ರ್ಬಮಿಂಗ್ಹ್ಯಾಂ: ಯುವ ತಂಡದೊಂದಿಗೆ ಇಂಗ್ಲೆಂಡ್ ನೆಲದಲ್ಲಿ ಹೊಸ ಅಧ್ಯಾಯ ಆರಂಭಿಸಿರುವ ಭಾರತ ತಂಡ ಲೀಡ್ಸ್ನಲ್ಲಿ ಮೊದಲ 4 ದಿನ ಮೇಲುಗೈ ಸಾಧಿಸಿದರೂ, ಕೊನೇ ದಿನದ ನೀರಸ ಬೌಲಿಂಗ್ನಿಂದಾಗಿ ಸೋಲು ಕಂಡಿತ್ತು. ಜತೆಗೆ ಫೀಲ್ಡಿಂಗ್ ಮತ್ತು ಬಾಲಂಗೋಚಿಗಳ ಬ್ಯಾಟಿಂಗ್ ವೈಫಲ್ಯವೂ ಹಿನ್ನಡೆ ತಂದಿತ್ತು. ಇದೀಗ ಈ ತಪ್ಪು ತಿದ್ದಿಕೊಂಡು ಹೊಸ ಹರುಪಿನೊಂದಿಗೆ ಎಜ್ಬಾಸ್ಟನ್ ಅಂಗಳದಲ್ಲಿ ಕಣಕ್ಕಿಳಿಯಲು ಶುಭಮಾನ್ ಗಿಲ್ ಪಡೆ ಸಜ್ಜಾಗಿದೆ. ಆಂಡರ್ಸನ್-ತೆಂಡುಲ್ಕರ್ ಟ್ರೋಫಿ ಟೆಸ್ಟ್ ಸರಣಿಯ ಎರಡನೇ ಪಂದ್ಯ ಬುಧವಾರದಿಂದ ನಡೆಯಲಿದ್ದು, ಆತಿಥೇಯ ಇಂಗ್ಲೆಂಡ್ಗೆ ತಿರುಗೇಟು ನೀಡುವ ತವಕ ಭಾರತ ತಂಡದ್ದಾಗಿದೆ. ಎಜ್ಬಾಸ್ಟನ್ನಲ್ಲಿ ಇದುವರೆಗೆ ಒಂದೂ ಟೆಸ್ಟ್ ಗೆಲ್ಲದಿರುವ ಭಾರತ ತಂಡ, ಸರಣಿ ಸಮಬಲ ಸಾಧಿಸಲು ಹೊಸ ಇತಿಹಾಸ ಬರೆಯುವ ಸವಾಲು ಎದುರಿಸುತ್ತಿದೆ.
ಸ್ಟಾರ್ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ನಿವೃತ್ತಿಯ ನಂತರ ಮೊದಲ ಸರಣಿ ಆಡುತ್ತಿರುವ ಭಾರತಕ್ಕೆ ಆಂಗ್ಲರ ನೆಲದಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಅನುಭವದ ಕೊರತೆ ಕಾಡುವ ಭೀತಿ ಇತ್ತು. ಆದರೆ ಹೆಡಿಂಗ್ಲೆಯಲ್ಲಿ ಕನ್ನಡಿಗ ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಉಪನಾಯಕ ರಿಷಭ್ ಪಂತ್, ನಾಯಕ ಶುಭಮಾನ್ ಗಿಲ್ ಬ್ಯಾಟ್ನಿಂದ ಸಿಡಿದ ಒಟ್ಟು 5 ಶತಕಗಳು ಈ ಚಿಂತೆಯನ್ನು ದೂರ ಮಾಡಿತ್ತು. ಎಜ್ಬಾಸ್ಟನ್ನಲ್ಲಿ ಸಾಯಿ ಸುದರ್ಶನ್ ಮತ್ತು 8 ವರ್ಷಗಳ ಬಳಿಕ ಮರಳಿರುವ ಕನ್ನಡಿಗ ಕರುಣ್ ನಾಯರ್ ಬ್ಯಾಟ್ನಿಂದಲೂ ರನ್ ಹರಿದುಬಂದರೆ ಭಾರತೀಯ ಬ್ಯಾಟಿಂಗ್ ಮತ್ತಷ್ಟು ಬಲಿಷ್ಠಗೊಳ್ಳಲಿದೆ.
