ್ಟು 23,358 ಗ್ರಾಹಕರಲ್ಲಿ 8006 ಜನರಿಗೆ ಎಎಸ್ಡಿ ನೋಟಿಸ್ ಜಾರಿ ಮಾಡಲಾಗಿದೆ. ಇದರ ಒಟ್ಟು ಮೊತ್ತ 1,02,41,000 ರೂ. ಗಳಾಗಿವೆ. ಇದರಲ್ಲಿ 3920 ಗ್ರಾಹಕರು ಈಗಾಗಲೇ 34.71 ಲಕ್ಷ ರೂ. ಪಾವತಿಸಿದ್ದಾರೆ. ಉಳಿದ 4086 ಗ್ರಾಹಕರಿಂದ 67.70 ಲಕ್ಷ ರೂ. ವಸೂಲಿಯಾಗಬೇಕಿದೆ. ಇದು ಒಂದು ಸೆಕ್ಷನ್ ಕಚೇರಿಯ ಮಾಹಿತಿಯಾಗಿದ್ದು, ಹೆಸ್ಕಾಂ ವ್ಯಾಪ್ತಿಯಲ್ಲಿ 334 ಸೆಕ್ಷನ್ ಕಚೇರಿಗಳಿವೆ. ಸಂಪೂರ್ಣ ಮಾಹಿತಿ ನೀಡಲು ಹೆಸ್ಕಾಂ ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ.
‘ಎಎಸ್ಡಿ ವಸೂಲಿಗಾಗಿ ಗ್ರಾಹಕರಿಗೆ ನೀಡಿರುವ ನೋಟಿಸ್ ಬಗ್ಗೆಯಾಗಲಿ, ಒಟ್ಟು ಬೇಡಿಕೆ ಮೊತ್ತದ ಬಗ್ಗೆಯಾಗಲಿ ನಿಖರ ಮಾಹಿತಿ ಇಲ್ಲ’ ಎಂದು ಹೆಸ್ಕಾಂ ಎಂಡಿ ವೈಶಾಲಿ ಎಂ.ಎಲ್. ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಎಎಸ್ಡಿ ಲೆಕ್ಕಾಚಾರ
ವಿದ್ಯುತ್ ಸಂಪರ್ಕ ಪಡೆಯುವಾಗ ಮಂಜೂರಾದ ವಿದ್ಯುತ್ ಪ್ರಮಾಣ (ಕಿಲೋ ವ್ಯಾಟ್ ಸಾಮರ್ಥ್ಯ)ಕ್ಕೆ ಅನುಗುಣವಾಗಿ ಗ್ರಾಹಕರು ಭದ್ರತಾ ಠೇವಣಿ ಪಾವತಿಸುತ್ತಾರೆ. ಕಾಲಕ್ರಮೇಣ ವಿದ್ಯುತ್ ಬಳಕೆ ಪ್ರಮಾಣಕ್ಕಿಂತ ಬಿಲ್ ಮೊತ್ತಕ್ಕೆ ಅನುಗುಣವಾಗಿ ವ್ಯತ್ಯಾಸದ ಹಣವನ್ನು ಹೆಚ್ಚುವರಿ ಭದ್ರತಾ ಠೇವಣಿ ರೂಪದಲ್ಲಿ ಪಾವತಿಸುವ ಅವೈಜ್ಞಾನಿಕ ಕ್ರಮಕ್ಕೆ ಗ್ರಾಹಕರು ಬೆಲೆ ತೆರಬೇಕಾಗಿದೆ. ಉದಾಹರಣೆಗೆ ಒಂದು ವರ್ಷ (ಜನವರಿಯಿಂದ ಡಿಸೆಂಬರ್ವರೆಗೆ)ದ ಅವಧಿಯಲ್ಲಿ ಒಟ್ಟು ಬಿಲ್ ಮೊತ್ತ 24000 ರೂ. ಆಗಿದ್ದರೆ, 2 ತಿಂಗಳ ಸರಾಸರಿ 4000 ರೂ. ಗಳನ್ನು ಭದ್ರತಾ ಠೇವಣಿ ಎಂದು ಪರಿಗಣಿಸಲಾಗುತ್ತದೆ. ಸಂಪರ್ಕ ಪಡೆಯುವಾಗ 3000 ರೂ. ಭದ್ರತಾ ಠೇವಣಿ ಪಾವತಿಸಿದ್ದರೆ, ಹೆಚ್ಚುವರಿ ಭದ್ರತಾ ಠೇವಣಿ ರೂಪದಲ್ಲಿ 1000 ರೂ. ನೀಡಬೇಕಾಗುತ್ತದೆ. ಈ ಸಂಬಂಧ ಹೆಸ್ಕಾಂನ ಸೆಕ್ಷನ್ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ಗಳು ಗ್ರಾಹಕರಿಗೆ ನೋಟಿಸ್ ಜಾರಿ ಮಾಡುತ್ತಾರೆ.
