ರಷ್ಯಾದ ಜನವಸತಿ ಪ್ರದೇಶಕ್ಕೆ ದಾಳಿಯಿಟ್ಟ ಹಿಮಕರಡಿಗಳ ಹಿಂಡು: ತುರ್ತು ಪರಿಸ್ಥಿತಿ ಘೋಷಣೆ

ಮಾಸ್ಕೋ: ಉತ್ತರ ಧ್ರುವಕ್ಕೆ ಸಮೀಪವಿರುವ ರಷ್ಯಾದ ದ್ವೀಪದಲ್ಲಿರುವ ಜನವಸತಿ ಪ್ರದೇಶದ ಮೇಲೆ ಹಿಮಕರಡಿಗಳು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ದ್ವೀಪ ಪಟ್ಟಣದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ರಷ್ಯಾದ ನೊವಾಯಾ ಜೆಮ್ಲಿಯಾ ದ್ವೀಪ ಸಮೂಹದ ಸುಮಾರು 3,000 ಜನಸಂಖ್ಯೆ ಇರುವ ಸಣ್ಣ ಪಟ್ಟಣದ ಮೇಲೆ ಹಿಮಕರಡಿಗಳ ದಂಡು ದಾಳಿ ಇಟ್ಟಿದ್ದು, ಜನವಸತಿ ಪ್ರದೇಶಗಳಲ್ಲಿ ನಿರ್ಭಿಡೆಯಿಂದ ಓಡಾಡುತ್ತಿವೆ. ಈ ಹಿನ್ನೆಲೆಯಲ್ಲಿ ಜನರು ಮನೆಗಳಿಂದ ಹೊರಬರಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ಕರಡಿಗಳನ್ನು ಹಿಮ್ಮೆಟ್ಟಿಸಲು ಕಾರಿನ ಹಾರ್ನ್​ ಮತ್ತು ನಾಯಿಗಳನ್ನು ಬಳಸುತ್ತಿದ್ದಾರೆ. ಕೆಲವೊಂದು ಕರಡಿಗಳು ಜನರ ಮೇಲೆ ದಾಳಿ ನಡೆಸಲು ಮುಂದಾಗಿದ್ದು, ಅಟ್ಟಿಸಿಕೊಂಡು ಹೋಗುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಆದರೆ ಇದಾವುದಕ್ಕೂ ಜಗ್ಗದ ಹಿಮಕರಡಿಗಳು ಜನವಸತಿ ಪ್ರದೇಶದಲ್ಲಿ ಓಡಾಡುತ್ತಿವೆ. ಈ ಹಿನ್ನೆಲೆಯಲ್ಲಿ ರಷ್ಯಾ ಸರ್ಕಾರ ಪಟ್ಟಣದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದು, ವನ್ಯಜೀವಿ ತಜ್ಞರನ್ನು ಸ್ಥಳಕ್ಕೆ ಕಳುಹಿಸಿದೆ. ತಜ್ಞರು ಹಿಮಕರಡಿಗಳಿಗೆ ಮತ್ತು ಬರುವ ಇಂಜಕ್ಷನ್​ ನೀಡಿ ದೂರದ ಸ್ಥಳಗಳಿಗೆ ಬಿಟ್ಟು ಬರುತ್ತಿದ್ದಾರೆ.

ರಷ್ಯಾದಲ್ಲಿ ಹಿಮಕರಡಿಗಳನ್ನು ಅಪಾಯದಂಜಿನಲ್ಲಿರುವ ಜೀವಿಗಳು ಎಂದು ಘೋಷಿಸಲಾಗಿದ್ದು, ಅವುಗಳ ಹತ್ಯೆಯನ್ನು ನಿರ್ಬಂಧಿಸಿದೆ. ಆದರೆ, ಹಿಮಕರಡಿಗಳು ಪದೇ ಪದೇ ಜನವಸತಿ ಪ್ರದೇಶಗಳ ಮೇಲೆ ದಾಳಿ ನಡೆಸಿದರೆ ಕರಡಿಗಳನ್ನು ಹತ್ಯೆ ಮಾಡುವ ಕುರಿತು ಚಿಂತನೆ ನಡೆಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಮಕರಡಿಗಳು ಆಹಾರ ಅರಸುತ್ತಾ ಜನವಸತಿ ಪ್ರದೇಶಗಳಿಗೆ ಬಂದಿರುವ ಸಾಧ್ಯತೆ ಹೆಚ್ಚಿದೆ. ಅವುಗಳು ಪಟ್ಟಣದ ಹೊರಭಾಗದಲ್ಲಿರುವ ಡಂಪಿಂಗ್​ ಯಾರ್ಡ್​ನಲ್ಲಿ ಗುಂಪು ಗುಂಪಾಗಿ ಆಹಾರ ಹುಡುಕುತ್ತಿರುವುದು ಕಂಡು ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. (ಏಜೆನ್ಸೀಸ್​)