ಆದರೆ ಭಾರತಕ್ಕೆ ಈಗ ಪ್ರಮುಖ ತಲೆನೋವು ಇರುವುದು ಬೌಲಿಂಗ್ ವಿಭಾಗದ್ದೇ ಆಗಿದೆ. ಭಾರತದ ಟ್ರಂಪ್ಕಾರ್ಡ್ ಜಸ್ಪ್ರೀತ್ ಬುಮ್ರಾರನ್ನು ಫಿಟ್ನೆಸ್ ಕಾರಣದಿಂದಾಗಿ ಸತತ 2ನೇ ಟೆಸ್ಟ್ನಲ್ಲಿ ಆಡಿಸಬೇಕೇ, ಬೇಡವೇ ಎಂಬ ಗೊಂದಲ ಕಾಡುತ್ತಿದೆ. ಅಲ್ಲದೆ ಅವರನ್ನು ಹೊರಗಿಟ್ಟರೆ ಆಂಗ್ಲರ 20 ವಿಕೆಟ್ಗಳನ್ನು ಕಬಳಿಸಲು ಸಾಧ್ಯವೇ ಎಂಬ ಪ್ರಶ್ನೆಯೂ ಮೂಡಿದೆ. ಜತೆಗೆ ಎರಡನೇ ಸ್ಪಿನ್ನರ್ ಯಾರೆಂಬ ಕೌತುಕವೂ ಇದೆ. ಹೀಗಾಗಿ ಎಜ್ಬಾಸ್ಟನ್ನಲ್ಲಿ ಭಾರತ ಗೆಲುವಿನ ಹಳಿ ಏರಲು ಸಮರ್ಥ ಆಡುವ ಹನ್ನೊಂದರ ಬಳಗವನ್ನು ಆರಿಸುವ ಸವಾಲು ಕೂಡ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶುಭಮಾನ್ ಗಿಲ್ ಮುಂದಿದೆ. ಇದು ಪಂದ್ಯದ ಫಲಿತಾಂಶದಲ್ಲೂ ನಿರ್ಣಾಯಕ ಪಾತ್ರ ವಹಿಸಲಿದೆ.
ಬುಮ್ರಾ ಆಡುವ ಬಗ್ಗೆ ಸಸ್ಪೆನ್ಸ್
ಎರಡನೇ ಟೆಸ್ಟ್ ಪಂದ್ಯಕ್ಕೆ ಮುನ್ನ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ ಎಂದರೆ, ಜಸ್ಪ್ರೀತ್ ಬುಮ್ರಾ ಆಡುವರೇ, ಇಲ್ಲವೇ ಎಂಬುದು. ಫಿಟ್ನೆಸ್ ಕಾರಣದಿಂದಾಗಿ ಬುಮ್ರಾ ಸರಣಿಯಲ್ಲಿ 3 ಟೆಸ್ಟ್ ಮಾತ್ರ ಆಡಲಿದ್ದಾರೆ ಎಂದು ಟೀಮ್ ಮ್ಯಾನೇಜ್ಮೆಂಟ್ ಈಗಾಗಲೆ ಸ್ಪಷ್ಟಪಡಿಸಿದ್ದು, ಅವರು ಆಡಲಿರುವ ಸರಣಿಯ ಇನ್ನುಳಿದ 2 ಪಂದ್ಯಗಳು ಯಾವುವು ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಲೀಡ್ಸ್ ಟೆಸ್ಟ್ನ ಕೊನೇ ಹಂತದಲ್ಲಿ ಬುಮ್ರಾಗೆ ಬೌಲಿಂಗ್ ನೀಡದಿದ್ದಾಗ ಅವರನ್ನು ಎಜ್ಬಾಸ್ಟನ್ನಲ್ಲೂ ಆಡಿಸಲು ವಿಶ್ರಾಂತಿ ನೀಡಲಾಗುತ್ತಿದೆ ಎಂದೇ ಹೇಳಲಾಗಿತ್ತು.