ಇದೀಗ 2023ರ ಜನವರಿಯಿಂದ ಡಿಸೆಂಬರ್ವರೆಗಿನ ಅವಧಿಗೆ ನೋಟಿಸ್ ಜಾರಿ ಮಾಡಲಾಗಿದೆ. ವಿಧಾನಸಭೆ (2023)ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆಯನ್ನು ತಡೆಹಿಡಿದಿತ್ತು. ಆಗ ಮೇ ತಿಂಗಳಲ್ಲಿ ಫಲಿತಾಂಶ ಪ್ರಕಟಗೊಂಡ ಬಳಿಕ ಏಪ್ರಿಲ್ನಿಂದ ಪೂರ್ವಾನ್ವಯವಾಗುವಂತೆ ವಿದ್ಯುತ್ ದರ ಪರಿಷ್ಕರಣೆ ಮಾಡಲಾಗಿತ್ತು. ಆಗ, ಗೃಹ ಬಳಕೆದಾರರು 100 ಯೂನಿಟ್ ಮೇಲ್ಪಟ್ಟು ವಿದ್ಯುತ್ ಬಳಸಿದರೆ ಪ್ರತಿ ಯೂನಿಟ್ಗೆ 7 ರೂ. ನಂತೆ ಪಾವತಿಸಬೇಕಿತ್ತು. (ಇದಕ್ಕೂ ಪೂರ್ವ ಮೊದಲ 50 ಯೂನಿಟ್ಗೆ ಪ್ರತಿ ಯೂನಿಟ್ 4.15 ರೂ., ನಂತರದ 50ರಿಂದ 100 ಯೂನಿಟ್ಗೆ ಪ್ರತಿ ಯೂನಿಟ್ಗೆ 5.6 ರೂ. ಹಾಗೂ 100 ಯೂನಿಟ್ ಮೇಲ್ಟಟ್ಟ ಪ್ರತಿ ಯೂನಿಟ್ಗೆ 7.15 ರೂ. ಇತ್ತು). ಇದರ ಪರಿಣಾಮ ಹೆಚ್ಚು ಗ್ರಾಹಕರು ಎಎಸ್ಡಿ ಪಾವತಿಸುವ ಪರಿಸ್ಥಿತಿ ಎದುರಾಗಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್ 2024ರಿಂದ ಅನ್ವಯವಾಗುವಂತೆ ವಿದ್ಯುತ್ ದರ ಇಳಿಕೆ ಮಾಡಲಾಗಿದೆ.
ನಿಗದಿತ ಶುಲ್ಕ, ವಿದ್ಯುತ್ ಶುಲ್ಕ, ಇಂಧನ ಮತ್ತು ವಿದ್ಯುತ್ ಖರ್ಚು ವೆಚ್ಚ ಹೊಂದಾಣಿಕೆ ಶುಲ್ಕ (ಎಫ್ಪಿಪಿಸಿಎ), ತೆರಿಗೆ, ಬಡ್ಡಿ ಸೇರಿಸಿ ವಿದ್ಯುತ್ ಬಿಲ್ ಸೃಜಿಸಲಾಗುತ್ತದೆ. ಇದರಿಂದ ಗ್ರಾಹಕರಿಗೆ ವಿದ್ಯುತ್ ಬಿಲ್ ಜತೆ ಎಎಸ್ಡಿ ಪಾವತಿಸುವ ಹೊರೆ ಬಿದ್ದಿದೆ. </p><p>‘ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ)ದ ಮಾರ್ಗಸೂಚಿಯಂತೆ ಎಎಸ್ಡಿ ಪಾವತಿಸಬೇಕೆಂದು ಹೆಸ್ಕಾಂ ಅಧಿಕಾರಿಗಳು ಗ್ರಾಹಕರಿಗೆ ನೋಟಿಸ್ ಜಾರಿ ಮಾಡುತ್ತಿದ್ದಾರೆ. ಎಎಸ್ಡಿ ಲೆಕ್ಕಾಚಾರವೇ ಅವೈಜ್ಞಾನಿಕವಾಗಿದೆ. ಬಳಕೆ ಮಾಡಿದ ವಿದ್ಯುತ್ ಪ್ರಮಾಣಕ್ಕೆ ಅನುಗುಣವಾಗಿ ಎಎಸ್ಡಿ ಕೇಳುವುದನ್ನು ಬಿಟ್ಟು ಸಂಪೂರ್ಣ ಬಿಲ್ ಮೊತ್ತಕ್ಕೆ ಆಕರಣೆ ಮಾಡುವುದು ಸರಿಯಲ್ಲ. ಪ್ರತಿ ವರ್ಷ ವಿದ್ಯುತ್ ದರ ಏರಿಕೆಯಾಗುತ್ತಿದ್ದು, ಇದೇ ಪದ್ಧತಿ ಅನುಸರಿಸಿದರೆ ಗ್ರಾಹಕರಿಗೆ ಡಬಲ್ ಹೊರೆಯಾಗುತ್ತದೆ’ ಎಂದು ಗ್ರಾಹಕರಾದ ಜಗದೀಶ ಹೊಂಬಳ ಹಾಗೂ ಪ್ರೇಮನಾಥ ಚಿಕ್ಕತುಂಬಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಹಿತಿ ಇಲ್ಲ
ವಿದ್ಯುತ್ ಗ್ರಾಹಕರಿಗೆ ವಿಧಿಸಲಾಗುವ ಹೆಚ್ಚುವರಿ ಭದ್ರತಾ ಠೇವಣಿ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಕಳೆದ ವಾರ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನವಿತ್ತು. ಇದೀಗ ಕಾಂಗ್ರೆಸ್ ಪಕ್ಷದ ವತಿಯಿಂದ ಬೆಳಗಾವಿಯಲ್ಲಿ ಆಯೋಜಿಸಿರುವ ಗಾಂಧಿ ಭಾರತ ಸಮಾವೇಶದಲ್ಲಿ ಬ್ಯುಸಿಯಾಗಿದ್ದೇನೆ. ಜನವರಿ 1ರ ಬಳಿಕ ಹೆಸ್ಕಾಂ ಕಚೇರಿಯಲ್ಲಿ ಲಭ್ಯವಿರುತ್ತೇನೆ.
| ಅಜೀಮ್ೕರ ಖಾದ್ರಿ, ಅಧ್ಯಕ್ಷ, ಹೆಸ್ಕಾಂ