ಬುಮ್ರಾರನ್ನು ಆಡಿಸುವ ಬಗ್ಗೆ ಕೊನೇಕ್ಷಣದಲ್ಲಿ ನಿರ್ಧರಿಸಲಾಗುವುದು ಎಂದು ಭಾರತ ತಂಡದ ಸಹಾಯಕ ಕೋಚ್ ರ್ಯಾನ್ ಟೆನ್ ಡೋಶೆಟ್ ಸೋಮವಾರ ತಿಳಿಸಿದ್ದರು. ಆದರೆ ಇದೀಗ ಬುಮ್ರಾ ಎಜ್ಬಾಸ್ಟನ್ನಲ್ಲಿ ಆಡುವ ಸಾಧ್ಯತೆ ಣಿಸಿದೆ. ಜುಲೈ 10ರಿಂದ ಲಾರ್ಡ್ಸ್ನಲ್ಲಿ ನಡೆಯಲಿರುವ ಸರಣಿಯ 3ನೇ ಟೆಸ್ಟ್ನಲ್ಲಿ ಬುಮ್ರಾರನ್ನು ಆಡಿಸುವ ಸಲುವಾಗಿ 2ನೇ ಟೆಸ್ಟ್ನಿಂದ ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚಿದೆ. ಬುಮ್ರಾ ಪಂದ್ಯಕ್ಕೆ ಫಿಟ್ ಇದ್ದರೂ, ಟಾಸ್ಗೆ ಮುನ್ನ ಪಿಚ್ ಪರಿಶೀಲಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ನಾಯಕ ಗಿಲ್ ಮಂಗಳವಾರ ತಿಳಿಸಿದ್ದಾರೆ. ಬುಮ್ರಾ ಗೈರಾದರೆ ಅವರ ಸ್ಥಾನವನ್ನು ಆಕಾಶ್ ದೀಪ್ ಅಥವಾ ಎಡಗೈ ವೇಗಿ ಅರ್ಷದೀಪ್ ಸಿಂಗ್ ತುಂಬುವ ನಿರೀಕ್ಷೆ ಇದೆ.
ಎರಡನೇ ಸ್ಪಿನ್ನರ್ ಯಾರು?
ಭಾರತ ಎಜ್ಬಾಸ್ಟನ್ನಲ್ಲಿ ಇಬ್ಬರು ಸ್ಪಿನ್ನರ್ಗಳೊಂದಿಗೆ ಕಣಕ್ಕಿಳಿಯಲಿದೆ ಎಂದು ಡೋಶೆಟ್ ಸೋಮವಾರವೇ ಖಚಿತಪಡಿಸಿದ್ದಾರೆ. ಆದರೆ 2ನೇ ಸ್ಪಿನ್ನರ್ ಯಾರೆಂದು ಸ್ಪಷ್ಟಪಡಿಸಿಲ್ಲ. ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಮತ್ತು ಸ್ಪಿನ್ ಬೌಲಿಂಗ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಈ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ ಬ್ಯಾಟಿಂಗ್ ಸಾಮರ್ಥ್ಯದಿಂದಾಗಿ ವಾಷಿಂಗ್ಟನ್ ಆಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಕುಲದೀಪ್ರನ್ನು ಆಡಿಸಲು ಕೆಲ ಮಾಜಿ ಕ್ರಿಕೆಟಿಗರೂ ಸರಣಿ ಆರಂಭಕ್ಕೆ ಮೊದಲಿನಿಂದಲೂ ಆಗ್ರಹಿಸುತ್ತಿದ್ದಾರೆ. ಹೀಗಾಗಿ ಜಡೇಜಾ-ವಾಷಿಂಗ್ಟನ್, ಜಡೇಜಾ-ಕುಲದೀಪ್ ಅಥವಾ ಅಚ್ಚರಿಯ ಆಯ್ಕೆಯಾಗಿ ವಾಷಿಂಗ್ಟನ್-ಕುಲದೀಪ್ ಇಬ್ಬರು ಸ್ಪಿನ್ನರ್ಗಳ ಸ್ಥಾನವನ್ನು ತುಂಬುವ ನಿರೀೆ ಇದೆ.
ನಿತೀಶ್ ರೆಡ್ಡಿಗೆ ಚಾನ್ಸ್ ?
ಎಜ್ಬಾಸ್ಟನ್ಗೆ ಆಗಮಿಸಿದ ಬಳಿಕ ನೆಟ್ಸ್ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿರುವ ವೇಗದ ಬೌಲಿಂಗ್ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ 2ನೇ ಟೆಸ್ಟ್ನಲ್ಲಿ ಆಡುವ ಸಾಧ್ಯತೆ ಕಾಣಿಸಿದೆ. ಆದರೆ ಭಾರತ ಇಬ್ಬರು ಸ್ಪಿನ್ನರ್ಗಳನ್ನು ಆಡಿಸುವುದಾಗಿ ಈಗಾಗಲೆ ಖಚಿತಪಡಿಸಿರುವುದರಿಂದ ನಿತೀಶ್ ರೆಡ್ಡಿ ಯಾರ ಸ್ಥಾನದಲ್ಲಿ ಆಡಬಹುದು ಎಂಬುದು ಸ್ಪಷ್ಟವಾಗಿಲ್ಲ. ಮೊದಲ ಟೆಸ್ಟ್ ಆಡಿದ್ದ ಶಾರ್ದೂಲ್ ಠಾಕೂರ್ 2ನೇ ಟೆಸ್ಟ್ನಿಂದ ಹೊರಗುಳಿಯುವುದು ಬಹುತೇಕ ಖಚಿತವೆನಿಸಿದೆ. ಆದರೆ ಅವರ ಸ್ಥಾನದಲ್ಲಿ 2ನೇ ಸ್ಪಿನ್ನರ್ ಕಣಕ್ಕಿಳಿದರೆ, ನಿತೀಶ್ ರೆಡ್ಡಿ ಆಡಬೇಕಾದರೆ ಯಾರಾದರೂ ಬ್ಯಾಟರ್ ಅನ್ನೇ ಹೊರಗಿಡಬೇಕಾಗುತ್ತದೆ.
ನಿತೀಶ್ ನೆಟ್ಸ್ನಲ್ಲಿ ಸ್ಲಿಪ್ ಕ್ಯಾಚಿಂಗ್ ಅಭ್ಯಾಸವನ್ನೂ ನಡೆಸಿದ್ದು, ಅವರಿಗೆ ಯಾರು ಸ್ಥಾನ ಬಿಟ್ಟುಕೊಡಬಹುದು ಎಂಬ ಕುತೂಹಲವಿದೆ. ಕನ್ನಡಿಗ ಕರುಣ್ ನಾಯರ್ಗೆ 3ನೇ ಕ್ರಮಾಂಕಕ್ಕೆ ಬಡ್ತಿ ನೀಡಿ, ಸಾಯಿ ಸುದರ್ಶನ್ರನ್ನು ಹೊರಗಿಡಬಹುದು ಎಂದೂ ಹೇಳಲಾಗುತ್ತಿದೆ. ಆದರೆ, ಕಳೆದ ಪಂದ್ಯದಲ್ಲಿ 4 ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್ ಬದಲಿಗೆ ಸುದರ್ಶನ್ ಸ್ಲಿಪ್ ಕ್ಯಾಚಿಂಗ್ ಅಭ್ಯಾಸದಲ್ಲಿ ಪಾಲ್ಗೊಂಡಿರುವುದರಿಂದ ಗೊಂದಲ ಇನ್ನಷ್ಟು ಹೆಚ್ಚಾಗಿದೆ.
ಎಜ್ಬಾಸ್ಟನ್ನಲ್ಲಿ ಭಾರತ
ಜಯ: 0
ಸೋಲು: 7
ಡ್ರಾ: 1
ಆರಂಭ: ಮಧ್ಯಾಹ್ನ 3.30
ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್
ಟೀಮ್ ನ್ಯೂಸ್:
ಭಾರತ: ಮೊದಲ ಟೆಸ್ಟ್ ಸೋಲಿನ ಬಳಿಕ ಭಾರತ ತಂಡದಲ್ಲಿ ಒಂದು ಬದಲಾವಣೆಯಂತೂ ಬಹುತೇಕ ಖಚಿತಗೊಂಡಿತ್ತು. ಅದು ಈಗ 2 ಅಥವಾ 3 ಆಟಗಾರರ ಬದಲಾವಣೆಗೆ ಏರಿಕೆಯಾದರೂ ಅಚ್ಚರಿ ಇಲ್ಲ. ಶಾರ್ದೂಲ್ ಠಾಕೂರ್ ಸ್ಥಾನದಲ್ಲಿ 2ನೇ ಸ್ಪಿನ್ನರ್ ಸ್ಥಾನಕ್ಕೆ ವಾಷಿಂಗ್ಟನ್-ಕುಲದೀಪ್ ನಡುವೆ ಸ್ಪರ್ಧೆ ಇದೆ. ಜತೆಗೆ ವೇಗದ ಬೌಲಿಂಗ್ ಆಲ್ರೌಂಡರ್ ನಿತೀಶ್ ರೆಡ್ಡಿ ಕೂಡ ರೇಸ್ನಲ್ಲಿದ್ದಾರೆ. ಇನ್ನು ಬುಮ್ರಾ ಪಂದ್ಯದಿಂದ ವಿಶ್ರಾಂತಿ ಪಡೆದರೆ ಆಕಾಶ್ದೀಪ್ ಅಥವಾ ಅರ್ಷದೀಪ್ ಸಿಂಗ್ ಆಡಬಹುದು. ಆಗ ಸಿರಾಜ್ ಮತ್ತು ಕನ್ನಡಿಗ ಪ್ರಸಿದ್ಧ ಕೃಷ್ಣ ಇಬ್ಬರು ಅಗ್ರ ಆಯ್ಕೆಯ ವೇಗಿಗಳಾಗಿರುತ್ತಾರೆ.
ಇಂಗ್ಲೆಂಡ್: ಮೊದಲ ಟೆಸ್ಟ್ ಗೆದ್ದ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಆತಿಥೇಯ ಇಂಗ್ಲೆಂಡ್ ಸೋಮವಾರವೇ ಪ್ರಕಟಿಸಿದೆ. ಇದರಿಂದ ವೇಗಿ ಆರ್ಚರ್ ತಂಡಕ್ಕೆ ಸೇರ್ಪಡೆಯಾಗಿದ್ದರೂ ಆಡಲು ಇಳಿಯುವುದಿಲ್ಲ ಎಂಬುದು ಖಚಿತಗೊಂಡಿದೆ. ಜತೆಗೆ ತಂಡದ ಮೂವರು ವೇಗಿಗಳಾದ ಕ್ರಿಸ್ ವೋಕ್ಸ್, ಬೆಡನ್ ಕರ್ಸ್, ಜೋಶ್ ಟಂಗ್ ಮೇಲೆ ಇಂಗ್ಲೆಂಡ್ ತಂಡ ಮತ್ತೆ ವಿಶ್ವಾಸವಿಟ್ಟಿದೆ.